‘ಸುವರ್ಣ ಸಂಪುಟ' (ಭಾಗ ೯೭) - ಕೆ ಎಸ್ ನಿಸಾರ್ ಅಹಮದ್

‘ಸುವರ್ಣ ಸಂಪುಟ' (ಭಾಗ ೯೭) - ಕೆ ಎಸ್ ನಿಸಾರ್ ಅಹಮದ್

‘ನಿತ್ಯೋತ್ಸವ' ದ ಕವಿ ಎಂದೇ ಹೆಸರುವಾಸಿಯಾಗಿದ್ದವರು ಕೆ ಎಸ್ ನಿಸಾರ್ ಅಹಮದ್ ಅವರು. ಇವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ ಎಂದು. ಇವರು ಹುಟ್ಟಿದ್ದು ಫೆಬ್ರವರಿ ೫, ೧೯೩೬ರಲ್ಲಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಇವರು ಬರೆದ ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಕವಿತೆಯು ಬಹಳ ಜನಪ್ರಿಯವಾಗಿ ಇವರಿಗೆ ‘ನಿತ್ಯೋತ್ಸವ' ದ ಕವಿ ಎಂಬ ಹೆಸರನ್ನು ತಂದುಕೊಟ್ಟಿತು.

ನಿಸಾರ್ ಅಹಮದರು ೧೯೫೯ರಲ್ಲಿ ಭೂರಚನಾ ಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಇವರು ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ವಿವಿಧ ಕಾಲೇಜುಗಳಲ್ಲಿ ದುಡಿದು ೧೯೯೪ರಲ್ಲಿ ನಿವೃತ್ತರಾದರು. 

ನಿಸಾರರು ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅವರು ಬರೆದ ಪ್ರಥಮ ಕವನ ‘ಜಲಪಾತ' ಕೈಬರಹದ ಪತ್ರಿಕೆಯೊಂದರಲ್ಲಿ ಅಚ್ಚಾಗಿತ್ತು. ಇವರ ‘ಗಾಂಧಿ ಬಜಾರು' ಮತ್ತು ‘ನಿತ್ಯೋತ್ಸವ' ಕವನ ಸಂಕಲನಗಳು ಬಹಳ ಖ್ಯಾತಿ ಪಡೆದಿವೆ. ೧೯೭೮ರಲ್ಲಿ ಇವರ ಕವಿತೆಗಳನ್ನು ಭಾವಗೀತೆಗಳಾಗಿ ಧ್ವನಿಮುದ್ರಿಸಿ ಹೊರತರಲಾಯಿತು. ಸುಗಮ ಸಂಗೀತ ಕ್ಷೇತ್ರದಲ್ಲಿ ನಿತ್ಯೋತ್ಸವದ ಕವಿತೆಗಳು ಬಹಳ ಜನಪ್ರಿಯತೆಯನ್ನು ಗಳಿಸಿತು. ಇವರ 'ಕುರಿಗಳು ಸರ್ ಕುರಿಗಳು' ಎಂಬ ರಾಜಕೀಯ ವಿಡಂಬನಾ ಕೃತಿ ಬಹಳ ಖ್ಯಾತಿಯನ್ನು ಪಡೆಯಿತು. ಸಾರೇ ಜಹಾಂ ಸೇ ಅಚ್ಚಾ ಎಂಬ ದೇಶಭಕ್ತಿ ಗೀತೆಯನ್ನು ‘ಭಾರತವು ನಮ್ಮ ದೇಶ' ಎಂಬ ಹೆಸರಿನಲ್ಲಿ ಅನುವಾದ ಮಾಡಿದರು. ‘ಬೆಣ್ಣೆ ಕದ್ದ ನಮ್ಮ ಕೃಷ್ಣ' ಕವನವು ಇವರಿಗೆ ಹೆಸರು ತಂದುಕೊಟ್ಟ ಕೃತಿ.

ಇವರು ಸುಮಾರು ೨೧ ಕವನ ಸಂಕಲನಗಳು, ೧೪ ವೈಚಾರಿಕ ಕೃತಿಗಳು, ೫ ಮಕ್ಕಳ ಸಾಹಿತ್ಯ, ೫ ಅನುವಾದ ಕೃತಿಗಳು ಹಾಗೂ ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ. ಇವರ ಕೆಲವು ಕವನ ಸಂಕಲನಗಳೆಂದರೆ ‘ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಿತ್ಯೋತ್ಸವ, ಅನಾಮಿಕ ಆಂಗ್ಲರು, ಸಮಗ್ರ ಕವಿತೆಗಳು, ನವೋಲ್ಲಾಸ, ಸಮಗ್ರ ಭಾವಗೀತೆಗಳು, ಆಕಾಶಕ್ಕೆ ಸರಹದ್ದುಗಳಿಲ್ಲ’ ಇತ್ಯಾದಿ. ‘ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ’ ಇವರು ಬರೆದ ಗದ್ಯ ಸಾಹಿತ್ಯ. ಷೇಕ್ಸ್ ಪಿಯರ್ ನ ‘ಒಥೆಲ್ಲೋ’ ನಾಟಕವನ್ನು ಕನ್ನಡಾನುವಾದ ಮಾಡಿದ್ದಾರೆ. ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟವನ್ನು ‘ಅಮ್ಮ,ಆಚಾರ ಮತ್ತು ನಾನು' ಎಂಬ ಹೆಸರಿನಲ್ಲಿ ಕನ್ನಡಾನುವಾದ ಮಾಡಿದ್ದಾರೆ.

ನಿಸಾರ್ ಅಹಮದ್ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ೨೦೦೮ರಲ್ಲಿ ಪದ್ಮಶ್ರೀ, ೨೦೦೬ರಲ್ಲಿ ಮಾಸ್ತಿ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ (೨೦೦೩), ಅರಸು ಪ್ರಶಸ್ತಿಗಳು ಲಭಿಸಿವೆ. ಇವರು ೨೦೦೬ರ ಡಿಸೆಂಬರ್ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಜರುಗಿದ ೭೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಿಸಾರ್ ಅಹಮದ್ ಇವರು ತಮ್ಮ ೮೪ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಮೇ ೩, ೨೦೨೦ರಂದು ನಿಧನ ಹೊಂದಿದರು.

ನಿಸಾರ್ ಅಹಮದ್ ಅವರ ೪ ಕವನಗಳು ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿವೆ. ಅವುಗಳೆಂದರೆ ಪಂಜರದ ಗಿಣಿ, ಕುರಿಗಳು ಸರ್ ಕುರಿಗಳು, ಕಾರವಾರದ ಕಡಲ ದಂಡೆಯಲ್ಲಿ ಮತ್ತು ನವೋದಯ. ಈ ಕವನಗಳಿಂದ ನಾವು ಒಂದು ಕವನವನ್ನು ಆಯ್ದು ಪ್ರಕಟಿಸಿದ್ದೇವೆ. 

ಕಾರವಾರದ ಕಡಲ ದಂಡೆಯಲ್ಲಿ

ಅಮೃತ ಮಂಥನ ಮುಗಿಯೆ ಆಯಾಸ ಪರಿಹಾರ

ಕೆಂದು ಶರದಿಯನುಳಿದು ಮಿಲುಗಾಡದೊರಗಿರುವ

ವಾಸುಕಿಯ ತೆರೆದೊಳಿದೆ ದಡದ ಮೇಲಿನ ರಸ್ತೆ.

ಹಿನ್ನಲೆಗೆ ಗಂಭೀರ ಮಲಯ ಮಹಿಧರ ವಿಹುದು

ಮಂದರ ತೆರದಲ್ಲಿ ; ಕಡೆಹದಲಿ ಅಂಟಿರುವ

ಅಮೃತ ಬಿಂದುಗಳಂತೆ ಬೆಳ್ಳಗಿನ ಸೌಧಗಳು

ಮೇಲೆ ಕಂಗೊಳಿಸುತಿವೆ ಕಿರಿದಾಗಿ.

 

ಕಾಳಿನದಿ ಸಂಗಮದವರೆಗು ಹಾಸಿದೆ ಮರಳು

ಶಂಖದಾಕಾರದಲಿ ; ಸಾಗರದ ಅಂಚಿನಲಿ

ನಿಂತು ಸೀರೆಯನೆತ್ತಿ ಕೈಯಲ್ಲಿ ಹಿಡಿದಿರುವ

ಚೆಲುವೆ ಕೊಂಕಣಿ ಹೆಣ್ಣ ನುಣ್ದೊಡೆಯ ಬಣ್ಣವಿದೆ.

ಉಪಯೋಗಿಸದೆ ಕೆಡದ ಮುರುಕುದೋಣಿಯ ತಳದ ಹಾಗೆ,

ಮೀನ ನಾಯುತಲಿರುವ ಬೆಸ್ತ ಹೆಣ್ಣಿನ ಕಿವಿಯ ಓಲೆ ಹಾಗೆ,

ಕೈಯ ಕುಕ್ಕೆಯ ಬಿದುರ ಕಪ್ಪು ಬೆತ್ತದ ಹಾಗೆ,

ಮರಳಿಹುದು ಸಮೆ ಸಮೆದು ನುಣುಪಾಗಿ.

 

ಸಾಮು ಮಾಡುತ ಕಡಲಿನೊಡಲ ಹೆಗ್ಗುರುಡಿಯಲಿ

ಅಲೆಯ ಮೇಲಲೆ ಹಾಯ್ದು ಹೋರುತಿರುವೆ ;

ರುದ್ರಾಟ್ಟ ಹಾಸದಲಿ ಚೀರುತಿವೆ.

ದೂರದಲ್ಲಗೊ ಅಲ್ಲಿ, ರಾಜಘಡದ ದ್ವೀಪ

ಆಳದಿಂದೆದ್ದಿರುವ ಜಲ ಕನ್ಯೆಯಂತಿಹದು:

ಅಲ್ಲಿ ಬೆಳೆದಿಹದ ವೃಕ್ಷ ಸ್ಪಷ್ಟ ರೇಖೆಗಳು

ಬಾಸೆಯಂತಿವೆ ; ಮೇಲೆ ನೆಟ್ಟ ದೀಪಸ್ತಂಭ,

ಹದಿಬದಿಯ ಹಣೆಯಲ್ಲಿ ನೆಲಸಿ ಶೀಲವ ಕಾಯ್ವ

ತಿಲಕದಚ್ಚರಿನಂತೆ ಸುತ್ತಲೂ ನಿಟ್ಟಿಸಿದೆ

ತನ್ನ ಬೆಳಕಿನ ದಿಟ್ಟಿಯಿಂದ ಗಂಧದ ಚಕ್ಕೆ

ಉರಿದುರಿದು ಬರಿ ಬೂದಿಯಾದರೂ ಸೌಗಂಧ

ಸುತ್ತ ಹರಡಿರುವಂತೆ ; ಅನುಭವವು ಮುಗಿದರೂ

ಅದರ ಸಂವೇದನೆಯೆ ಸ್ಮೃತಿಯಾಗಿ ಉಳಿವಂತೆ ;

ಕಾವ್ಯದ ಧ್ವನಿಯಂತೆ, ರವಿಯಸ್ತಮಿಸಿದರೂ

ನಭಕೆ ಮೆತ್ತಿದೆ ರಾಗವೈಭವ ಶ್ರೀ ಶೋಭೆ.

 

ಹೆದ್ದೆರೆಯನೇರೇರಿ ತೂಗಿ ಬರುತಿವೆ ದೋಣಿ : 

ಬೆಸ್ತಹೆಣ್ಣಿನ ಬತ್ತಲೆದೆಯ ಬದುಕಿನ ತೆರದಿ ;

ಮೊಹರಮ್ಮಿನಲಿ ಊರ ಮೆರವಣಿಗೆ ಹೊರಟಿರುವ

ತಾಬೂತಿನಗ್ರದಲಿ ಒಲೆವ ಗೋಪುರದಂತೆ.

ಬೆಸ್ತರಿಗೊ ಹರಡಿದರು ದಡದಲ್ಲಿ ಬಲೆಯನ್ನು

ಬೆಳ್ಳಿನಾಣ್ಯಗಳಂಥ ಕಿರುಮೀನು ಪುಟಿಯುತಿವೆ

ಕಾದ ಕಾವಲಿಯಲ್ಲಿ ಸುರಿದ ಕಾಳಿನ ಹಾಗೆ-

ಗೂಢ ಚಿತ್ತ ಸಮುದ್ರ, ಸ್ವಪ್ರತಿಭೆ ಹಿರಿಯ ಬಲೆ

ಭಾವಗಳೆ ಮೀನುಗಳು ಎನಿಸಿಹುದು ನನಗೆ.

ಮುನ್ನೀರಿನಗಲಕ್ಕೆ, ಆಳಕ್ಕೆ, ಧೀರತೆಗೆ

ಅಲ್ಪತೆಯ ಪರಿಸರವೆ? ಅರಮನೆಯ ಪಕ್ಕದಲಿ

ಇರಬಹುದೆ ಹೊಲಗೇರಿ ? ತಕ್ಕ ಸಾನ್ನಿಧ್ಯವಿದೆ

ಸಲಿಲ ನಿರ್ಘೋಷಕ್ಕೆ ! ಮೇಲೆ ನೀಲಾಕಾಶ,

ಬಲಕೆ ಮಲಯಾವೇಶ, ಬದಿಗೆ ಅದ್ಭುತ ರಮ್ಯ

ಪ್ರಕೃತಿಮಾತೆಯ ಹಚ್ಚಹಸಿರು ವೇಷ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)