‘ಸಂಪದ' ನಗೆ ಬುಗ್ಗೆ - ಭಾಗ ೬೬
ವ್ಯತ್ಯಾಸ
ಗಾಂಪ, ಮನೆ ಮುಂದಿನ ಅಂಗಳದಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾಗ ತನ್ನ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಕಳೆದುಕೊಂಡ. ಆಡುವ ಭರದಲ್ಲಿ ಅವು ಮಣ್ಣಿನಲ್ಲಿ ಬಿದ್ದು ಕಾಣೆಯಾದವು. ಎಷ್ಟು ಹುಡುಕಿದರೂ ಅವನ್ನು ಪತ್ತೆ ಹಚ್ಚಲು ಆಗಲಿಲ್ಲ. ಲೆನ್ಸ್ ಕಳೆದುಹೋದ ವಿಷಯವನ್ನು ಹೇಗೆ ಹೇಳುವುದೋ ಎಂದು ಭಯಪಡುತ್ತಲೇ ಗಾಂಪ ಮನೆಯೊಳಕ್ಕೆ ಹೋದ. ಅಂಜುತ್ತಾ ಅಂಜುತ್ತಾ ತನ್ನ ಕಾಂಟ್ಯಾಕ್ಟ್ ಲೆನ್ಸ್ ಮಣ್ಣಿನಲ್ಲಿ ಬಿದ್ದು ನಾಪತ್ತೆಯಾದ ಸಂಗತಿಯನ್ನು ಅಪ್ಪನಿಗೆ ಹೇಳಿದ.
ಅಪ್ಪ ಮನೆಯಿಂದ ಹೊರಬಂದು ಆ ಲೆನ್ಸ್ ಗಳಿಗಾಗಿ ಹುಡುಕಾಡಿದನು. ಸ್ವಲ್ಪ ಹೊತ್ತಿನಲ್ಲೇ ಅವನ್ನು ತೆಗೆದುಕೊಂಡು ಮನೆಗೆ ವಾಪಾಸ್ ಬಂದನು. ಗಾಂಪನಿಗೆ ಆಶ್ಚರ್ಯವಾಯಿತು. ‘ಅಪ್ಪಾ, ನಾವಿಬ್ಬರೂ ಹುಡುಕಿದ್ದು ಒಂದೇ ಸಂಗತಿಯನ್ನು. ಆದರೆ ನನಗೆ ಅದು ಕಾಣಲಿಲ್ಲ. ನೀನು ಹೇಗೆ ಪತ್ತೆ ಹಚ್ಚಿದೆ? ಎಂದು ಪ್ರಶ್ನಿಸಿದ ಸಹಜ ಕುತೂಹಲದಿಂದ.
“ಹೌದು, ಇಬ್ಬರೂ ಹುಡುಕಾಡಿದ್ದು ಒಂದೇ ಸಂಗತಿಯನ್ನು. ನೀನು ಸಣ್ಣ ಪ್ಲಾಸ್ಟಿಕ್ ತುಂಡಿಗಾಗಿ ಹುಡುಕಾಡುತ್ತಿದ್ದೆ. ನಾನು ದುಡಿದ ಐದು ಸಾವಿರ ರೂಪಾಯಿಗಾಗಿ ಹುಡುಕಾಡಿದೆ. ಅಷ್ಟೇ ವ್ಯತ್ಯಾಸ” ಎಂದನು ಅಪ್ಪ.
***
ಮುಳ್ಳು ಎಲ್ಲಿದೆ?
ತಂದೆ: ಗಾಂಪಾ, ಟೈಮ್ ಎಷ್ಟು?
ಗಾಂಪ: ಅಪ್ಪಾ ನನಗೆ ಟೈಂ ನೋಡೋಕೆ ಬರಲ್ಲ.
ತಂದೆ: ಸರಿ, ಹಾಗಾದ್ರೆ ದೊಡ್ದ ಮುಳ್ಳು ಸಣ್ಣ ಮುಳ್ಳು ಎಲ್ಲಿವೆ ಅಂತನಾದ್ರೂ ಹೇಳು?
ಗಾಂಪ: ಅಪ್ಪ ದೊಡ್ಡ ಮುಳ್ಳು ಸಣ್ಣ ಮುಳ್ಳು ಎರಡೂ ಗಡಿಯಾರದೊಳಗೇ ಇವೆ !
***
ಚಹಾ ಎಲ್ಲಿಂದ ಬರುತ್ತೆ?
ಟೀಚರ್: ಗಾಂಪ, ಅಸ್ಸಾಂ ರಾಜ್ಯ ಏತಕ್ಕೆ ಪ್ರಸಿದ್ಧಿ ಆಗಿದೆ?
ಗಾಂಪ: ನನಗೆ ಗೊತ್ತಿಲ್ಲ ಟೀಚರ್
ಟೀಚರ್: ಹೋಗಲಿ ನಾನೇ ನಿನಗೊಂದು ಸುಳಿವು ಕೊಡುತ್ತೇನೆ. ನಮಗೆ ಚಹಾ ಎಲ್ಲಿಂದ ಬರುತ್ತೆ?
ಗಾಂಪ: ನಮ್ಮ ಶಾಲೆ ಎದುರಿಗೆ ಇರೋ ಸೂರಿ ಟೀ ಸ್ಟಾಲ್ ನಿಂದ ಟೀಚರ್!
***
ಸಿಟ್ಟು ಬರುತ್ತೆ !
ಶಿಕ್ಷಕ: ಮಕ್ಕಳೇ ನಿಮಗೊಂದು ಲೆಕ್ಕ ಕೊಡುತ್ತೇನೆ. ಯಾರು ಬೇಗ ಹೇಳುತ್ತಾರೋ ಅವರಿಗೆ ಬಹುಮಾನ ಕೊಡುತ್ತೇನೆ.
ಗಾಂಪ: ಹೌದಾ ಸರ್, ಬೇಗ ಹೇಳಿ
ಶಿಕ್ಷಕ: ಒಬ್ಬ ತಂದೆ ತನ್ನ ೧೬ ಎಕರೆ ಜಾಗದಲ್ಲಿ ತನಗೆ ೮ ಎಕರೆ ಇಟ್ಟುಕೊಂಡು ಉಳಿದ ೮ ಎಕರೆ ಜಮೀನನ್ನು ತಮ್ಮ ನಾಲ್ಕು ಜನ ಮಕ್ಕಳಿಗೆ ಹಂಚುತ್ತಾನೆ. ಆಗ ಪ್ರತಿಯೊಬ್ಬ ಮಕ್ಕಳಿಗೆ ಏನು ಬರುತ್ತೆ?
ಗಾಂಪ (ಆತುರದಿಂದ) : ಅವರಿಗೆಲ್ಲಾ ಸಿಟ್ಟು ಬರುತ್ತೆ ಸರ್ !
***
ತಪ್ಪು ಆಯ್ಕೆ
ಗಾಂಪ ಕತ್ತೆಯ ಮೇಲೆ ಸವಾರಿ ಹೊರಟಿದ್ದ. ಕತ್ತೆಗೆ ಅದೇನು ರೋಗ ಬಂತೋ, ಮುಂದಡಿ ಇಡಲು ಕೇಳುತ್ತಿರಲಿಲ್ಲ. ಸವಾರಿ ಹೊರಟಿದ್ದ ಗಾಂಪನ ಸಹನೆ ಕೂಡ ಮುಗಿದಿತ್ತು. ಅವನು ತನ್ನ ಬಾರುಕೋಲಿನಿಂದ ಕತ್ತೆಗೆ ರಪ್ ರಪ್ ಎಂದು ಬಿಗಿಯುತ್ತಿದ್ದ. ಕೊನೆಗೊಮ್ಮೆ ಸಿಟ್ಟಿಗೆದ್ದು ಕೂಗಿದ: “ಎಲಾ ರಾಕ್ಷಸ ಪೀಡೆಯೇ ! ನೀನು ಭಾರ ಹೊತ್ತು ನಡೆಯುವುದಕ್ಕೆ ತಯಾರಿಲ್ಲ ಅಂತಾದರೆ ಕತ್ತೆಯಾಗಿ ಯಾಕೆ ಹುಟ್ಟಿದೆ? ಯಾವುದಾದರೂ ನಾಯಿ ಅಥವಾ ಬೆಕ್ಕಾಗಿ ಹುಟ್ಟಬಹುದಿತ್ತಲ್ಲ?
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ