‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೨) - ಕಯ್ಯಾರ ಕಿಞ್ಞಣ್ಣ ರೈ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೨) - ಕಯ್ಯಾರ ಕಿಞ್ಞಣ್ಣ ರೈ

ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ರ ಜೂನ್ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದವರು..

ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನು ರಚಿಸಿದ್ದಾರೆ. ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಬರೆದು ಪ್ರಕಟಿಸಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಅವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ, ಅಖಿಲಭಾರತ ಮಟ್ಟದಲ್ಲಿ ಜರುಗಿದ ೬೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ, 'ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ,  ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪದವಿ, ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ, ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಪಂಪ ಪ್ರಶಸ್ತಿ ಲಭಿಸಿವೆ. ೨೦೧೫ರ ಆಗಸ್ಟ್ ೯ ರಂದು ನಿಧನರಾದರು. 

ಕಯ್ಯಾರರು ಬರೆದ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆಯ್ದು ಇಲ್ಲಿ ನೀಡಲಾಗಿದೆ.

ಐಕ್ಯಗಾನ

೧.

ಐಕ್ಯವೊಂದೇ ಮಂತ್ರ,

ಐಕ್ಯದಿಂದೆ ಸ್ವಾತಂತ್ರ,

ಐಕ್ಯಗಾನದಿ ರಾಷ್ಟ್ರ

ತೇಲುತಿರಲಿ !

 

ಭಾರತದಿ ಮಮ ಜನ್ಮ

ಸ್ವಾತಂತ್ರ್ಯವೇ ಧರ್ಮ

-ಒಕ್ಕೊರಲಿನುದ್ಭೋಷ

ಕೇಳುತಿರಲಿ !

೨.

ಹೊಲೆಯರೇ ಬ್ರಾಹ್ಮಣರೇ,

ಮುಸ್ಲಿಮರೆ ಕ್ರಿಶ್ಚಿನರೆ,

ಎಲ್ಲರೂ ನಮ್ಮವರೆ

ಎದೆಯರಳಲಿ !

 

‘ರಾಷ್ಟ್ರವೊಂದೇ ಜೀವ'

ಎಂದು ಸಾರಿರಿ, ಯಾವ

ರಕ್ಕಸರು ಇದಿರಿಲ್ಲ

ನಾವ್ ಕಡುಗಲಿ !

೩.

ಅರೆಹೊಟ್ಟೆಯುಂಡ ನಾವ್,

ಬರಿ ಚಿಂದಿ ತೊಟ್ಟ ನಾವ್,

ಸುಲಿಗೆಗೊಳಗಾದ ನಾವ್

ಎಲ್ಲರೊಂದೇ !

 

ಆಳು ಹೋಳಾಗಿರಲು,

ಬಾಳು ಗೋಳಾಗಿರಲು

ಮೇಲು ಕೀಳೇನುಂಟು ?

ಎಲ್ಲರೊಂದೇ !

೪.

ಭಾರತಿಯ ಬಸುರಿಂದ 

ಜಾರಿ ಬಿದ್ದೆವೆ? ಬಂದ

ಭೂರಿ ಬವಣೆಗಳನ್ನು

ನೆನೆಯಿರೊಮ್ಮೆ !

 

ನೆನೆನೆನೆದು ದಿನದಿನವು,

ದುಡಿದುಡಿದು ಜನಜನವು

ಭಾರತದ ಸ್ವಾತಂತ್ರ್ಯ 

ಮೆರೆಸಿ, ಹೆಮ್ಮೆ !

೫.

ಅಜ್ಞಾನ ಪಂಕದಲಿ

ಅದ್ದಿರುವ ಜನರಲ್ಲಿ

ಮತಭೇದ ಬರಲುಂಟೆ?

ಎಲ್ಲರೊಂದೇ !

 

ಪಕ್ಷವೇ? ಪಂಥವೇ?

ಜಾತಿಯೇ? ನೀತಿಯೇ?

ಮೌಢ್ಯ ಮುರಿಯುವ ಬನ್ನಿ ;

ಎಲ್ಲರೊಂದೇ !

೬.

ಸ್ವಾತಂತ್ರ್ಯ ಪಡೆದಿಹೆವು,

ತಲೆಯೆತ್ತಿ ನಡೆಯುವೆವು,

ವಜ್ರದೇಹಿಗಳಾವು ;

ಬನ್ನಿರೆಲ್ಲ !

 

ಸ್ವಾತಂತ್ರ್ಯವೇ ಪಕ್ಷ,

ಸ್ವಾತಂತ್ರ್ಯವೇ ಪಂಥ,

ಸ್ವಾತಂತ್ರ್ಯವೇ ಜಾತಿ

ಎನ್ನಿರೆಲ್ಲ !

೭.

ಭಾರತದ ಬಿಡುಗಡೆಗೆ

ಹೋರಾಡಿರುವ ನಮಗೆ

ಯಾರ ಭಯ? ನಾವಿಂದು

ಮುಂದಾಗಿರೆ !

 

ತೇಲುವೆವೊ, ಮುಳುಗುವೆವೊ,

ಏಳುವೆವೊ, ಬೀಳುವೆವೊ,

ಎಲ್ಲರೂ ಒಮ್ಮೆಗೆ,

ಒಂದಾಗಿರೆ !

೮.

ಐಕ್ಯದಮೃತದ ರಸಕೆ

ಜೀವಜೀವದ ಬೆಸುಗೆ

ಕೂಡಿಬರೆ ಭೀಮ ಬಲ

ನಮ್ಮೊಳುಂಟು !

 

ಹದಿನಾಲ್ಕು ಲೋಕವನು

ಸಪ್ತ ಸಾಗರವನ್ನು,

ಗೆದ್ದು ದಾಟುವ ಶಕ್ತಿ-

ವೇಗವುಂಟು !

೯.

ತಿಳಿನೀರ, ಸವಿ ಹಣ್ಣ

ಗಂಧ ಮಂದಾನಿಲನ

ನೀಡುವಳು ನಮಗೆಲ್ಲ

ಪುಣ್ಯಧರಣಿ !

 

ಮಂದಸ್ಮಿತೆಯು ಮಧುರ…

ಭಾಷಿಣಿಯು, ಭೂಷಣೆಯು,

ಸಸ್ಯ ಶ್ಯಾಮಲೆ ದೇವಿ

ನಮ್ಮ ಜನನಿ !

೧೦.

ಚಿನ್ನ ಬೆಳ್ದಿಂಗಳಿಂ-

ಪುಲಕಿತ ನಿಶಾಮಯಿ,

ಸ್ವರ್ಣಗರ್ಭೆಯೆ, ತಾಯೆ !

ನಮ್ಮ ಕಾಯೆ !

 

ಅರಳ್ದ ಹೂ ಗೊಂಚಲಿಂ

ಚೆಲುವ ದ್ರುಮದಲಗಳಿಂ,

ಸುಖದಾತೆ, ವರದಾತೆ,

ನಮ್ಮ ತಾಯೆ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಸಂಗ್ರಹಿತ)