‘ಸುವರ್ಣ ಸಂಪುಟ' (ಭಾಗ-೧೧) - ಬೆಟಗೇರಿ ಕೃಷ್ಣಶರ್ಮ

‘ಸುವರ್ಣ ಸಂಪುಟ' (ಭಾಗ-೧೧) - ಬೆಟಗೇರಿ ಕೃಷ್ಣಶರ್ಮ

ಕಳೆದ ವಾರ ಪ್ರಕಟಿಸಿದ ವಿ.ಸೀತಾರಾಮಯ್ಯನವರ ಕವನಗಳಲ್ಲಿ ಒಂದು ಕವನ ‘ಶಬರಿ' ಬಗ್ಗೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ. ‘ನಾವು ಬಹಳ ಹಿಂದೆ ಓದಿದ ಕವನವಿದು. ಮತ್ತೆ ಓದಬೇಕೆಂದು ಆಶೆ ಇದ್ದರೂ ಸಿಕ್ಕಿರಲಿಲ್ಲ. ನೀವು ಆ ಕವನವನ್ನು ಪ್ರಕಟಿಸಿರುವುದು ಬಹಳ ಸಂತೋಷವಾಗಿದೆ’ ಎಂದು ಓರ್ವ ನಿವೃತ್ತ ಮುಖ್ಯೋಪಾದ್ಯಾಯಿನಿಯವರು ಕರೆ ಮಾಡಿ ತಿಳಿಸಿದ್ದಾರೆ. ನಿಮ್ಮ ಪ್ರತಿಕ್ರಿಯೆಗಳಿಂದ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಲಿದೆ ಎಂದು ನಮಗೆ ಅರಿವಿದೆ. ಈ ವಾರ ನಾವು ಆಯ್ದುಕೊಂಡ ಕವಿ - ಬೆಟಗೇರಿ ಕೃಷ್ಣಶರ್ಮ. ಇವರ ಕಿರು ಪರಿಚಯ ನಿಮಗಾಗಿ.

ಬೆಟಗೇರಿ ಕೃಷ್ಣಶರ್ಮ: ‘ಆನಂದ ಕಂದ' ಎಂಬ ಕಾವ್ಯನಾಮದಿಂದ ಖ್ಯಾತರಾದ ಇವರು ಹುಟ್ಟಿದ್ದು ಎಪ್ರಿಲ್ ೪, ೧೯೦೦ರಲ್ಲಿ. ಇವರ ಊರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ. ಇವರ ತಂದೆ ಶ್ರೀನಿವಾಸರಾಯರು ಹಾಗೂ ತಾಯಿ ರಾಧಾಬಾಯಿ. ಇವರಿಗೆ ೧೪ ವರ್ಷವಿದ್ದಾಗ ವಿಷಮಶೀತ ಜ್ವರ ಕಾಡಿದ ಕಾರಣದಿಂದ ಇವರ ಕೈಕಾಲುಗಳು ಸ್ವಲ್ಪ ದುರ್ಬಲವಾದುವು. ತುಳಸಾಬಾಯಿ ಜೊತೆ ವಿವಾಹವಾದ ಇವರದ್ದು ಮೂವರು ಹೆಣ್ಣು ಹಾಗೂ ಒಬ್ಬ ಮಗ ಇದ್ದ ಕುಟುಂಬ. ಬಡತನದ ಕಾರಣದಿಂದ ಹೆಚ್ಚಿನ ಶಿಕ್ಷಣ ಪಡೆಯದೇ ಹೋದರೂ ಸ್ವತಂತ್ರವಾಗಿ ಸಾಹಿತ್ಯ ಅಧ್ಯಯನ ಮಾಡಿದರು. 

೧೯೧೮ರಲ್ಲಿ ಬೆಳಗಾವಿಯ ಮುನ್ಸಿಪಾಲಿಟಿಯ ಆರೋಗ್ಯ ಇಲಾಖೆಯಲ್ಲಿ ನೌಕರಿಯನ್ನು ಪ್ರಾರಂಭಿಸಿದರು. ಕೃಷ್ಣಶರ್ಮರಿಗೆ ಶಿಕ್ಷಕರಾಗುವ ತುಡಿತ ತುಂಬಾ ಇತ್ತು. ಇದಕ್ಕಾಗಿ ಸಂಸ್ಕೃತ ಅಧ್ಯಯನ ಮಾಡುತ್ತಾರೆ. ಹಲವಾರು ಶಾಲೆಗಳಲ್ಲಿ ಶಿಕ್ಷಕರಾಗಿ ದುಡಿದರೂ ಅವರಿಗೆ ಅದರಲ್ಲಿ ಸಂತೃಪ್ತಿ ಸಿಗುವುದಿಲ್ಲ. ಆ ಕಾರಣದಿಂದ ೧೯೩೮ರಲ್ಲಿ ‘ಜಯಂತಿ' ಎಂಬ ಮಾಸಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಳ್ಳುತ್ತಾರೆ. ಸತತ ೨೪ ವರ್ಷಗಳ ಕಾಲ ಈ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿ ಪತ್ರಿಕೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ.

ಕೃಷ್ಣಶರ್ಮರು ಕವನ, ಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶು ಸಾಹಿತ್ಯ, , ವಿಮರ್ಶೆ, ಮೀಮಾಂಸೆ, ಸಂಶೋಧನೆ, ಸಂಪಾದನೆ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ಭಕ್ತ ಕುಸುಮಾವಳಿ' ಇವರ ಪ್ರಥಮ ಕವನ. ರಾಷ್ಟ್ರೀಯ ಪದ್ಯಾವಲಿ, ಗಾಂಧೀ ಗೀತ ಸಪ್ತಕ, ಮುದ್ದನ ಮಾತು, ಅರುಣೋದಯ, ಸೀಮೆಯ ಕಲ್ಲು ಮುಂತಾದ ಕವನಗಳು, ಸಂಸಾರ ಚಿತ್ರ, ಬಡತನದ ಬಾಳು, ಮಾತನಾಡುವ ಕಲ್ಲು, ಕಳ್ಳರ ಗುರು ಮತ್ತು ಇತರ ಕಥೆಗಳು ಎಂಬ ಸಣ್ಣಕತೆಗಳು, ಸುದರ್ಶನ, ರಾಜಯೋಗಿ, ಮಗಳ ಮದುವೆ, ಮಲ್ಲಿಕಾರ್ಜುನ ಮುಂತಾದ ಕಾದಂಬರಿಗಳು, ಬೆಳವಡಿ ಮಲ್ಲಮ್ಮ, ಬೆಂದ ಹೃದಯ ಮುಂತಾದ ನಾಟಕಗಳು, ಕನ್ನಡ ರಾಜ್ಯ ರಮಾರಮಣ ಎಂಬ ಚರಿತ್ರೆಯ ಕೃತಿ, ಪೂಜಾತತ್ವ, ಕೃಷ್ಣಲೀಲಾ, ಲೋಕನೀತಿ ಮುಂತಾದ ಕೃತಿಗಳ ಸಂಪಾದನೆ, ಬಸವಣ್ಣ, ಚಂದ್ರಹಾಸ, ಭೀಷ್ಮ, ಲವಕುಶ ಎಂಬ ಶಿಶು ಸಾಹಿತ್ಯಗಳು, ನನ್ನ ನೆನಪುಗಳು ಎಂಬ ಆತ್ಮ ಚರಿತ್ರೆಯನ್ನೂ ರಚಿಸಿದ್ದಾರೆ. 

ಆರು ದಶಕಗಳಿಗೂ ಮಿಕ್ಕಿ ಕನ್ನಡಮ್ಮನ ಸಾಹಿತ್ಯ ಸೇವೆ ಮಾಡಿದ ಇವರಿಗೆ ೧೯೭೪ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಇವರಿಗೆ ಒಲಿದಿದೆ. ಇವರು ೧೯೮೨ರ ಅಕ್ಟೋಬರ್ ೩೦ರಂದು ಧಾರವಾಡದಲ್ಲಿ ನಿಧನಹೊಂದಿದರು.

ಬೆಟಗೇರಿ ಕೃಷ್ಣಶರ್ಮ ಇವರ ಆಯ್ದ ಕವನ

ಅದುವೆ ದಿಟ ದೀಪಾವಳಿ !

(ಪಲ್ಲವಿ)

ಉಲ್ಲಸದ ನಗೆಯರಳಿಹುದೆ ಸಖಿ,

ಎಲ್ಲಿಹುದೆ ದೀಪಾವಳಿ?

ಎಲ್ಲಿ ನೋಡಿದರೆಲ್ಲ ಕಡೆ ಬರಿ

ಕಳ್ತಲೆಯದೇ ಹಾವಳಿ ! ॥ಪ॥

 

ಮುಂದಿನಾ ಬಾಗಿಲೊಳು ಒಂದೇ -

ಒಂದು ದೀವಿಗೆ ಮಿಣಿಮಿಣೆನುತಿದೆ,

ಒಂದೆ ಸಲ ಮೆಲುಗಾಳಿಗೆ ಸುಳಿದರೆ

ನಂದಿ ಹೋಗುವ ದಾರಿಯಲ್ಲಿದೆ ;

ಏಕೆ ಬಡತನ ನಲ್ಲೆ? …

ಏಕೆ ಬಡತನ ? ಮನೆಯೊಳೇ ಚಿರ-

ದೀಪ ಸಾಧನವಿಲ್ಲೇ?

 

ಮನೆಯೊಳಿರಿಸಿಹೆ ಹಲವು ಹಣತೆಯ ;

ಹನಿ-ಹನಿಯು ನೇಹವನು ಕಾಣದೆ

ತಿನುತಲಿವೆ ಬರಿಬತ್ತಿಯನೆ ; ನೀ-

ನೆನುವೆ ; “ದೀಪಾವಳಿ”ಯ ಮಾಡಿಹೆ !

ಕಂಗುರುಡು ನಿನಗೇನೇ?

ತುಂಬಿರಲು ಪಾತ್ರೆಯೊಳು ನೇಹವು

ಎರೆಯದೇಕಿಹೆ ಜಾಣೆ?

 

ಹಾರಿದರೆ ಹುಳು ಆರಿಹೋಗುವ

ಆರತಿಯ ಬೆಳಗಲಿಕೆ ತಂದಿಹೆ ;

ಆರದಾರತಿ ಬಳಿಯಲಿರ್ದ್ದರು

ನೀರೆ, ಅದನರಿಯದೆಯ ನಿಂದಿಹೆ ;

ಬೆಳಗು ಆ ಪ್ರಭೆಯಾರತಿ…

ಬೆಖಗಿದರೆ ಮುಡಿಪೀವೆ ನನ್ನೆದೆ

ಯೊಳಗನೇ ನಲ್ ಮೂರುತಿ !

 

ಉಲ್ಲಸದಿ ಮೊಗವರಳಿಸಿದೆ, ಸಖಿ,

ಎಲ್ಲಿದೆಯೆ ದೀಪಾವಳಿ ?

ಎಲ್ಲಿ ನೋಡಿದರಲ್ಲಿ ಬೇಕೆಲೆ

ಹಗಲು ಪಂಜಿನ ಗಾವಳಿ !

ಅದುವೆ ದಿಟ ದೀಪಾವಳಿ ...!

ಅದುವೆ ದಿಟ ದೀಪಾವಳಿಯೆ ಸಖಿ,

ಬದುಕಿಗೊಸಗೆಯ ಓಕುಳಿ!

***

(ಸುವರ್ಣ ಸಂಪುಟ ಪುಸ್ತಕದ ಕೃಪೆ)