‘ಸಂಪದ' ನಗೆ ಬುಗ್ಗೆ - ಭಾಗ ೬೪

‘ಸಂಪದ' ನಗೆ ಬುಗ್ಗೆ - ಭಾಗ ೬೪

ವಿದೇಶೀ ವ್ಯಾಮೋಹ

ನಮ್ಮ ಕಾಡಿನ ರಾಜನಾದ ಸಿಂಹಕ್ಕೂ ನಮ್ಮ ಈಗಿನ ಯುವ ಜನಾಂಗದ ತರಹ ಅಮೇರಿಕಕ್ಕೆ ಹೋಗೋ ಹುಚ್ಚು ಹಿಡಿಯಿತು. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಹೇಗೋ ಅಂತೂ ಅಮೇರಿಕನ್ ಕಾನ್ಸುಲೇಟ್ ನಲ್ಲಿ ಒಬ್ಬರನ್ನು ಹಿಡಿದು ವೀಸಾ ಗಿಟ್ಟಿಸಿ, ಸಂಭ್ರಮದಿಂದ ಅಮೇರಿಕಕ್ಕೆ ಹೋಯಿತು.

ಅಲ್ಲಿ ಒಂದು ಪ್ರಸಿದ್ಧ ಮೃಗಾಲಯದಲ್ಲಿ ಕೆಲಸ ಸಿಕ್ಕಿದ ಮೇಲಂತೂ ಅದನ್ನು ಹಿಡಿಯುವವರು ಯಾರೂ ಇರಲಿಲ್ಲ. ಸಂತೋಷದಿಂದ ತೇಲಾಡುತ್ತಿತ್ತು. ಆದರೆ, ಅದಕ್ಕೆ ಒಂದೇ ವ್ಯಥೆ ಆಗಿದ್ದೇನೆಂದರೆ, ಅದಕ್ಕೆ ತಿನ್ನಲು ಯಥೇಚ್ಛವಾಗಿ ಬಾಳೆಹಣ್ಣುಗಳನ್ನು ಮಾತ್ರ ಕೊಡುತ್ತಿದ್ದರು. ಒಂದೆರಡು ದಿನ ನೋಡಿತು. ಬೇರೆ ಏನಾದರೂ ಕೊಡುತ್ತಾರೇನೋ ಅಂತ. ಆದರೆ, ಹೀಗೆ ಒಂದು ವಾರಕಳೆದರೂ ಅದಕ್ಕೆ ಬರೀ ಬಾಳೆಹಣ್ಣನ್ನು ಮಾತ್ರ ಕೊಟ್ಟಿದ್ದಕ್ಕೆ ತುಂಬಾ ಸಿಟ್ಟು ಮಾಡಿಕೊಂಡು ಗುರ್ ಗುಟ್ಟುತ್ತಿತ್ತು…

ಇನ್ನು ತಡೆಯಲು ಆಗಲ್ಲವೆಂದು ಅದರ ಹಿರಿಯ ಅಧಿಕಾರಿಗಳ ಬಳಿ ಹೋಗಿ -’ನನ್ನನ್ನು ಏನು ಅಂದುಕೊಂಡಿದ್ದೀರಾ? ನಾನು ಸಿಂಹ. ಭಾರತದಲ್ಲಿ ಕಾಡಿನ ರಾಜನಾಗಿ ಮೆರೆಯುತ್ತಿದ್ದೆ. ಅಲ್ಲಿ ನನಗೆ ದಿನಾಲೂ ತಿನ್ನುವುದಕ್ಕೆ ಆಡು, ಜಿಂಕೆ ಮುಂತಾದ ಪ್ರಾಣಿಗಳ ಮಾಂಸ ಸಿಗುತ್ತಿತ್ತು. ಇಲ್ಲಿ ನೋಡಿದರೆ ದಿನಾಲೂ ಕೋತಿಗಳಿಗೆ ಕೊಡುವ ಹಾಗೆ ಬಾಳೆಹಣ್ಣನ್ನು ಮಾತ್ರ ಕೊಡುತ್ತಿದ್ದೀರಾ?’ ಎಂದು ಸಿಟ್ಟಿನಿಂದ ಕೇಳಿದಾಗ, ಆ ಅಧಿಕಾರಿಯು ಸಂಯಮದಿಂದ- ‘ಹೌದು, ನೀನು ಹೇಳಿದ್ದು ಸರಿ. ನಿನಗೆ ದಿನಾ ನಾವು ಕೋತಿಗಳಿಗೆ ಕೊಡುವ ಬಾಳೆಹಣ್ಣನ್ನೇ ಕೊಡುತ್ತಿದ್ದೇವೆ. ಯಾಕೆಂದರೆ...ನೀನು ನಮ್ಮ ದೇಶಕ್ಕೆ ಬಂದಿರುವುದೇ ಕೋತಿಗಳಿಗೆ ಮೀಸಲಿದ್ದ ವೀಸಾದಲ್ಲಿ. ಆದರಿಂದ, ನಾವು ಬೇರೇನೂ ಕೊಡಲು ಸಾಧ್ಯವಿಲ್ಲ' ಎಂದು ಖಡಾಖಂಡಿತವಾಗಿ ಹೇಳಿದಾಗ ‘ಅಯ್ಯೋ ದುರ್ವಿಧಿಯೇ’ ಎಂದು ಜೋರಾಗಿ ಗರ್ಜಿಸಿ ಸುಮ್ಮನಾಯಿತು !

***

ಕಷ್ಟ !

ಪ್ರತೀ ವಾರ ಸಿಗುವ ಭಿಕ್ಷುಕ ಈ ಬಾರಿಯೂ ಎದುರಾದಾಗ ಗಾಂಪ ವಾಡಿಕೆಯಂತೆ ಜೇಬಿಗೆ ಕೈಹಾಕಿ ಒಂದಷ್ಟು ನಾಣ್ಯಗಳನ್ನು ತೆಗೆದು ಭಿಕ್ಷುಕನ ತಟ್ಟೆಗೆ ಹಾಕಿದ. 

“ಏನ್ ಸ್ವಾಮಿ, ಐದೇ ರೂಪಾಯಿ ಹಾಕಿದ್ದೀರಾ? ಕಳೆದ ವಾರ ಹತ್ತು ರೂಪಾಯಿ ಕೊಟ್ಟಿದ್ರಿ ಅಲ್ವಾ?” ಎಂದು ವಿಚಾರಿಸಿದ ಭಿಕ್ಷುಕ.

“ಈ ವಾರ ವ್ಯಾಪಾರ ಕಡಿಮೆ ಕಣಯ್ಯಾ, ಸಂಪಾದನೆ ಅಷ್ಟಕಷ್ಟೇ” ಎಂದ ಗಾಂಪ.

“ಇದೊಳ್ಳೇ ಕಥೆಯಾಯ್ತು, ನಿಮ್ಮ ವ್ಯಾಪಾರ ಕಡಿಮೆಯಾಗಿತ್ತು ಅಂತ ನಾನು ಕಷ್ಟ ಪಡಬೇಕೇನ್ರೀ?” ದಬಾಯಿಸಿದ ಭಿಕ್ಷುಕ.

***

ಉಪನ್ಯಾಸ

ಒಬ್ಬ ಸ್ವಾಮೀಜಿ ಒಂದು ಊರಿಗೆ ಹೋಗಿ ಉಪನ್ಯಾಸ ಕೊಟ್ಟ. ಅದಾದ ಮರುದಿನ ಆ ಸ್ವಾಮೀಜಿ ಊರಿನ ಗಣ್ಯ ವ್ಯಕ್ತಿಯಾದ ಗಾಂಪನನ್ನು ಭೇಟಿಯಾಗುವ ಸಂದರ್ಭ ಒದಗಿ ಬಂತು.

“ನಿನ್ನೆ ಮದ್ಯಾಹ್ನ ನಾನು ಊರಿನ ದೇವಾಲಯದಲ್ಲಿ ಉಪನ್ಯಾಸ ನೀಡಿದ್ದೆ. ಬಹುಷಃ ನೀವೂ ಬಂದು ಕೇಳಿರಬೇಕು. ಅಲ್ಲವೇ?”

“ಹೌದು ಸ್ವಾಮಿ, ಬಂದಿದ್ದೆ"

“ಹೇಗಿತ್ತು ಎಂದು ತಿಳಿಯುವ ಕುತೂಹಲ ನನಗೆ"

“ಅಯ್ಯೋ, ಏನು ಹೇಳುವುದು ! ನಿಮ್ಮ ಉಪನ್ಯಾಸದಿಂದ ನನಗೆ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ"

ಸ್ವಾಮೀಜಿ ಸಂತಸದಿಂದ “ಹೌದೇ, ಅಷ್ಟೊಂದು ಚಿಂತನೆಗೆ ಈಡು ಮಾಡಿತೇ?

“ಹಾಗಲ್ಲ, ನಾನು ಹೇಳಿದ್ದು ಉಪನ್ಯಾಸದ ಕೇಳಿ ಸೊಗಸಾದ ನಿದ್ರೆ ಮಾಡಿದ್ದರಿಂದ ರಾತ್ರಿಯಿಡೀ ನಿದ್ರೆ ಬರಲಿಲ್ಲ ಅಂತ" ಎಂದ ಗಾಂಪ ಬೇಸರದಿಂದ.

***

ಮಾರಾಟ

ಸೂರಿ: ಏನಯ್ಯಾ ಗಾಂಪ, ನೀನು ಕುಡಿತದ ಚಟಕ್ಕೆ ಬಲಿಯಾಗಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಮಾರಿಬಿಟ್ಟೆಯಂತೆ ಹೌದೇ?

ಗಾಂಪ : ಹೌದು ಸೂರಿ.

ಸೂರಿ: ಮತ್ತೆ ಮನೆಯನ್ನೂ ಮಾರಿಬಿಡಬೇಕಾಗಿತ್ತು.

ಗಾಂಪ: ಮಾರಿ ಬಿಡ್ತಿದ್ದೆ. ಆದ್ರೆ ಅಷ್ಟರಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟೆ.

ಸೂರಿ: ಅರೆ ಹೌದಾ? ಯಾರ ಕೈಗೆ ಸಿಕ್ಕಿಹಾಕಿಕೊಂಡೆ?

ಗಾಂಪ: ಮನೆ ಮಾಲೀಕರ ಕೈಗೆ !

***

ಒಂದು ಗಂಟೆ ಬಿಟ್ಟು…

ಗಾಂಪ: ಸರ್, ವರದಕ್ಷಿಣೆ ಏನೂ ಬೇಡ. ವರದಕ್ಷಿಣೆ ಇಲ್ಲದೇ ನಿಮ್ಮ ಮಗಳನ್ನು ಮದುವೆ ಆಗಲು ಸಿದ್ಧನಿದ್ದೇನೆ.

ಹೆಣ್ಣಿನ ತಂದೆ: ಆದರೆ ಮಗಳು ಇನ್ನೂ ಓದುತಿದ್ದಾಳಲ್ಲಾ…

ಗಾಂಪ: ಸರಿ ಹಾಗಾದರೆ, ನಾನು ಒಂದು ಗಂಟೆ ಬಿಟ್ಟು ಬರ್ತೀನಿ. !

***

ಭಿಕ್ಷೆ

ಭಿಕ್ಷುಕ: ಸ್ವಾಮಿ, ಒಂದು ರೂಪಾಯಿ ಭಿಕ್ಷೆ ಹಾಕಿ.

ಗಾಂಪ: ಅಲ್ಲಯ್ಯಾ ಕೈಕಾಲು ಗಟ್ಟಿಯಾಗಿದೆ. ಭಿಕ್ಷೆ ಬೇಡಲು ನಾಚಿಕೆಯಾಗುವುದಿಲ್ಲವೇ?

ಭಿಕ್ಷುಕ: ಅಲ್ಲಾ ಸ್ವಾಮಿ, ನೀವು ಕೊಡುವ ಒಂದು ರೂಪಾಯಿಗೆ ಕೈಕಾಲು ಮುರಿದುಕೊಂಡು ಭಿಕ್ಷೆ ಬೇಡಬೇಕಾ?

***

ಅದೃಷ್ಟವಂತ 

ಶ್ರೀಮತಿ: ರೀ...ನಿನ್ನೆರಾತ್ರಿ ನಮ್ಮ ಪಕ್ಕದ ಮನೆಯವನ ಹೆಂಡತಿ ಯಾರ ಜೊತೆನೋ ಓಡಿಹೋಗಿದ್ದಾಳೆ.

ಗಾಂಪ: ಅರೆ ಹೌದೇನೇ? ನಿಜವಾಗ್ಲೂ ಪಕ್ಕದ ಮನೆಯವನಷ್ಟು ಅದೃಷ್ಟವಂತ ಈ ಪ್ರಪಂಚದಲ್ಲಿ ಯಾರೂ ಇಲ್ಲ ಬಿಡು.

(ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾ