‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೯) - ಕುವೆಂಪು

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೯) - ಕುವೆಂಪು

ಹೊಸಗನ್ನಡ ಸಾಹಿತ್ಯಲೋಕದ ಎಲ್ಲ ಹಂತದವರಿಗೂ ಅತ್ಯಂತ ಸುಪರಿಚಿತರಾದ ಕುವೆಂಪುರವರು ‘ರಾಮಾಯಣ ದರ್ಶನಂ’ ಎಂಬ ಮಹಾ ಛಂದಸ್ಸಿನ ಮಹಾಕಾವ್ಯದ ಮಹಾಕವಿಗಳು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾವ್ಯರಚನೆ ಮಾಡುತ್ತಾ ಅಮೋಘವಾದ ಪ್ರತಿಭೆಯನ್ನು ಪ್ರಕಾಶಪಡಿಸಿದ ಕವಿಗಳಿವರು. ಇವರ ಬಿಡಿ ಕವನಗಳ ಸಂಗ್ರಹಗಳು ೨೦ರಷ್ಟಿದ್ದು ಅವುಗಳೇ ೩೦೦೦ ಪುಟ ಮೀರುತ್ತವೆ. “ಚಿತ್ರಾಂಗದಾ” ಎಂಬ ಅತ್ಯಂತ ರಮ್ಯವಾದ ದೀರ್ಘ ಕಾವ್ಯವನ್ನೂ ಇವರು ಬರೆದಿದ್ದಾರೆ. ಸರಳ ರಗಳೆಯಲ್ಲಿ ಮೊಟ್ಟ ಮೊದಲು ನಾಟಕ ರಚಿಸಿದವರೇ ಇವರು. ಇವರು ಅನೇಕ ಕಥೆಗಳನ್ನೂ, ನಾಟಕಗಳನ್ನೂ, ಜೀವನ ಚರಿತ್ರೆ, ಹರಟೆಗಳನ್ನೂ ಬರೆದಿದ್ದಾರೆ. 

“ಕಾನೂರು ಸುಬ್ಬಮ್ಮ ಹೆಗ್ಗಡತಿ" ಎಂಬ ಇವರ ಬೃಹತ್ಕಾದಂಬರಿಯು ಕನ್ನಡದಲ್ಲೇ ಒಂದು ಅಮೋಘ ಕಾದಂಬರಿ. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನಿವೃತ್ತಿ ಹೊಂದಿದ್ದಾರೆ. ಇವರ ಪೂರ್ಣ ಹೆಸರು ಡಾ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರು ಎಂ ಎ. ಡಿ ಲಿಟ್ ಪದವೀಧರರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇವರಷ್ಟು ಬಹುಮುಖ ಕೃತಿ ಕರ್ತೃಗಳು ಬೇರೊಬ್ಬರಿಲ್ಲವೆನ್ನಬಹುದು. ಇವರ “ರಾಮಾಯಣ ದರ್ಶನಂ” ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಹಾಗೂ ರೈಲ್ ರಸ್ತೆ. ಈ ಕವನಗಳಿಂದ ನಾವು ಒಂದು ಕವನವನ್ನು ಆರಿಸಿ ಪ್ರಕಟ ಮಾಡಿದ್ದೇವೆ.

ರೈಲ್ ರಸ್ತೆ

ಬೇಸಗೆಯ ಬಿಸಿಲು ಸುಡುತಿಹದು ಸುಡಸುಡನೆ ;

ಮೂರ್ಛೆ ಹೋಗಿದೆ ಭೂಮಿ ನಡುಗಿ ನಡನಡನೆ !

ಹರಿಯುತಿದೆ ಬಯಲಿನಲಿ ಕಂಬಿ ದಾರಿ

ಕರ್ಕಶದ ಕಟುನೀಲ ಕಾಂತಿಯನು ಕಣ್ಗೆದಾರಿ ;

ದೂರ, ಸಮದೂರವಾಗಿ,

ದಿಗ್ಮೂಲೆಯಿಂ ಬಂದು ದಿಗ್ಮೂಲೆಗಾಗಿ

ವೇಗದಿಂದೋಡುತಿರುವೆರಡು ಕಾಳಾಹಿಗಳ ಹೋಲಿ ;

ನೂತ್ನ ನಾಗರಿಕತೆಯ ಯಂತ್ರಾಸ್ಥಿಪಂಜರದಿ

ಕಬ್ಬಿಣದ ಹೃದಯಕ್ಕೆ ಹೊತ್ತು ರಕ್ತವ ಭರದಿ

ಪ್ರವಹಿಸುವ ಲೌಹ ರೇಖಾ ನಾಳಗಳ ಹೋಲಿ ;

ಕರ್ಕಶದ ಕಟುನೀಲ ಕಾಂತಿಯನೆ ಕಣ್ಗೆಕಾರಿ

ಹರಿಯುತಿದೆ ಕಂಬಿ ದಾರಿ !

 

ಬದಕಲಾಗಿಹ ಹಸುವು ಬರಿಬಯಲ ಮೇಯುತಿದೆ;

ತನ್ನ ನೆಳಲೂ ತನಗೆ ಕಾವಾಗಿ ಸಾಯುತಿದೆ!

ಎಲೆಯಿಲ್ಲದಾ ಮರವೊ ಮಳೆಯ ಹಾರೈಸುತಿದೆ ;

ಅದರ ನೆಳಲೆಲುಬು ಗೂಡನೆ ಬಿಸಲು ದಹಿಸುತಿದೆ !

ಶಬ್ದ ನಿಶ್ಯಬ್ದವಾಗಿದೆ ಮಹಾ ಶೂನ್ಯತೆಯ ಶವದಂತೆ,

ವೈಶಾಖ ರುದ್ರನ ಸಮಾಧಿಯಂತೆ !

ಯಾವುದನು ಲೆಕ್ಕಿಸದೆ ಕಂಬಿದಾರಿ

ಬಿಸಿಲ ಝಳದಲಿ ಇನಿತು ಕಂಪನವ ತೋರಿ,

ಕರ್ಕಶದ ಕಟುನೀಲ ಕಾಂತಿಯನು ಕಾಣ್ಗೆ ಕಾರಿ,

ಹರಿಯುತಿದೆ ರೈಲು ದಾರಿ !

 

ನೋಡುತಿಹುದಿದ್ದಕಿದ್ದಂತೆ ಹಸು ಕೊರಳನೆತ್ತಿ ;

ತನ್ನ ಸದ್ದನೆ ತಾನು ಬೆಂಬತ್ತಿ

ಬಂದಿತದೊ ನಾಗರಿಕತೆಯ ಮಾರಿ ಬೋರೆ ಹತ್ತಿ !

ರೈಲು ಬಂದಿತು, ರೈಲು !

ಜಾಗರಿತವಾಗುತಿದೆ ಪ್ರಜ್ಞೆಯಿಲ್ಲದ ಬೈಲು !

 

ಕರಿಯ ತಲೆ, ಗಾಜುಗಣ್ಣು;

ಬಾಯಲ್ಲಿ ಹೊಗೆ , ಮೂಗಿನಲ್ಲಿ ಕಿಡಿ, ‘ರೈಲಿನೆಂಜಿಣ್ಣು!’

ಹರಿಯುತಿದೆ ಗಡಗಡನೆ ಸದ್ದು ಮಾಡಿ,

ದೊಡ್ಡದೊಂದೊನಕೆ ಹುಳು ! ಹೊಟ್ಟಯೆಲ್ಲಾ ಗಾಡಿ !

ಸಿಳ್ಳು ಹಾಕುತಿದೆ, ಕಿಡಿಯ ಸೂಸುತಿದೆ,

ಹೊಗೆಯನೂದುತಿದೆ; ನುಗ್ಗಿಯೋಡುತಿದೆ!

ಜನರು ಕೂತಿಹರೇನು?

ಸಾಗುತಿಹವೇನು ಸಾಮಾನು?

ಅಲ್ಲ ; ರೈಲೋಡುತಿದೆ.

ಮಾನವರೊ? ಸಾಮಾನೊ? ಏನಾದರೇನಂತೆ ?

ಯಂತ್ರಕೇಕಾಚಿಂತೆ? ಅಂತು ರೈಲೋಡುತಿದೆ !

 

ಸದ್ದು ಸತ್ತಿತು, ಕಣ್ಣು ಮರೆಯಾಯ್ತು ರೈಲು;

ಪ್ರಜ್ಞೆ ತಪ್ಪಿದೆ ಮತ್ತೆ ಬಿಸಿಲಿನಲಿ ಬೈಲು!

ಏನೊಂದು ಕ್ಷಣಕಾಲದಲಿ ಮಿಂಚಿ ಮರೆಯಾಯ್ತು ;

ಬಯಲು ನಿದ್ದೆಯು ಕಂಡ ಕೆಟ್ಟ ಕನಸಾಯ್ತು !

ಹಾ ! ಕತ್ತರಿಸಿದೊಂದು ನರವೆ ಸಾಕು

ನೆತ್ತರನು ಶೋಷಿಸಲು ! ಇನ್ನೇನು ಬೇಕು ?

ಈ ಕಬ್ಬಿಣದ ಕಂಬಿ ದಾರಿ,

ಅಲ್ಲಿ ಮೇಯುವ ದನದ ರಕ್ತವನು ದಿನದಿನವು ಹೀರಿ

ಕೊಂಡೊಯ್ವ ನಾಗರಿಕತೆಯ ನಾಡಿ,

ಎನಲು ನಂಬುವರಾರು? ಆದರೂ ನಂಬದಿರಬೇಡಿ!

 

ಹದ್ದು ಸತ್ತಿದೆ ! ಎಲ್ಲಿ ಹೋಯ್ತೋ ಏನೋ ರೈಲು?

ಮೂರ್ಛೆ ಹೋಗಿದೆ ಮತ್ತೆ ಬಿಸಿಲಿನಲ್ಲಿ ಬೋಳು ಬೈಲು !

ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ

ಹರಿಯುತಿದೆ, ಹರಿಯುತಿದೆ, ಹರಿಯುತಿದೆ ರೈಲುದಾರಿ,

ಕಂಪಿಸುವ ಕಬ್ಬಿಣದ ರೈಲು ದಾರಿ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)