‘ಸುವರ್ಣ ಸಂಪುಟ' (ಭಾಗ ೧೦೩) - ಸಿ.ಪಿ.ಕೃಷ್ಣಕುಮಾರ್

‘ಸುವರ್ಣ ಸಂಪುಟ' (ಭಾಗ ೧೦೩) - ಸಿ.ಪಿ.ಕೃಷ್ಣಕುಮಾರ್

‘ಸಿ.ಪಿ.ಕೆ.’ ಎಂದೇ ಹೆಸರುವಾಸಿಯಾಗಿರುವ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಇವರು ಕನ್ನಡದ ಖ್ಯಾತ ವಿಮರ್ಶಕರಲ್ಲಿ ಓರ್ವರು. ಇವರು ಹುಟ್ಟಿದ್ದು ಎಪ್ರಿಲ್ ೮, ೧೯೩೯ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ. ಇವರ ತಂದೆ ಪುಟ್ಟೇಗೌಡ ಹಾಗೂ ತಾಯಿ ಚಿಕ್ಕಮ್ಮ. ಸಿಪಿಕೆಯವರು ೯ ತಿಂಗಳ ಮಗುವಾಗಿದ್ದಾಗಲೇ ಇವರ ತಾಯಿ ನಿಧನಹೊಂದಿದರು. ಇವರು ತಮ್ಮ ಬಿ ಎ (ಆನರ್ಸ್) ಪದವಿಯನ್ನು ಮೈಸೂರಿನ ಮಹಾರಾಜಾ ಕಾಲೇಜಿನಿಂದ ಪಡೆದುಕೊಂಡರು. ನಂತರ ಮಾನಸ ಗಂಗೋತ್ರಿಯಲ್ಲಿ ತಮ್ಮ ಎಂ ಎ ಪದವಿಯನ್ನು ಪೂರೈಸಿದರು. ಇದಲ್ಲದೇ ಭಾರತೀಯ ವಿದ್ಯಾಭವನದವರು ನಡೆಸುವ ಸಂಸ್ಕೃತ ಕೋವಿದ ಪದವಿಯನ್ನೂ ಪಡೆದುಕೊಂಡರು. ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಇವರು ಸಂಶೋಧನಾ ಸಹಾಯಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ೧೯೬೪ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು. ೧೯೬೭ರಲ್ಲಿ ಮಾನಸ ಗಂಗೋತ್ರಿಯಲ್ಲಿ, ೧೯೬೯ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾದರು. ಕ್ರಮೇಣ ಆ ಸಂಸ್ಥೆಯ ನಿರ್ದೇಶಕರೂ ಆಗಿ ನಿವೃತ್ತಿ ಹೊಂದಿದರು.

ನಿವೃತ್ತಿಯ ನಂತರವೂ ಸಿಪಿಕೆ ಅನೇಕ ಸಂಸ್ಥೆಗಳ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ್ದರು. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ೨೦೧೧ರಲ್ಲಿ ಗಂಗಾವತಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಲಭಿಸಿತ್ತು. 

ಸಿ.ಪಿ.ಕೆ ಅವರ ಸಾಹಿತ್ಯದ ಬಹುಮುಖ ಕೊಡುಗೆಗಳಿಗಾಗಿ ಸಂದ ಪ್ರಶಸ್ತಿಗಳು ಹಲವಾರು. ‘ವಚನ ವಿಲೋಕನ’ ಕೃತಿಗೆ ಬಸವ ವೇದಿಕೆಯು ‘ಬಸವ ಸಾಹಿತ್ಯಶ್ರೀ’ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಚಿತ್ರದುರ್ಗದ ಬೃಹನ್ಮಠದ ‘ವಿದ್ವತ್‌ ಶಿರೋಮಣಿ’ ಪ್ರಶಸ್ತಿ, ಮುಕ್ತಕ ಅಕಾಡಮಿಯಿಂದ ‘ಹನಿಗವನ ಹರಿಕಾರ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ‘ಜಾನಪದ ತಜ್ಞ’ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಇನ್ನೂ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಅಭಿಮಾನಿಗಳು ಅರ್ಪಿಸಿರುವ ಗೌರವ ಗ್ರಂಥ ‘ಸಾರ್ಥಕ’.

ಇವರು ಸಾಹಿತ್ಯದ ಬಹು ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರ ಕವನ ಸಂಕಲನಗಳು - ಅಂತರತಮ (ವಚನಗಳು), ಒಳದನಿ, ತಾರಾಸಖ, ಪ್ರಕೃತಿ, ವರ್ತಮಾನ, ಬೊಗಸೆ ಇತ್ಯಾದಿ. ಪ್ರಬಂಧಗಳು- ಚಿಂತನಬಿಂದು, ಮೆಲುಕು, ವಿಚಾರನಿಮಿಷ. ವಿಮರ್ಶೆ/ವಿಚಾರ/ಸಂಶೋಧನೆ - ಅಧ್ಯಯನ, ಆಲೋಚನ, ಉಪಚಯ, ಎರಡು ಜೈನ ಪುರಾಣಗಳು, ಐವರು ವಚನಾಕಾರರು, ಕನ್ನಡ ಚತುರ್ಮುಖ, ಕಾವ್ಯಾರಾಧನ, ಕುವೆಂಪು ಕಾವ್ಯ ಮಿಮಾಂಸೆ, ಜನ್ನ, ನಾಗಚಂದ್ರ, ನೂರಾರು ವಿಮರ್ಶೆಗಳು ಇತ್ಯಾದಿ. ಜಾನಪದ ಬರಹಗಳು - ಜನಪದ ಗೀತೆ, ಜಾನಪದ ಜಾಗರ, ಜಾನಪದ ಪ್ರತಿಭೆ, ಜಾನಪದ ಸರಸ್ವತಿ ಇತ್ಯಾದಿ. ಜೀವನ ಚಿತ್ರ- ರತ್ನತ್ರಯ, ಸಾಕ್ರಟೀಸ್, ಸ್ವಾಮಿ ವಿವೇಕಾನಂದ, ಹಿರಿಯರ ಗೆರೆಗಳು ಇತ್ಯಾದಿ. ಸಂಪಾದನೆ - ಅರಣ್ಯ ಪರ್ವ, ಕಾವ್ಯನಂದನ, ಚುಂಚನಗಿರಿ, ಕನ್ನಡ ವಿಮರ್ಶೆ ಇತ್ಯಾದಿ. ಸಂಕೀರ್ಣ- ಅಹಿಂಸೆ, ಕುಮಾರವ್ಯಾಸನ ಹತ್ತು ಚಿತ್ರಗಳು, ವಸುಭೂತಿ ಕಥೆ, ಶೃಂಗಾರಲಹರಿ ಇತ್ಯಾದಿ. ಸಂಸ್ಕೃತ ಭಾಷಾಂತರ - ಅಭಿಜ್ಞಾನ ಶಾಕುಂತಲ, ಊರುಭಂಗ, ಕನ್ನಡ ನಾಗಾನಂದ, ಕನ್ನಡ ರತ್ನಾವಳಿ, ಬೆಳಕಿನ ಹನಿಗಳು, ಸಂಗ್ರಹ ಭಾಗವತ ಇತ್ಯಾದಿ. 

ಇವರು ಹಲವಾರು ಕೃತಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವುಗಳಲ್ಲಿ ಇತಿಹಾಸ, ಪುರಾಣಗಳು, ಎಲಿಯಟ್ಟನ ಮೂರು ಉಪನ್ಯಾಸಗಳು, ಕಲಾತತ್ವ, ಕಲೆ ಎಂದರೇನು? ಗಾಂಧೀ ಕಾಣ್ಕೆ, ಠಾಕೂರ್ ವಚನಾಂಜಲಿ, ನೋವಿನ ದೇವತೆಗೆ, ಪುರಾತನ ನಾವಿಕ, ವಿದ್ಯಾಪತಿ, ಸಂಕಲನ, ಸಾಹಿತ್ಯ ಪ್ರವೇಶ, ಹಿಪ್ಪೊಲಿಟಸ್ ಇತ್ಯಾದಿ.

‘ಸುವರ್ಣ ಸಂಪುಟ' ಕೃತಿಯಲ್ಲಿ ಸಿಪಿಕೆ ಅವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ.

ಗಡಿಯಾರದಂಗಡಿ

ಗಂಟೆಯನು ನೋಡಲಿಕೆ ಗಡಿಯಾರದಂಗಡಿಗೆ

ಬಂದವನು ದಿಗ್ಭ್ರಾಂತ !

ಹತ್ತೆಂಟು ರಸ್ತೆಗಳ ಸೂಚಿಸುವ ಹಲವಾರು

ಕೈಮರವ ಕಂಡು ಕಣ್ ಕಣ್ ಬಿಡುವವೊಲು ಪಾಂಥ !

ಈ ಪರೀಕ್ಷೆಯೊಳಗಾರ ನಂಬುವುದು?

ಪ್ರಾಮಾಣಿಕತೆಯು ಸಂಶೋಧಿಸಿದ ಪಂಡಿತಗೆ

ಸಲಬೇಕು ಡಾಕ್ಟರೇಟ್ ಬಿರುದು !

 

ಒಂದೊಂದು ಮುಳ್ಳಿಗೂ ಒಂದೊಂದು ದಿಕ್ಕು ;

ಸ್ವಾತಂತ್ರ್ಯ ಆಜನ್ಮ ಸಿದ್ಧ ಹಕ್ಕು !

ಮನಬಂದ ಹಾಗೆ ವರ್ತಿಸುತಿಹವು ಗಡಿಯಾರ.

ಕಿಕ್ಕಿರಿದು ಶತ, ಸಾಸಿರ!

(ಎಷ್ಟೆಂದು ಸರಿಮಾಡಬಲ್ಲನಾ ವ್ಯಾಪಾರಿ !)

ಹೇಳಿದರೆ ಕೇಳುವಂತಹ ವಂಶವೇನು ಇದು ?

ಪ್ರತಿಯೊಂದಕೂ ತಾನು ನಡೆದುದೇ ದಾರಿ !

ಎಷ್ಟಾದರೂ ಇದು ಪ್ರಜಾಪ್ರಭುತ್ವ ;

ಎಂತಲೇ ತಲೆಗೊಂದು ತತ್ವ !

 

ದಕ್ಷಿಣ ಧ್ರುವಕೆ ಕೈಯನು ಚಾಚಿರುವುದೊಂದು,

ಉತ್ತರ ಧ್ರುವಕೆ ಮತ್ತೊಂದು;

ಒಂದಕ್ಕೊಂದು ವಿರುದ್ಧ, ಅಸಂಬದ್ಧ

ಸ್ವಚ್ಛಂದವಾಗಿ ಬೇಕಾಬಿಟ್ಟಿ ಓಡುತಿಹ

ರಭಸ ಜೀವಿಗಳು ಹಲವು ;

ಎಡವುತ್ತ, ಕುಂಟುತ್ತ, ತೂಕಡಿಸುತಲೆ ನಡೆವ

ಆಲಸಿಗಳುಂಟು ಕೆಲವು -

ಗಡಿಯಾರ ಸಾಮ್ರಾಜ್ಯದಲಿ ಪ್ರಗತಿಯಿರಲಿಂತು,

ಮತ್ತೆ ಕೆಲವಂತು ನಿಂತಲೆ ನಿಂತು

ಮೌನತಪದಾಚರಣೆ ಗೈಯುತಿಹವು !

ಎಂದು ಕೊನೆಗೊಳ್ಳುವುದೊ ಇವರ ನಿದ್ರಾವಸ್ಥೆ;

ಈ ಎಲ್ಲ ಅವ್ಯವಸ್ಥೆ !

 

(ಕಾಗೆಗಳ ಬಳಗದಲಿ ಕೋಗಿಲೆಗಳಿರಬಹುದು,

ಎಲ್ಲ ಕಾಗೆಗಳೆಂಬ ತೀರ್ಪು ಬೇಡ !

ನೂರರಲಿ ತೊಂಬತ್ತು ಭ್ರಷ್ಟ ಗಡಿಯಾರ, ದಿಟ-

ಬಾಕಿ ಹತ್ತನು ಪತ್ತೆಮಾಡಿ ನೋಡ !)

ಯುಗಯುಗದಿ ಹುಟ್ಟಿ ಬಂದರು ಎನಿತೊ ತಾಂತ್ರಿಕರು ;

ಸರಿಮಾಡಲೆಂದೆ ಬಂದೆವು ಎಂದ ಮಾಂತ್ರಿಕರು, -

ಯಾವ ಪುಂಗಿಗು ಹಾವು ಮಣಿಯಲಿಲ್ಲ !

ಆಯಿತೆನು ರಿಪೇರಿ?

ಎಂದಿನಂತುಳಿಯಿತೀ ಗಡಿಯರ ಹಠಮಾರಿ !

ಎಲೆಲೆ ಗಡಿಯಾರಗಳೆ,

ಜನ್ಮ ಜನ್ಮಾಂತರದನಿಷ್ಟ ನಿಮಗೆ !

ಮತ್ತೆ ಕೆಡದಂತೆ ಸರಿಪಡಿಸಬಹುದೇ ನಿಮ್ಮ

ಯಾವುದಾದರು ಒಂದು ಕುಶಲ ಬೆರಳು?

ಅಥವಾ ‘ಎಂದೆಂದಿಗು ನಿಮಗಿದೆ ಗತಿಯೇನು’

ಹಗಲು ಇರುಳು?

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)