‘ಸುವರ್ಣ ಸಂಪುಟ' (ಭಾಗ ೭೦) - ಸಿದ್ದಣ್ಣ ಮಸಳಿ

‘ಸುವರ್ಣ ಸಂಪುಟ' (ಭಾಗ ೭೦) - ಸಿದ್ದಣ್ಣ ಮಸಳಿ

ಸಿದ್ದಣ್ಣ ಮಸಳಿ ಇವರು ಎಪ್ರಿಲ್ ೬, ೧೯೨೭ರಂದು ವಿಜಯಪುರ (ಬಿಜಾಪುರ) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜನಿಸಿದರು. ತಂದೆ ಗಿರಿಮಲ್ಲಪ್ಪ ಹಾಗೂ ತಾಯಿ ತಂಗೆಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರೇಮಸಳಿಯಲ್ಲಿ ಪೂರೈಸಿ, ಮಾಧ್ಯಮಿಕ ಶಿಕ್ಷಣ, ಪದವಿ (ಬಿ ಎ ಹಾಗೂ ಬಿ ಎಡ್) ಅನ್ನು ವಿಜಯಪುರದಲ್ಲಿ  ಮುಗಿಸಿದರು.  ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. 

ಸಿದ್ದಣ್ಣ ಮಸಳಿ ಅವರು ೧೯೫೨-೧೯೬೫ರ ಅವಧಿಯಲ್ಲಿ ಕೆ ಎಲ್ ಇ ಸಂಸ್ಥೆಯ ಆರ್ ಆರ್ ಎಸ್ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ, ೧೯೬೫-೭೧ರ ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಗಳಗತಿಯಲ್ಲಿ ಪಿ. ಆರ್. ಚಿಕ್ಕೋಡಿ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ, ೧೯೭೧-೮೨ ರಲ್ಲಿ ಕೆ ಎಲ್ ಇ ಎಸ್ ಕೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 

ಸಿದ್ದಣ್ಣ ಮಸಳಿ ಇವರು ಪತ್ರಕರ್ತರೂ ಆಗಿದ್ದರು. ೧೯೮೨ರಿಂದ ೨೦೦೦ ಅವಧಿಯಲ್ಲಿ ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆ ಸಲ್ಲಿಸಿದರು. ೧೯೫೩ರ ಜೂನ್ ೨೫ರಂದು ಇವರು ಪ್ರಭಾವತಿಯವರನ್ನು ತಮ್ಮ ಧರ್ಮಪತ್ನಿಯಾಗಿ ಸ್ವೀಕಾರ ಮಾಡಿದರು.

ಸಿದ್ದಣ್ಣ ಮಸಳಿ ಇವರು ೧೯೫೪ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಮನೆ ತುಂಬಿದ ಬೆಳಕು' ಪ್ರಕಟಿಸಿದರು. ೧೯೬೧ರಲ್ಲಿ ದೀಪಾವತಾರ, ೨೦೦೩ರಲ್ಲಿ ಪಂಜರದ ಪಕ್ಷಿ ಮೊದಲಾದ ಕವನ ಸಂಕಲನಗಳು ಹೊರಬಂದವು. ‘ಸಂಚಾರಿ' ಇವರ ಅಪ್ರಕಟಿತ ಕೃತಿ. ಇದಲ್ಲದೇ ಹಲವಾರು ರೇಡಿಯೋ ನಾಟಕಗಳನ್ನೂ, ವಿವಿಧ ಪತ್ರಿಕೆಗಳಲ್ಲಿ ಕಥೆಗಳನ್ನೂ ಹಾಗೂ ವಿಮರ್ಶಾ ಲೇಖನಗಳನ್ನೂ ಬರೆದಿದ್ದಾರೆ. ಮಸಳಿಯವರು ಬಸವರಾಜ ಕಟ್ಟೀಮನಿಯವರ ಬದುಕು ಬರಹ ಹಾಗೂ ಸಂಪಾದಿತ ಕೃತಿಯಾದ ‘ಕವಿ ಗಂಗಾವತಿಯವರ ಚೈತ್ರ ಪಕ್ಷಿ' ಕೃತಿಗಳನ್ನೂ ಪ್ರಕಟಿಸಿದ್ದರು.

ಸಿದ್ದಣ್ಣ ಮಸಳಿ ಇವರ ‘ಮನೆ ತುಂಬಿದ ಬೆಳಕು' ಕೃತಿಗೆ ಮೈಸೂರು ಸರ್ಕಾರದಿಂದ ೧೯೫೮ರಲ್ಲಿ ಒಂದು ಸಾವಿರ ರೂಪಾಯಿಗಳ ನಗದು ಬಹುಮಾನ ದೊರೆತಿತ್ತು. ೧೯೬೨ರಲ್ಲಿ ‘ದೀಪಾವತಾರ' ಕಾವ್ಯಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಆಕಾಶವಾಣಿ ಕೇಂದ್ರದಿಂದ ಮನ್ನಣೆಯೂ ದೊರೆತಿದೆ. ಹಲವಾರು ಕವಿ-ಕಾವ್ಯ ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಪ್ರತಿಷ್ಟಿತ ಕೆ ಎಲ್ ಇ ಸಂಸ್ಥೆಯಿಂದ ವಿಶೇಷ ಗೌರವ ಪ್ರಶಸ್ತಿಗಳೂ ಇವರಿಗೆ ಸಂದಿವೆ.

ಇವರು ಜನವರಿ ೪, ೨೦೧೭ರಲ್ಲಿ ನಿಧನ ಹೊಂದಿದರು.

ಸಿದ್ದಣ್ಣ ಮಸಳಿ ಇವರ ಒಂದು ಕವನ ‘ಸುವರ್ಣ ಸಂಪುಟ' ದಲ್ಲಿ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ.

ನೀರಡಿಸಿದ ನೆಲ

೧.

ಬಿಸಿಲು...ಬಿಸಿಲು...ಬಿಸಿಲು

ಹರಡಿತ್ತು ತಲೆ ಮೇಲೆ ಕೆಂಡ ಕೆದರಿ

ಹದಿನೆಂಟು ಚಿತ್ರಗಳ ದಾಟಿ ಬಂದಿಹಳಿವಳು

ತಿರುಗಿ ನೋಡಿದಳೊಮ್ಮೆ ಬಂದ ದಾರಿ

ಮನದ ಪರದೆಯ ಮೇಲೆ ರಂಗುರಂಗಿನ ಚಿತ್ರ

ನೆನಪು ಬಿಚ್ಚುತ್ತಿತ್ತು ಸುರುಳಿ ಸುರುಳಿ

ನಿಟ್ಟುಸಿರು ನರಳಿತ್ತು ಸಂಜೆ ನೆರಳಾಗಿತ್ತು

ನಡೆದ ದಾರಿಯ ಮೈಲುಗಲ್ಲನೆಣಿಸಿ

ಮನದೊಳೇನೋ ಮತ್ತೆ ಗುಣಿಸಿ ಗುಣಿಸಿ,

ಮನಸು ಗರಗರ ತಿರುಗಿ

ಉರಿಯ ಕುದುರೆಯನೇರಿ

ಹೌಹಾರಿ..ಗ಼ಂಟಲಾರಿ !

೨.

ಎದೆಯೊಳಗೆ ಕುಣಿದಿತ್ತು ಹರಯ ಹದಿನೆಂಟು ವರುಷ

ಕಂಡವರ ಕಣ್ಗೆ ಹರುಷ !

ಚೈತ್ರದಲಿ ಮರ ಮರಕೆ

ಚಿಗುರು ಹೂ ಕಾಯಿ ಹಣ್ಣು

ನೋಡಲಿದ ಸಾಕೇನು

ಬರಿ ಎರಡು ಕಣ್ಣು ?

ಕಣ್ಣ ಕುಡಿ ಬೆಳಕು ಲಕಲಕ ಹೊಳೆದು ಜಾರಿತ್ತು

ಝೋಲಿ ಹೊಡೆದುರುಳಿತ್ತು

ಹಾದಿ ಬೀದಿ !

ಓ ಇದು ಎಂಥ ಮೋಡಿ !

ಹಗುರಾಗಿ ಬೀಸಿ ಬಂದಿಹ ಗಾಳಿ-ರತಿಗಾರ

ಇವಳ ಕೂದಲಿನಲ್ಲಿ ಬೆರಳಾಡಿಸಿ

ಒಳಸೇರಿ ತೆಳುವಾದ ಸೆರಗ ಸರಿಸಿ

ಎದೆಗಿಳಿದು ರಮಿಸಿ !

೩.

ಇಂಥ ಚೈತ್ರದ ಸುಗ್ಗಿ ಸಂಪತ್ತು ನಿಂತಿಹುದು

ತನ್ನೊಲವ ಬಯಕೆಯನ್ನು ಎದೆ ತುಂಬಿಸಿ

ಈ ನೆಲದ ಪದರು ಪದರಿನ ಕೆಳಗೆ

ಅತೃಪ್ತ ಲಾವ ಕುದಿಸಿ

ಬರಿಯೊಡಲ ಬಯಕೆ ಬಂಗಾರ ಮರಿ ಚಿಗರಿಯಾಗಿ

ನೀರಡಿಸಿ ಹುಡುಕಿಹುದು ಸುತ್ತು ತಿರುಗಿ.

೪.

ಓ…

ಇದು ಎಂಥ ಬೇಗೆ ಒಳ ಹೊರಗು ತಾಯಿ

ಬರಲಾರೆನೆ ಒಮ್ಮೆ ಕರುಣಾಮಯಿ

ಒಮ್ಮೆ ಕಾಮನ ಕಾಲ ಹಿಡಿಯಲೇನು

ಚಂದ್ರಮಗೆ ಸೆರಗೊಡ್ಡಿ ಬೇಡಲೇನು

***

ಶೂನ್ಯಾಕಾಶದಲಿ ಮೋಡ ಸಾಗಿಹವು

ನೂರಾರು ಸಾಲು ಸಾಲು

ಒಂದಾದರೂ ಇಳಿದು ಸುರಿಸಬಾರದೆ ನೀರು

ನೋಡಬಾರದೆ ನಿಂತು ನೆಲದ ಗೋಳು!

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)