‘ಸುವರ್ಣ ಸಂಪುಟ' (ಭಾಗ ೨೦) - ಸಿಂಪಿ ಲಿಂಗಣ್ಣ

‘ಸುವರ್ಣ ಸಂಪುಟ' (ಭಾಗ ೨೦) - ಸಿಂಪಿ ಲಿಂಗಣ್ಣ

ಕಳೆದ ವಾರದಲ್ಲಿ ನಾವು ಪ್ರಕಟಿಸಿದ ವಿನೀತ ರಾಮಚಂದ್ರರಾಯರ ಒಂದು ಕವನವನ್ನು ಬಹಳಷ್ಟು ಮಂದಿ ಆಸ್ವಾದಿಸಿ, ಆನಂದಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಾರ ನಾವು ಜಾನಪದ ದಿಗ್ಗಜರೆಂದೇ ಹೆಸರುವಾಸಿಯಾಗಿರುವ ಸಿಂಪಿ ಲಿಂಗಣ್ಣ ಹಾಗೂ ಅವರ ಕವನದ ಬಗ್ಗೆ ಗಮನ ಹರಿಸೋಣ. ಸುವರ್ಣ ಸಂಪುಟದಲ್ಲಿ ಅವರದ್ದು ಒಂದೇ ಒಂದು ಕವನ ಪ್ರಕಟವಾಗಿದೆ. ಅದನ್ನು ನಿಮಗಾಗಿ ಸಂಗ್ರಹಿಸಿ ಕೊಡಲಿದ್ದೇವೆ.

ಸಿಂಪಿ ಲಿಂಗಣ್ಣ: ಇವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಗ್ರಾಮದಲ್ಲಿ ಫೆಬ್ರವರಿ ೧೦, ೧೯೦೫ರಲ್ಲಿ ಜನಿಸಿದರು. ಇವರ ಹೆತ್ತವರು ಶಿವಯೋಗಿ ಹಾಗೂ ಸಾವಿತ್ರಿ ಎಂಬ ದಂಪತಿಗಳು. ೧೯೨೨ರಲ್ಲಿ ಆ ಸಮಯದ ಮುಲ್ಕಿ ಎಂಬ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದ ಕಾರಣ ಅನಿವಾರ್ಯವಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕ ತರಭೇತಿ ಮುಗಿಸಿ ೧೯೨೫ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದರು. ಮುಖ್ಯೋಪಾಧ್ಯಾಯರಾಗಿ ೧೯೬೦ರಲ್ಲಿ ನಿವೃತ್ತರಾದರು. ಬಾಲ್ಯದಿಂದಲೂ ತಮ್ಮ ತಾಯಿ ಹಾಗೂ ಅತ್ತಿಗೆಯವರು ಹಾಡುತ್ತಿದ್ದ ತ್ರಿಪದಿಗಳನ್ನು ಕೇಳುತ್ತಾ ಅದರಲ್ಲಿ ಆಸಕ್ತಿ ಬೆಳೆಸಿಕೊಂಡರು.

ಇವರು ಜಾನಪದ ಹಾಡುಗಳನ್ನು ಸಂಗ್ರಹಿಸಿ ‘ಜೀವನ ಸಂಗೀತ' ಹಾಗೂ ‘ಗರತಿಯ ಹಾಡು' ಎಂಬ ಎರಡು ಸಂಕಲನಗಳನ್ನು ಹೊರತಂದರು. ಜನಪದ ಕಥೆಗಳು, ಒಗಟುಗಳು, ಗಾದೆಗಳು, ಬಯಲಾಟದ ಹಾಡುಗಳು ಇವೆಲ್ಲವನ್ನೂ ಇವರು ಆಸಕ್ತಿಯಿಂದ ಸಂಗ್ರಹಿಸುತ್ತಿದ್ದರು. ಹಿಂದಿ ಭಾಷೆಯ ಖ್ಯಾತ ಕವಿ ರಾಮನರೇಶ ತ್ರಿಪಾಠಿಯವರು ರಚಿಸಿದ ‘ಮಿಲನ' ಎಂಬ ಖಂಡ ಕಾವ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದರು. ಸಿಂಪಿ ಲಿಂಗಣ್ಣ ಇವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಗರತಿಯ ಬಾಳು, ಉತ್ತರ ಕರ್ನಾಟಕದ ಜಾನಪದ ಕಥೆಗಳು, ಜನಾಂಗದ ಜೀವಾಳ, ಲಾವಣಿಗಳು, ಹೆಡಿಗೆ ಜಾತ್ರೆ ಮುಂತಾದ ಜಾನಪದ ಸಾಹಿತ್ಯ ಸಂಗ್ರಹಗಳು, ಮಿಲನ, ಮುಗಿಲ ಜೇನು, ಪೂಜಾ, ಮಾತೃವಾಣಿ, ನಮಸ್ಕಾರ ಮುಂತಾದ ಕವನ ಸಂಕಲನಗಳು, ಢಾಳಿಸಿದ ದೀಪ, ಪವಿತ್ರ ಜೀವನ ಮುಂತಾದ ಕಥಾ ಸಂಗ್ರಹ, ಬೆಟ್ಟದ ಹೊಳೆ ಎಂಬ ಕಾದಂಬರಿ, ಜನಜೀವನ, ಸಪ್ತಪದಿ, ಭಕ್ತಿ ರಹಸ್ಯ ಮುಂತಾದ ನಾಟಕಗಳು, ಜೀವನ ದೃಷ್ಟಿ, ಸ್ವರ್ಗದೋಲೆ, ಬದುಕಿನ ಬೆಲೆ, ಸಾಹಿತ್ಯ ಸಂಪರ್ಕ, ನೂರು ಗಡಿಗೆ ಒಂದು ಬಡಿಗೆ, ಭಾರತದ ಭವ್ಯ ಸಿದ್ದತೆ ಮೊದಲಾದ ಲೇಖನ ಸಂಗ್ರಹಗಳು, ಶ್ರೀ ಅರವಿಂದರು, ದೇಶಭಕ್ತಿಯ ಕಥೆಗಳು, ಭಕ್ತರಾಜ ಬಸವಣ್ಣ, ಸ್ವಾಮಿ ವಿವೇಕಾನಂದರ ಬಗ್ಗೆ ಸಿಡಿಲು ಸನ್ಯಾಸಿ, ನಾಮದೇವ, ಗಣದಾಸಿ ವೀರಣ್ಣ ಮೊದಲಾದ ಅನೇಕ ಮಹನೀಯರ ಜೀವನ ಚರಿತ್ರೆ, ಬಾಳಸಂಜೆಯ ಹಿನ್ನೋಟ ಮತ್ತು ನಾಗಾಲೋಟ ಇವರ ಆತ್ಮಚರಿತ್ರೆಗಳು, ರಾಮತೀರ್ಥರ ಸಾಹಿತ್ಯ ಸಂಪುಟಗಳು, ಶ್ರೀ ಅರವಿಂದರ ಸಾಹಿತ್ಯ ಸಂಪುಟಗಳು ಮುಂತಾದ ಅನೇಕ ಸಾಹಿತ್ಯ ಪ್ರಕಾರಗಳನ್ನು ರಚಿಸಿದ ಖ್ಯಾತಿ ಸಿಂಪಿ ಲಿಂಗಣ್ಣ ಇವರಿಗೆ ಸಲ್ಲುತ್ತದೆ. 

ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ೧೯೬೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಶ್ವ ವಿದ್ಯಾನಿಲಯ ಧಾರವಾಡ ಇವರು ಗೌರವ ಡಾಕ್ಟರೇಟ್, ಆದರ್ಶ ಶಿಕ್ಷಕರೆಂದು ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸನ್ಮಾನ, ಬಾಂಬೆ ಹಾಗೂ ಮೈಸೂರು ಸರಕಾರದ ಪ್ರಶಸ್ತಿಗಳು ಇವರಿಗೆ ಮಡಿಲಿಗೆ ಸೇರಿವೆ. ಇದರ ಜೊತೆಗೆ ಇವರ ಪುಸ್ತಕಗಳಿಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಒದಗಿ ಬಂದಿವೆ.  ೧೯೯೩ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಮೇ ೫, ೧೯೯೩ರಂದು ನಮ್ಮನ್ನು ಅಗಲಿದರು.

ಸಿಂಪಿ ಲಿಂಗಣ್ಣನವರ ಆಯ್ದ ಕವನ:

ಈ ಆಟ ಸಾಕು

ಕಣ್ಣು ಮುಚ್ಚುವಾಟ ಸಾಕು

ಕಣ್ಣು ತೆರೆಯುವಾಟ ಬೇಕು ॥

 

ಕಳ್ಳನಾಗಿ ಹುಡುಕುವವನು

ಕೊನೆಯವರೆಗು ನಾನೆ ಏನು ?

ಒಮ್ಮೆ ಅಡಗಿ ಕುಳಿತೆ ನೀನು

ಇಂಥ ಆಟ ಮುಗಿಯುವುದೇನು? ॥

 

ಅಡಗಿದವಳು ನೀನೆ ಇರುವಿ

ನೀನೆ ಕಣ್ಣು ಮುಚ್ಚುತಿರುವಿ 

ಎಲ್ಲು ನನಗೆ ಕಾಣದಿರುವಿ

ಹೇಗೆ ನೀನು ಹೊರಗೆ ಬರುವಿ?॥

 

ಹೊರಗೆ ಬನ್ನಿ ಬಂದು ನೋಡು

ಮುಟ್ಟ ಬರಲು ದೂರ ಓಡು

ಕುಣಿಸಿ ನಗಿಸಿ ಆಟವಾಡು

ಒಲ್ಲದಿರಲು ಸಾಕು ಮಾಡು ॥

 

ಇಂಥ ಆಟ ಆಡಲಾರೆ

ನಿಂತು ನಿಂತು ನೋಯಲಾರೆ

“ಹುಲಿಯು ಬಂತು ! ಬಂತು ಬಾರೆ"

ಎಂಬ ಆಟ ಆಡಬಾರೆ ॥

***

(‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)