‘ಸಮಸ್ಯೆಗೆ ಆತ್ಮಹತ್ಯೆ ಆಯ್ಕೆಯಲ್ಲ’ ಎಂದ ಸುಶಾಂತ್ ಎಡವಿದ್ದೆಲ್ಲಿ?

‘ಸಮಸ್ಯೆಗೆ ಆತ್ಮಹತ್ಯೆ ಆಯ್ಕೆಯಲ್ಲ’ ಎಂದ ಸುಶಾಂತ್ ಎಡವಿದ್ದೆಲ್ಲಿ?

ಸುಶಾಂತ್ ಸಿಂಗ್ ರಾಜಪೂತ್ ಎಂಬ ಬಾಲಿವುಡ್ ನ ಸುರದ್ರೂಪಿ, ಉದಯೋನ್ಮುಖ ನಟ ಆತ್ಮಹತ್ಯೆ ಮಾಡಿಕೊಂಡ ಎನ್ನುತ್ತಲೇ ಈ ಭಾನುವಾರವೂ ಕರಾಳ ಭಾನುವಾರವಾಯಿತಾ ಎಂದು ಮನಸ್ಸು ಚೀರಿತು. ಕಳೆದ ಭಾನುವಾರ ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಅವರದ್ದಾದರೆ ಆರೋಗ್ಯ ಸಮಸ್ಯೆ. ಆದರೆ ಕೇವಲ ೩೪ ವರ್ಷ ಪ್ರಾಯದ ಈ ಉದಯೋನ್ಮುಖ ನಟನಿಗೆ ಏನಾಗಿತ್ತು? ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಪ್ರಾಥಮಿಕ ವರದಿ. ಯಶಸ್ಸಿನ ಉತ್ತುಂಗದಲ್ಲಿದ್ದ ನಟನೊಬ್ಬನಿಗೆ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದ ದಿನಗಳನ್ನು ಕಳೆಯುವುದೇ ಸಮಸ್ಯೆಯಾಗಿತ್ತಾ? ಹೌದು ಎನ್ನುತ್ತದೆ ಸುಶಾಂತರ ಆತ್ಮೀಯ ಬಳಗ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಬೇರೇನಾದರೂ ಮಜಲುಗಳು ಇವೆಯೇ? ವರದಿಗಳಿಗೆ ಇನ್ನೂ ಕಾಯಬೇಕಾಗುತ್ತೆ. ಆದರೆ ಅತೀ ಕಡಿಮೆ ಸಮಯದಲ್ಲಿ ಬಾಲಿವುಡ್ ರಂಗದಲ್ಲಿ ಯಶಸ್ಸನ್ನು ಕಂಡ ಉತ್ತಮ ನಟನೊಬ್ಬನಿಗೆ ಅಂತಿಮ ವಿದಾಯ ಹೇಳುವ ಮುನ್ನ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣವೇ?

ಬಿಹಾರದ ಪಾಟ್ನಾದಲ್ಲಿ ೧೯೮೧ ಜನವರಿ ೨೧ರಂದು ಹುಟ್ಟಿದ ಸುಶಾಂತ್ ಗೆ ಬಾಲ್ಯದಿಂದಲೂ ನಟನೆಯ ಗೀಳು. ಆದರೆ ತಮ್ಮ ಶೈಕ್ಷಣಿಕ ಜೀವನದಲ್ಲಿ ಅವರು ಎಂದೂ ಹಿಂದೆ ಬೀಳಲಿಲ್ಲ. ದೆಹಲಿಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪ್ರವೇಶ ಪಡೆದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನೂ ಪಡೆದರು. ಆದರೆ ಇಂಜಿನಿಯರಿಂಗ್ ಮಾಡಿ ಉದ್ಯೋಗ ಮಾಡುವುದು ಅವರ ಆಸಕ್ತಿ ಆಗಿರಲಿಲ್ಲ. ಚಿತ್ರರಂಗದತ್ತ ಅವರ ಒಲವು ಅವರನ್ನು ಕರೆಯುತ್ತಿತ್ತು. ಬಾಲಿವುಡ್ ನಟ ಶಾರುಖ್ ಖಾನ್ ಇವರ ಆರಾಧ್ಯ ದೈವವಾಗಿದ್ದ. ನಂತರದ ದಿನಗಳಲ್ಲಿ ಸುಶಾಂತ್ ಸಿಂಗ್ ರನ್ನು ಎರಡನೇ ಶಾರುಖ್ ಖಾನ್ ಎಂದೇ ಚಿತ್ರರಂಗ ಕರೆಯುತ್ತಿತ್ತು. ಯಾಕೆಂದರೆ ಶಾರುಖ್ ಖಾನ್ ಅವರಂತೆ ಇವರೂ ಯಾವುದೇ ಚಿತ್ರರಂಗದ ದೊಡ್ಡ ಹಿನ್ನಲೆ ಇಲ್ಲದೇ ಮುನ್ನಲೆಗೆ ಬಂದವರಾಗಿದ್ದರು. ಸುಶಾಂತ್ ಭೌತಶಾಸ್ತ್ರದಲ್ಲಿ ನ್ಯಾಷನಲ್ ಒಲಂಪಿಯಾಡ್ ವಿಜೇತರೂ ಸಹ ಆಗಿದ್ದರು. ನಂತರದ ದಿನಗಳಲ್ಲಿ ಅವರು ನೃತ್ಯ ಮತ್ತು ನಟನೆಯತ್ತ ತಮ್ಮ ಒಲವನ್ನು ಕೇಂದ್ರೀಕರಿಸಿದರು. 

ಸುಶಾಂತ್ ತಮ್ಮ ತಾಯಿಗೆ ಬಹಳ ಆಪ್ತರಾಗಿದ್ದರು. ೨೦೦೨ರಲ್ಲಿ ಅವರ ನಿಧನ ಸುಶಾಂತ್ ಮೇಲೆ ಬಹಳ ಪ್ರಭಾವ ಬೀರಿತ್ತು. ಸುಶಾಂತ್ ೧೨ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಅವರ ತಾಯಿಯ ನಿಧನವಾಗಿತ್ತು. ಸುಶಾಂತ್ ಅವರ ಕೊನೆಯ ಪೋಸ್ಟ್ ಕೂಡಾ ತಾಯಿಗೆ ಸಂಬಂಧಿಸಿದ್ದೇ ಆಗಿತ್ತಂತೆ. ಇವರ ಸಹೋದರಿ ಮೀತು ಸಿಂಗ್ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಚಿತ್ರ ನಟಿ ಅಂಕಿತಾ ಲೋಖಂಡೆ ಜೊತೆ ಸ್ವಲ್ಪ ಸಮಯ ಇವರು ಪ್ರೀತಿ ಪ್ರೇಮ ಎಂದು ತಿರುಗಾಡುತ್ತಿದ್ದರೂ ೨೦೧೬ರ ಸುಮಾರಿಗೆ ಬೇರೆಯಾಗಿದ್ದರು.

ಸಿನೆಮಾ ರಂಗ ಪ್ರವೇಶಕ್ಕೆ ಮೊದಲು ಸುಶಾಂತ್ ಸಿಂಗ್ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಅವರು ಜೀ ಟಿ.ವಿ.ಯಲ್ಲಿ ಬರುತ್ತಿದ್ದ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಅವರ ‘ಕಿಸ್ ದೇಶ್ ಮೆ ಹೈ ಮೇರಾ ದಿಲ್’ ಧಾರಾವಾಹಿಯಲ್ಲಿ ನಟಿಸಿದ್ದರು. ನೃತ್ಯ ಕಾರ್ಯಕ್ರಮಗಳಾದ ‘ಝರಾ ನಚ್ ಕೆ ದಿಖಾ’ ಹಾಗೂ ಝಲಕ್ ದಿಖಲಾಜಾ’ ಇವುಗಳಲ್ಲೂ ಭಾಗವಹಿಸಿದ್ದರು. ಟಿವಿ ಧಾರಾವಾಹಿಗಳಿಂದ ಇವರು ಬಹಳಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದರು. 

ಈ ಧಾರಾವಾಹಿಗಳು ಸುಶಾಂತರಿಗೆ ಸಿನೆಮಾರಂಗದ ದಾರಿಯನ್ನು ಸಲೀಸಾಗಿ ತೆರೆದು ಕೊಡುತ್ತದೆ. ೨೦೧೩ರಲ್ಲಿ ‘ಕಾಯ್ ಪೂ ಚೆ' ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಾರೆ. ನಂತರ ಅವರ ನಟನಾ ಚಾತುರ್ಯ ಅವರಿಗೆ ಸಾಲು ಸಾಲು ಚಿತ್ರಗಳನ್ನು ಒದಗಿಸುತ್ತದೆ. ಶುದ್ಧ್ ದೇಸೀ ರೋಮ್ಯಾನ್ಸ್, ಡಿಟೆಕ್ಟಿವ್ ಬ್ಯೋಮಕೇಸ್ ಭಕ್ಷಿ ಈ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದಿದ್ದರೂ ಸುಶಾಂತ್ ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ಸಹಕಾರಿಯಾಗುತ್ತದೆ. ಅಮೀರ್ ಖಾನ್ ನಟನೆಯ ‘ಪಿಕೆ' ಚಿತ್ರದಲ್ಲಿನ ಪಾಕಿಸ್ತಾನೀ ಹುಡುಗನ ಪಾತ್ರ ಮಾಡಿದ ಸುಶಾಂತ್ ನಂತರ ಭಾರತೀಯ ಕ್ರಿಕೆಟ್ ನ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿಯ ನಿಜ ಜೀವನದ ಕಥೆಯಾಧಾರಿತ ಚಿತ್ರ ‘ಎಂ.ಎಸ್. ಧೋನಿ- ಎ ಅನ್ ಟೋಲ್ಡ್ ಸ್ಟೋರಿ' ನಟಿಸುತ್ತಾರೆ. ಧೋನಿಯಂತೆಯೇ ಬ್ಯಾಟಿಂಗ್ ಮಾಡುವ ಸುಶಾಂತ್ ರ ನಟನೆ ನಿಜವಾದ ದೋನಿಯನ್ನೇ ನೆನಪಿಸುತ್ತಿತ್ತು. ಧೋನಿಯಂತೆಯೇ ಆಂಗಿಕ ನಟನೆ, ಕೇಶ ವಿನ್ಯಾಸವನ್ನೆಲ್ಲಾ ಮಾಡಿ ಚಿತ್ರದಲ್ಲಿನ ನಟನೆಗಾಗಿ ‘ಸ್ಕ್ರೀನ್' ಪ್ರಶಸ್ತಿ ಗಳಿಸುತ್ತಾರೆ.ಈ ಚಿತ್ರ ನೋಡಿದ ಧೋನಿ ಸಹ ಸುಶಾಂತರ ನಟನಾ ಕೌಶಲ್ಯಕ್ಕೆ ಸಲಾಂ ಹೇಳುತ್ತಾರೆ. ಈ ಚಿತ್ರ ಹಿಟ್ ಆಗಿ ಸುಶಾಂತ್ ಕೂಡಾ ಸ್ಟಾರ್ ನಟರ ಪಟ್ಟಿಗೆ ಸೇರುತ್ತಾರೆ.

೨೦೧೮ರಲ್ಲಿ ಕೇದಾರನಾಥ್ ಮತ್ತು ೨೦೧೯ರಲ್ಲಿ ‘ಚಿಚ್ಹೋರೆ' ಚಿತ್ರಗಳಲ್ಲಿ ನಟಿಸುತ್ತಾರೆ. ಚಿಚೋರೆ ಚಿತ್ರದಲ್ಲಿ ಒಂದು ಮಗುವಿನ ಅಪ್ಪನಾಗಿ ನಟಿಸುವ ಸುಶಾಂತ್ ಆ ಚಿತ್ರದಲ್ಲಿ ತಮ್ಮ ಮಗ ಆತ್ಮಹತ್ಯೆಗೆ ಪ್ರಯತ್ನಿಸಿರುವುದನ್ನು ಗಮನಿಸಿ ಸಮಸ್ಯೆಗೆ ಆತ್ಮಹತ್ಯೆ ಆಯ್ಕೆ ಮಾಡಿಕೊಳ್ಳಬೇಡ, ಅದರಿಂದ ಪರಿಹಾರ ಸಿಗುವುದಿಲ್ಲ, ಸಮಸ್ಯೆಗಳನ್ನು ಎದುರಿಸಬೇಕು ಎಂದು ತಮ್ಮ ಮಗನಿಗೆ ತಿಳಿ ಹೇಳುತ್ತಾರೆ. ಆದರೆ ನಿಜ ಜೀವನದಲ್ಲಿ ಆತ್ಮಹತ್ಯೆಯನ್ನೇ ಆಯ್ಕೆ ಮಾಡುತ್ತಾರೆ. ವಿಧಿಯ ವಿಪರ್ಯಾಸವೆಂದರೆ ಇದೇ ಏನೋ? ಅಲ್ಲವೇ?

ಸುಶಾಂತ್ ಸಿಂಗ್ ಕೈಯಲ್ಲಿ ಹಲವಾರು ಚಿತ್ರಗಳು ಇದ್ದುವು. ಮಾಧವನ್ ಅವರ ‘ಚಂದಾ ಮಾಮಾ ದೂರ್ ಕೆ', ‘ದಿಲ್ ಬೇಚಾರ’ ಹೀಗೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಸ್ಟೋರೀಸ್ ಆಫ್ ಇಂಡಿಯಾದಲ್ಲಿ ಚಾಣಕ್ಯ, ಅಬ್ದುಲ್ ಕಲಾಂ, ರವೀಂದ್ರನಾಥ ಠಾಗೋರ್ ಮುಂತಾದ ನೈಜ ಸಾಧಕರಿಗೆ ಸಂಬಂಧಿಸಿದ ಸರಣಿಯಲ್ಲಿ ನಟಿಸುತ್ತಿದ್ದರು. ಯುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ‘ಸುಶಾಂತ್ 4 ಎಜುಕೇಶನ್; ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದರು. ವಯಸ್ಸು ಸಣ್ಣದಿತ್ತು, ಕೆಲಸ ತುಂಬಾ ಇತ್ತು ಆದರೂ ಆತ್ಮಹತ್ಯೆಯನ್ನೇ ಸುಶಾಂತ್ ಯಾಕೆ ಆಯ್ಕೆ ಮಾಡಿಕೊಂಡರು? ಇದು ಬಹುಷಃ ‘ಸುಶಾಂತ್ ಸಿಂಗ್ ರಾಜಪೂತ್- ಎ ರಿಯಲ್ ಅನ್ ಟೋಲ್ಡ್ ಸ್ಟೋರಿ' ಆಗ ಬಹುದೇ?

ಚಿತ್ರ: ಅಂತರ್ಜಾಲ ಕೃಪೆ

Comments

Submitted by kuslekar Mon, 06/15/2020 - 20:11

ಸೂಕ್ತ ಸಮಯದಲ್ಲಿ ಸರಿಯಾದ ಬರಹವಾಗಿದ್ದು  ಪ್ರಸ್ತುತ  ಸಮಸ್ಯೆಗೆ ಸ್ಪಂದಿಸುತ್ತಿದೆ ।।।

Submitted by Ashwin Rao K P Tue, 06/16/2020 - 09:38

ಮಾನ್ಯರೇ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇನ್ನಷ್ಟು ಲೇಖನಗಳನ್ನು ಬರೆಯುವ ಸ್ಪೂರ್ತಿ ನಿಮ್ಮ ಪ್ರತಿಕ್ರಿಯೆಯಿಂದ ದೊರೆಯಿತು.

ಅಶ್ವಿನ್