‘ಸುವರ್ಣ ಸಂಪುಟ' (ಭಾಗ ೧೧೭) - ಹೇಮಂತ

‘ಸುವರ್ಣ ಸಂಪುಟ' (ಭಾಗ ೧೧೭) - ಹೇಮಂತ

ಹನುಮಂತ ಬಲವಂತ ರಾವ್ ಕುಲಕರ್ಣಿ ಇವರು ‘ಹೇಮಂತ' ಎಂಬ ಹೆಸರಿನಿಂದಲೇ ಖ್ಯಾತಿಯನ್ನು ಪಡೆದವರು. ಕೆಲವೆಡೆ ಇವರ ಹೆಸರು ಹೇಮಂತ ಕುಲಕರ್ಣಿ ಎಂದೇ ದಾಖಲಾಗಿದೆ. ಇವರು ಕನ್ನಡ ಭಾಷೆಯಲ್ಲಿ ಬರೆದುದಕ್ಕಿಂತ ಅಧಿಕ ಆಂಗ್ಲ ಭಾಷೆಯಲ್ಲಿ ತಮ್ಮ ಬರಹಗಳನ್ನು ಬರೆದಿದ್ದಾರೆ. ಹೀಗಾಗಿ ಕನ್ನಡ ಭಾಷಾ ಸಾಹಿತ್ಯಕ್ಕೆ ಇವರು ಸ್ವಲ್ಪ ಅಪರಿಚಿತರಾಗಿಯೇ ಉಳಿದಿದ್ದಾರೆ.

ಹೇಮಂತರು ಹುಟ್ಟಿದ್ದು ನವೆಂಬರ್ ೨೫, ೧೯೧೬ರಲ್ಲಿ ಬಿಜಾಪುರದಲ್ಲಿ. ಇವರು ಪುಣೆ ವಿಶ್ವವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದು ಕೆಲಕಾಲ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಂತರ ಸ್ವಲ್ಪ ಸಮಯ ಮುಂಬೈನಲ್ಲಿ ಕಳೆದ ಇವರು ೧೯೬೦ರ ವೇಳೆಗೆ ಅಮೇರಿಕಾಗೆ ತೆರಳಿ ಅಲ್ಲಿ ನೆಲೆಸಿದರು. ಈ ಸಮಯದಲ್ಲಿ ಹೇಮಂತ್ ಅವರು ಆಂಗ್ಲ ಭಾಷೆಯಲ್ಲಿ ಹಲವಾರು ಕವನಗಳನ್ನು ರಚನೆ ಮಾಡಿದರು. ಅವರು ರಚಿಸಿದ ಹದಿನೈದು ಕವನಗಳು ಸಂಕಲನದ ರೂಪದಲ್ಲಿ ಪ್ರಕಟವಾಗಿ ಅವರಿಗೆ ಅಂತರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟವು. 

ಹೇಮಂತ್ ಅವರು ಕನ್ನಡದಲ್ಲಿ ಮೊದಲು ಬರೆದ ಕಾದಂಬರಿ ‘ಭಗ್ನ ಮಂದಿರ' (೧೯೫೨). ಈ ಕಾದಂಬರಿ ಹಲವಾರು ಮುದ್ರಣಗಳನ್ನು ಕಂಡಿದೆ. ಇವರ ಮೊದಲ ಕವನ ಸಂಕಲನ ‘ಸ್ನೇಹ ಸೂಕ್ತ' ನಂತರ ‘ಗೋಪುರ'(೧೯೬೯), ಹಿಮವೃಷ್ಟಿ (೧೯೮೭). ‘ತಪ್ಪಿದ ಹೆಜ್ಜೆ' ಇವರು ಕನ್ನಡಕ್ಕೆ ಅನುವಾದಿಸಿದ ನಾಟಕ. 'ಕೊನರಿದ ಕೊರಡು' ಇವರು ಬರೆದ ಮತ್ತೊಂದು ಕಾದಂಬರಿ. 

ಮೈಸೂರು ಪ್ರಸಾರಾಂಗವು ಇವರ ಹಲವಾರು ಉಪನ್ಯಾಸಗಳನ್ನು ಪ್ರಕಟಿಸಿದೆ. ಇವುಗಳಿಗೆ ‘ಕಾವ್ಯದಲ್ಲಿ ನವ್ಯತೆ' ಎಂಬ ಹೆಸರಿಡಲಾಗಿದೆ. ೧೯೮೪ರಲ್ಲಿ ಭಾರತಕ್ಕೆ ಮರಳಿದ ಹೇಮಂತರು ‘ಸೃಜನವೇದಿ' ಎಂಬ ಪತ್ರಿಕೆಯನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಅರವಿಂದ ನಾಡಕರ್ಣಿ ಇವರುಗಳ ಜೊತೆ ಸೇರಿ ಹೊರತಂದರು. ಹಲವಾರು ವರ್ಷಗಳ ಕಾಲ ಈ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು. ಹೇಮಂತರಿಗೆ ಹಲವಾರು ಅಂತರಾಷ್ಟ್ರೀಯ ಪುರಸ್ಕಾರಗಳು ಸಂದಿವೆ. ಅಮೇರಿಕಾದ ಫ್ಲಾರಿಡಾ ಕವಿ ಸಮ್ಮೇಳನದಲ್ಲಿ ಬಹುಮಾನ, ಫ್ರೆಂಚ್ ಅಕಾಡೆಮಿಯಿಂದ ಕಂಚಿನ ಪದಕ, ನ್ಯಾಷನಲ್ ಅಕಾಡೆಮಿ ಆಫ್ ನ್ಯೂಯಾರ್ಕ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪುರಸ್ಕಾರಗಳು ಲಭಿಸಿವೆ. ಹೇಮಂತ ಕುಲಕರ್ಣಿ ಇವರು ಜುಲೈ ೨೨, ೧೯೯೪ರಲ್ಲಿ ನಿಧನ ಹೊಂದಿದರು.

‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ. ಬೇಸರದ ಸಂಗತಿ ಎಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದ ಕನ್ನಡಿದ ಹೇಮಂತ್ ಇವರ ಒಂದೇ ಒಂದು ಭಾವಚಿತ್ರವೂ ಲಭ್ಯವಿಲ್ಲ. ಓದುಗರಿಗೆ ಎಲ್ಲಾದರೂ ಈ ಬಗ್ಗೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.

ಧೂಮಕೇತು

ಯಾವ ರಾಕ್ಷಸ ರತಿಯ

ಕ್ರೂರ ಸಂಭೋಗಕ್ಕೆ

ಹೂತ ವಿಕೃತಿಯ ಪುಷ್ಪ ಉರಿಯ ಕುವರ 

ಬಾನ ಯೋನಿಯ ಸೀಳಿ

ಬಂದೆ ನೀ ಮೈದಾಳಿ

ಹೇಳು ಯಾವುದು ನಿನ್ನ ಗೋತ್ರ ಪ್ರವರ?

 

ಇರುಳು ಕಳೆಯುವ ಮುನ್ನ

ಕ್ಷಿತಿಜದಂಚನ್ನೇರಿ

ಚಿಕ್ಕೆಗಳ ಬೆದರಿಸುತ ಬಂದು ನಿಲುವೆ

ಬೆಂಕಿ ಬಾಲವ ಬೀಸಿ

ಕೆಂಪು ಹೆಡೆಯನ್ನೆತ್ತಿ

ಕತ್ತು ಕೊಲ್ಲುವ ಕತ್ತಿ ಹೊಳೆದು ನಿಂತಂತೆ.

ಕಾಲಸರ್ಪವು ತನ್ನ ಮೈ ಬಿಚ್ಚಿದಂತೆ !

 

ಯಾವ ಚಿಕ್ಕೆಯ ಕನಸ

ಮುರಿದು ಬಂದಿರುವೆ?

ಯಾವ ಬಾನಿನ ಬೆಳಸ

ತುಳಿದು ನಿಂದಿರುವೆ?

ನವಗ್ರಹಗಳು ಹಾಕಿದಂಥ ಯಾವ ಯೋಜನೆಗಳಿಗೆ

ಕೊನೆಯ ಮಂಗಳವನ್ನು

ಬರೆಯ ಬಂದಿರುವೆ?

 

ದೇವಪಥದಲಿ ಅಡ್ಡ ನಿಂತಿರುವ ಬೇತಾಳ

ಮನುಕುಲದ ಗರ್ಭದಲಿ ಬೆಳೆಯುತಿಹ ಭ್ರೂಣಗಳ

ಹಿಸುಕಲಿಕೆ ಬಂದಿರುವೆ.

ಕಂಸಕ್ರೋಧದ ಅಗ್ನಿ ಜಿವ್ಹೆಯಂತೆ-

ಮುಗಿಲಿನಾ ಹಣೆಯಲ್ಲಿ

ಸಹಿಸದೊಳವೇದನೆಗೆ

ಸ್ಪಂದಿಸುವ ನಾಳದಂತೆ!

 

ತಿಳಿಯದಾಗಿದೆ ನಿನ್ನ

ಅಂತರಂಗದ ಆಳ

ನಿನ್ನ ರೀತಿಯ ಬಲ್ಲ

ಒಬ್ಬನೇ ಒಬ್ಬ ಆ ಕೃತಾಂತ ಕಾಳ.

ಬೆಳಕು ಒಳಹೊರ ಕಂಡರೂನು

ನಿನ್ನ ಕಂಡೀ ಕರುಳು

ಇರುಳು ಇರುಳು

ನಿನ್ನ ಕಣ್ಣಿನ ಒಳಗೆ

ಸಾವಿನಾ ನೆರಳು

ಯಾವ ಭೀಕರ ಪ್ರಳಯ ಕರೆದು ತೋರಿಸುತಿಹುದು

ಮೇಲಕೆತ್ತಿದ ನಿನ್ನ

ಉರಿಯ ಬೆರಳು?

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)