‘ಸುವರ್ಣ ಸಂಪುಟ' (ಭಾಗ ೪೭) - ಬಿ.ಎಚ್.ಶ್ರೀಧರ

‘ಸುವರ್ಣ ಸಂಪುಟ' (ಭಾಗ ೪೭) - ಬಿ.ಎಚ್.ಶ್ರೀಧರ

ಖ್ಯಾತ ಕವಿ, ವಿಮರ್ಶಕರಾದ ಬಿ.ಎಚ್.ಶ್ರೀಧರ ಇವರ ಕವನವೊಂದನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಬವಲಾಡಿ ಹೆಬ್ಬಾರ ಶ್ರೀಧರ ಎಂಬುವುದು ಇವರ ಪೂರ್ಣ ಹೆಸರು. ಹುಟ್ಟಿದ್ದು ಎಪ್ರಿಲ್ ೨೪, ೧೯೧೮ರಂದು ಅವಿಭಜಿತ ದಕ್ಷಿಣ ಕನ್ನಡದ ಬಿಜೂರು ಎಂಬ ಊರಿನ ಬವಲಾಡಿ ಗ್ರಾಮದಲ್ಲಿ. ಇವರ ತಂದೆ ಸೀತಾರಾಮ ಹೆಬ್ಬಾರ ಹಾಗೂ ತಾಯಿ ನಾಗಮ್ಮ. ರಮಾದೇವಿ ಇವರ ಪತ್ನಿ. ಇವರಿಗೆ ಐದು ಮಂದಿ ಮಕ್ಕಳು. 

ಬಿಜೂರಿನ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸವನ್ನು ಮುಗಿಸಿದ ಇವರು ಸಾಗರ ಹಾಗೂ ಸೊರಬದಲ್ಲಿ ನಂತರದ ಶಿಕ್ಷಣವನ್ನು ಮುಂದುವರಿಸಿದರು. ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಶಿವಮೊಗ್ಗದಲ್ಲಿ ಪೂರೈಸಿದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಹಾಗೂ  ಬಿ ಎ (ಆನರ್ಸ್) ಪದವಿಯನ್ನು ೧೯೪೧ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ  ಪೂರೈಸಿದರು. ಮಹಾರಾಜಾ ಕಾಲೇಜಿನಲ್ಲೇ ಎಂ.ಎ. ಪದವಿಯನ್ನೂ ಪಡೆದುಕೊಂಡರು. ಇವರು ಕಲಿಕೆಯಲ್ಲಿ ಸದಾ ಮುಂದೆ ಇದ್ದ ಕಾರಣ ಇವರಿಗೆ ಪೂರ್ಣ ಕೃಷ್ಣ ರಾವ್ ಬಂಗಾರದ ಪದಕ, ನವೀನಂ ರಾಮಾನುಜಾಚಾರ್ಯ ಬಂಗಾರದ ಪದಕ ಎಲ್ಲಾ ದೊರೆತಿತ್ತು.

ಇವರು ಹಲವಾರು ವೃತ್ತಿಗಳನ್ನು ಬದಲಾಯಿಸಿದರು. ಪ್ರಾರಂಭದಲ್ಲಿ ೧೯೪೨ರಲ್ಲಿ ಪುಣೆಯ ಫೀಲ್ಡ್ ಕಂಟ್ರೋಲರ್ ಆಫ್ ಮಿಲಿಟರಿ ಆಫೀಸಿನಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಒಂದು ವರ್ಷದ ಬಳಿಕ ಭಟ್ಕಳದ ಇಸ್ಲಾಮಿಯ ಆಂಗ್ಲ ಉರ್ದು ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಾಲ್ಕು ವರ್ಷ ಕೆಲಸ ಮಾಡಿದರು. ೧೯೪೭ರಿಂದ ೫೧ರತನಕ ‘ಕರ್ಮವೀರ' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. ೧೯೫೧ರಲ್ಲಿ ಕುಮಟಾದ ಕೆನರಾ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ೧೯೬೨ರವರೆಗೆ ಕಾರ್ಯ ನಿರ್ವಹಿಸಿ, ನಂತರ ಸಿರಸಿಯ ಎಂ.ಎಂ. ಕಲಾ-ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ೧೯೬೯ರಲ್ಲಿ ಸಿದ್ದಾಪುರದ ಎಂ ಜಿ ಸಿ ಕಾಲೇಜಿನ ಪ್ರಾಂಶುಪಾಲರಾಗಿ ಆಯ್ಕೆಯಾಗಿ ೧೯೭೬ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. 

ಇವರು ಹಲವಾರು ಕವನ ಸಂಕಲನ, ಯಕ್ಷಗಾನ, ಆತ್ಮಕಥೆ, ವಿಡಂಬನೆ, ಅನುವಾದ, ಐತಿಹಾಸಿಕ ಬರಹ, ಪ್ರಬಂಧಗಳನ್ನು ರಚನೆ ಮಾಡಿದ್ದಾರೆ. ಇವರ ‘ಕವಿಯೂ ವಿಜ್ಞಾನಿಯೂ’ ಪ್ರಬಂಧಕ್ಕೆ ಹೊನ್ನಸೆಟ್ಟಿ ಬಹುಮಾನ ಲಭಿಸಿದೆ. ಇವರು ಮೇಘನಾದ, ಕಿನ್ನರಗೀತ, ಅಮೃತ ಬಿಂದು, ಮಂಜುಗೀತ, ರಸಯಜ್ಞ, ಮುತ್ತುರತ್ನ, ನೌಕಾ ಗೀತ, ಕದಂಬ ವೈಭವ ಮೊದಲಾದ ಕವನ ಸಂಕಲನವನ್ನು ರಚಿಸಿದ್ದಾರೆ. ಪಂಚರಾತ್ರ ಎಂಬುವುದು ಇವರ ಬರೆದ ಯಕ್ಷಗಾನ ಪ್ರಸಂಗ, ಜೀವಯಾನ ಇವರ ಆತ್ಮಕಥೆ. ಮಯೂರವರ್ಮ, ಸೋಮಾರಿ ಕ್ಲಬ್ ಇವರು ಬರೆದ ನಾಟಕಗಳು.

ಇವರು ಹಲವಾರು ವಿಮರ್ಶಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕವೀಂದ್ರ ರವೀಂದ್ರ, ಕಾವ್ಯ ಸೂತ್ರ, ಬೇಂದ್ರೆ, ಪ್ರತಿಭೆ, ಸಂಸ್ಕೃತ ಕನ್ನಡ ಬಾಂಧವ್ಯ ಇತ್ಯಾದಿ. ಬನವಾಸಿಯ ಕದಂಬರು, ಬನವಾಸಿಯ ಕೈಪಿಡಿ, ಕದಂಬ ಇತಿಹಾಸ ಎಂಬ ಐತಿಹಾಸಿಕ ಕೃತಿಗಳನ್ನೂ ಬರೆದಿದ್ದಾರೆ. ಇಂಗ್ಲೀಷ್ ನಿಂದ ಕನ್ನಡಕ್ಕೆ ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಹಲವಾರು ಕೃತಿಗಳನ್ನು ತಂದಿದ್ದಾರೆ. ನವರತ್ನ, ಭಾನುಮತಿ ಕಲ್ಯಾಣ ಇವರು ಸಂಪಾದಿಸಿದ ಕೃತಿ. 

ಶ್ರೀಧರರಿಗೆ ಹಲವಾರು ಗೌರವ, ಸನ್ಮಾನಗಳು ದೊರೆತಿವೆ. ಇವರು ೫೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪತ್ರಿಕಾ ಪ್ರದರ್ಶನದ ಉದ್ಘಾಟಕರಾಗಿದ್ದರು. ೧೯೭೪ರಲ್ಲಿ ಜರುಗಿದ ಮೂರನೆಯ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಎಪ್ರಿಲ್ ೨೪, ೧೯೯೦ರಂದು ನಿಧನ ಹೊಂದಿದರು. ಇವರ ಸ್ಮರಣಾರ್ಥ ಕುಟುಂಬಸ್ಥರು ಹಾಗೂ ಮಿತ್ರರು ಕನ್ನಡದ ಶ್ರೇಷ್ಟ ಸಾಹಿತಿಗಳಿಗೆ ಜೀವಿತ ಸಾಧನಾ ಪುರಸ್ಕಾರವನ್ನು ಶ್ರೀಧರ ಅವರ ಜನ್ಮದಿನದಂದು ನೀಡುತ್ತಾ ಬಂದಿದ್ದಾರೆ. 

‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾದ ಕವನ 

ಎಸ್.ಟಿ.ಬಸ್

ಎಸ್.ಟಿ.ಬಸ್, ಎಸ್.ಟಿ.ಬಸ್,

ಗಲಗಲ ಸದ್ದಿನ ಸರ್ಕಸ್ !

ಬ್ರಹ್ಮಾಂಡವ ಪ್ರತಿನಿಧಿಸುವ

ಪಿಂಡಾಡದ ಚಲನದ ರಷ್ !

 

ನೂರ್ ಮೀರಿದ ವೃದ್ಧಾಪ್ಯದ ಗೂಡೊಳಗಿನ ಮೂಳೆಗಳೋ

ಕಡಲಾಳದ ಜಲಚರಗಳ ಹಿಡಿದೆಳೆದಿಹ ಜಾಲಗಳೋ

ತುಂಬಿರಬೇಕಿದರೆಲ್ಲೆನೆ ಕಿವಿಯಾಳವ ಸೀಳುತ್ತಿದೆ,

ಅಂತರಯಂತ್ರ ಧ್ವನಿ ಮಿದುಳಲೆಗಳನೊಡೆದಾಳುತ್ತಿದೆ !

 

ಜೀವಿಗಿಂತ ಜೋರೊದರುವ

ಜಡವಾಹನ ರಾವಣಾ ;

ಜೀವಿಗಳನು ಗಡಗುಡಿಸುವ

ಜಂಪಿಂಗ್ ಹೃದ್ವಾರಣಾ !

 

ರಶಿಯ ಅಮೇರಿಕಗಳಲ್ಲಿ ಕಾಳೆಗ ಸುರುವಾಯಿತೋ,

ಜ್ವಾಲಾಮುಖಿಧೆಬಧಬೆಗಳು ಕಲಹಿಕ್ಕಿದಿರಾದವೋ !

ನರಕದ ಆಸ್ಪತ್ರೆಯಲ್ಲಿ ಹೊಸ ಮಕ್ಕಳು ಹುಟ್ಟಿದವೋ

ವಿಶ್ವರಾಷ್ಟ್ರ ಸಂಮೇಳನ ಕಂಬಳಗಳ ನಡೆಸಿತೋ !

 

-ಏನಿದೇನಿದೆಂಬ ಹಾಗೆ

ಮೈತುಂಬಾ ನಾದವಾಗೆ-

ನರನಾಡಿಗಳಲ್ಲಿ ಹೊಕ್ಕು ಮಾಡುವವರ ದಾಳಿಯ

ದುರ್ನಿವಾರ್ಯ ಪಾಳಿಯ !

 

ಗಲಿಬಿಲಿ, ಗದ್ದಲ, ಗೊಂದಲ ಗಲಿಗಲಿಸಲು ಕಾಯುವ

ಮುರಿದೊಗೆವುದೊ ವಿನಲಲುಗಿಸಿ ಬಿಡುವುದು ತಳಪಾಯವ !

ನಿನ್ನಾರ್ಭಟ ನವ್ಯ ಧ್ವನಿ ; ಮಹಾಯಂತ್ರ ಭೈರವ-

ನೀನೆ ಕಾಯಬೇಕು ಕಡ್ಡಿ ಪೈಲ್ವಾನ್ ಶರೀರವ !

೨.

ಹಳ್ಳಿಗಳಿಗೆ ನಾಗರಿಕತೆ ಹೊತ್ತು ತಂದ ವೀರ,

ಧೂಲೀಧರ, ದುರ್ವಾದವ ಮುಳುಗಿಸುವ ಸಮೀರ

ನಿನ್ನೊಂದಿಗ ! ಎಸ್.ಟಿ.ರಾಜ, ನಿನಗೆ ನಮಸ್ಕಾರ-

ಕನ್ನಡ ಸೀಮೆಯನಳೆಯುವ ಹೊಸ ಕಲ್ಕ್ಯವತಾರ !

 

ರೋಡೆಂಜಿನ್ ಬೆಳೆದು ಬೆಳೆದು ನೀನಾಯಿತೊ ಹೇಗೆ ?

ರಾಡಿಯಲ್ಲಿ ಓಡಾಡುವ ನಿನಗೆಲ್ಲಿದೆ ಬೇಗೆ?

ಕೋಡಿಲ್ಲದ ಶರಭ ! ನಾಯಿ ಬೆಕ್ಕು ಕೋಳಿ ಎಲ್ಲಾ

ರೋಡಿನಲ್ಲೆ ಭೂಗತ ನಿನಗಿದಿರಾದರೆ ಮಲ್ಲ !

 

ಎಸ್.ಟಿ.ಬಸ್, ಎಸ್.ಟಿ.ಬಸ್,

ಪ್ರಜಾಕಾರ್ಯಕ್ಕೇ ಯಶಸ್

ತಂದು ಕೊಟ್ಟ ಮಹಾಕಾಯ, ಕಾಲದರ್ಪ ಭಂಜನಾ !

ಹಳ್ಳಿಯೂರ ಬಾಲಬಂಧು ಜಾಲ ಮನೋರಂಜನಾ !

ನಿನ್ನ ಧೂಳು ಕಣ್ಣಿದ್ದವರೆಲ್ಲರಿಗೂ ಅಂಜನ !

ನಿನ್ನನಾದ ಪ್ರಗತಿವಾದ ವಿಹಾರಿ ಹೃದ್ ವ್ಯಂಜನ !

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)