‘ಸುವರ್ಣ ಸಂಪುಟ' (ಭಾಗ ೧೯) - ರಾಮಚಂದ್ರ ವಿನೀತ

‘ಸುವರ್ಣ ಸಂಪುಟ' (ಭಾಗ ೧೯) - ರಾಮಚಂದ್ರ ವಿನೀತ

‘ಸುವರ್ಣ ಸಂಪುಟ' ಕೃತಿಯಿಂದ ನಾವು ಕಳೆದ ವಾರ ಆಯ್ಕೆ ಮಾಡಿಕೊಂಡಿದ್ದ ಕವಿ ರಾಮಚಂದ್ರರು. ಆದರೆ ಅವರ ಬಗ್ಗೆ ಯಾವುದೇ ಅಧಿಕ ಮಾಹಿತಿ ಇನ್ನೂ ದೊರೆಯದೇ ಇರುವುದು ಬೇಸರದ ಸಂಗತಿ. ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ವಿನೀತ ರಾಮಚಂದ್ರರಾಯರು. ಇವರನ್ನು ರಾಮಚಂದ್ರ ವಿನೀತ ಎಂದೂ ಕರೆದಿದ್ದಾರೆ. ಇವರ ಬಗ್ಗೆಯೂ ಮಾಹಿತಿ ಇರುವುದು ಕಮ್ಮಿಯೇ. ಇವರದ್ದೂ ಭಾವಚಿತ್ರಗಳು ಲಭ್ಯವಿಲ್ಲ. ಈ ಸಂಪುಟದಲ್ಲಿ ಇವರ ಎರಡು ಕವನಗಳಿವೆ. ಓರ್ವ ದೇವಿ ಹಾಗೂ ಹಾಲಕ್ಕಿ. 

ರಾಮಚಂದ್ರರಾಯರು ೧೯೦೫, ಜನವರಿ ೨೯ರಂದು ಹುಟ್ಟಿದರು. ಇವರ ಹುಟ್ಟೂರು, ಹೆತ್ತವರ ಬಗ್ಗೆ ಮಾಹಿತಿ ದೊರಕುವುದಿಲ್ಲ. ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ. ಬಾಲ್ಯದಿಂದಲೂ ತತ್ವಶಾಸ್ತ್ರ, ಕಾವ್ಯ, ಸಂಸ್ಕೃತಿಗಳಲ್ಲಿ ಆಸಕ್ತಿ. ದ.ರಾ. ಬೇಂದ್ರೆಯವರು ರಾಮಚಂದ್ರರಾಯರ ಸಾಹಿತ್ಯ ಅಭಿರುಚಿಗೆ ತಲೆಬಾಗಿ ಅವರನ್ನು ಜಯ ಕರ್ನಾಟಕ ಪತ್ರಿಕೆಯ ಸಂಪಾದಕರನ್ನಾಗಿ ನೇಮಕ ಮಾಡಿದ್ದರು. ಸುಮಾರು ೧೩ ವರ್ಷ ಅವರು ಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ಸ್ವಧರ್ಮ ಎಂಬ ಹೊಸ ಪತ್ರಿಕೆಯ ಸಂಪಾದಕರಾಗಿಯೂ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. 

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಇವರದ್ದು ಪ್ರಧಾನ ಪಾತ್ರ. ೧೯೫೫ರಲ್ಲಿ ಪ್ರದೀಪ ಎಂಬ ಪತ್ರಿಕೆಯನ್ನು ಸ್ಥಾಪಿಸುತ್ತಾರೆ. ಆಧ್ಯಾತ್ಮ, ಧರ್ಮ, ಸಂಸ್ಕೃತಿಗಳ ಪ್ರಸಾರಕ್ಕೆ ಮೀಸಲಾದ ಈ ಪತ್ರಿಕೆಯನ್ನು ಇವರು ಬಹು ವರ್ಷಗಳ ಕಾಲ ಮುನ್ನಡೆಸಿದರು. ಇವರ ಆಯ್ದ ಕೃತಿಗಳು : ಪ್ರತಿಭಾ, ಪ್ರಜ್ಞಾ, ಶ್ರುತಾಶ್ರುತ ಇತ್ಯಾದಿಗಳು.(ಯಾರ ಬಳಿಯಲ್ಲಾದರೂ ರಾಮಚಂದ್ರರಾಯರ ಬಗ್ಗೆ ಮಾಹಿತಿ ಇದ್ದಲ್ಲಿ ಪ್ರತಿಕ್ರಿಯೆ ವಿಭಾಗದಲ್ಲಿ ತಿಳಿಸಿ.)

ಇವರ ಎರಡು ಕವನಗಳಿಂದ ನಾವು ಆಯ್ದ ಕವನ

ಹಾಲಕ್ಕಿ

ರಂಗು ಮಹಲಿನ ರಾಗ, ರಂಗುದುಟಿಗಳ ರಾಗ,

ಇಂಗೊರಲು ಉಲಿವರಾಗ,

ಶೃಂಗಾರ ಸೂತ್ರಜ್ಞೆ, ಕೋಕಿಲೆಯ ಕುಕಿಲು ಸಹ

ಕಡು ಬೇಸರಾಯಿತೀಗ !

ಅಡ್ಡ ಹಾದಿಯ ಹಿಡಿವೆ ! ಸಾವಿನಾಚೆಯ ನಾಡ

ಗೂಢವಿಂದೊಡೆಯುತಿಹುದು !

ಗುಡ್ಡಗಾಡಿನ ನಡುವೆ ಕುಳಕುಳಗಿಳೆಂದು

ಹಾಲಕ್ಕಿಯೊಡನುಡಿಯುತಿಹುದು !

 

ಜೀರಿಡುವ ಹಾಲಕ್ಕಿ ! ದೇವಲೋಕದ ಗುಟ್ಟು ಬಟ್ಟೆಯನು

ನೀನೆ ಬಲ್ಲೆ !

ಕಾರಿರುಳದೇವತೆಯು ಕಿವಿಯಲ್ಲಿ ಹೇಳಿದಳು ಇರಿಸಿ

ಮುಂಗೈಯ ಮೇಲೆ !

ಈಚೆ ಮುಳುಗುವ ಭಾನು ಆಚೆ ಮೂಡುವನೆಂದು 

ಚೀರುತಿಹೆ ಬೇರೆ ಸ್ವರದಿ !

ಊಚ-ನೀಚದ ಮಾನ ನಿನ್ನದೌ ಕನಸರಸಿ ! ಸಾಗುವೆನು

ನಾನು ತ್ವರದಿ !

 

ನನ್ನ ದೈವದ ದೈವತವೆ ! ನಿನ್ನ ಮನೆಯಲ್ಲಿ

ಪರದ ಸಂಸಾರಿಯಾಗಿ

ಇನ್ನು ಬಾಳುವೆನಮ್ಮ - ನಿನ್ನ ಒಳ್ಗುಡಿಯಲ್ಲಿ

ಇಹದ ಸನ್ಯಾಸಿಯಾಗಿ !

ಅಕ್ಕ ಶಕುನದ ಹಕ್ಕಿ ! ನಿನ್ನ ಭಕ್ತನು ಅಂಗಲಾಚುವನು

ಮುಂದೆ ನಿಂದು

ಕಕ್ಕುಲಾತಿಯ ತೋರಿ ಹರಿಸವ್ವ - ಜಗದಲ್ಲಿ ಹಗಲು 

ಇರುಳಾಗಲೆಂದು !

***

(ಸುವರ್ಣ ಸಂಪುಟ ಕೃತಿಯಿಂದ ಸಂಗ್ರಹಿತ)