‘ಸಂಪದ' ನಗೆ ಬುಗ್ಗೆ - ಭಾಗ ೬೫
ಸ್ವರ್ಗ- ನರಕ
ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಗಾಂಪ ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಗಾಂಪ ಅವನ ಇತಿಹಾಸ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆಲ್ಲಾ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಗಾಂಪ ಇವನ ಇತಿಹಾಸವನ್ನು ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿಕೊಂಡು, ನಿನಗೆ ಇಲ್ಲಿ ಜಾಗವಿಲ್ಲ. ನೀನು ನರಕಕ್ಕೆ ಹೋಗಬಹುದು ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು. ಅದೇ ಸಿಟ್ಟಿನಲ್ಲಿ ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆಲ್ಲಾ ಕಿರುಕುಳ ಕೊಟ್ಟವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಗಾಂಪನನ್ನು ಕೇಳಿದ. ಅದಕ್ಕೆ ಗಾಂಪ ಹೇಳಿದ, ‘ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತೀ ಕ್ಷಣವೂ ದೇವರೇ ನಮ್ಮನ್ನು ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಕಳಕಳಿ, ಉದ್ದೇಶ, ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ್ ಮಾತ್ರ ಮುಖ್ಯ ಗೊತ್ತಾಯ್ತಾ?’
***
ಪುನರ್ಜನ್ಮ
ಮ್ಯಾನೇಜರ್ ಒಬ್ಬ ತನ್ನ ಕ್ಲರ್ಕ್ ಗಾಂಪನನ್ನು ಕ್ಯಾಬಿನ್ ಒಳಗೆ ಕರೆದು ''ನೀನು ಪುನರ್ಜನ್ಮವನ್ನು ನಂಬ್ತೀಯಾ?" ಎಂದು ಪ್ರಶ್ನಿಸಿದರು.
" ಹೂಂ ಸರ್ ! "ಎಂದ ಗಾಂಪ. "ನೀನು ನಿನ್ನ ತಾತನ ಅಂತ್ಯ ಸಂಸ್ಕಾರಕ್ಕೆಂದು ನಿನ್ನೆ ಮಧ್ಯಾಹ್ನ ರಜಾ ಹಾಕಿ ಹೋದೆಯಲ್ಲ ಆಮೇಲೆ ಸ್ವಲ್ಪ ಹೊತ್ತಿನ ನಂತರ ನಿಮ್ಮ ತಾತ ನಿಮ್ಮನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದರು " ಎಂದರು ಮ್ಯಾನೇಜರ್ ಹಲ್ಲುಕಡಿಯುತ್ತಾ.
***
ಖಂಡಿತಾ ಕುರುಡ
"ಅಲ್ಲಿ ನೋಡಿ....."ಶ್ರೀಮತಿ ಮನೆ ಒಳಗೆ ಕಾಲಿಡುತ್ತಲೇ ಒಂದು ಕೈ ಎಡಭಾಗಕ್ಕೆ ತೋರಿಸುತ್ತಾ ಗಾಂಪನಿಗೆ ಹೇಳಿದಳು.
"ಏನೇ ಅದು, ಅವನು ಕುರುಡು ಬಿಕ್ಷುಕ ಅಲ್ಲೇ ತಾನೇ ಕೂತ್ಕೋಳ್ಳೊದು " ಎಂದ ಗಾಂಪ
"ಅಲ್ಲಾರಿ ಅವನು ನನಗೆ ಕುರುಡ ಅಲ್ಲ ಅಂತ ಅನ್ಸುತ್ತೆ!"
"ಏಕೆ?"
"ನಾನು ಅವನ ಪಕ್ಕಕ್ಕೆ ಬಂದ ತಕ್ಷಣ ಅವನು ' ಹೇ ಸುಂದರಿ , ದೇವರ ಹೆಸರಿನಲ್ಲಿ ಈ ಕುರುಡನಿಗೆ ಭಿಕ್ಷೆ ಹಾಕು ಅಂತ ಕೇಳೋದೇ?" ಎಂದಳು ಗಲ್ಲದ ಮೇಲೆ ಕೈ ಇಟ್ಕೊಂಡು.
"ಅಲ್ಲಾ ಕಣೇ ಅವನು ನಿನ್ನನ್ನು ಸುಂದರಿ ಅಂತ ಹೇಳಿದ್ಮೇಲೆ ಅವನು ಖಂಡಿತವಾಗ್ಲೂ ನಿಜವಾದ ಕುರುಡಾನೇ " ಎಂದು ಸಮರ್ಥನೆ ಮಾಡಿದ ಗಾಂಪ.
***
ನಿದ್ರೆ ಬಂದುಬಿಟ್ಟಿರುತ್ತದೆ
ನೀನು ವಿಚಿತ್ರ ಮನುಷ್ಯ ಕಣಯ್ಯ, ನಿಂಗೇನ್ ದುಡ್ಡಿಗೆ ಅಂತಾ ತಾಪತ್ರಯ ಬಂದಿದ್ದು, ಹಗಲು ಹೊತ್ತಿನಲ್ಲೇ ಕಳ್ಳತನ ಮಾಡಲು ಹೊರಟಿದ್ದೆಯಲ್ಲ?" ಎಂದು ಹೇಳಿದ ಒಬ್ಬ .
ಏನ್ ಮಾಡೋದು ಸರ್ ಈ ಹಾಳಾದು ರಾತ್ರಿ ನಿದ್ರೆ ಬರುತ್ತೆ ಸರ್! ಎಂದ ಕಳ್ಳ ಗಾಂಪ.
***
ವಿನಂತಿ
ಓರ್ವ ವ್ಯಕ್ತಿಯ ಪತ್ನಿ ಮನೆ ಬಿಟ್ಟು ಹೋದಳು. ಪೋಲೀಸ್ ವ್ಯಕ್ತಿಯ ರಿಪೋರ್ಟ್ ಬರೆದುಕೊಂಡ. ಆದರೂ ಸಹ ವ್ಯಕ್ತಿ ಪೋಲೀಸ್ ಮುಂದೆಯೇ ನಿಂತಿದ್ದ. ಅದನ್ನು ಕಂಡ ಪೋಲೀಸ್ ,
" ಇನ್ನೂ ಯಾಕೆ ನಿಂತಿದ್ದೀರಾ, ಹೋಗಿ ಮನೆಗೆ ಹೋಗಿ, ನಾನು ನಿಮ್ಮ ಹೆಂಡತಿಯನ್ನು ಹುಡುಕಿ ಮನೆಗೆ ತಲುಪಿಸುತ್ತೇನೆ" ಎಂದ.
"ಬೇಡ ಪೋಲಿಸಪ್ಪ, ಹಾಗೆ ಮಾಡಬೇಡ, ನಾನು ಇದನ್ನು ಹೇಳುವುದಕ್ಕೆ ಇದುವರೆಗೆ ನಿಮ್ಮ ಹತ್ತಿರ ನಿಂತಿದ್ದೇನೆ" ಎಂದು ವಿನಂತಿಸಿಕೊಂಡ ಆತ.
***
ನಕಲಿ ನೋಟು
ಕೆಲಸದವ ತನ್ನ ಮಾಲೀಕನೊಂದಿಗೆ,
" ಯಜಮಾನ್ರೆ ನಿನ್ನೆ ಕಸದ ಬುಟ್ಟಿಯಲ್ಲಿ ೫೦೦ ರೂಪಾಯಿಗಳ ನೋಟು ಸಿಕ್ಕಿತು "
'' ನಾನೇ ಬಿಸಾಕಿದ್ದೆ. ಅದು ನಿಜವಾದ ನೋಟುಗಳಲ್ಲ" ಎಂದ ಮಾಲೀಕ.
"ಅದಕ್ಕೋಸ್ಕರವೇ ನಾನು ಅದನ್ನು ವಾಪಸ್ಸು ಕೊಡ್ತಾ ಇದೀನಿ ಯಜಮಾನ್ರೇ " ಎಂದು ವಿನಯವಾಗಿ ಉತ್ತರಿಸಿದ ಕೆಲಸದವ.
***
ನೋಟ್ಸ್ ಓದಿ ಅಲ್ಲ
ಮೇಷ್ಟ್ರು ಗಾಂಪನನ್ನು ಮೇಲೆಬ್ಬಿಸಿ ನಿಲ್ಲಿಸುತ್ತ
"ಏನೋ ಗಾಂಪ, ಕನ್ನಡದಲ್ಲಿ ಫೇಲ್ ಆಗ್ಬಿಟ್ಟಿ ಏನೋ? ನೀನು ನಾನು ಬರೆದು ಪ್ರಿಂಟ್ ಮಾಡಿಸಿದ್ದ ನೋಟ್ಸ್ ಓದಿದ್ಯಾ ಎಂದು ಠೀವಿಯಿಂದ ಕೇಳಿದರು.
"ನಿಮ್ಮ ಪ್ರಿಂಟೆಡ್ ನೋಟ್ಸ್ ಓದಿ ನಾನು ಫೇಲ್ ಆಗಿಲ್ಲ ಸಾರ್, ನಂಗೆ ಕಾಯಿಲೆ ಬಂದಿದ್ದರಿಂದ ನಾನು ಫೇಲ್ ಆಗ್ಬಿಟ್ಟೆ ಅಷ್ಟೇ ಸಾರ್" ಎಂದು ನುಡಿದ ಗಾಂಪ ವಿನಯವಾಗಿ.
***
ಮುದ್ದು ಪ್ರಶ್ನೆ
ಓರ್ವ ಚಿಕ್ಕ ಹುಡುಗಿಯ ದೃಷ್ಟಿ ಪಾರ್ಕ್ ನಲ್ಲಿ ಅಡ್ಡಾಡುತ್ತಿದ್ದ ಓರ್ವ ಗರ್ಭವತಿ ಮಹಿಳೆಯ ಮೇಲೆ ಬಿತ್ತು ಗರ್ಭವತಿಯ ಹತ್ತಿರಕ್ಕೆ ಹೋಗಿ,
"ಆಂಟಿ, ಈ ಹೊಟ್ಟೆಯಲ್ಲಿ ಏನಿದೆ? " ಎಂದು ಕೇಳಿದಳು
"ಇದರಲ್ಲಿ ನನ್ನ ಪ್ರೀತಿಯ ಮಗು ಇದೆ ಮರಿ " ಎಂದಳು ಅವಳು.
ಒಂದು ವೇಳೆ ಇದು ನಿಮ್ಮ ಪ್ರೀತಿಯ ಮಗುವಾಗಿದ್ದರೆ ನೀವೇಕೆ ಅದನ್ನು ತಿಂದು ಬಿಟ್ಟಿರಿ ಆಂಟಿ?" ಎಂದು ಮುದ್ದುಮುದ್ದಾಗಿ ಕೇಳಿದರು ಹುಡುಗಿ.
***
ದುಬಾರಿ ಕಣ್ಣಿನ ಚಿಕಿತ್ಸೆ
"ನಿನ್ನೆ ನನ್ನ ಹೆಂಡತಿ ಕಣ್ಣಿಗೆ ಒಂದು ಮರಳಿನ ಚೂರು ಬಿದ್ದು ಬಿಡ್ತು.ಅದನ್ನು ತೆಗೆದುಕೊಳ್ಳೋಕೆ ೨೦೦ ರೂಪಾಯಿ ಖರ್ಚಾಯಿತು " ಎಂದ ಒಬ್ಬ ದುಃಖದಿಂದ.
ನೀನೇ ಪುಣ್ಯವಂತ ಕಣಯ್ಯಾ ನಿನ್ನೇ ನನ್ನ ಹೆಂಡತಿ ಕಣ್ಣಿಗೆ ಒಂದುರೇಷ್ಮೆ ಸೀರೆ ಬಿತ್ತು ಅದನ್ನು ತೆಗೆದು ಕೊಡೋಕೆ ೨೦ ಸಾವಿರ ರೂಪಾಯಿ ಖರ್ಚಾಯಿತು " ಮತ್ತೊಬ್ಬ ಇನ್ನು ದುಃಖದಿಂದ ನುಡಿದ.
***
ಟೈಮ್ ಪಾಸ್ ಆಟ !
ಗಾಂಪ ಮತ್ತು ಶ್ರೀಮತಿ ಮನೆಯಲ್ಲಿ ಸುಮ್ಮನೆ ಕುಳಿತಿದ್ರು. ಶ್ರೀಮತಿ ಗಾಂಪನ ಬಳಿ, ಬನ್ನಿ ಟೈಮ್ ಪಾಸ್ ಗೆ ಒಂದು ಆಟ ಆಡೋಣ.
ನೀವು ನಿಮಗೆ ಇಷ್ಟ ಇರುವ ಐದು "ಮಹಿಳೆಯರ "ಹೆಸರು ಬರೆಯಿರಿ. ನಾನು ನನಗೆ ಇಷ್ಟವಾದ ಐದು "ಗಂಡಸರ "ಹೆಸರು ಬರೆಯುತ್ತೇನೆ. ಹಾಗೆ ಗಂಡ ಹೆಂಡತಿ ಪೆನ್ನು ಪೇಪರ್ ಹಿಡಿದು ಕೊಂಡು ಬರೆಯಲಾರಂಬಿಸಿದರು.
ಕೆಲವು ನಿಮಿಷ ಗಳ ನಂತರ ...
ಶ್ರೀಮತಿ ಬರೆದ ಗಂಡಸರ ಹೆಸರುಗಳು ..
ಮೋದಿಜಿ
ಅಕ್ಷಯ್ ಕುಮಾರ್
ಯೋಗಿಜೀ
ಪುನೀತ್
ಸುದೀಪ್
ಗಾಂಪ ಬರೆದ ಮಹಿಳೆಯರ ಹೆಸರು ,
ಸವಿತಾ (ಶಾಲಾ ಗೆಳತಿ )
ಅಂಕಿತಾ (ಹೆಂಡ್ತಿಯ 2ನೆ ತಂಗಿ )
ಮಮತಾ (ಪಕ್ಕದ ಮನೆಯವನ ಹೆಂಡ್ತಿ )
ಸುನಿತಾ (ಹೆಂಡತಿಯ ಸ್ನೇಹಿತೆ )
ಸಂಗೀತ (ಮಗನ ಕ್ಲಾಸ್ ಟೀಚರ್ )
ಸಂದೇಶ: ಪುರುಷ ವಾಸ್ತವಿಕ ಜೀವನದಲ್ಲಿ ಬದುಕುತ್ತಾನೆ, ಮಹಿಳೆ ಕನಸಿನ ಲೋಕದಲ್ಲಿ ಬದುಕುತ್ತಾಳೆ.
ಪರಿಣಾಮ: ಗಾಂಪ ಹತ್ತು ದಿನದಿಂದ ಹೋಟೆಲ್ ಊಟ ಮಾಡುತ್ತಿದ್ದಾನೆ.
ಎಚ್ಚರಿಕೆ: ಇದು ದೊಡ್ಡ ಅಪಾಯಕಾರಿ ಆಟ. ಯಾರೂ ಮನೆಯಲ್ಲಿ ಆಡ ಬೇಡಿ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ