‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೦) - ಚನ್ನವೀರ ಕಣವಿ
ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ ಗಳಿಸಿದರು.
ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (೧೯೫೨) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ ೧೯೫೮ರಲ್ಲಿ ಅದರ ನಿರ್ದೇಶಕರಾದರು.
ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ಸಾಧನೆಗಾಗಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೧), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೫), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೯), ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮರಿಟಿಸ್ ಫೆಲೋಷಿಪ್,, ಪಂಪ ಪ್ರಶಸ್ತಿ (೧೯೯೯), ಇತ್ಯಾದಿ. ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೯೬) ಹಾಸನದಲ್ಲಿ ಜರುಗಿದಾಗ ಕಣವಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.
ಕಣವಿ ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಕಣವಿ ಅವರ ಕಾವ್ಯಸಂಕಲನಗಳಲ್ಲಿ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಪ್ರಸಿದ್ಧವಾಗಿವೆ. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.
ಚನ್ನವೀರ ಕಣವಿ ಅವರ ಎರಡು ಕವನಗಳು ಹೊಸಗನ್ನಡ ಕಾವ್ಯಶ್ರೀಯಲ್ಲಿ ಪ್ರಕಟವಾಗಿದ್ದು ಒಂದು ಕವನ ಈಗಾಗಲೇ ಪ್ರಕಟವಾಗಿದೆ. ಮತ್ತೊಂದು ಕವನವವನ್ನು ಆರಿಸಿ ಇಲ್ಲಿ ಪ್ರಕಟಿಸಲಾಗಿದೆ.
ದ್ವಂದ್ವ
ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತಾ
ಹಾಳಾದ ಕಾರಖಾನೆ !
ನೂರೂಯಂತ್ರದಲಿ ಚೀತ್ಕರಿಸಿ ಓಡುತಿದೆ ಇಲ್ಲಿ ಒಂದೇ ಸವನೆ
ಹಗಲಿರುಳು ಬಿಟ್ಟು ಬಿಡದೆ ಕಪ್ಪು ಹೊಗೆಯುರುಳಿ
ಅಳಿಸಿಬಿಟ್ಟಿದೆ ಅಗೋ ಆಕಾಶದನಕಾಶವನ್ನೇ!
ಎಲ್ಲಿ ಬಿರುಗಾಳಿಯಲಿ ಮಗುಚಿ ಮೋಡದದೋಣಿ
ಚಿಕ್ಕೆ ತಳಕಂಡವೋ-
ಹಗಲು ಕಾಮನಬಿಲ್ಲ ಸೇತುಕಯ ಮುಂದಿರುಳ
ರಹದಾರಿ ಬಂದಾಯಿತೋ-
ಇಲ್ಲಿಯವರಿಗೇ ಮೊದಲು ನೆಲೆ ಇಲ್ಲ
ಅಲ್ಲಿಯವರನು ಕುರಿತು ಯೋಚನೆಗೆಲ್ಲಿ ಅವಕಾಶ?
ಇಂದಿನದೇ ಮುಖ್ಯ ರಾದ್ಧಾಂತವಾಗಿದೆ ನೋಡಿ
ಉಳಿದದ್ದು ಮುಂದೆ ನೋಡೋಣ ಸಾವಕಾಶ,
ಸೆಳಕಿನ ಹಿಂದೆ ಸೆಳಕು, ಸೆಳಕಿನ ಹಿಂದೆ ಸೆಳಕು
ನಡು ನಡುವೆ ಕುಲುಕುತಿಹುದಲ್ಲ ಇದು ಯಾವ ಬೆಳಕು!
ದಿಕ್ಕು ದಿಕ್ಕುಗಳಿಂದ ತೂರಿ ಬಿಟ್ಟಂತಿಹುದು ಹಸರು ಸರ್ಚಲೈಟು
ಕಾಡು ನಾಡೆನ್ನದೆಯೆ ಹುಲ್ಲು ಹಸುರಾಣಿಯಲಿ ಅದರ ಝೋಕು !
ಒಳಗೆ ಬೆಚ್ಚಗೆ ಕುಳಿತು ಚಹವ ಗುಟುಕರಿಸುತ್ತಾ
ಆಗಾಗ ಕಿಟಕಿಯಲಿ ಹಣಕಿದರೆ ಸಾಕು,
ಇನ್ನೇನು ಬೇಕು?-
ಆಹಾ ! ಹೀಗೆಯೇ ಸಾಗಿರಲಿ ಈ ಜಗತ್ತು
ಮರದ ಪೊಟರೆಯೊಳೊಂದೆ ಗಿಣಿಯಮರಿ -ಕಿಲಿಕಿಲಿ
ಜಿನುಗು ಮಳೆಯಲಿ ತೊಯ್ದು ತೆಪ್ಪಗಿವೆ ಉಳಿದೆಲ್ಲ ಹಕ್ಕಿಪಕ್ಕಿ
ತೊಟ್ಟಿಲಲಿ ಮಗುವಿನಳನಗೆಯು ತಲಕಾವೇರಿ !
ಅಂಗಳದ ಕಸಕಂಟೆಯಲ್ಲಿ ರಸದ ವಿಜಯಧ್ವಜವನೆತ್ತಿದೆ ಗುಲಾಬಾಕ್ಷಿ ;
‘ರೈಸೋ ವೈಸಃ’
ಮದುಗಣಿಕೆ ಊದಿವೆ ತುತೂ ತುತ್ತು ತೂರಿ
ಕಂಪೌಂಡು ಗೋಡೆಯ ಮೇಲು ಬರೆದಿವೆ ಹಸಿರು ತನ್ನ ಸಂಪೂರ್ಣ ಹೆಸರು
ಬೆಳ್ಳಗೆ ನಿರಿಯ ಚಿಮ್ಮುತ ಬಂದು
ನೆಲವ ಮೋಹಿಸಿ ಮತ್ತೆ ಬಾನಿಗೇರಿದೆ ಮಳೆಯ ಥಳಕು !
ನೀರೆಲ್ಲ ಬಸಿದು ರೇವೆಮಣ್ಣನು ಹರವಿ
ನಿಶ್ಚಿಂತ ನಿಂತಿಹುದು ಜೀವ ಝರಿಯು ;
ತೊಳೆದ ಮನಸಿನ ತೋಟದಲ್ಲಿ ಮೂಡಿವೆ ನೂರು ಡೇರೆ ಹೂ ಮರಿನೇಸರು
ಎದೆ ಎದೆಗಳಲ್ಲಿ ಕುಣಿದು ಕೋಲಾಟವಾಡಿದೆ ಅದೇ
ಚೆಲುವಯ್ಯ ಚೆಲುವೋ...ಚೆಲುವಯ್ಯ ಚೆಲುವೋ
ಅದಕಾಗಿ ಇದಕಾಗಿ ಬೆದಕುತಿಹುದಲ್ಲ ಮನ-
ಅದಕಿಹುದೆ ಬೇರೆ ಬದುಕು ?
ತೊಟ್ಟು ಕುಣಿಯುತಿಹುದು ನಿಮಿಷ ನಿಮಿಷಕ್ಕೊಂದು ಬೇರೆ ಪೋಷಾಕು !
ಸಾಧನೆ ಸತ್ಯದಾರಾಧನೆಗಳೆಂದರದಕೆ ತಲೆಬೇನೆ,
ಈಗಿರುವ ಮೆದಳೋ ಖಾಲಿ ಖಜಾನೆ
ಇಷ್ಟರ ಮೇಲೆ ಹೇಗೆ ನಡೆದೀತು, ವರ್ಷಗಟ್ಟಲೆ ಈ ನಮ್ಮ ಕಾರಖಾನೆ…
ಇಲ್ಲವೆಂದರು ಬೇರೆ ಎಲ್ಲಿಂದ ತರುವುದಿದೆ ಹೇಳಿ,
ಅದು ಮೊಟ್ಟ ಮೊದಲೇ ಬ್ರಹ್ಮಕೊಟ್ಟ ಆಸ್ತಿ !
ಸಂಪು ಹೊಡಿದರೂ ನಡೆಯುವುದಿಲ್ಲ
ಅದರ ಮಾಲಕನು ಅಷ್ಟಿಷ್ಟಕ್ಕೇ ಹೆಣಿಯುವುದಿಲ್ಲ ಮಾರಾಯ
ಆದುದಾಗಲಿ, ಕೊನೆಗೆ ಆಗಿಯೇ ಬಿಡಲಿ ಕುಸ್ತಿ !
ನೋಡೋಣ ಒಂದು ಕೈ !
ಗೆದ್ದರೂ ಸೈ, ಗೆದೆಯದಿದ್ದರೂ ಸೈ!
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)