‘ಸಂಪದ' ನಗೆ ಬುಗ್ಗೆ - ಭಾಗ ೬೨

‘ಸಂಪದ' ನಗೆ ಬುಗ್ಗೆ - ಭಾಗ ೬೨

ಹುಡುಕಾಟ

ಗಾಂಪ ಸಿಂಗ್ ಯಾವತ್ತೂ ಫೈವ್ ಸ್ಟಾರ್ ಹೋಟೇಲ್ ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಗಾಂಪ ಸಿಂಗ್, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೋಟೇಲಿನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ. ಅವತ್ತು ಬೆಳಿಗ್ಗೆ ಹೋಟೇಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್ ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದಾಗ ಅವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು. ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ ಫಾರಿನರ್ ಇವನನ್ನು ನೋಡಿ, ‘ಹಾಯ್, ಆರ್ ಯೂ ರಿಲಾಕ್ಸಿಂಗ್?’ ಅಂತ ಕೇಳಿದ. ಇಂಗ್ಲಿಷ್ ಸರಿಯಾಗಿ ಬಾರದ ಗಾಂಪ ಸಿಂಗ್ ‘ನೋ ಐ ಆಮ್ ಗಾಂಪಾ ಸಿಂಗ್' ಅಂದ. ಅದಕ್ಕೆ ವಿದೇಶಿಗ ‘ಫನ್ನಿ ಗೈ’ ಅಂತ ನಕ್ಕು ಹೋದ. ಆದ್ರೆ ಗಾಂಪ ಸಿಂಗ್ ಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಬೆಂಚಿನ ಮೇಲೆ ಮಲಗಿಕೊಂಡಿದ್ದ. ಅವನನ್ನು ನೀಡಿದ ಗಾಂಪ ಸಿಂಗ್ ‘ಆರ್ ಯೂ ರಿಲಾಕ್ಸಿಂಗ್?’ ಅಂತ ಕೇಳಿದ. ಅದಕ್ಕೆ ಆತ ‘ಎಸ್ ಎಸ್' ಅಂದ. ಇದ್ದಕ್ಕಿದ್ದಂತೆ ಆತನ ಮೇಲೆ ಕೋಪಗೊಂಡ ಗಾಂಪ ಸಿಂಗ್ ‘ಅಯ್ಯೋ ಮಗನೇ, ನೀನು ಇಲ್ಲಿ ಮಲಗಿಕೊಂಡಿದ್ದೀಯಾ? ಅಲ್ಲಿ ನಿನ್ ಹುಡುಕಿಕೊಂಡು ಯಾರೋ ಬಂದಿದ್ರಲ್ಲಾ?’!

***

ಉತ್ತರವಿಲ್ಲದ ಪ್ರಶ್ನೆ

ಗಾಂಪ ತನ್ನ ಅಪ್ಪನ ಬಳಿ ಬಂದು ಹೇಳಿದ- “ನೀವು ಕೊಡ್ತಿರೋ ಪಾಕೆಟ್ ಮನಿಯಿಂದ ಏನೂ ಮಾಡೋಕಾಗ್ತಿಲ್ಲ. ಈ ತಿಂಗಳಿಂದ ಸ್ವಲ್ಪ ಜಾಸ್ತಿ ಕೊಡಿ"

ಅಪ್ಪ ಅವನನ್ನು ನೋಡಿ ತನ್ನ ಗಡ್ಡವನ್ನು ನೀಳವಾಗಿ ನೀವಿಕೊಂಡು ಹೇಳಿದ “ನಿನಗೆ ಪಾಕೆಟ್ ಮನಿ ಜಾಸ್ತಿ ಆಯ್ತು ಅಂದರೆ ಏನುಪಯೋಗ?”

“ಅದ್ರಿಂದ ನಾನು ರಾತ್ರಿ ಶಾಲೆ ಸೇರ್ಕೋಬಹುದು. ಓದಬಹುದು, ಕಲೀಬಹುದು"

“ರಾತ್ರಿ ಶಾಲೆ ಸೇರ್ಕೊಂಡೇ ಅಂತಿಟ್ಕೋ. ಅದ್ರಿಂದ ಏನು ಉಪಯೋಗ?”

“ಶಾಲೆ ಕಲಿತು ಒಳ್ಳೇ ನೌಕರಿ ಸೇರ್ಕೋಬಹುದಲ್ವಾ?”

“ನೌಕರಿ ಸೇರಿದೆ ಅಂತಿಟ್ಕೋ. ಏನು ಉಪಯೋಗ ಅದ್ರಿಂದ?”

“ನಾನು ಒಳ್ಳೆಯ ಬಟ್ಟೆ ಹಾಕ್ಕೋಬಹುದು. ಬೇಕಾದ ಊರಿಗೆ ಪ್ರವಾಸ ಹೋಗಿ ಬರಬಹುದು.”

“ಒಳ್ಳೇ ಬಟ್ಟೆ ಹಾಕ್ಕೊಂಡು ಊರೂರು ತಿರುಗಿಕೊಂಡು ಬರೋದರಿಂದ ಏನುಪಯೋಗ?

“ಆಮೇಲೆ ನಾನು ಒಬ್ಬಳು ಸುಂದರ ಹುಡುಗಿಯನ್ನು ನೋಡಿ..."

“ನೋಡಿ?”

“ಮದುವೆ ಮಾಡಿಕೊಳ್ಳಬಹುದಲ್ವಾ?”

“ಮದುವೆ ಮಾಡಿಕೊಂಡು ಏನುಪಯೋಗ?”

“ಅಪ್ಪಾ! ಆಗ ನಾನು ಕಡೇ ಪಕ್ಷ ಖುಷಿಯಾಗಿರಬಹುದಲ್ವಾ?”

“ನೀನು ಖುಷಿಯಾಗಿದ್ದು ಉಪಯೋಗ ಏನಯ್ಯಾ?”

***

ದೊಡ್ಡ ದಾನಿ

ಗಾಂಪ: ಸೂರಿ, ನೀನು ದೊಡ್ಡವನಾದ ಮೇಲೆ ಏನು ಆಗಬೇಕು ಅಂತಾ ಇದ್ದೀಯಾ?

ಸೂರಿ: ನಾನು ದೊಡ್ಡ ದಾನಿ ಆಗ್ಬೇಕು ಅಂತ ಇದ್ದೀನಿ!

ಗಾಂಪ: ಅದೇನು ಆ ಆಸೆ ನಿನಗೆ?

ಸೂರಿ: ದಾನಿಗಳ ಹತ್ತಿರ ತುಂಬ ಹಣ ಇರುತ್ತೆ ಅದಕ್ಕೆ !

***

ಹುಡುಕಾಟ

ಗಾಂಪ: ನೀನು ಯಾವಾಗಲೂ ಹೊಸ ಉಡುಪುಗಳ ವಿನ್ಯಾಸವನ್ನೇ ಏಕೆ ಮೊಬೈಲ್ ನಲ್ಲಿ ಹುಡುಕಾಡುತ್ತಿರುತ್ತೀ?

ಮಹಾ ಕಳ್ಳ ಸೂರಿ: ಹೊಸ ಉಡುಪಿನಲ್ಲಿ ಕಿಸೆಗಳು ಎಲ್ಲೆಲ್ಲಿ ಇರುತ್ತವೆಂದು ತಿಳಿದುಕೊಳ್ಳೋಕೆ ಕಣೋ!

ಗಾಂಪ: ಅದನ್ನು ತಿಳಿದುಕೊಂಡು ನಿನಗೇನಾಗಬೇಕು?

ಮಹಾ ಕಳ್ಳ ಸೂರಿ: ಕಿಸೆ ಕತ್ತರಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ.

***

ನೋವು

ಸೂರಿ: ದೊಡ್ಡ ದೊಡ್ದ ವಿಷಯಗಳಿಗಿಂತ ಸಣ್ಣ ಸಣ್ಣ ವಿಷಯಗಳೇ ಹೆಚ್ಚು ನೋವು ಕೊಡುತ್ತವೆ.

ಗಾಂಪ: ಹೌದಾ? ಅದು ಹೇಗೆ ಕಣೋ?

ಸೂರಿ: ದೊಡ್ಡ ದೊಡ್ಡ ಬಂಡೆಗಳ ಮೇಲೆ ಸುಲಭವಾಗಿ ಕೂರಬಹುದು. ಆದರೆ ಸಣ್ಣ ಸೂಜಿಯ ಮೇಲೆ ಅಷ್ಟೊಂದು ಸುಲಭವಾಗಿ ಕೂರೋಕೆ ಆಗುತ್ತಾ?!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ