‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೨) - ಕಾವ್ಯಾನಂದ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೨) - ಕಾವ್ಯಾನಂದ

ಸಿದ್ದಯ್ಯ ಪುರಾಣಿಕ ಇವರು ಇಟ್ಟುಕೊಂಡ ಕಾವ್ಯನಾಮವೇ ‘ಕಾವ್ಯಾನಂದ'. ಇವರು ಬಿ ಎ ಪದವೀಧರರು. ಇವರು ಅಂದಿನ ಮೈಸೂರು ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದವರು. ಇವರು ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ೧೯೫೫ರಲ್ಲಿ ಮೈಸೂರಿನಲ್ಲಿ ಜರುಗಿದ ಲೇಖಕರ ಗೋಷ್ಟಿಗೆ ಅಧ್ಯಕ್ಷರಾಗಿದ್ದರು.

ಇವರು ಬರೆದ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.

ಭಾವಸುಂದರಿ

ಕೇದಗೆಯ ರಸದಲ್ಲಿ ಕೇಸರದ ಹುಡಿಗಲಸಿ

ಮಾಡಿರುವ ಮುದ್ದಾದ ಕನ್ನೆ

ಅರುಣರಾಗದ ಕುಸುಮರಸಗೆಂಪಿನೊಳು ತೆಯ್ದು

ಆಗಿದೆ ನಿನ್ನ ಕೆನ್ನೆ?

 

ಮರಿದುಂಬಿಗಳ ಮಾಲೆ ಹಣೆಯ ಹಂದರಗಿಳಿಯ

ಬಿಟ್ಟಂತೆ ಬಳ್ಳಿಗುರುಳು

ಕರಿಮೋಡಗಳ ಬಾಚಿ ಚಿಕ್ಕ ಹೂಗಳನಿಟ್ಟು

ಹೆಣೆದಂತೆ ಇವಳ ಹೆರಳು

 

ಹಾಲಿನಾ ಹೊನಲಲ್ಲಿ ಚಂದಿರನ ಬಿಡಿನೆಳಲು

ಮೂಡಿರುವ ತೆರದಿವಳ ಮೊಗವು 

ಹೂವು ಬಾಯ್ದೆರೆದಂತೆ ಹಸು ಹಾಲಕರೆದಂತೆ

ಮುತ್ತುಗಳು ಸುರಿದಂತೆ ನಗೆಯು

 

ಬೆಳ್ದಿಂಗಳನು ಕಾಸಿ ಮಿಂಚು ಹೆಪ್ಪನು ಹಾಕಿ

ಕಪ್ಪಿನೊಪ್ಪವನಿಟ್ಟ ಕಣ್ಣು

ಬೆಳಕ ಭಟ್ಟಿಯಲಿಳಿಸಿ ಚೆಲುವಿನೆರಕವ ಹೊಯ್ದು

ಮೈಯ್ಯವಳು ಈ ಬಯಕೆ ಹೆಣ್ಣು

 

ಶತಕೋಟಿ ಜನಮನವನೊಮ್ಮೆಗೆ ಸೆರೆಗೈವ

ವಿಶ್ವಮೋಹಿನಿಯಿವಳುರನ್ನೆ

ಯಾರೆದೆಯ ಹೊಕ್ಕರೂ, ಯಾರೊಡನೆ ನಕ್ಕರೂ

ನಾನಿವಳ ಜಾರೆಯೆನ್ನೆ

 

ಹದಿನಾರು ಸಾಸಿರದ ಪತಿಯರಡನೊಮ್ಮೆಗೇ

ಕ್ರೀಡಿಸಿದ ಶ್ರೀಕೃಷ್ಣನಂತೆ-

ಕಣ್ಮುಚ್ಚಿ ಕಣ್ತೆರೆಯುವನಿತರಲಿ ಎಲ್ಲರೆದೆ

ತಣಿಸುವುದೇ ಇವಳ ಚಿಂತೆ

 

ಮುಖನೋಡಿ ಮಣೆಹಾಕುವಂಥ ವಂಚಕವೃತ್ತಿ

ಇವಳಲ್ಲಿಯೂ ಭೇದ ನೀತಿ

ಪ್ರತಿನರನ ಮತಿಯಷ್ಟೇ ಗುಣರೂಪ ಸಿಂಗರದಿ

ತೋರುವುದೇ ಇವಳ ನೀತಿ !

 

ಹೋಗೆನಲು ಹೋಗುವಳು ಬೇಡೆನಲು ಬಿಡುವಳು

ಬಾರೆನಲು ಬರುವಳಲ್ಲ

ಸರ್ವತಂತ್ರಸ್ವತಂತ್ರಳಿವಳಾಗಿಹಳು

ಯಾರ ದಾಕ್ಷಿಣ್ಯವೂ ಇವಳಿಗಿಲ್ಲ

 

ವಿಶ್ವಗೇಹಿನಿಯವಳು, ವಿಶ್ವಮೋಹಿನಿಯಿವಳು

ಸ್ಥಾಯಿ, ಸಂಚಾರಿ, ವಿಶ್ವವಿಹಾರಿ !

ಭಾವಾನುಭಾವೆಯು, ವಿಭಾವೆಯು, ವ್ಯಭಿಚಾರಿ

ರಸದಾಳಿ ಬಳ್ಳಿಯಾ ನಾರಿ !

 

ಮಿತ ಭಾಷಿಯಾದರೂ, ಹಿತಭಾಷಿ ಯಾಚೆಲುವೆ

ವೃತ್ತಿಯಲಿ ಬಹಳ ಕೃಪಣೆ !

ಆದರೂ ತನ್ನ ತಪಗೈದವಗೆ ತನ್ನನೇ 

ಕೊಟ್ಟುಬಿಡುವವಳು ನಿಪುಣೆ

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)