’ಬ್ಲಡಿ ಬಾಸ್ಟರ್ಡ್’ : ಮುಂದುವರಿದುದು
ನನ್ನ ಬ್ಲಡಿ ಬಾಸ್ಟರ್ಡ್ ಲೇಖನಕ್ಕೆ,
ಅಲ್ಲ ಅಲ್ಲ, ನನ್ನ ಲೇಖನ ಬ್ಲಡಿ ಬಾಸ್ಟರ್ಡ್ಗೆ,
ಥೂ, ಇದೂ ಅಲ್ಲ, ಬ್ಲಡಿ ಬಾಸ್ಟರ್ಡ್ ಎಂಬ ನನ್ನ...,
ಶ್ಶಿಶ್ಶಿ, ಇದು ಇನ್ನೂ ಅನರ್ಥ,
ಬ್ಲಡಿ ಬಾಸ್ಟರ್ಡ್ ಎಂಬ ಹೆಸರಿನಲ್ಲಿ ನಾನು ಬರೆದ...,
ಅಯ್ಯೋ, ಇದು ಮತ್ತೂ ಅನರ್ಥ,
’ಬ್ಲಡಿ ಬಾಸ್ಟರ್ಡ್...’ ಎಂಬ ಶಿರೋನಾಮೆ ಕೊಟ್ಟು ನಾನು ಬರೆದ...
ಅಬ್ಬ, ಈಗ ಸರಿಯಾಗಿ ಬಂತು,
...ನಾನು ಬರೆದ ಲೇಖನಕ್ಕೆ ಪ್ರತಿಕ್ರಿಯಿಸುತ್ತ ಮಿತ್ರ ಶ್ರೀವತ್ಸ ಜೋಶಿಯವರು ಒಂದು ಡೌಟು (:-)) ವ್ಯಕ್ತಪಡಿಸಿದ್ದಾರೆ.
"ಎ, ಬಿ, ಎಬಿ, ಒ ಯಾವ ಗುಂಪಿನ ಬ್ಲಡ್ ಇದ್ದರೂ ಅವನನ್ನು ’ಬ್ಲಡಿ ಬಾಸ್ಟರ್ಡ್’ ಎಂದಷ್ಟೇ ಎನ್ನಬಹುದೇ? ಅಥವಾ ಬ್ಲಡ್ ಗ್ರೂಪನ್ನು ಸೇರಿಸಿಯೇ ಹೇಳಬೇಕೇ? ಬಿ ಗುಂಪಿನ ’ಬ್ಲಡಿ ಬಾಸ್ಟರ್ಡ್’ ಆದರೆ ಶಾರ್ಟ್ಫಾರ್ಮ್ ’ಬಿಬಿಬಿ’ ಆಗ್ತದಲ್ವಾ, ಅದು ಈಗಿರುವ ’ಬಿಸಿಬೇಳೆಭಾತ್’ನ ಶಾರ್ಟ್ಫಾರ್ಮನ್ನು ಆಕ್ರಮಣ ಮಾಡುತ್ತದಲ್ವಾ?" ಎಂಬ ಚಿಂತಾಜನಕ ಡೌಟು ಜೋಶಿಯವರಿಗುಂಟಾಗಿದೆ.
ಇದರಿಂದ ನನಗೆ ತಿಳಿದುಬರುವುದೇನೆಂದರೆ, ಜೋಶಿಯವರಿಗೆ ಬಿಸಿಬೇಳೆಭಾತ್ ಬಲೇ ಇಷ್ಟ; ಅದರ ಸ್ಥಾನವನ್ನು ಬೇರಾವ ವಸ್ತು ಆಕ್ರಮಿಸುವುದನ್ನೂ ಜೋಶಿಯವರು ಸಹಿಸರು.
ಸಹಜವೇ. ಬಲ್ಲವರೆ ಬಲ್ಲರು ಬಿಸಿಬೇಳೆಭಾತ್ ರುಚಿಯ. ಅದರಲ್ಲೂ, ಅಮೆರಿಕದಲ್ಲಿರುವ ಜೋಶಿಯವರಿಗೆ ಅಲ್ಲಿ ಬಿಸಿಬೇಳೆಭಾತ್ ಅಪರೂಪವಾದ್ದರಿಂದ ಅದರಮೇಲಿನ ವ್ಯಾಮೋಹ ಇನ್ನಷ್ಟು ಉಲ್ಬಣಿಸಿರಬೇಕು. ಬಣ್ಣಿಸಲಸದಳವಾದ ಕಷ್ಟದಿಂದ ಅಲ್ಲೀಗ ಅವರು ’ಬಿಬಿಬಿಬಿ’ಯನ್ನು ಅರ್ಥಾತ್ ’ಬಿಸಿಬೇಳೆಭಾತ್ ಬಾಯಿಚಪಲ’ವನ್ನು ಹತ್ತಿಕ್ಕಿಕೊಂಡಿರಬಹುದು. ಅಲ್ಲಿ ಅವರ ಬೀಬೀ ಬಿಬಿಬಿ ತಯಾರಿಸಬಲ್ಲರಾದರೂ ಅದಕ್ಕೆ ಬೇಕಾದ ಸಾಮಗ್ರಿಗಳು, ಕ್ಷಮಿಸಿ, ಕನ್ನಡ ದಿನಪತ್ರಿಕೆಗಳ ಪ್ರಕಾರ ಸಾಮಾಗ್ರಿಗಳು, ಸಿಗಬೇಕಲ್ಲಾ!
ಅಮೆರಿಕದಲ್ಲಿ ಜೋಶಿಯವರು ಬಿಬಿಬಿಯನ್ನಾದರೂ ತಿನ್ನಲಿ (ಬೀಬಿಯ ತಲೆ ತಿನ್ನದಿದ್ದರೆ ಸಾಕು), ಸಿಸಿಸಿಯನ್ನಾದರೂ ತಿನ್ನಲಿ (ಅವರಿಗೆ ಷುಗರ್ ಪ್ರಾಬ್ಲಂ ಇಲ್ಲ) (ಷುಗರ್ಗೆ ಚಿನ್ನದ ರೇಟ್ ಆಗಿರುವುದರಿಂದ ನಮಗೇ ಇಲ್ಲಿ ಷುಗರ್ ಪ್ರಾಬ್ಲಂ), ಆ ಬಗ್ಗೆ ನಾನು ಚಿಂತೆ ಹಚ್ಚಿಕೊಳ್ಳದೆ, ಜೋಶಿಯವರ ’ಎ, ಬಿ, ಎಬಿ, ಒ’ ಗ್ರೂಪ್ ಸಂಬಂಧಿ ಚಿಂತಾಜನಕ ಡೌಟನ್ನು ನಿವಾರಿಸುವ ಯತ್ನ ಮಾಡುತ್ತೇನೆ.
ಎ, ಬಿ, ಎಬಿ, ಒ ಯಾವ ಗುಂಪಿನ ಬ್ಲಡ್ ಇದ್ದರೂ ಬ್ಲಡ್ ಗ್ರೂಪನ್ನು ಸೇರಿಸಿಯೇ ಬ್ಲಡಿ ಬಾಸ್ಟರ್ಡ್ನನ್ನು ಸಂಬೋಧಿಸತಕ್ಕದ್ದು.
ಎ ಗುಂಪಿನವನನ್ನು, ’ಏಯ್, ಬ್ಲಡಿ ಬಾಸ್ಟರ್ಡ್’, ಎಂದು ಕರೆಯತಕ್ಕದ್ದು.
ಬಿ ಗುಂಪಿನವನನ್ನು, ’ಬಿ (Be) ಬ್ಲಡಿ ಬಾಸ್ಟರ್ಡ್’, ಎಂದು ಹುರಿದುಂಬಿಸತಕ್ಕದ್ದು.
ಸಿ ಗುಂಪಿನವನನ್ನು....ಸಿ ಗುಂಪು ಇಲ್ಲ, ಕ್ಷಮಿಸಿ.
ಎಬಿ ಗುಂಪಿನವನನ್ನು, ’ಎಬಿಡ್ಯಾ (ಎಬಡ), ಬ್ಲಡಿ ಬಾಸ್ಟರ್ಡ್ ಕಣಲೇ ನೀನು’, ಎಂದು ಬಯಲುಸೀಮೆ ಭಾಷೆಯಲ್ಲಿ ಪ್ರೀತಿಯಿಂದ ಬೈಯಲೂಬಹುದು, ’ಅಬ್ (Ab) ಬ್ಲಡಿ ಬಾಸ್ಟರ್ಡ್ ಹೋಗಯಾರೇ ತೂ’, ಎಂದು ಹಿಂಗ್ಲಿಷ್ ಭಾಷೆಯಲ್ಲಿ ಹೊಗಳಲೂಬಹುದು.
ಒ ಗುಂಪಿನವನನ್ನು, ’ಓ, ಬ್ಲಡಿ ಬಾಸ್ಟರ್ಡ್’, ಎಂದು (ಕೂಗಿ) ಕರೆದರಾಯಿತು.
ಬಿ ಗುಂಪಿನ ಬ್ಲಡಿ ಬಾಸ್ಟರ್ಡ್ ’ಬಿಸಿಬೇಳೆಭಾತ್’ನ ಶಾರ್ಟ್ಫಾರ್ಮನ್ನು ಆಕ್ರಮಣ ಮಾಡುತ್ತಾನೆಂಬ ಭಯ ಜೋಶಿಯವರಿಗೆ ಬೇಡ. ಆನೆ ಬೀದಿಗೆ ಬರಲು ಶ್ವಾನ ತಾ ಬೊಗಳುವುದು, ಶ್ವಾನ ಬೊಗಳ್ದೊಡೆ ಆನೆಯ ಕೂದಲು ಕೊಂಕದು. ಶ್ವಾನ ಬೊಗಳಿದರೆ ದೇವಲೋಕ ಹಾಳಾಗದು. ದೇವೇಗೌಡರ ’ಬಿಬಿ’ಯಿಂದ ಅಮಿತಾಭ್ ಎಂಬ ’ಬಿಬಿ’ಗೆ ಹೇಗೆ ಹಾನಿಯಿಲ್ಲವೋ ಹಾಗೇ ಬಿ ಗುಂಪಿನ ಬ್ಲಡಿ ಬಾಸ್ಟರ್ಡ್ನಿಂದ ಜೋಶಿಯವರ ಇಷ್ಟದ ಬಿಸಿಬೇಳೆಭಾತ್ನ ರುಚಿಗೆ ಏನೂ ಹಾನಿಯಿಲ್ಲ, ಜೋಶಿಯವರೇ, ಗಡದ್ದಾಗಿ ಬಿಬಿಬಿ ಇಳಿಸಿರಿ.