‘ಸುವರ್ಣ ಸಂಪುಟ' (ಭಾಗ ೫೫) - ಗಂಗಾಧರ ಚಿತ್ತಾಲ
ನಮೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ ಗಂಗಾಧರ ಚಿತ್ತಾಲ ಇವರು ಒಬ್ಬರು. ಇವರ ಪೂರ್ಣ ಹೆಸರು ಗಂಗಾಧರ ವಿಠೋಬಾ ಚಿತ್ತಾಲ. ಇವರು ಹುಟ್ಟಿದ್ದು ನವೆಂಬರ್ ೧೨, ೧೯೨೩ ರಂದು ಕಾರವಾರದ ಹನೇಹಟ್ಟಿ (ಹನೇಹಳ್ಳಿ)ಯಲ್ಲಿ. ಕನ್ನಡದ ಮತ್ತೊರ್ವ ಖ್ಯಾತ ಸಾಹಿತಿ ಯಶವಂತ ಚಿತ್ತಾಲರು ಇವರ ಅಣ್ಣ.
೧೯೪೦ರಲ್ಲಿ ಕುಮಟಾದ ಗಿಬಸ್ ಪ್ರೌಢಶಾಲೆಯಲ್ಲಿ ತಮ್ಮ ಹತ್ತನೇ ತರಗತಿಯನ್ನು ಪೂರೈಸಿ, ಮುಂಬೈ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಮುಂದಿನ ಅಧ್ಯಯನವನ್ನು ಮುಂದುವರೆಸಿದರು. ಒಂದು ರಾಜಕೀಯ ಪಕ್ಷದೊಂದಿಗೆ ಒಡನಾಟವಿರಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಿಸಿಕೊಂಡ ಕಾರಣ ಇವರನ್ನು ಕಾಲೇಜಿನಿಂದ ಡಿಬಾರ್ ಕೂಡಾ ಮಾಡಲಾಗಿತ್ತು. ಆದರೆ ಪ್ರತಿಭೆಗೆ ಯಾವತ್ತೂ ಮನ್ನಣೆ ಸಿಗುತ್ತದೆ. ೧೯೪೫ರಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಮುಂಬೈ ವಿಶ್ವ ವಿದ್ಯಾನಿಲಯದಿಂದ ಬಿ ಎ (ಆನರ್ಸ್) ಪದವಿಯನ್ನು ಪಡೆದುಕೊಂಡರು.
೧೯೪೮ರಲ್ಲಿ ಐ.ಎಸ್. ಮತ್ತು ಎ.ಎನ್. ಪರೀಕ್ಷೆಗಳಲ್ಲಿ ತೇರ್ಗಡೆಯಾದ ಚಿತ್ತಾಲರು ಮುಂಬಯಿಯಲ್ಲಿ ಸಹಾಯಕ ಮಹಾಲೇಖಪಾಲಕರಾಗಿ (ಅಕೌಂಟ್ಸ್ ಸರ್ವಿಸ್) ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೫೫ರಲ್ಲಿ ವಿದೇಶಕ್ಕೆ ತೆರಳಿದ ಇವರು ವಾಷಿಂಗ್ಟನ್ ನಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಫ್ ಆಡಿಟ್ಸ್ ಆಗಿ ಮೂರು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ನಂತರ ೧೯೬೬-೬೭ರಲ್ಲಿ ಲಂಡನ್ ನಲ್ಲಿ ಕಾರ್ಯ ನಿರ್ವಹಿಸಿದರು. ೧೯೬೮ರಲ್ಲಿ ಭಾರತಕ್ಕೆ ಆಗಮಿಸಿದ ಚಿತ್ತಾಲರು ೧೯೭೭ರಲ್ಲಿ ಸೇವೆಯಿಂದ ನಿವೃತ್ತರಾದರು.
ಗಂಗಾಧರ ಚಿತ್ತಾಲರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಕವನ ಸಂಕಲನಗಳು- ಕಾಲದ ಕರೆ, ಮನುಕುಲದ ಹಾಡು, ಹರಿವ ನೀರಿದು, ಸಂಪರ್ಕ, ಸಮಗ್ರ ಕಾವ್ಯ. ಇವರಿಗೆ ೧೯೮೨ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಚಿತ್ತಾಲರು ೧೯೮೭ರಲ್ಲಿ ನಿಧನರಾದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಗಂಗಾಧರ ಚಿತ್ತಾಲರ ೨ ನೀಳ ಕವನಗಳು ಪ್ರಕಟವಾಗಿವೆ. ನೀರು ಮತ್ತು ಫೈಲು. ಇವುಗಳಿಂದ ಒಂದು ಕವನವನ್ನು ನಾವು ಆಯ್ದು ಪ್ರಕಟಿಸಿದ್ದೇವೆ. ಓದಿ, ಆಸ್ವಾದಿಸಿ…
***
ನೀರು
ನೀರಂಚಿನಲಿ ಕುಳಿತ ಬಿಳಿಯ ಕೊಕ್ಕರೆ ಪಕ್ಕ
ತೆರೆದು ಹವ್ವನೆ ಹಾರಿ ಬೆಳ್ಳಗೆ ಮಿಂಚಿ ಹೊಡೆಯೆ ಚಕ್ಕರು
ಬಾಯಿಯಿಲ್ಲದಭಿಲಾಷೆಗಳು ಕೆರಳಿ ನಿಂತವನೆ
ಬಾ ಇಲ್ಲಿ.
ಹೂಂಕರಿಸಿ ತೇಂಕಾಡಿ ಅಬ್ಬರಿಸಿ ಗುಡುಗಾಡಿ
ಹೆಡೆಯೆತ್ತಿ ಏರೇರಿ ಬಂದು ದಡದುದ್ದಕ್ಕೂ
ಸಿಡಿದೊಡೆವ ತೆರೆಗಳೊಡ ಕುಣಿಯೆ ಧಾವಿಸಿದವನೆ
ಬಾ ಇಲ್ಲಿ.
ಮಳಲಲಲೆದಾಡಿ ಓಂಕಾರವಡಗಿಹ ಶಂಖ
ಮಳೆಬಿಲ್ಲನೇಳು ಬಣ್ಣಗಳ ಪಡೆದಿಹ ನಿಂಪು
ಕಡಲಬಳ್ಳಿಯ ಬೀಜ
ರವಿಯಗ್ನಿಯುಂಡು ಝಳಪಿಸುವ ಮೀನದ ಎಲುಬು-
ಒಂದೊಂದು ಕೌತುಕವನೂ ಎತ್ತಿ ಕಡಲಗೂಢಗಳನ್ನೆ ಧೇನಿಸುತ ನಡೆದವನೆ
ಬಾ ಇಲ್ಲಿ.
ನೆಲವ ವ್ಯೂಹಿಸಿ ಮೊರೆವ ವರುಣಸಾಮ್ರಾಜ್ಯವನು
ಬ್ರಹ್ಮದೇವರ ಗುಡ್ಡವೇರಿ ಝಗ್ಗನೆ ಕಂಡು
ಜಲಚಕಿತನಾದವನೆ
ಬಾ ಇಲ್ಲಿ.
ಮನೆಗೆ ಮರಳಿದರೂನು, ದಿನಗಳುರುಳಿದರೂನು,
ದಿಗ್ದೇಶಗಳಿಗೆ ತೆರಳಿದರೂನು, ಉದಧಿಯುದ್-
ಘೋಷವನಗಾಧ ವಿಶ್ವದ ಕೂಗಿನೊಲು
ಎದೆಯಲಿ ಹೊತ್ತು ನಡೆದವನೆ
ಬಾ ಇಲ್ಲಿ.
ಇದು ನೀರು!
ಮನೆಯ ಹಿತ್ತಿಲ ಬಾವಿಯಲ್ಲಿ ತುಂಬುವ ಪ್ರಾಣಜಲವಲ್ಲ.
ಊರು ಕೇರಿಗೆ ಹಸಿರ ಹಾಸಿ ಹರಿಯುವ ಹಳ ಹೊಳೆಯಲ್ಲ.
ನೆಲವುತ್ತು ಬಿತ್ತುವರೆ ತಕ್ಕಕಾಲಕೆ ಬಂದು
ಮುಗಿಲಿಂದ ಸುರಿವ ಸೋನೆಯಿದಲ್ಲ
ಕಲ್ಪಾಂತ ಜಲವೆ ನವಖಂಡ ಪೃಥ್ವಿಯ ನುಂಗಿ
ನೊರೆಯುವೊಲು
ಮುಗಿಲಿಗೂ ಕೆರೆಹಾಯ್ಸಿ ಹರಿಹಾಯ್ವ ನೀರು !
ಎಲೆಲೇ ಭೀರು !
ಕ್ಷಿತಿಜಪರಿವೃತ ಜಲಧಿ ದಿಕ್ಕುಗಳ ಮುಕ್ಕಳಿಸುವೀ
ವಿರಾಟವ ಕಾಣೆ, ನಡುಗು.
ದಂಡೆಯಿದಕ್ಕಿಲ್ಲ, ಬಂಧನವಿಲ್ಲ
ಹಿಂಡುಹಿಂಡಾಗಿ ಅಂಡೆಲೆಯುತಿದೆ ಜಲರಾಶಿ-
ಕಾಲನ ಕಿರಿಯ ತಂಗಿ, ನೆಲನ ಹಿರಿಯಕ್ಕ,
ಇದನಾಳ ಬಲ್ಲವ ಗಂಡು ಯಾರಯ್ಯ,
ನೆಲದಣಿಗ!
ನಿನ್ನ ಹೆಜ್ಜೆಯ ಕುರುಹು ಕೂಡ ಮೂಡದು ಇಲ್ಲಿ.
ಕಾಲನಿಟ್ಟಲ್ಲಲ್ಲಿ
ನುಂಗೆ ಕಾದಿಹುದು ಬಾಯ್ತೆರೆದು ಪಾತಾಳದೊಲು
ದುಂಡುತೆಕ್ಕೆಯ ಹಾಕಿ ಕರಿನೀಲ ಜಲಶೇಷ
ಕ್ಷಣ ಸ್ತಬ್ಧ, ಮರುಕ್ಷಣವೆ ವಿಕ್ಷುಬ್ಧಿ ಪ್ರಕ್ಷುಬ್ಧ.
ಕಣ್ಣೀರ ಹೊಲವಯ್ಯ, ಬರಿಯ ಉಪ್ಪಿನ ಹಳುವು
ದುಡುಕದಿರು ಈ ಅಮಾನುಷ ವಿಫಲ ಸೀಮೆಯ ಸೇರಿ,
ಇದರ ಬಾಳ್ ಬೇರೆ, ಗತಿ ಬೇರೆ, ತಾಳವೆ ಬೇರೆ,
ಮೈ ಬೇರೆ, ಮನ ಬೇರೆ, ಅಂತರಂಗವೆ ಬೇರೆ,
ಉಸಿರ ಮೇಲುಸಿರಲಿ ದಿಕ್ತಟಗಳಾಚೆಗೂ
ಹಾಯ್ವ ಉರುಬೇ ಬೇರೆ,
ಬಸಿರಲ್ಲಿ ತುಡಿವ ಬಲ ಬೇರೆ ಛಲವೇ ಬೇರೆ.
ಎದೆಯ ಬಯಲಲ್ಲಿ ಹಗಲಿರುಳು ತೆರೆಗಳ ನಟ್ಟಿ
ತರುಬಿ ಹುಯಿಲುವ ಗಾಳಿ.
ಒಡಲ ಕಂದಕದಿ ಹೊಯ್ದಾಡುವಂಧಃಕಾರ
ದಲ್ಲಿ ಯುಗಯುಗ ಜನಿತ ಹಿಂಸ್ರ ಭೀಕರ ಸೃಷ್ಟಿ.
ತನ್ನ ತೋಷವನೊ ರೋಷವನೊ ಮಡಿಲೊಳಗಿಟ್ಟು
ಯಾವ ಛಂದಕೊ ತೂಗಿ ನೂಗುವರು ದಿನರಾತ್ರಿ.
ಹೋಗದಿರೆಯ್ಯೊ ಇದರ ನೀಲ ಏಕಾಂತವನು
ಈಚೆಯಿಂದಾಚೆಗೂ ಚಾಚಿ ಕುದಿಯುವದಿಲ್ಲಿ
ಮತ್ಸ್ಯಗಂಧಿತ ತಿಮಿತಿಮಿಂಗಿಲೋದರ ಮರಣ!
***
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)