‘ಹಮಾರಾ ಬಜಾಜ್’ - ಮರೆಯಲಾಗದ ನೆನಪುಗಳು !

‘ಹಮಾರಾ ಬಜಾಜ್’ - ಮರೆಯಲಾಗದ ನೆನಪುಗಳು !

೧೯೯೫ರ ಸಮಯ, ನಾನು ನನ್ನ ಚಿಕ್ಕಪ್ಪನ ಜೊತೆ ಇದ್ದೆ. ಅವರು ಇದ್ದದ್ದು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ. ಪುಟ್ಟ ಬಂದರು ಪ್ರದೇಶವಾದ ಈ ಊರಿನಲ್ಲಿ ನಮ್ಮದೇ ಊರಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ನ ಶಾಖೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ನಾನು ಆಗ ಪಿಯುಸಿ ಮುಗಿಸಿದ್ದನಷ್ಟೇ. ಯುವ ಮನಸ್ಸು, ಬೈಕ್ ಬಿಡುವ ಹುಮ್ಮಸ್ಸು. ಚಿಕ್ಕಪ್ಪನವರು ಬಾಡಿಗೆಗೆ ಇದ್ದ ಮತ್ತೊಂದು ಬದಿಯಲ್ಲಿ ಒಂದು ಗುಜರಾತಿ ಕುಟುಂಬ ಇತ್ತು. ಮಪಾರಾ ಅಂಕಲ್ ಎಂದೇ ಕರೆಯುತ್ತಿದ್ದ ಆ ವ್ಯಕ್ತಿಯ ಬಳಿ ಅವರ ಕಂಪೆನಿ ನೀಡಿದ ಒಂದು ಬೈಕ್ (?!) ಇತ್ತು. ಅದು ಬಜಾಜ್ ಎಂ-80.

ಈ ಬಜಾಜ್ ಎಂ-80 ಒಂದು ಭಯಂಕರ ವಾಹನ, ಯಾಕೆ ಅಂತೀರಾ? ಒಂದೆಡೆ ಬೈಕ್ ಅಲ್ಲ, ಮತ್ತೊಂದೆಡೆ ಸ್ಕೂಟರ್ ಅಲ್ಲ. ಕಡೇ ಪಕ್ಷ ಟಿವಿಎಸ್ ಜೊತೆಗಾದ್ರೂ ಸೇರಿಸುವ ಅಂತ ಅಂದುಕೊಂಡ್ರೆ ಇದಕ್ಕೆ ಗೇರ್ ಕೂಡಾ ಇದೆ. ಆಕಾರ, ರಚನೆ ಎಲ್ಲವೂ ವಿಭಿನ್ನ. ಬಜಾಜ್ ಸಂಸ್ಥೆಯವರಿಗೆ ಈ ರೀತಿಯ ಒಂದು ವಾಹನ ತಯಾರಿಸುವ ಯೋಚನೆ ಹೇಗಾದ್ರೂ ಬಂತು ಅನ್ನೋದೇ ಅಚ್ಚರಿಯ ಸಂಗತಿ. (೯೦ರ ದಶಕದಲ್ಲಿದ್ದ ಈ ವಾಹನವನ್ನು ಬಹುತೇಕರು ನೋಡಿಯೇ ಇರುತ್ತೀರಿ)

ಮಪಾರಾ ಅಂಕಲ್ ಗೆ ವಾಹನ ಚಲಾಯಿಸಲು ಗೊತ್ತಿಲ್ಲದ ಕಾರಣ ಅವರ ಕಚೇರಿಯಿಂದ ಓರ್ವ ಸೈಕಲ್ ನಲ್ಲಿ ಇವರ ಮನೆಗೆ ಆಗಮಿಸಿ ಇವರನ್ನು ಆ ಬಜಾಜ್ ಎಂ-80 ವಾಹನದಲ್ಲಿ ಆಫೀಸ್ ಗೆ ಕರೆದುಕೊಂಡು ಹೋಗುತ್ತಿದ್ದ. ಒಂದು ದಿನ ರಾತ್ರಿ ಏನಾಯಿತೆಂದರೆ ಮಪಾರಾ ಅಂಕಲ್ ಮನೆಗೆ ಅವರ ಸಂಬಂಧಿಕರೊಬ್ಬರು ಬಂದಿದ್ದರು. ಅವರು ಹೊರಡುವಾಗ ತುಂಬಾನೇ ತಡ ಆಯಿತು. ರಾತ್ರಿಯ ಸಮಯವಾದುದರಿಂದ ರಿಕ್ಷಾ ಸಿಗುವುದು ಬಹಳ ಸಮಸ್ಯೆಯಾಯಿತು. ಕಡೆಗೆ ಅಂಕಲ್ ನನ್ನ ಹತ್ತಿರ ಬಂದು ಅವರ ಬೈಕ್ ನಲ್ಲಿ ಆ ಸಂಬಂಧಿ ಮಹಿಳೆಯನ್ನು ಬಿಡಲು ಕೇಳಿಕೊಂಡರು. ನಾನಾದರೂ ಆ ಸಮಯಕ್ಕೆ ‘ಎಲ್’ ಬೋರ್ಡ್. ಸ್ವಲ್ಪ ಬೈಕ್ ಬಿಡುತ್ತಿದ್ದೆನಾದರೂ ಕೈಯಲ್ಲಿ ಗೇರ್ ಬದಲಿಸುವ ವಾಹನವನ್ನು ಚಲಾಯಿಸಿಯೇ ಇರಲಿಲ್ಲ. ನನ್ನ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಸಹಾ ಇರಲಿಲ್ಲ. ಆದರೂ ಆ ಸಮಯ ಒಂದು ಹುಂಬ ಧೈರ್ಯ ಇತ್ತು. ಸರಿ, ಎಂದು ಆ ಮಹಿಳೆಯನ್ನು ಬಜಾಜ್ ಎಂ-80ಯಲ್ಲಿ ಹಿಂದುಗಡೆ ಕೂರಿಸಿ ಅವರನ್ನು ಮನೆಗೆ ಬಿಡಲು ಹೊರಟೆ. ರಾತ್ರಿಯ ಸಮಯವಾದುದರಿಂದ ಪೋಲೀಸರು ಇರಲಿಕ್ಕಿಲ್ಲ ಎಂಬ ನಂಬಿಕೆ. ವಾಹನಗಳ ಓಡಾಟವೂ ಕಮ್ಮಿ ಇತ್ತು. ಹಾಗೂ ಹೀಗೂ ಆ ಮಹಿಳೆಯನ್ನು ಅವರ ಮನೆಗೆ ತಲುಪಿಸಿ ಅವರು ಕೊಟ್ಟ ‘ಮಸಾಲಾ ಟೀ’ ಕುಡಿದು ಒಂದು ಡಜನ್ “ಥ್ಯಾಂಕ್ಸ್' ಜೊತೆ ಮನೆಗೆ ಹಿಂದಿರುಗಿದೆ. ಹೀಗೆ ಮೊದಲ ಬಾರಿ ‘ಬಜಾಜ್' ಸಂಸ್ಥೆಯ ಒಂದು ವಾಹನವನ್ನು ಚಲಾಯಿಸಿದ ಅನುಭವವಾಯಿತು. ನಂತರದ ದಿನಗಳಲ್ಲಿ ಅಂಕಲ್ ಅವರನ್ನು ಹಲವಾರು ಸಲ ಅವರ ಕಂಪೆನಿಗೆ ಬಿಟ್ಟು ಬಂದೆ, ಅವರ ಮಗನನ್ನು ಕರೆದುಕೊಂಡು ಜಾಲಿ ರೈಡ್ ಹೋಗುತ್ತಿದ್ದೆ. ಹೀಗೆ ಬಜಾಜ್ ಎಂ-80ಯಲ್ಲಿ ‘ಸ್ಟಡಿ' ಆದೆ. ೬ ತಿಂಗಳು ನಾನು ಗುಜರಾತಿನಲ್ಲಿದ್ದೆ. ಮರಳಿ ಮಂಗಳೂರಿಗೆ ಬಂದು ಪದವಿ ಮುಗಿಸಿ ಒಂದು ಪತ್ರಿಕೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.

ನಮ್ಮ ಕಚೇರಿಯ ಸಿಬ್ಬಂದಿಯೊಬ್ಬರ ಬಳಿ ‘ಬಜಾಜ್ ಚೇತಕ್' ಸ್ಕೂಟರ್ ಇತ್ತು. ಇದು ೧೯೯೮ರ ಕಥೆ. ಆಗ ಇನ್ನೂ ಸ್ಕೂಟರ್ ಗೆ ಬೇಡಿಕೆ ಇತ್ತು. ನಂತರದ ದಿನಗಳಲ್ಲಿ ‘ಆಕ್ಟೀವಾ’ ದಂತಹ ಗೇರ್ ರಹಿತ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿದ ನಂತರ ಗೇರ್ ಇರುವ ಅದರಲ್ಲೂ ಕೈಯಿಂದ ಗೇರ್ ಬದಲಾಯಿಸುವ ವಾಹನಗಳ ಸಂಖ್ಯೆ ಇಳಿಮುಖವಾಗತೊಡಗಿತು. ಕಂಪೆನಿಗಳು ಅಂತಹ ಸ್ಕೂಟರ್ ನ ಉತ್ಪಾದನೆಯನ್ನೂ ಸ್ಥಗಿತಗೊಳಿಸಿದವು. ಬಹಳ ತುರ್ತು ಸಂದರ್ಭದಲ್ಲಿ ನನಗೂ ಆ ಸ್ಕೂಟರ್ ಉಪಯೋಗಿಸಲು ಕೊಡುತ್ತಿದ್ದರು. ಬಜಾಜ್ ಎಂ-80 ಚಲಾಯಿಸಿದ ಅನುಭವ ಇದ್ದುದರಿಂದ ಆ ಚೇತಕ್ ಸ್ಕೂಟರ್ ಅನ್ನು ನಾನು ಸಲೀಸಾಗಿಯೇ ಚಲಾಯಿಸುತ್ತಿದ್ದೆ. ಆ ಸ್ಕೂಟರ್ ಸಹಾ ಉತ್ತಮ ಚಾಲನಾ ವ್ಯವಸ್ಥೆಯಲ್ಲಿದ್ದುದರಿಂದ ಚಲಾಯಿಸಲೂ ಖುಷಿಯಾಗುತ್ತಿತ್ತು. ಕ್ರಮೇಣ ಆ ಸ್ಕೂಟರ್ ಮಾರಿಬಿಟ್ಟರು. ಹೀಗೆ ನನ್ನ ಬಜಾಜ್ ಚೇತಕ್ ಜೊತೆಗಿನ ಸಂಬಂಧ ಕಡಿದು ಹೋಯಿತು. ಕಾಲ ಸರಿದಂತೆ ‘ಚೇತಕ್' ನೆನಪಾಗಿ ಮಾತ್ರ ಉಳಿದು ಬಿಟ್ಟಿತು. 

ಈಗಿನ ಯುವಕರು ಕೈಯಲ್ಲಿ ಗೇರ್ ಬದಲಾಯಿಸುವ ಸ್ಕೂಟರ್ ಅನ್ನು ನೋಡಿಯೇ ಇರಲಿಕ್ಕಿಲ್ಲ. ಆದರೆ ಅಂದಿನ ಸಮಯದಲ್ಲೇ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿತ್ತು ಎಂದು ಈಗ ಅರ್ಥವಾಗುತ್ತದೆ. ಅಂದಿನ ವಾಹನಗಳು ಮೈಲೇಜ್ ಕಮ್ಮಿ ಕೊಡುತ್ತಿದ್ದರೂ ತುಂಬಾ ಗಟ್ಟಿಯಾಗಿರುತ್ತಿದ್ದವು. ಇದೆಲ್ಲಾ ಈಗ ಯಾಕೆ ನೆನಪಾಗುತ್ತಿದೆ ಅಂದರೆ....

***

ಕಳೆದ ಶನಿವಾರ (ಫೆಬ್ರವರಿ ೧೨, ೨೦೨೨)ದಂದು ಬಜಾಜ್ ಸಮೂಹಗಳ ಮುಖ್ಯಸ್ಥರಾಗಿದ್ದ ರಾಹುಲ್ ಬಜಾಜ್ ಅವರು ನಿಧನರಾದ ಸುದ್ದಿ ತಿಳಿದಾಗ ನನಗೆ ಮೊದಲು ನೆನಪಾದದ್ದೇ ‘ಹಮಾರಾ ಬಜಾಜ್' ಜಾಹೀರಾತು. ಆ ಸಮಯ ಅದೆಷ್ಟು ಜನಪ್ರಿಯವಾಗಿತ್ತು ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಬಜಾಜ್ ಸನ್ನಿಯಂಥಹ ಗೇರ್ ರಹಿತ ವಾಹನದಿಂದ ಬಜಾಜ್ ಪಲ್ಸರ್ ಎಂಬ ಬೈಕ್ ತನಕದ ಪಯಣದ ಹಾದಿ ಸುಲಭವಾಗಿಯೇನೂ ಇರಲಿಲ್ಲ. ಆದರೆ ರಾಹುಲ್ ಬಜಾಜ್ ಈ ಮುಳ್ಳುಗಳ ದಾರಿಯನ್ನು ಹೂವಿನ ಹಾಸಿಗೆಯಂತೆ ಪರಿವರ್ತಿಸಿಕೊಂಡರು. ಆಟೋ ರಿಕ್ಷಾದಲ್ಲೂ ಹೊಸ ಹೊಸ ಮಾಡೆಲ್ ಗಳನ್ನು ಹೊರತಂದರು. ಮಾರುಕಟ್ಟೆಯಲ್ಲಿ ‘ಬಜಾಜ್' ಸಂಸ್ಥೆಯ ಹೆಸರು ಚಿರಸ್ಥಾಯಿಯಾಗುವಂತೆ ನೋಡಿಕೊಂಡರು. 

ಜೂನ್ ೩೦, ೧೯೩೮ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ರಾಹುಲ್ ಬಜಾಜ್ ಅವರದ್ದು ವ್ಯಾಪಾರಸ್ಥ ಕುಟುಂಬ. ಅವರ ಅಜ್ಜ ಜಮ್ನಾಲಾಲ್ ಬಜಾಜ್ ಅವರು ಸ್ಥಾಪಿಸಿದ್ದೇ ಈ ಬಜಾಜ್ ಕಂಪೆನಿ. ೧೯೨೬ರಲ್ಲಿ ಬಜಾಜ್ ಸಂಸ್ಥೆಯನ್ನು ಸ್ಥಾಪಿಸಿ, ಅದನ್ನು ಎದ್ದು ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಜಮ್ನಾಲಾಲ್ ಬಜಾಜ್. ಅವರ ನಂತರ ೧೯೪೨ರಲ್ಲಿ ಈ ಸಂಸ್ಥೆಯ ಹೊಣೆಗಾರಿಕೆಯನ್ನು ಅವರ ಮಗ ಕಮಲಾನಯನ್ ಬಜಾಜ್ ಅವರು ಹೊತ್ತುಕೊಂಡರು. ಇವರೇ ರಾಹುಲ್ ಬಜಾಜ್ ಅವರ ತಂದೆ. 

ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ, ಬಾಂಬೆ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದ ಬಳಿಕ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿಯನ್ನು ಪಡೆದು ಭಾರತಕ್ಕೆ ಹಿಂದಿರುಗಿ ಕಂಪೆನಿಯ ಸಹಾಯಕ ವ್ಯವಸ್ಥಾಪಕ ಹುದ್ದೆಯಲ್ಲಿ ದುಡಿದರು. ಬಾಲ್ಯದಿಂದಲೇ ‘ಫಿಯರ್ ಲೆಸ್' ಎಂಬ ಅಡ್ಡ ಹೆಸರನ್ನು ಹೊಂದಿದ್ದ ರಾಹುಲ್ ಬಜಾಜ್ ನೇರ ಮಾತುಗಳಿಗೆ ಹೆಸರುವಾಸಿಯಾಗಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿದ್ದ ‘ಲೈಸೆನ್ಸ್ ರಾಜ್' ಕಾಯ್ದೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಈ ಕಾಯ್ದೆಯ ಪರಿಣಾಮ ಒಬ್ಬ ವ್ಯಕ್ತಿ ಸ್ಕೂಟರ್ ಬುಕ್ ಮಾಡಿದರೆ ಅದು ಸಿಗಲು ಆತನು ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಇತ್ತು. ‘ಈ ಕಾಯ್ದೆಯನ್ನು ರದ್ದುಗೊಳಿಸುವ ಸಲುವಾಗಿ ನಾನು ಜೈಲಿಗೆ ಹೋಗಲು ಬೇಕಾದರೂ ಸಿದ್ಧ’ ಎಂದು ರಾಹುಲ್ ಬಜಾಜ್ ಹೇಳಿದ್ದರು. ನಂತರದ ದಿನಗಳಲ್ಲೂ ಯಾವುದೇ ಸರಕಾರವಿದ್ದರೂ ತಮ್ಮ ಮಾತುಗಳನ್ನು ಹೇಳಲು ಅವರು ಹಿಂಜರಿಯುತ್ತಿರಲಿಲ್ಲ. ಕಳೆದ ವರ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೇ ‘ಈಗ ಯಾರನ್ನು ಸಹಾ ಟೀಕಿಸಲು ಸಾಧ್ಯವಾಗದಂತಹ ವಾತಾವರಣ ಇದೆ. ಉದ್ಯಮಕ್ಕೂ ಪೂರಕ ಪರಿಸ್ಥಿತಿ ಇಲ್ಲ. ಆದರೆ ಯಾರಿಗೂ ನೇರವಾಗಿ ಮಾತನಾಡಲು ಆಗದ ಪರಿಸ್ಥಿತಿ ಇದೆ. ಆದರೆ ನಾನು ಮಾತನಾಡುತ್ತೇನೆ' ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

೧೯೬೮ರಲ್ಲಿ ಬಜಾಜ್ ಕಂಪೆನಿಯ ಸಿ ಇ ಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕದ ಹತ್ತು -ಹದಿನೈದು ವರ್ಷಗಳು ಬಜಾಜ್ ಕಂಪೆನಿಯ ಪಾಲಿನ ಸುವರ್ಣ ಯುಗವಾಗಿತ್ತು. ೭೦-೮೦ರ ದಶಕದಲ್ಲಿ ಬಜಾಜ್ ಚೇತಕ್ ಬಹಳ ಮೋಡಿ ಮಾಡಿದ ಸ್ಕೂಟರ್. ದೇಶದಲ್ಲಿದ್ದ ದ್ವಿ ಚಕ್ರ ವಾಹನಗಳಲ್ಲಿ  ೫೦ ಶೇಕಡಾ ಮಂದಿಯಲ್ಲಿ ಈ ಸ್ಕೂಟರ್ ಇತ್ತು. ಮದುಮಗನಿಗೆ ಚೇತಕ್ ಸ್ಕೂಟರ್ ಉಡುಗೊರೆಯಾಗಿ ನೀಡುವುದು ಹೆಣ್ಣಿನ ಕಡೆಯವರಿಗೆ ಆ ಸಮಯದಲ್ಲಿ ಪ್ರತಿಷ್ಟೆಯ ಸಂಕೇತವಾಗಿತ್ತು. ಆದರೆ ಕ್ರಮೇಣ ಬದಲಾದ ಪರಿಸ್ಥಿತಿಯಲ್ಲಿ ಚೇತಕ್ ಸ್ಕೂಟರ್ ತೆರೆಮರೆಗೆ ಸಂದರೂ, ಪಲ್ಸರ್ ಎಂಬ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಉಂಟುಮಾಡಿತು. ಈಗಲೂ ಪಲ್ಸರ್, ಬಜಾಜ್ ಅವರ ಜನಪ್ರಿಯ ಬೈಕ್ ಗಳಲ್ಲಿ ಒಂದು. ಬಜಾಜ್ ಚೇತಕ್ ಸದ್ಯದಲ್ಲೇ ಇಲೆಕ್ಟ್ರಿಕ್ ವಾಹನದ ರೂಪದಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ ಎನ್ನುವ ಸಿಹಿ ಸುದ್ದಿ ಹರಡುತ್ತಿದೆ. 

೨೦೦೮ರಲ್ಲಿ ಬಜಾಜ್ ಸಂಸ್ಥೆಯನ್ನು ಮೂರು ಪಾಲು ಮಾಡಿ ತಮ್ಮ ಮೂವರು ಗಂಡು ಮಕ್ಕಳಿಗೆ ಬೇರೆ ಬೇರೆಯಾದ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಅವರ ನಿರ್ವಹಣೆಯಲ್ಲಿ ಬಜಾಜ್ ಆಟೋ, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಹೋಲ್ಡಿಂಗ್ ಕಂಪೆನಿಗಳು ಈಗ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ. 

ರಾಹುಲ್ ಬಜಾಜ್ ಅವರು ೨೦೦೬ರಲ್ಲಿ ಒಂದು ಅವಧಿಗೆ ರಾಜ್ಯ ಸಭಾ ಸದಸ್ಯರೂ ಆಗಿದ್ದರು. ಇವರ ಸಾಧನೆಯನ್ನು ಗಮನಿಸಿದ ಸರಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೨೦೦೫ರಲ್ಲಿ ಬಜಾಜ್ ಸಮೂಹದ ಮುಖ್ಯಸ್ಥ ಸ್ಥಾನವನ್ನು ತಮ್ಮ ಪುತ್ರ ರಾಜೀವ್ ಬಜಾಜ್ ಅವರಿಗೆ ವಹಿಸಿಕೊಟ್ಟಿದ್ದರು. ಕಳೆದ ವರ್ಷ ಕಂಪೆನಿಯ ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗಿದ್ದರು. 'ಕುರ್ತಾ’ ಇವರ ಅಚ್ಚುಮೆಚ್ಚಿನ ಉಡುಗೆಯಾಗಿತ್ತು. ಇವರ ಬಳಿ ಹಲವು ಬಗೆಯ ಕುರ್ತಾಗಳ ಸಂಗ್ರಹವಿತ್ತು. ಭಾರತದ ‘ಧೈರ್ಯವಂತ’ ಉದ್ಯಮಿಯ ನಿರ್ಗಮನ (೮೩ ವರ್ಷ) ಒಂದು ಶೂನ್ಯವನ್ನು ನಿರ್ಮಿಸಿದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಅವರ ಸಾಧನೆಯನ್ನು ಭಾರತ ಸದಾ ಕಾಲ ನೆನಪಿನಲ್ಲಿರಿಸಿಕೊಳ್ಳಲಿದೆ ಎನ್ನುವುದರಲ್ಲಿಯೂ ಯಾವುದೇ ಸಂಶಯವಿಲ್ಲ.

ಚಿತ್ರ ಕೃಪೆ: ಅಂತರ್ಜಾಲ ತಾಣ