‘ಸುವರ್ಣ ಸಂಪುಟ' (ಭಾಗ ೫೬) - ವಿ.ಜಿ.ಭಟ್ಟ
ವಿಷ್ಣು ಗೋವಿಂದ ಭಟ್ಟ (ವಿ.ಜಿ.ಭಟ್ಟ) ಇವರು ಹುಟ್ಟಿದ್ದು ಡಿಸೆಂಬರ್ ೩, ೧೯೨೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕ ಗ್ರಾಮದಲ್ಲಿ. ಇವರ ತಂದೆ ಗೋವಿಂದ ಭಟ್ಟರು ಹಾಗೂ ತಾಯಿ ಗಂಗಮ್ಮನವರು. ವಿಷ್ಣು ಭಟ್ಟರ ಪ್ರಾಥಮಿಕ ಶಿಕ್ಷಣವು ಹೊನ್ನಾವರ ಹಾಗೂ ಜಮಖಂಡಿಗಳಲ್ಲಿ ನೆರವೇರಿತು. ಮೆಟ್ರಿಕ್ ಪರೀಕ್ಷೆಯಲ್ಲಿ ಇವರು ಪುಣೆ ಪ್ರಾಂತ್ಯಕ್ಕೇ ಪ್ರಥಮ ಸ್ಥಾನ ಪಡೆದರು. ತಮ್ಮ ಮುಂದಿನ ಶಿಕ್ಷಣಕ್ಕಾಗಿ ಸಾಂಗ್ಲಿಗೆ ತೆರಳಿ ಅಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಪುಣೆ ಹಾಗೂ ಕೊಲ್ಲಾಪುರ ವಿಶ್ವವಿದ್ಯಾನಿಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಖ್ಯಾತ ಸಾಹಿತಿಗಳಾದ ಸು.ರಂ.ಎಕ್ಕುಂಡಿ ಹಾಗೂ ರಾಕು ಅವರು ಇವರ ಸಹಪಾಠಿಗಳಾಗಿದ್ದರು.
ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ವಿಷ್ಣು ಭಟ್ಟರು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಧಾರವಾಡಕ್ಕೆ ಆಗಮಿಸಿದರೂ, ೧೯೪೭ರಲ್ಲಿ ಸ್ಥಾಪನೆಯಾದ ಖಾದಿ ಗ್ರಾಮೋದ್ಯೋಗದಲ್ಲಿ ಉದ್ಯೋಗ ದೊರೆತ ನಿಮಿತ್ತ ಅವರ ಸಂಶೋಧನಾ ಕಾರ್ಯ ಅರ್ಧಕ್ಕೇ ಮೊಟಕುಗೊಂಡಿತು. ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕಾಲಕಾಲಕ್ಕೆ ಪದೋನ್ನತಿಯನ್ನು ಹೊಂದಿ, ನಿರ್ದೇಶಕರಾಗಿ ನಿವೃತ್ತಿ ಹೊಂದಿದರು. ೧೯೮೧ರಲ್ಲಿ ನಿವೃತ್ತಿಯ ನಂತರ ಮುಂಬಯಿಯಲ್ಲಿ ನೆಲೆಸಿದರು.
ವಿ.ಜಿ.ಭಟ್ಟರಿಗೆ ಬಾಲ್ಯದಿಂದಲೂ ಸಾಹಿತ್ಯದತ್ತ ಒಲವು ಇತ್ತು. ಗೋಕಾಕ್ ಹಾಗೂ ಬೇಂದ್ರೆಯವರ ಬರಹಗಳಿಂದ ಬಹಳ ಪ್ರಭಾವಿತರಾಗಿದ್ದ ಇವರು ಹಲವಾರು ಕವನಗಳನ್ನು ಬರೆದಿದ್ದಾರೆ. ೧೯೪೬ರಲ್ಲಿ ಇವರ ಮೊದಲ ಕವನ ಸಂಕಲನ ‘ಸವಿನೆನಪು' ಪ್ರಕಟವಾಯಿತು. ನಂತರ ನಿರಂತರವಾಗಿ ೨೨ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಪ್ರಾರ್ಥನೆ' ಇವರ ಕೊನೆಯ ಕವನ ಸಂಕಲನ.
ವಿಷ್ಣು ಭಟ್ಟರ ಕವನಗಳಲ್ಲಿ ಹಾಸ್ಯ, ವಿಡಂಬನೆ, ತುಂಟತನವನ್ನು ನಾವು ಕಾಣಬಹುದಾಗಿದೆ. ಪಲಾಯನ, ರಕ್ತಾಂಜಲಿ, ಕಾವ್ಯವೇದನೆ, ಲಹರಿ, ಕಿಷ್ಕಿಂದೆ ಮೊದಲಾದುವುಗಳು ಇವರ ಕೆಲವು ಕವನ ಸಂಕಲನಗಳು. ಕೇವಲ ಕವನ ಸಂಕಲನಗಳಷ್ಟೇ ಅಲ್ಲ ಭಟ್ಟರು ‘ಸಹ್ಯಾದ್ರಿ' ಎಂಬ ಉತ್ತರ ಕನ್ನಡದ ಜೀವನ ಚಿತ್ರ, ಬುರುಕಿ, ದಿವ್ಯ ಕಥೆಗಳು ಮತ್ತು ಪೆದ್ದಂ ಕಥೆಗಳು ಎಂಬ ಕಥಾ ಸಂಕಲನಗಳನ್ನು ಬರೆದಿದ್ದಾರೆ. ‘ಧ್ರುವ ದೋಸ್ತ್' ಇವರ ಮಕ್ಕಳ ಕಥಾ ಸಂಗ್ರಹ. ‘ಖಾದಿ ಗ್ರಾಮೋದ್ಯೋಗ' ಅನುವಾದಿತ ಕೃತಿ. ‘ಉಪ್ಪಿನ ಮಾರಾಟ’ ಎಂಬ ನಾಟಕವನ್ನೂ ರಚನೆ ಮಾಡಿದ್ದಾರೆ. ಕೆಲ ಕಾಲ 'ಗ್ರಾಮ ಜೀವನ' ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ತಮ್ಮ ಪತ್ನಿ ರುಕ್ಮಿಣಿಯ ನಿಧನದ ಬಳಿಕ ಆಕೆಯ ಹೆಸರಿನಲ್ಲಿ ‘ರುಕ್ಮಿಣಿ ಪ್ರಕಾಶನ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ಕವನ ಸಂಕಲನಗಳನ್ನು ಹೊರತಂದರು. ಭಟ್ಟರಿಗೆ ೧೯೮೩ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಎಪ್ರಿಲ್ ೬, ೧೯೯೧ರಂದು ವಿ.ಜಿ.ಭಟ್ಟರು ನಿಧನ ಹೊಂದಿದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಭಟ್ಟರ ನಾಲ್ಕು ಕವನಗಳಿವೆ. ‘ಆತ್ಮ ಶೋಧನೆ, ತವರ ಮನೆಯಿಂದ ನಾ ನಿನ್ನ ಕರಸಿದೆನೇಕೆ?, ಮೂರ್ತಿ, ವಿನೋಬಾ ದರ್ಶನ' ಎಂಬ ಕವನಗಳಿಂದ ಎರಡು ಕವನಗಳನ್ನು ಆಯ್ದು ನಾವಿಲ್ಲಿ ಪ್ರಕಟಿಸುತ್ತಿದ್ದೇವೆ.
ತವರ ಮನೆಯಿಂದ ನಾ ನಿನ್ನ ಕರಸಿದೆನೇಕೆ?
ತವರ ಮನೆಯಿಂದ ನಾ ನಿನ್ನ ಕರಸಿದೆನೇಕೆ?
ಇಷ್ಟು ಅವಸರ ಮಾಡಿ ತಂತಿ ಬಿಟ್ಟು?
ನನಗಾಗಿ ಅಲ್ಲವೇ ಅಲ್ಲ ಓ ಮಾರಾಯ್ತಿ
ನನ್ನ ಮೇಲೀಪರಿಯದೇಕೆ ಸಿಟ್ಟು?
ತುಸು ತಾಳು, ಶಾಂತಿಯೇ ಇದು ವಿಶ್ವದ ಮಂತ್ರ
ನನ್ನ ಮಾತನು ಸೊಲ್ಪ ಕೇಳು ರಾಣಿ
ನಂಬಿದರೆ ನಂಬು ; ಸರಿಯೆನಿಸದಿರೆ ನಕ್ಕುಬಿಡು
ಇದು ನಿನ್ನದೇ ಕವಿಯ ಪುರುಷವಾಣಿ
ಚಳಿಗಾಲವಾದರೂ ನನಗೇನು? ರಗ್ಗುಂಟು
ಬೆಚ್ಚಗಿದೆ ನಿನಗಿಂತ ನೂರು ಪಟ್ಟು
ಪಾಪ ಬೆಕ್ಕಿನ ಮರಿಯು ಕೂಗಿ ಸಾಯಲು ಬಿತ್ತು
ಒಲೆ ಬೆಚ್ಚಗಿಲ್ಲದೆಯೆ ದಿಕ್ಕುಗೆಟ್ಟು
ಅದಕ್ಕಾಗಿಯೇ ನಿನ್ನ ಕರೆಸಿದೆನು, ತಪ್ಪೆ?
ಮರಿಯ ಕೊರಗನು ಅರಿಯದವನೆ? ಬೆಪ್ಪೆ?
***
ವಿನೋಬಾ ದರ್ಶನ
ನೆಲಕೆಲ್ಲ ಹಬ್ಬಿರುವ ಹೂಗಂಪುಗಳ ನೀನು
ಹಿಡಿದು ಮಾಲೆಯಕಟ್ಟಿ ಕೊಡುವೆಯೇನು?
ಮುತ್ತುಗಳ ಬಸರಿನಲಿ ತುಳುಕಾಡುತಿದೆ ನೀರು
ಅದನು ಕೊಡದಲಿ ತುಂಬಿ ಕೊಡುವರಾರು?
ಹೆರವರಿಗೆ ಸಿಗದಂತೆ ಸೂರ್ಯಬಿಂಬವನೆಲ್ಲ
ನೆಲಮಾಳಿಗೆಗೆ ಸೆಳೆದು ಹೂಳಬಹುದೇ?
ತನ್ನ ತ್ರಿಜೂರಿಯಲಿ ಹುದುಗಬರುವೆಯ ಎಂದು
ಮಾರುತನ ವರ್ಲ್ಡ್ ಬ್ಯಾಂಕು ಕೇಳಬಹುದೇ?
ಭೂದೇವಿ ಮೈಮೇಲೆ ಎಕರೆ ಗುಂಠೆಯ ಗೆರೆಯ
ಕೊರೆದು ದಸ್ತೇವೋಜು ಮಾಡಬಹುದೇ?
ಭೂತ ಗಣಗಳು ಬಂದು “ಮಾಡುವೆವು" ಹೇಳಿದರೆ
ಜೀವದೇವನು ಸುಮ್ಮ ಕೂಡಬಹುದೇ?
ಆವೇಶದಲಿ ವಿನೋಬನ ಕಣ್ಣು ತುಂಬಿತ್ತು
ಬಿದ್ದ ಹನಿಯನು ಹಿಡಿದೆ ಹೃದಯದಲ್ಲಿ
ಮುತ್ತುಗಳ ಬಸಿರಿನಲಿ ತುಳುಕಾಡಿದಂತೆಯೇ
ಇರಲಿ ಆ ಬಿಂದು ಎದೆ ಸಿಂಪಿನಲ್ಲಿ.
***
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)