‘ಸುವರ್ಣ ಸಂಪುಟ' (ಭಾಗ ೩೨) - ದಿನಕರ ದೇಸಾಯಿ

‘ಚುಟುಕು ಬ್ರಹ್ಮ’ ಎಂದೇ ಖ್ಯಾತರಾಗಿದ್ದ ದಿನಕರ ದೇಸಾಯಿ ಇವರು ಸೆಪ್ಟೆಂಬರ್ ೧೦, ೧೯೦೯ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ದೇಸಾಯಿ ಹಾಗೂ ತಾಯಿ ಅಂಬಿಕಾ. ದತ್ತಾತ್ರೇಯ ದೇಸಾಯಿಯವರು ಶಾಲಾ ಶಿಕ್ಷಕರಾಗಿದ್ದರು. ತಮ್ಮ ಬಾಲ್ಯದಲ್ಲೇ ತಾಯಿಯವರನ್ನು ಕಳೆದು ಕೊಂಡ ದಿನಕರ ದೇಸಾಯಿಯವರು ಬಹಳಷ್ಟು ಸಮಯ ಏಕಾಂಗಿತನವನ್ನು ಅನುಭವಿಸಿದರು. ಈ ಸಂದರ್ಭದಲ್ಲೇ ಇವರ ಮನಸ್ಸು ಕಾವ್ಯದತ್ತ ಆಕರ್ಷಿತವಾಯಿತು. ಇವರ ಮನಸ್ಸಿನಲ್ಲಿ ಕಾವ್ಯ ಉದಯಿಸುತ್ತಿರುವ ಸಂದರ್ಭದಲ್ಲಿ ರಂಗರಾವ್ ಹಿರೇಕೆರೂರು ಎಂಬ ಪಂಡಿತರು ಗಮನಿಸಿ ಇವರನ್ನು ಹುರಿದುಂಬಿಸಿದರು.
ಮೆಟ್ರಿಕ್ ಪರೀಕ್ಷೆ ಬರೆಯಲು ಧಾರವಾಡಕ್ಕೆ ಹೋದ ಸಂದರ್ಭದಲ್ಲಿ ಖ್ಯಾತ ಕವಿ ಬಿ.ಎಂ.ಶ್ರೀ. ಅವರ ಕವಿತೆಗಳನ್ನು ನೋಡಿ ಬೆರಗಾದರು. ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಇವರು ಪದವಿ ಶಿಕ್ಷಣವನ್ನು ಪೂರೈಸಿದರು. ಅಂದಿನ ಬೊಂಬಾಯಿಯಲ್ಲಿ ಇವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಇದರ ಜೊತೆಗೆ ಎಲ್.ಎಲ್.ಬಿ. ಪದವಿಯನ್ನೂ ಪೂರೈಸಿದರು. ಮುಂಬಯಿಯಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಸೇರಿ ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದರು. ಇದರ ಜೊತೆಗೆ ಹಲವಾರು ಪತ್ರಿಕೆಗಳಿಗೆ ಬರಹಗಳನ್ನೂ ಬರೆದರು.
ಗೋಪಾಲಕೃಷ್ಣ ಗೋಖಲೆಯವರು ಸ್ಥಾಪಿಸಿದ 'ಭಾರತ ಸೇವಕ ಸಮಾಜ' ದಿಂದ ಆಕರ್ಷಿತರಾಗಿ ಅದರ ಸದಸ್ಯರಾದರು. ನಂತರ ಮುಂಬೈ ಶಾಖೆಯ ಅಧ್ಯಕ್ಷರೂ ಆದರು. ಹಲವಾರು ಚುಟುಕುಗಳನ್ನು ಬರೆದು ‘ಚುಟುಕು ಕವಿ’ ಎಂದು ಖ್ಯಾತರಾದರು. ಇವರು ಹಲವಾರು ಕವನ ಸಂಕಲನಗಳು, ಪ್ರವಾಸ ಕಥನ ಹಾಗೂ ಚುಟುಕುಗಳನ್ನು ರಚನೆ ಮಾಡಿದ್ದಾರೆ. ಹೂಗೊಂಚಲು, ತರುಣರ ದಸರೆ, ಕಡಲ ಕನ್ನಡ ಇತ್ಯಾದಿ ಕವನ ಸಂಕಲನಗಳು. ಮಕ್ಕಳಿಗಾಗಿ ಹಲವಾರು ಮಕ್ಕಳ ಪದ್ಯಗಳನ್ನೂ ಬರೆದಿದ್ದಾರೆ. ‘ನಾ ಕಂಡ ಪಡುವಣ' ಇವರ ಪ್ರವಾಸ ಕಥನ.
ಜನಸೇವಕ, ಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಇವರ ಚುಟುಕುಗಳು ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಇವರ ‘ದಿನಕರನ ಚೌಪದಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾಗಿದೆ. ಹಾಲಕ್ಕಿ ಜನಾಂಗದವರ ಬಗ್ಗೆ ಬರೆದ ಚುಟುಕುಗಳು ಬಹಳ ಸೊಗಸಾಗಿವೆ. ಇವರು ತಮ್ಮ ಚುಟುಕುಗಳ ಬಗ್ಗೆಯೇ ಬರೆದ ಒಂದು ಚುಟುಕು ಹೀಗಿದೆ-
‘ನಾ ಬರೆದ ಚುಟುಕುಗಳ ಸಂಖ್ಯೆ ವಿಪರೀತ,
ಶೇಕಡಾ ತೊಂಬತ್ತು ಹೊಡೆಯುವವು ಗೋತಾ
ಉಳಿದ ಹತ್ತರ ಪೈಕಿ ಏಳೆಂಟು ಸತ್ತು
ಒಂದೆರಡು ಬದುಕಿದರೆ ಅವು ಮಾತ್ರ ಮುತ್ತು'
ಇಂದಿರಾ ದೇಸಾಯಿ ಇವರ ಪತ್ನಿ. ಇವರಿಗೆ ಉಷಾ, ನಿಶಾ ಎಂಬ ಎರಡು ಹೆಣ್ಣು ಮಕ್ಕಳು. ದಿನಕರ ದೇಸಾಯಿಯವರು ನವೆಂಬರ್ ೬, ೧೯೮೨ರಲ್ಲಿ ನಿಧನ ಹೊಂದಿದರು. ‘ಸುವರ್ಣ ಸಂಪುಟ’ದಲ್ಲಿ ದಿನಕರ ದೇಸಾಯಿಯವರ ಪ್ರಕಟಿತ ಏಕೈಕ ಕವನ ಹೀಗಿದೆ:
ಕಡಲ ಕನ್ನಡ
ಮನವು ನಲಿದಾಡಲಿಕೆ ಕಡಲು ಕುಣಿದಾಡುವುದು,
ಹಸುರೆ ಉಸಿರಾಡುವುದು ಎಲ್ಲ ಕಡೆಗೆ,
ಗಗನವನೆ ಮುತ್ತಿಡುವ ಉತ್ತುಂಗ ಶಿಖರವೇ
ಕಳಸವಲ್ಲವೆ ನಮ್ಮ ಬಾಳಗುಡಿಗೆ?
ಗಿರಿನಿರ್ಝರದ ಗಾನ ನಮ್ಮ ನುಡಿಯಾಗಿರಲು
ನಮಗೇಕೆ ಸಂಗೀತ ಹಾಳುಹರಟೆ?
ಕಡಲ ನೊರೆಗಳ ನಗುವು ನಮ್ಮ ಮುದ್ದಿನ ಮಗುವು ;
ವೃದ್ಧಾಪ್ಯ ನಮಗಿಲ್ಲ ಕೊನೆಯ ವರೆಗೆ.
ಹೊಳೆಹಳ್ಳ ಹೃದಯವನು ತುಂಬಿ ತುಳುಕಾಡಿಸುವ
ಪ್ರೇಮದೌದಾರ್ಯವೇ ಬಾಳ ಜೇನು,
ಕಡಲ ತೆರೆ ಧಾರುಣಿಯ ಪಾದ ತೊಳೆಯುತಲಿರಲು
ಸದ್ಭಕ್ತಿ ಭಾವನೆಗೆ ಸಾಲದೇನು?
ಸಾಗರನು ಆಗಸವಾಲಿಂಗಿಸುವ ಕ್ಷಿತಿಜ
ನಮ್ಮ ಮನೆಯಂಗಳದ ಕೊನೆಯ ರೇಖೆ
ನಮ್ಮ ಹೃದಯಾಕಾರ ಸಾಗರದ ವಿಸ್ತಾರ,
ಅದರಂತೆ ಆಳವೂ ಆಗದೇಕೆ?
***
(‘ಸುವರ್ಣ ಸಂಪುಟ’ ಕೃತಿಯಿಂದ ಸಂಗ್ರಹಿತ)