‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೩) - ವಿನಾಯಕ

‘ವಿನಾಯಕ' ಇದು ವಿನಾಯಕ ಕೃಷ್ಣ ಗೋಕಾಕ್ ಇವರ ಕಾವ್ಯನಾಮ, ಇವರು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದವರು. ಇವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯಲ್ಲಿರುವ ಕವಿಗಳು, ಕಾದಂಬರಿಕಾರರು, ವಿಮರ್ಶಕರು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಸಾಹಿತ್ಯ ವಿಷಯದಲ್ಲಿ ಇವರು ಪ್ರಥಮ ವರ್ಗದ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆಯ ಕನ್ನಡಿಗರು. ಇಂಗ್ಲೀಷಿನಲ್ಲಿಯೂ ಕವನ ಸಂಕಲನಗಳನ್ನೂ, ವಿಮರ್ಶಾತ್ಮಕ ಗ್ರಂಥಗಳನ್ನೂ ಭಾಷಾಶಾಸ್ತ್ರ ಮತ್ತು ಸಾಹಿತ್ಯ ಶಾಸ್ತ್ರ ಗ್ರಂಥಗಳನ್ನೂ ಬರೆದಿದ್ದಾರೆ. ಕನ್ನಡದಲ್ಲಿ ಅನೇಕ ಕವನ ಸಂಕಲನಗಳನ್ನೂ, ಪ್ರಬಂಧಗಳನ್ನೂ, ನಾಟಕಗಳನ್ನೂ ರಚಿಸಿದ್ದಾರೆ. ‘ನವ್ಯಕಾವ್ಯದ' ಪುರೋಧರಲ್ಲಿ ಇವರು ಪ್ರಥಮ ಸ್ಥಾನೀಯರು. ಅದ್ವಿತೀಯ ವಾಗ್ಮಿಗಳು ! ಕನ್ನಡ ಸಮ್ಮೇಳನ (೧೯೫೦) ಕ್ಕೆ ಅಧ್ಯಕ್ಷರಾಗಿದ್ದವರು. ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಓರ್ವ ಉತ್ತಮ ಶಿಕ್ಷಣ ತಜ್ಞರಾಗಿದ್ದರು.
‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆರಿಸಿ ಇಲ್ಲಿ ಪ್ರಕಟಿಸಲಾಗಿದೆ.
ಭಾವಗೀತೆ
ಇಲ್ಲೆ ಇರು, ಅಲ್ಲೆ ಹೋಗಿ ಮಲ್ಲಿಗೆಯನು ತರುವೆನು ;
ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು.
ಹೋದ ಮೇಲೆ ಸುತ್ತಬೇಕು ಏಳುಕೋಟೆದ್ವಾರವು !
ಹಾದಿಯಲ್ಲಿ ತೀರದಂಥ ದುಃಖವಿಹುವಪಾರವು !
ಸಾಧಿಸುತ್ತ ಜಯಿಸುವುದೇ ಬಾಳುವವರ ಸಾರವು !
ಇಲ್ಲಿ ಕೊನರದಂಥ ನೋವು ಫಲಿಸಿದಂಥ ಯಾತನೆ
ಇಲ್ಲಿ ನಿತ್ಯ ಕೊಳೆಯುತಿಹುದು ನನ್ನ ಜೀವ ಚೇತನ !
ಇನ್ನು ಮೊಳಗಿಸಿದರೆ ಮೊಳಗಿಸುವೆನು ಅದರ ಯಾತನೆ !!
ನವಗ್ರಹಗಳ ನಡದಾಟ ಮುಗಿಲ ಗಡಿಯ ಮೀರಿಯೂ
ದಿಕ್ಕುತಪ್ಪುತಲೆವ ತಾರೆಗಳಿಗೆ ದಾರಿ ತೋರಿಯೂ
ಕತ್ತಲಿದ್ದ ತಾಣದಲ್ಲಿ ಎದೆಯ ಬೆಳಕ ಬೀರಿಯೂ,
ಗಾನದುನ್ಮಾದವೇರಿ ನಡೆದ ರಾಜ ಭೃಂಗವು
ದೇವ ಕನ್ನಿಕೆಯರು ನುಡಿಸುವಂಥ ಮೃದು ಮೃದಂಗವು-
ಇದಕು ಹಿರಿದು ಎದೆಯಲಿರುವ ಭಾವನಾತರಂಗವು !
ಕೋಟಿ ವರುಷದಾಚೆ ಜನಿಸಿದಂಥ ಜೀವದಾಸೆಯು
ತೀರಬಹುದು ಹಿಂಗಬಹುದು ಅಂದಿನಾ ಪಿಪಾಸೆಯು !
ಇಂದೆ ರುಚಿಕರವಾಗಬಹುದು ನನ್ನ ದೈವರೇಷೆಯು !
(‘ಹೊಸಗನ್ನಡ ಕಾವ್ಯಶ್ರೀ’ಕೃತಿಯಿಂದ ಆಯ್ದ ಕವನ)