‘ಸಂಪದ' ನಗೆ ಬುಗ್ಗೆ - ಭಾಗ ೭೮

‘ಸಂಪದ' ನಗೆ ಬುಗ್ಗೆ - ಭಾಗ ೭೮

ಎಚ್ಚರಿಕೆ 

ಗಾಂಪನಿಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಾಗಾಗಿ ಗೆಳೆಯರ ಜೊತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂತಹ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಮೊದಲ ಬಾರಿಗೆ ಸೂರಿ ಜತೆಗೆ ಜಂಗಲ್ ಸಫಾರಿ ಹೊರಟಿದ್ದ. ಸೂರಿ ಸ್ವಲ್ಪ ದಡ್ದ ಜೊತೆಗೆ, ನಿಧಾನಿ ಕೂಡಾ ಆಗಿದ್ದುದರಿಂದ, ಗಾಂಪ ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೂರಿಯನ್ನು ಕರೆದುಕೊಂಡು ಹೊರಟ. ಇಬ್ಬರೂ ಜಂಗಲ್ ಸಫಾರಿ ಹೊರಟರು. ಹೋಗುವಾಗ, ಗಾಂಪ ನಾನು ಮುಂದೆ ಹೋಗ್ತೀನಿ, ನನಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ ಅಂತ ಹೇಳಿದ. ಸರಿ ಅಂತ ಇಬ್ಬರೂ ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ. ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ ಗಾಂಪನಿಗೆ ಇದ್ದಕ್ಕಿದ್ದಂತೆ ಬದಿಯ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದುದು ಕಾಣಿಸಿತು. ಕೂಡಲೇ, ಚಿರತೆ ‘ಓಡು ಓಡು' ಅಂತ ಕೂಗಿ ತಪ್ಪಿಸಿಕೊಂಡ ಗಾಂಪ. ಆದರೆ ಸೂರಿ ಮಾತ್ರ ಅಲ್ಲೇ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಗಾಂಪ ವಾಪಾಸ್ ಬಂದು ತನ್ನ ಬಳಿ ಇದ್ದ ದೊಡ್ದ ಕತ್ತಿಯಿಂದ ಚಿರತೆಯನ್ನು ಹೆದರಿಸಿ ಓಡಿಸಿದ. ಆಮೇಲೆ ಸೂರಿಯ ಕಡೆಗೆ ನೋಡಿ, “ನಿಂಗೇನ್ ಬುದ್ದಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ, ನೀನ್ಯಾಕೆ ಇಲ್ಲೇ ನಿಂತಿದ್ದೆ, ಚಿರತೆ ಬಂದಿದ್ದು ಕಾಣಿಸಲಿಲ್ವಾ ನಿಂಗೆ? ಅಂತ ಕೇಳಿದ ಗಾಂಪ. ಅದಕ್ಕೆ ಸೂರಿ ಹೇಳಿದ “ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ಚಿರತೆ ‘ಓಡು’ ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ ಅಂದ್ಕೊಂಡು ಸುಮ್ನೆ ಇದ್ದೆ. !”

***

ಕರುಣೆಗೆ ಕೃತಜ್ಞತೆ

ಕುರುಡ ಭಿಕ್ಷುಕ ಗಾಂಪ ನಗರದ ಪ್ರಮುಖ ಬಡಾವಣೆಯಲ್ಲಿ ನಿಂತು “ಅಮ್ಮಾ ತಾಯೀ ಈ ಕುರುಡನಿಗೆ ಭಿಕ್ಷೆ ಹಾಕಿ" ಎಂದು ಪಾತ್ರೆ ಬಡಿಯುತ್ತಾ ಕೂಗುತ್ತಿದ್ದ. ನಡೆದು ಬರುತ್ತಿದ್ದ ಓರ್ವ ಶ್ರೀಮಂತ ಮಹಿಳೆ “ಓಹ್ ಪಾಪ ಕುರುಡ" ಎಂದು ತನ್ನಷ್ಟಕ್ಕೇ ಅಂದುಕೊಂಡು ದೊಡ್ದ ನೋಟನ್ನೇ ಅವನ ತಟ್ಟೆಗೆ ಹಾಕಿದಳು. ಅದನ್ನು ಕಂಡ ಗಾಂಪನ ಕಣ್ಣುಗಳು ಅರಳಿದವು. “ತಾಯೀ ದೇವ್ರು ನಿಮ್ಮನ್ನು ಚಂದಾಗಿಟ್ಟಿರಲಿ. ನಿಮ್ಮನ್ನು ಅಷ್ಟು ದೂರದಿಂದ ನೋಡಿನೇ ಗೊತ್ತಾಗಿಬಿಟ್ತು ನನಗೆ ನೀವು ಮಹಾದಾನಿಗಳು ಅಂತ" ಎಂದು ಬಾಯ್ತುಂಬಾ ಹೊಗಳಿದ.

***

ತಿಳಿಯದವರೇ ಇರಬೇಕು

ಪರವೂರಿನಿಂದ ಬಂದಿದ್ದ ಪ್ರವಾಸಿ ಗಾಂಪನಿಗೆ ಇಲ್ಲಿ, ಈ ಮನೆಯಲ್ಲಿ, ಅದ್ಭುತವಾದ ಆತ್ಮೀಯವಾದ ಸ್ವಾಗತ ಸಿಕ್ಕಿತು. ಅದನ್ನು ಕಂಡು ಗಾಂಪನಿಗೆ ಎದೆ ಉಬ್ಬಿತು. “ಎಷ್ಟೊಂದು ಸ್ಮರಣೀಯ ಸ್ವಾಗತ ! ಹೇಗೆ ಗೊತ್ತಾಯ್ರು ನಿಮಗೆ ನಾನು ಬೇರೆ ಊರಿನಿಂದ ಇಲ್ಲಿಗೆ ಬಂದಿದೀನಿ ಅಂತ?” ಕೇಳಿದನಾತ.

“ಯಾಕೆ ಅಂದ್ರೆ, ಈ ಊರಿನವರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಆದರೆ ನೀವು ನನ್ನನ್ನೇ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೀರಿ ಅಂತಂದ್ರೆ ನೀವು ಈ ಊರಿನವರಲ್ಲ, ಬೇರೆ ಕಡೆಯವರೇ ಇರಬೇಕು ಅಂತ ನೂರಕ್ಕೆ ನೂರು ಖಚಿತ ಆಯ್ತು" ಎಂದ ಅತಿಥೇಯ ಜುಗ್ಗ ಶ್ರೀಮಂತ.

***

ಬೇಸರದ ಸಂಗತಿ

ಗಾಂಪ: ನಿನಗಾದ ಅತ್ಯಂತ ಬೇಸರದ ವಿಚಾರದ ಬಗ್ಗೆ ಹೇಳು?

ಸೂರಿ: ನಾನು ಹೈಸ್ಕೂಲಿನಲ್ಲಿದ್ದಾಗ ಲೆಕ್ಕದಲ್ಲಿ ತುಂಬಾ ದಡ್ದ ಇದ್ದೆ. ಒಂದು ಸಲ ಗಣಿತದಲ್ಲಿ ೯೦ ಮಾರ್ಕ್ಸ್ ತಗೊಂಡಿದ್ದೆ. ಪ್ರೋಗ್ರೆಸ್ ಕಾರ್ಡ್ ನೋಡಿ ಅಪ್ಪ ತುಂಬಾ ಖುಷಿ ಪಟ್ಟು ನನ್ನನ್ನ ಹೊಗಳುತ್ತಾರೆ ಅಂತ ಅಂದುಕೊಂಡಿದ್ದೆ. ಆದರೆ, ಅವರು ನೀನು ಒಂಬತ್ತರ ಪಕ್ಕದಲ್ಲಿ ಸೊನ್ನೆ ಸೇರಿಸಿ, ತೊಂಬತ್ತು ಮಾಡಿದ್ದೀಯ ಅಂತ ಅನುಮಾನ ಪಟ್ಟಿದ್ದರು. “ಸೊನ್ನೆ ಸೇರಿಸಿಲ್ಲ" ಅಂತ ಎಷ್ಟೇ ಹೇಳಿದರೂ ಅವರು ಕೇಳಲಿಲ್ಲ. ಅದು ನನಗೆ ತುಂಬಾನೇ ಬೇಸರ ತರಿಸಿತ್ತು. 

ಗಾಂಪ: ಏಕೆ?

ಸೂರಿ: ಅವತ್ತು ಸತ್ಯವಾಗಲೂ ಸೊನ್ನೆ ಸೇರಿಸಿರಲಿಲ್ಲ. ನಾನು ಸೇರಿಸಿದ್ದು ಒಂಬತ್ತು.!

***

ಡಾಕ್ಟರ್ ಮಾತು

ಕಾಲಿಗೆ ಏಟಾಗಿದ್ದ ಗಾಂಪ: “ಒಂದೇ ತಿಂಗಳಲ್ಲಿ ನಡೆದಾಡುವಂತೆ ಮಾಡುತ್ತೇನೆ ಎಂದಿದ್ದರು ಡಾಕ್ಟರ್”

ಸೂರಿ: ಹಾಗೇ ಮಾಡಿದ್ರಾ?

ಗಾಂಪ: ಮಾಡಿದ್ರು. ಆದರೆ, ಆಮೇಲೆ ಅವರು ಕೊಟ್ಟ ಬಿಲ್ ಪಾವತಿಸಲು ನಾನು ನನ್ನ ಹೊಸ ಕಾರ್ ಮಾರಬೇಕಾಯ್ತು, ಈಗ ವಾಸ್ತವವಾಗಿ ನಾನು ಎಲ್ಲಾ ಕಡೆ ನಡೆದಾಡಿಕೊಂಡೇ ಹೋಗುತ್ತಿದ್ದೇನೆ.!

***

ಮುಖದ ಗಾಯ

ಡಾಕ್ಟರ್: ಮುಖದಲ್ಲಿ ಏನು ಇಷ್ಟು ದೊಡ್ಡ ಗಾಯ?

ಗಾಂಪ: ಸೊಳ್ಳೆ ಕಡಿದಿದ್ರಿಂದ ಸರ್

ಡಾಕ್ಟರ್: ಸೊಳ್ಳೆ ಕಡಿದ್ರೆ ಇಷ್ಟೊಂದು ಗಾಯಗಳಾಗುತ್ತವೆಯೇ?

ಗಾಂಪ: ಇಲ್ಲಾ, ಸೊಳ್ಳೆ ನನ್ನ ಮುಖದ ಮೇಲೆ ಕೂತಿತ್ತು. ನನ್ನ ಹೆಂಡತಿ ಸೊಳ್ಳೆಯನ್ನು ಸಾಯಿಸೋಕೆ ಲಟ್ಟಣಿಗೆಯಿಂದ ನನ್ನ ಮುಖಕ್ಕೆ ಬೀಸಿದ ಪರಿಣಾಮ ಹೀಗಾಯ್ತು ಸರ್!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ