‘ಸುವರ್ಣ ಸಂಪುಟ' (ಭಾಗ ೧೧೦) - ವೇದವ್ಯಾಸ ಜೋಶಿ

‘ಸುವರ್ಣ ಸಂಪುಟ' (ಭಾಗ ೧೧೦) - ವೇದವ್ಯಾಸ ಜೋಶಿ

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ವೇದವ್ಯಾಸ ಜೋಶಿ. ಬೇಸರದ ಸಂಗತಿ ಎಂದರೆ ಈ ಕೃತಿಯಲ್ಲಾಗಲೀ, ಅಂತರ್ಜಾಲ ತಾಣದಲ್ಲಾಗಲೀ ವೇದವ್ಯಾಸ ಜೋಶಿ ಅವರ ಕುರಿತಾದ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಸಂಪದದ ಓದುಗರಿಗೆ ಇವರ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ನಮ್ಮ ಜೊತೆ ಹಂಚಿಕೊಳ್ಳಿರಿ. ಈ ಪುಸ್ತಕದಲ್ಲಿ ಅವರ ಒಂದು ಕವನ ಮುದ್ರಿತವಾಗಿದೆ. ಅದನ್ನು ಸಂಗ್ರಹಿಸಿ ಪ್ರಕಟಿಸುತ್ತಿದ್ದೇವೆ.

ವಿಷಕಾಲ ವೈರಾಗ್ಯ

ಕನ್ನಡ ಕುಲದವ್ವ ತವಕದಿ ಕೂತಾಳ

ತವರೂರ ಭಾಗ್ಯ ತನಗಿಲ್ಲವೆಂದು

ತೆಪ್ಪಗೆ ಮುಖಮಾಡಿ ಗಪ್ಪಗೆ ನೋಡ್ಯಾಳ

ಕಣ್ಣೀರ ಹರಿಸ್ಯಾಳ ಮಕ್ಕಳ ನೆನೆದ

 

ಬೆಡಗಿನ ಮಕ್ಕಳ ಬಯಲಾಟ ನೋಡ

ಮೇಲಾಟ ಕಳಿಸ್ಯಾವ ತಾಯಿಯ ಮರೆದ

ತಾಳಿಲ್ಲ ತಂತಿಲ್ಲ ಕುಣಿಯಾಕ ನಿಂತಾವ

ತಯಿಗದೆಂತ ಬಡಿಸ್ಯಾವ ಉಣಲಾಕ

 

ಆಗೋಂದು ಈಗೊಂದು ಮರಪೆಟ್ಟು ಬಿದ್ದಾಗ

ಮೊಗಬಾಡಿ ನಿಂತಾಗ ಯಾರು ಕೇಳ್ಬೇಕ

ಬಹುಕಾಲ ಸಹಿಸ್ಯಾಳ ಕನ್ನಡ ತಾಯಮ್ಮ

ಗತಕಾಲ ಸೌಭಾಗ್ಯ ಉಸಿರಿಟ್ಟು ನೆನಿಸ್ಯಾಳ.

 

ಕನ್ನಡ ತಾಯಮ್ಮ ಹೆತ್ತಾಳ ನೆನಿಯಾಕ

ಹೊಯ್ಸಳ ಪುಲಿಕೇಶಿ ಗಂಡುಗಳ

ಯಾಕಿಲ್ಲ, ಎಷ್ಟಿಲ್ಲ, ಕಲಿಗಳ ಸಂಗ್ರಾಮ

ತಾಯಿಯ ಮಾನಾ ಉಳಿಸಾಕ ಬೆಳಿಸಾಕ.

 

ಕಲಿಗಳ ಬೀಡಾಗಿ ಕಲೆಗಾಗಿ ಹೊರತೇನಿ

ಕಲ್ಲಿನ ಹೊಯಾಗ ಸಂಗೀತ ಮಿಡಿದಾನ

ಜಕ್ಕಣ ಶಿಲ್ಪದ ಜಯಭೇರಿ ಹೊಡೆದಾನ

ಜಯಮಾಲಿ ಇಡಿಸ್ಯಾನ ತಾಯಿಯ ಕೊರಳಿಗೆ.

 

ಶಿಲ್ಪಿಯ ಕೈಯಾಗ ಕಲ್ಲೆಲ್ಲ ಮೇಣವ

ದಳದಳ ಬಿಡಿಸ್ಯಾನ ತನುಮನ ಒಂದಾಗಿ

ಕಳೆತುಂಬಿ ನಿಂತಾವ ವಿಧ ವಿಧ ಮೂರ್ತಿಗಳು

ಸೆಳೆದಾವ ಬಲವಾಗಿ ಲೋಕದ ಕಣ್ವ.

 

ಕವಿಗಳ ಇಂಪಿನ ಹಾಡಿನ ಮುಂಜುಳಕೆ

ನಾಡೆಲ್ಲ ಆನಂದ ಕಡಲಲಿ ಮುಳುಗೀತ

ಕವಿ ವೀರ ರಸವೆಲ್ಲ ನಾಡೊಂದ ಮಾಡಾಕ

ಗೂಡೊಂದ ಕಟ್ಟಾಕ ಚಿಲ್ಲೆಂದು ಚಿಮ್ಮಿತ.

 

ಕಾವೇರಿ ನರ್ಮದೆ ಗಡಿಗಳ ಕಾಯ್ದಾರ

ಹಿರಿಕೆರಿ ಮಲೆಗಳು ತಲೆಯೆತ್ತಿ ನಿಂತಾವ

ಕಡಲಿನ ತೀರದ ಸೌಭಾಗ್ಯ ಪಡದಾಳ

ಬೆಡಗಿನ ನಾಡಿನ ಹಿರಿಯೊಡತಿ ಅನಿಸ್ಯಾಳ.

 

ಅದುಕಾಲ ಹಿಂದೊಮ್ಮೆ ಚೆಂದಾಗಿ ಹೋತ

ತಾಯಮ್ಮ ಅದನೆಂತ ಮರೆಯಲಿ ಬೇಕ

ಕಡುತಾಪ ಬಡತಾಳ ಕನ್ನಡ ಕುಲದವ್ವ

ವಿಷಕಾಲ ವೈರಾಗ್ಯ ತಾಳಲು ಬೇಕ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)