‘ಸುವರ್ಣ ಸಂಪುಟ' (ಭಾಗ ೫೮) - ಹಿ.ಮ.ನಾಗಯ್ಯ
ನಾವು ಈ ವಾರ ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ ‘ಹಿಮನಾ’ ಎಂದೇ ಖ್ಯಾತರಾಗಿದ್ದ ಹಿರೇಕುಂಬಳಗುಂಟೆ ಮಠದ ನಾಗಯ್ಯ. ಹಿ ಮ ನಾಗಯ್ಯನವರು ಜುಲೈ ೧, ೧೯೨೫ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಎಂಬ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಮಠದ ದೊಲಡ್ದ ಬಸವಯ್ಯ ಹಾಗೂ ತಾಯಿ ಬಸವಮ್ಮ.
ನಾಗಯ್ಯನವರು ಇಂಟರ್ ಮೀಡಿಯೇಟ್ ವರೆಗೆ ಓದಿದ್ದು ಕೊಟ್ಟೂರಿನಲ್ಲಿ. ಆ ಸಮಯದಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಚಳುವಳಿಯ ಸಮಯ. ಗಾಂಧೀಜಿಯವರ ಕರೆಯಂತೆ ವಿದ್ಯಾರ್ಥಿಗಳು ಶಾಲಾ, ಕಾಲೇಜು ತೊರೆದು ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು. ಇದರ ಪ್ರೇರಣೆಯಿಂದ ನಾಗಯ್ಯನವರೂ ಶಾಲೆ ತೊರೆದಾಗ ಅವರ ಗುರುಗಳೊಬ್ಬರು ‘ಮೊದಲು ಚೆನ್ನಾಗಿ ಓದು, ಓದು ಮುಗಿದ ಬಳಿಕ ದೇಶ ಸೇವೆ ಮಾಡು' ಎಂದು ಇವರಿಗೆ ತಿಳಿಹೇಳಿದಾಗ ಮತ್ತೆ ಶಾಲೆಗೆ ಸೇರಿದರು.
ಕಾಲೇಜಿನಲ್ಲಿ ಕಲಿಯುತ್ತಿರುವ ಸಮಯದಲ್ಲೇ ಹಲವಾರು ಕವನಗಳನ್ನು ಬರೆದಿದ್ದರು ನಾಗಯ್ಯನವರು. ೧೯೪೮ರಲ್ಲಿ ಬೆಂಗಳೂರಿನ ಬ್ರದರ್ ಆಂಡ್ ಬ್ರದರ್ ಪ್ರಕಾಶನ ಸಂಸ್ಥೆಯವರು ಇವರ ‘ಬಳ್ಳಾರಿ ಬೆಳಕು' ಎಂಬ ಕವನ ಸಂಕಲನವನ್ನು ಹೊರತಂದಿದ್ದರು. ನಾಗಯ್ಯನವರು ತಮ್ಮ ಜೀವನ ಸಾಗಿಸಲು ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ‘ತಾಯಿ ನಾಡು' ಎಂಬ ಪತ್ರಿಕೆಗೆ ವರದಿಗಾರರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. ನಂತರ ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿಯೂ, ‘ಕೀರ್ತಿ ಕಿರಣ’ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ‘ಕನ್ನಡ ಕೇಸರಿ' ಎಂಬ ವಾರ ಪತ್ರಿಕೆಯ ಮಾಲೀಕರಾಗಿ ಹಾಗೂ ಸಂಪಾದಕರಾಗಿ, ತಮ್ಮ ಸ್ವಂತ ಪ್ರಕಾಶನದ ಮೂಲಕ ‘ಹಿಮಾಲಯ' ಎಂಬ ಸಂಜೆ ಪತ್ರಿಕೆಯನ್ನೂ ಹೊರಡಿಸಿದ್ದರು. ಸಂಜೆ ಪತ್ರಿಕೆಯ ಯೋಜನೆಯನ್ನು ರೂಪಿಸಿ, ಕಾರ್ಯರೂಪಕ್ಕೆ ತಂದವರಲ್ಲಿ ಇವರೇ ಮೊದಲಿಗರು.
ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ‘ಕನ್ನಡ ನುಡಿ' ಯ ಸಂಪಾದಕರಾಗಿ ಹಾಗೂ ಲೋಕವಾಣಿ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಇವರ ಬರಹ ನಿಯಮಿತವಾಗಿ ಪ್ರಕಟವಾಗುತ್ತಿತ್ತು. ಪತ್ರಿಕೋದ್ಯಮಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಕರ್ನಾಟಕ ಪತ್ರಿಕೋದ್ಯೋಗಿಗಳ ಸಂಘವು ನಾಗಯ್ಯನವರನ್ನು ಅಧ್ಯಕ್ಷರನ್ನಾಗಿ (೧೯೬೮-೭೦) ಆಯ್ಕೆ ಮಾಡಿತು. ನಾಗಯ್ಯನವರಿಗೆ ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ ಮುಂತಾದ ಖ್ಯಾತ ಸಾಹಿತಿಗಳ ಜೊತೆ ಆತ್ಮೀಯ ಒಡನಾಟವಿತ್ತು.
ಬಳ್ಳಾರಿಯ ಬೆಳಗು ಪ್ರಕಟವಾದ ಬಳಿಕ ಗಾಂಧೀಜಿ ಕುರಿತ ನೀಳ್ಗವಿತೆ ಮತ್ತು ಇತರ ಕವನಗಳ ಸಂಕಲನ ‘ಕಾಣಿಕೆ' (೧೯೪೯), ಅಮೃತ ಧಾರೆ (ಭಾವಗೀತೆಗಳು), ಚಂಪಕ (ಪ್ರೇಮಗೀತೆಗಳು), ನೀವೆಲ್ಲರೂ ನಮ್ಮವರೇ (೧೯೨೯), ತುಂಬು ಅರಳಿದ ಬೇವು (೧೯೮೫), ನಿನಗೊಂದು ತಿಳಿಮಾತು (೧೯೯೨) ಮೊದಲಾದ ಕವನ ಸಂಕಲನಗಳು ಪ್ರಕಟವಾಗಿವೆ.
ಕಾವ್ಯ ಕ್ಷೇತ್ರಕ್ಕೆ ನಾಗಯ್ಯನವರು ನೀಡಿದ ಬಹುದೊಡ್ದ ಕೊಡುಗೆ ಎಂದರೆ ‘ಭವ್ಯ ಭಾರತ ಭಾಗ್ಯೋದಯ' ಎಂಬ ಬೃಹತ್ ಕೃತಿ. ಇದು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬರೆದ ಕಾವ್ಯ ಇದಾಗಿದ್ದು ೨೮೭೧ ಪದ್ಯಗಳಿಂದ ಕೂಡಿದ್ದು ಸುಮಾರು ೧೦೮೯ಪುಟಗಳನ್ನು ಹೊಂದಿದೆ. ಆದರೆ ಈ ಕೃತಿ ಇವರ ಜೀವಿತಾವಧಿಯಲ್ಲಿ ಪ್ರಕಟವಾಗದೇ ಅವರ ನಿಧನಾ ನಂತರ ೧೯೯೩ರಲ್ಲಿ ಬಿಡುಗಡೆಯಾಯಿತು. ನಾಗಯ್ಯನವರ ಗದ್ಯ ಕೃತಿಗಳಲ್ಲಿ 'ಒಲಿದು ಬಂದ ಸರಸ್ವತಿ' (೧೯೫೨), ‘ಗಾಂಧೀಜಿ (ಕಥಾ ಸಂಕಲನ), ವಿವೇಕಾನಂದ, ರವೀಂದ್ರನಾಥ ಠಾಕೂರ್ ಎಂಬ ವ್ಯಕ್ತಿ ಚಿತ್ರಗಳು (೧೯೫೪), ಶಾಂತವೇರಿ ಗೋಪಾಲಗೌಡ ಜೀವನ ಚರಿತ್ರೆ (೧೯೮೧) ಇತ್ಯಾದಿ. ನಾಗಯ್ಯನವರ ಕಾವ್ಯಗಳ ಕುರಿತಾದ ಇತರ ಲೇಖಕರ ಕೃತಿ ‘ಹಿಮನಾ ಕಾವ್ಯ ಸಮೀಕ್ಷೆ’ ಪ್ರಕಟವಾಗಿದೆ.
ಹಿ ಮ ನಾಗಯ್ಯನವರು ಆಕಾಶವಾಣಿ ಹಾಗೂ ದೂರದರ್ಶನ ವಾಹಿನಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರು. ರಾಜಕೀಯದಲ್ಲೂ ಆಸಕ್ತರಾಗಿದ್ದ ನಾಗಯ್ಯನವರು ಜನತಾ ದಳದ ಸದಸ್ಯರಾಗಿ, ಬೆಂಗಳೂರು ನಗರ ಸಭೆಗೆ (೧೯೮೩-೮೮) ಆಯ್ಕೆಯಾಗಿದ್ದರು. ಸಂಡೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ನಾಗಯ್ಯನವರಿಗೆ ದೊರೆತಿತ್ತು. ಇವರು ಜುಲೈ ೨೫, ೧೯೯೨ರಂದು ನಿಧನ ಹೊಂದಿದರು.
ಹಿ ಮ ನಾಗಯ್ಯನವರ ಒಂದು ಕವನ ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಬನ್ನಿ ಓದೋಣ…
ಹೀಗಾಯಿತೆ ! !
ನೀ ಬಿಟ್ಟಿಹ ಜಡೆ
ಕಾಳಿಂಗನ ಹೆಡೆ
ಕೊರಳನು ಕೊಂಕುತಿರೆ
ಹಾಕಲು ಹೆಜ್ಜೆ
ಝಣಿರೆನೆ ಗೆಜ್ಜೆ
ಚಲಿಸದೆ ಕಣ್ಣ ತೆರೆ !
ನಿನ್ನಯ ದಿಟ್ಟಿ
ಕೊರಳಿಗೆ ಕಟ್ಟಿ
ಎಳೆದೊಯ್ಯುವ ಕಣ್ಣಿ !
ನಿನ್ನಯ ಮೈಯಿ
ಮುಟ್ಟಲು ಕೈಯಿ
ಕಾಳೆಮ್ಮೆಯ ಬೆಣ್ಣಿ ! !
ಕುಪ್ಪಸ ಬಿರಿಯೆ
ಮುಸುಗಿನ ತೆರೆಯೆ !
ಮೈಮುರಿಯುದೊಡೆಯುತಿರೆ !
ಏತಕೆ ಬಿಂಕ
ಹಿಡಿಸುವಿಯಂಕ
ರತಿರಾಗವ ಕರೆಯೆ !
ನೋಡುತನಿಂದೆ
‘ಯಾಕಾಡೆಗೆಂದೆ'
ನೀ ಕುಡಿನೋಟ ಬಿಡೆ !
ಬಳುಕುತ ನಡೆದೆ
ಥಳಕನೆ ಹೊಳೆದೆ
ಮೈ ‘ಝಮ್ಮೆ'ನ್ನುತಿರೆ ! !
ಮೆಲುನಗೆ ಉಕ್ಕೆ
ಕುಲುಕುಲು ನಕ್ಕೆ
ಅದೆ ಆಯಿತು ರೆಕ್ಕೆ !
ಹಾಡುತ ಬಂದೆ
ಪಕ್ಕದಿ ನಿಂದೆ
ಎರಡಕ್ಷಿಯ ಚುಕ್ಕೆ ! !
ನಿನ್ನಯ ಕೆನ್ನೆ
ಎರಡಕು ನಿನ್ನೆ
ಜೇನ್ ತುಂಬಿಟ್ಟರೆನೆ !
ಚೆಂದುಟಿ ಬಿರಿಯೆ
ಜೇನ್ ಸಲೆ ಸುರಿಯೆ
ಚುಂಬಿಸಿ ಚೀಪಿದೆನೆ ! !
(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ)