‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೭) ವೀ,ಸೀ.

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೭) ವೀ,ಸೀ.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ವಿ. ಸೀತಾರಾಮಯ್ಯನವರು ಇಟ್ಟು ಕೊಂಡ ಕಾವ್ಯನಾಮವೇ ವೀ. ಸೀ. ಇವರು ಎಂ ಎ ಸ್ನಾತಕೋತ್ತರ ಪದವೀಧರರು. ಇವರು ಕನ್ನಡ ಭಾಷೆಯಲ್ಲಿ ಅಸಾಧಾರಣ ಪಂಡಿತರಾಗಿರುವಂತೆ ಇಂಗ್ಲೀಷ್ ನಲ್ಲಿಯೂ ಆಳವಾದ ಪಾಂಡಿತ್ಯವುಳ್ಳವರಾಗಿದ್ದರು. ಅವರು ಕಳೆದ ಶತಮಾನದ ಎರಡನೇ ದಶಕದಿಂದಲೇ ಸಾಹಿತ್ಯ ರಚನೆಗೆ ಕೈಯಿಕ್ಕಿದ ಹಿರಿಯರಲ್ಲೊಬ್ಬರು. “ದೀಪಗಳು", “ನೆಳಲು ಬೆಳಕು" “ದ್ರಾಕ್ಷಿ-ದಾಳಿಂಬ" ಮೊದಲಾದ ಕವನ ಸಂಗ್ರಹಗಳ ಮತ್ತು “ಆಗ್ರಹ" “ಸೊಹ್ರಾಬ್ ರುಸ್ತುಂ” ನಾಟಕಗಳ ಹಾಗೂ “ಪಂಪಾಯಾತ್ರೆ" “ಕವಿ ದೃಷ್ಟಿ" ಎಂಬ ಪ್ರಬಂಧ ಗ್ರಂಥಗಳ ಕೃರ್ತಗಳು. ೧೯೫೩ರಲ್ಲಿ ಕುಮಟಾದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಹಾಗೂ ೧೯೨೨ರಲ್ಲಿ ಕಾರವಾರದಲ್ಲಿ ಜರುಗಿದ ಕವಿ ಸಮ್ಮೇಳನಕ್ಕೂ ಅಧ್ಯಕ್ಷರಾಗಿದ್ದರು. ಹೊಸಗನ್ನಡದ ಮೇಲ್ಮಟ್ಟದ ಕವಿಗಳಲ್ಲಿ ಒಬ್ಬರಾಗಿದ್ದರು. ಇವರು ಉತ್ತಮ ಉಪನ್ಯಾಸಕಾರರೂ ಆಗಿದ್ದರು. ಕೆಲವು ಸಮಯಗಳ ಕಾಲ ಅವರು ಬೆಂಗಳೂರು ರೇಡಿಯೋ ಕೇಂದ್ರದಲ್ಲಿ ಕನ್ನಡ ಕ್ರಾಯಕ್ರಮಗಳ ಪ್ರಮುಖ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವೀ.ಸೀ. ಅವರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅವುಗಳೆಂದರೆ “ಗಡಿದಾಟು" ಹಾಗೂ “ಕಸ್ಮೈ ದೇವಾಯ”. ಈ ಕವನಗಳಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಲಾಗಿದೆ.

ಕಸ್ಮೈ ದೇವಾಯ

ಅಂದಿನಾ ದೇವರುಗಳೆಲ್ಲಾ ಮಡಿದುರುಳಿಹರು

ಇಂದ್ರ ವರುಣರು ಧನದ ಮಿತ್ರ ಪೋಷಣರು

ಸಂದಿದ್ದ ದೈವತ್ವದಗ್ಗಳಿಕೆ ಹೋಗಿಹುದು

ಅಂದಿನವರುನ್ನತಿಯ ಕಳಸ ಕೂಲಿಹುದು

 

ಮಾನವರ ಸುಪ್ರಖರ ಮನದ ಮೊನೆಯಲುಗಿನ 

ಘಾತದಲಿ ಕಡುನೊಂದು ಸೋಲನೊಪ್ಪಿದರು

ಧ್ಯಾನ ಪೂಜೆಗಳಿನ್ನು ತಮಗೆ ಸಲ್ಲವು ಎಂದು

ಮಾತಿನೊಪ್ಪಿಗೆಯಿತ್ತು ಶರಣು ಬೇಡಿದರು.

 

ಅಚ್ಚರಿಯ ಮೋಹದಲಿ ಆಗಸವ ನೋಡುತ್ತೆ

ಉಚ್ಚಕಂಠದಿ ಹಾಡಿದಾ ಭಕ್ತರಳಿದಿಹರು

ನಯದಿಂದ ಭಯದಿಂದಲವರನೊಲಿಸುವ ಪಾಡು

ಭುವಿಯಿಂದ ಜನದಿಂದ ತೊಲಗಿ ಹೋಗಿಹುದು.

 

ಸಾಗರನ ಸುರನೀಲ ನೀಲಿಮತೆಯನು ನೋಡಿ

ಭೋರ್ಗರೆಯುತುರ್ಕುವಾರ್ಭಟಯ ಕೇಳಿ

ನಾಲ್ದೆಸೆಯೊಳೊಡ್ಡಿರುವಪಾರ ಗಂಭೀರತೆಗೆ

ಬಾಗಿ ಗೈಯುವ ವರುಣ ಪೂಜೆ ಕಾಣಿಸದು.

 

ನಭದೆಡೆಗೆ ಮೊಗವೆತ್ತಿ ಪೂ ಪತ್ರವೆರಚುತ್ತೆ

ಕರುಣಿಸೈ ಪರ್ಜನ್ಯ ಎಂಬುದಿಲ್ಲಾಯ್ತು

ಗುಡುಗು ಗರ್ಜನೆ ಕೇಳಿ ನಡುಗಿ ಬಲಿಯೊಪ್ಪಿಸುತೆ

ಒಡೆಯ ರುದ್ರನ ರೌದ್ರವಿಳಿಪ ಪರಿ ಪೋಯ್ರು.

 

ಗೋಧನವನುಳುಹಯ್ಯ ಹಚ್ಚಿಸೈ ಹೇ ಪೂಪ,

ದವಸ ಧಾನ್ಯಗಳೀಯೊ ದೇವದೇವೇಶ,

ಧನ ಕನಕ ವಾಹನವ ಕರುಣಿಸೈ ಧನದ ಭೋ

ಘನರನರ್ಘರೆ ಎಂಬ ಮೊರೆಯು ಕೇಳಿಸದು.

 

ಅನ್ಯದೇವರ್ಕಳು ದಾಳಿಟ್ಟರೇರಿದರು.

ಸುಮನಸರು ಪರಬ್ರಹ್ಮ ಹರಿಹರಾದಿಗಳು

ಇನ್ನೈದು ಸಾವಿರ ವರುಷವಾಳಿದರಿವರು

ಇಂದಿವರ ಆಳಿಕೆಗು ಚ್ಯುತಿಯು ಬಂದಿಹುದು.

 

ಹಳೆಯ ಕಾಲದ -ತಂದೆ ತಾತದಿರ ದೇವರುಗ

ಳಿಳಿದು ಹೋಗುವ ಕಾಲ ಬರುತಿಹುದು

ಇಳಿದಿಹುದು ಕಡುನಿಡಿದು ನೆಳಲೊಂದು ಮೇಲಿಂದ

ಅಳಿಸಿ ಹೋಗುತಲಿಹುದು ಅವರ ಮೂರ್ತಿಗಳೂ.

 

ಪೋಪವರ ಪದವಿಗಳಿಗಿನ್ನಾರು ಬಂದಪರೊ

ಕೋಪಿಗಳೊ ಕರುಣಿಗಳೊ ತಿಳಿಪ ಕೋವಿದರೊ

ಅರನರಸುತೆ ಹೋಗಿ ಹವಿಸನೀಯಲುಬೇಕೊ

ಆವ ಶೀಲವನವರು ಜಗದಿ ಬಿತ್ತುವರೊ,

 

ಇಲ್ಲದಿರೆ ಬೇರಾವ ದೇವರೇ ಬಾರರೋ

ಇಲ್ಲದೊಂದಕೆ ಹೆಸರನಿತ್ತು ಕರೆಯುವೆವೋ

ಇಲ್ಲದಿರೆ ಮಾನವನ ಸುಗುಣವೇ ದೈವವೋ 

ಎಲ್ಲಿಗೂ ಹರಿಯದಿಹ ಸಂಶಯವೆ ಕೊನೆಯೋ.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)