“ಕರ್”- ನಾಟಕದ ರಾಜಕೀಯ, ವಿಧಾನಸಭಾ ವಿಸರ್ಜನೆ, ಕರ್ನಾಟಕದ ರಕ್ಷಣೆ ಇತ್ಯಾದಿ ವಿಚಾರಗಳ ಬಗ್ಗೆ ಕಾಡುಹರಟೆ

“ಕರ್”- ನಾಟಕದ ರಾಜಕೀಯ, ವಿಧಾನಸಭಾ ವಿಸರ್ಜನೆ, ಕರ್ನಾಟಕದ ರಕ್ಷಣೆ ಇತ್ಯಾದಿ ವಿಚಾರಗಳ ಬಗ್ಗೆ ಕಾಡುಹರಟೆ

ಬರಹ

- ನವರತ್ನ ಸುಧೀರ್

“ಪ್ರಸಕ್ತ ಪರಿಸ್ಠಿತಿಯಲ್ಲಿ ಕರ್ನಾಟಕದ ವಿಧಾನಸಭೆಯನ್ನು ವಿಸರ್ಜನೆ ಮಾಡುವದೇ ಸೂಕ್ತ ಎಂಬ ತಮ್ಮ ಅಭಿಮತವನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳಿಸಿರುವ ಸಂದೇಶ ದಲ್ಲಿ ವ್ಯಕ್ತಪಡಿಸಿದ್ದಾರೆ”” ಅನ್ನುವ ಶೀರ್ಷಿಕೆ ಓದುತ್ತಿದ್ದಂತೆ ಅದು ಯಾಕೆ ವಿಸರ್ಜನೆ, ವಿಧಾನಸಭಾಭಂಗವೇಕಾಗಲಿಲ್ಲ? ಬಹುಷಃ ಭಂಗವಾಗಲು ಅದು ತಪಸ್ಸಲ್ಲ ಅಂತಿರಬಹುದೇ? ಹೀಗೇ ಏನೇನೋ ಪ್ರಶ್ನೆಗಳು ಮನಸ್ಸಿನಲ್ಲಿ. ಈ ವಿಚಾರ ಮಂಥನದ ಫಲ ಈ ಹರಟೆಯ ಬರಹ.

ಮೊದಲು For the sake of good order ಅನ್ನೋಹಾಗೆ ನನ್ನ ಈ (ತಲೆ) ಹರಟೆಯ ಲೇಖನಕ್ಕೆ ಅನ್ವಯಿಸುವ ಕೆಲವು definitions ಕೊಡುವುದು ಸೂಕ್ತ ಅಂತ ಅನಿಸಿಕೆ.
“ಕರ್” ನಾಟಕದಲ್ಲಿನ ಕರ್ ಹಿಂದಿಯ “ಮಾಡು” ಅಲ್ಲ. ಹಾಗೆಯೇ ಮರಾಠಿಯ ವೆಂಗ್ಸಾರ್- , ಗವಾ- ಮತ್ತು ಟೆಂಡುಲ್- ಗೆ ಸೇರಿಸುವ ಕರ್ ಕೂಡ ಅಲ್ಲ. ಅದು ಇಂಗ್ಲೀಷ್ ನ ಕೀಳಾರ್ಥದ
Cur= ನಾಯಿಕುನ್ನಿ ಅಂತ. ಗೌರವಯುತವಾದ “ನಾಯಿಮರಿ” ಅನ್ನೋ ಸಂಬೋಧನೆ pet ಆದರೆ ಮಾತ್ರ ಅಂತ ನನ್ನ ನಂಬೋಣ.
ನಾಟಕ - ಹೆಚ್ಚು ಅರ್ಥೈಸುವ ಅಗತ್ಯವಿಲ್ಲ. ಇದನ್ನೂ ಆಡುವುದರಿಂದ ಒಂದು ಆಟವೂ ಹೌದು. ರಾಜಕಾರಣಿಗಳಿಗೆ ಎಲ್ಲವೂ ಆಟವೇ. ದೊಂಬರಾಟ ಮಾತ್ರ ನಾಟಕವಲ್ಲ.
ವರ್ಜ್ಯ - ಬಿಡಲು ಯೋಗ್ಯವಾದದ್ದು, ತ್ಯಾಜ್ಯ - something to be avoided, something which merits rejection ಅಂತ.
ತ್ಯಾಜ್ಯ - ವರ್ಜ್ಯ , ಬಿಡಲು ಯೋಗ್ಯವಾದದ್ದು -unaccepatable, undesirable, something to be eschewed ಅಂತ
ಅರೆ ವರ್ಜ್ಯ ಅಂದರೆ ತ್ಯಾಜ್ಯ, ತ್ಯಾಜ್ಯ ಅಂದರೆ ವರ್ಜ್ಯ. ಇದೇನ್ರೀ ಅಂತ ಕೇಳಬೇಡಿ. ನನಗೂ ಸ್ವಲ್ಪ ನಿಮ್ಮಂತೆಯೇ confusion.( ಕನ್ನಡಕಸ್ತೂರಿ.ಕಾಂ ನ ನಿಘಂಟು ಇದರ ಮೂಲ)
ಸದ್ಯಕ್ಕೆ ಅದು ಹಾಗೇ ಲೂಸ್ ಆಗಿ ಅರ್ಥ ಇರಲಿ.
ವಿಸರ್ಜನೆ - ಚೆದರಿಕೆ, ಸಭೆ- ಸಮಿತಿ ಮೊದಲಾದವುಗಳ ಮುಕ್ತಾಯ , cession, dissolution ಅಂತ ಒಂದು; - ಬಿಡುವುದು, ತ್ಯಜಿಸುವುದು - abandoning, getting rid of, giving up, quitting ಅಂತ ಇನ್ನೊಂದು.
ಒಟ್ಟಿನಲ್ಲಿ ವಿಸರ್ಜನೆ ಮಾಡೋದು ವರ್ಜ್ಯ ಮತ್ತು ತ್ಯಾಜ್ಯ ವಸ್ತುಗಳನ್ನು ಅಂತ ಭಾವಾರ್ಥ.

ಅದರೆ ಈ ಎರಡೂ ಅರ್ಥಗಳು ಪಾಪ ನಮ್ಮೆಲ್ಲರಿಗೂ ಬೇಕಾದ ಗಣಪತಿಯ ವಿಸರ್ಜನೆಗೆ ಅದು ಹೇಗೆ ಅನ್ವಯಿಸುತ್ತೋ ಆ ದೇವರೇ ಬಲ್ಲ. ಯಾಕೆಂದರೆ ಗಣಪತಿ ವರ್ಜ್ಯವೂ ಅಲ್ಲ, ತ್ಯಾಜ್ಯವೂ ಅಲ್ಲ.

ನಮ್ಮ ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದಾಗ, ಅದರಲ್ಲೂ ಮುಖ್ಯ ಭೂಮಿಕೆ ವಹಿಸಿದವರನ್ನು ಕುರಿತು ಇಂಗ್ಲೀಷ್ ಮೂಲದ “cur” ಪದದ ಉಪಯೋಗ ಅದೆಷ್ಟು ಸೂಕ್ತವೋ ನಿರ್ಣಯಿಸುವುದು ಕಷ್ಟ. ನಮ್ಮ ನಾಡಿನ ರಾಜಕಾರಣಿಗಳ ಬಗ್ಗೆ ವ್ಯಾಖ್ಯಾನಿಸುವಾಗ ಸಂದರ್ಭಾನುಸಾರ ಸರ್ವಭಕ್ಷಕ ಹಂದಿಗಳಿಗೋ, ಯಾವಾಗಲೂ ಕಚ್ಚಾಡುವ ನಾಯಿಗಳಿಗೋ, ಸತ್ತವರನ್ನೂ ಬಿಡದೆ ಕಿತ್ತಾಡುವ ರ(ಹ)ಣಹದ್ದುಗಳಿಗೋ, ಯಾರು ಏನೇ ಹೊಡಕೊಳ್ಳಲಿ ನಾವು ಮಾತ್ರ ದೇಶ “ಶೇವೇ” ಮಾಡುತ್ತೇವೆ ಅಂತ ನಿರಾತಂಕವಾಗಿ ಒಡಾಡಿಕೊಂಡಿರುವ ಕೋಣಗಳಿಗೋ ಹೋಲಿಸುವುದು ಸರ್ವೇ ಸಾಮಾನ್ಯ. ಬಿಹಾರದ ಲಾಲೂ ಪ್ರಸಾದರು ದನಕರುಗಳಿಗೇ ಮೀಸಲಾದ ಭೂಸಾ ಖರೀದಿಯಲ್ಲಿಯೇ ಕೋಟ್ಯಾಂತರ ರೂಪಾಯಿ ಭಕ್ಷಿಸಿ ಹಗರಣ ಮಾಡಿದ್ದು ಮರೆಯೋದಕ್ಕಾಗುತ್ಯೇ?

ಅದೊಂದು ಕಾಲವಿತ್ತು. ನರಸಿಂಹಸ್ವಾಮಿಯವರ ಕವಿತೆಯಲ್ಲಿನ ಮಲ್ಲಿಗೆ; ಕುವೆಂಪುರವರ ಸಹ್ಯಾದ್ರಿಯ ಶ್ರೀಗಂಧ, ಮಂಡ್ಯದ ಮೈಶುಗರ್ ನ ಕಬ್ಬಿನ ಸಕ್ಕರೆ ಇವೆಲ್ಲ ಮೈಸೂರಿನ ಹೆಸರೆತ್ತಿದಾಗಲೆಲ್ಲ ಸುವಾಸನೆ ಮತ್ತು ಸಿಹಿಯ ನೆನಪು ತರುವಂತಿತ್ತು.

ಆದರೆ ಈಗಿನ ರಾಜಕಾರಣದ ಕೆಸರಿನಲ್ಲಿ ,ಕೆಸರೇ ಕೋಣಗಳ ತಾಣವೂ ಅನ್ನೋದನ್ನ ಮರೆತು, ಅಲ್ಲಿಯೇ ಕಮಲವನ್ನರಳಿಸಹೋಗಿ, ಚಡ್ಡಿ ಕಳೆದುಕೊಂಡ ಯಡ್ಡಿಯೂರಪ್ಪನವರ ದುಸ್ಸಾಹಸದ ದುರಂತ ಮತ್ತು ಅದರಿಂದ ಹರಡಿದ ದುರ್ಗಂಧದ ಮೈಸೂರು “ಸ್ಮೆಲ್ಲಿ”ಗೆ ಎಲ್ಲರೂ ಮೂಗು ಹಿಡಿಯುವಂತಾಗಿದೆ. (ತಿರುಚಿದ ಮೈಸೂರು ಸ್ಮೆಲ್ಲಿಗೆ ಕವನಗಳು ಬೇರೆಡೆ ಅಂತರ್ಜಾಲದ “ಸಂಪದ”ದಲ್ಲಿಯೇ ಪ್ರಕಟಿತ.)

ದುರ್ಗಂಧಕ್ಕೂ ವಿಸರ್ಜನೆಗೂ ಅದೆಂಥ ನಂಟು? ವರ್ಜ್ಯವಾದದ್ದನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ತ್ಯಾಜ್ಯವಾಗಿ ದೇಹದಿಂದ ವಿಸರ್ಜನೆಯಾದಾಗ ದುರ್ಗಂಧ ಜೊತೆಯಲ್ಲಿರುವುದು ಗೊತ್ತೇ ಇದೆ. ವಿಧಾನಸಭೆಯೂ ತ್ಯಾಜ್ಯವಾದಾಗ ವಿಸರ್ಜಿಸಲರ್ಹ ಅಂತ ರಾಜ್ಯಪಾಲರ ಅಭಿಪ್ರಾಯ. ಅಂತೂ ಎರಡೂ ಹೇಸಿಗೆ ಕೆಲಸಗಳೇ!

ಹಾಗೆಯೇ ವಿಸರ್ಜನೆಗೂ ನೀರಿಗೂ ನಂಟಿದೆಯಲ್ಲವೇ. ಮತ್ತೆ ಮೊದಲಿಗೆ ನಮ್ಮಲ್ಲಿ ಗಣಪತಿ ಮತ್ತು ಬಂಗಾಳದಲ್ಲಿನ ದುರ್ಗಾ ವಿಸರ್ಜನೆ ಜ್ನಾಪಕಕ್ಕೆ ಬರುತ್ತಲ್ಲವೇ. ದೈಹಿಕ ವಿಸರ್ಜನೆಗಳಾದಾಗ ನೀರಿನಿಂದ ಫ್ಲಷ್ ಮಾಡಿ ಒಳಚರಂಡಿಗೆ ಕಳುಹಿಸುವ ವ್ಯವಸ್ಥೆ ಇರುವುದು ಎಲ್ಲರಿಗೂ ಗೊತ್ತು. ಇದರಿಂದ ಆ ವಿಸರ್ಜಿತ ತ್ಯಾಜ್ಯ ಅದೇ ರೂಪದಲ್ಲಿ recycle ಆಗುವ ಸಂಭಾವನೆ ಇಲ್ಲವೇ ಇಲ್ಲ ಅನ್ನಲಾಗದಿದ್ದರೂ ಅಪರೂಪ. ಇದೇ ವ್ಯವಸ್ಥೆಯನ್ನು ವಿಧಾನಸಭೆಯ ವಿಸರ್ಜನೆಗೂ ಅಳವಡಿಸಿ ಈಗಿನ ರಾಜಕಾರಣಿಗಳನ್ನು ಪರ್ಮನೆಂಟ್ ಆಗಿ ಒಳಚರಂಡಿಗೆ ಕಳಿಸುವ ಹಾಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅನ್ನಿಸೋಲ್ಲವೇ! ಇಲ್ಲೂ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಈಚೀಚೆಗೆ ಸಮಾಜದ ಒಳಚರಂಡಿಗಳಲ್ಲೇ ಓಡಾಡುತ್ತ , drain inspector ಗಳಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರೊಬ್ಬರು ಕುಟುಂಬದವರೆಲ್ಲರೂ ಕೂತು ನೋಡುವಂಥ “ಉತ್ತಮ ಅಭಿರುಚಿಯ” ಸಿನಿಮಾ ಮಾಡುತ್ತೇನೆ ಎಂದು ಹೆದರಿಸಿ ಆ ನಿಟ್ಟಿನಲ್ಲಿ ಒಳಚರಂಡಿಯಲ್ಲಿರುವುದನ್ನು ಬಯಲಿಗೆಳೆದು ತಮ್ಮ ವೈಯುಕ್ತಿಕ ತೆವಲು ತೀರಿಸಿಕೊಂಡರೆ ಗಬ್ಬು ನಾತ ಇನ್ನೂ ಎಲ್ಲೆಡೆ ಹರಡುವುದು ಮಾತ್ರ ಖಂಡಿತ.

ಮರುಚುನಾವಣೆ. ಮತ್ತದೇ ಖೊಟಾ ನಾಣ್ಯಗಳ ಮರುಚಲಾವಣೆ. ಅದೇ ಬೀಜಾಸುರರ ಹಾಗೂ ಮಹಿಷಾಸುರರ ಜನನ. ನಮ್ಮ ಕನ್ನಡಿಗರ ಬುಧ್ಧಿಮತ್ತೆ ಮತ್ತು ಜಾಣತನ ನೋಡಿದರೆ ಮತ್ತೊಮ್ಮೆ ಈ ಭ್ರಷ್ಟ ರಾಜಕಾರಣಿಗಳೇ ಇನ್ನೂ ಹೆಚ್ಚಿನ ಬಹುಮತದಿಂದ ಚುನಾಯಿತರಾಗಿ ಬರುವ ಸಂಭಾವನೆಯನ್ನು ಖಂಡಿತ ತಳ್ಳಿಹಾಕುವಂತಿಲ್ಲ. ಈಗಿನ ರಾಜಕಾರಣಿಗಳು ಸ್ವಲ್ಪವೂ ಸಂವೇದನೆಯಿಲ್ಲದವರು. ಇವರುಗಳ ನಿಘಂಟಿನಲ್ಲಿ ಮಾನ,ಮರ್ಯಾದೆ, ನೀತಿ, ನ್ಯಾಯ, ಸ್ವಾಭಿಮಾನ, ದೇಶಪ್ರೇಮ, ದೇಶಭಕ್ತಿ, ಇತ್ಯಾದಿಗಳು ಕಾಣುವುದೇ ಇಲ್ಲವಂತೆ. ಹಾದರ ಮಾಡಿ ಬಂದ ಕೆಲವೇ ತಾಸುಗಳಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದೆ TV9 ಸ್ಟೂಡಿಯೋನಲ್ಲಿ ಕುಳಿತು ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಉಧ್ಧಟತನ ಕಂಡಿಲ್ಲವೇ? ಯಾರೇ ಎಷ್ಟೇ ಉಗಿಯಲಿ, ತೆಗಳಲಿ, ಅದ್ಯಾವುದೂ ಅವರಿಗೆ ತಟ್ಟುವುದಿಲ್ಲ. ಕೋಣದ ಮೈ ಮೇಲಿನ ನೀರಿನಂತೆ. ಒದರಿಕೊಂಡು ಮುಂದೆ ಹೋಗುವುದು.

ಒಂದು ಹಳೆಯ ಇಂಗ್ಲೀಷ್ ಜೋಕ್ ಜ್ನಾಪಕಕ್ಕೆ ಬಂತು. ಒಮ್ಮೆ ಒಬ್ಬ ಪೇದೆ ಬಂದು ಹಿರಿಯ ಅಧಿಕಾರಿಗಳಿಗೆ ಹೇಳಿದನಂತೆ’ Sir, there was a Sindhi gentleman who had come to see you” ಅಂತ. ಆಗ ಅವರು “It can’t be! Either he is a Sindhi or a Gentleman and can’t be both” ಅಂತ ಉದ್ಗರಿಸಿದ್ದರಂತೆ. ಹಾಗೇ ರಾಜಕಾರಣಿ ಅಂದಮೇಲೆ ಜೊತೆಗೆ ಪ್ರಾಮಾಣಿಕ ಅಂತ ಸೇರಿಸಹೋದರೆ ನಗೆಪಾಟಲಿಗೀಡಾಗುತ್ತೇವೆ. ಪ್ರಾಮಾಣಿಕ ರಾಜಕಾರಣಿ ಮೊನ್ನೆ ಮೊನ್ನೆ ಶಸ್ತ್ರಚಿಕಿತ್ಸೆಗೊಳಗಾದ ಚತುರ್ಭುಜೆ ಲಕ್ಷ್ಮಿಯಷ್ಟೇ ಅಪರೂಪ, ಅಲಭ್ಯ. ಭ್ರಷ್ಟತೆಯೇ ಅವರ ಹುಟ್ಟುಗುಣ ಅನ್ನೋದು ಜನಜನಿತ.

ರಾಜಕಾರಣ ಇವರಿಗೆಲ್ಲ ಒಂದು ರೀತಿಯ ಆಟವಂತೆ. ಅದಕ್ಕೇ ಇರಬಹುದು “The games politicians play” ಅನ್ನೋ ಪ್ರಚಲಿತ ಹೇಳಿಕೆ. ಇಲ್ಲಿ “ ಏನಾದರೂ ಆಗಬಹುದು” ; “politics is art of the possible”; ‘ there are no permanent friends and foes in politics” ಎಂದೆಲ್ಲ ತಮ್ಮನ್ನು ಸಮರ್ಥಿಸಿಕೋತಾರೆ ಈ ಮಾನಗೆಟ್ಟವರು.

ಒಂದು sport ಅಂದ ಮೇಲೆ ಪ್ರಶಸ್ತಿಗಳು ಬೇಡವೇ. ಇನ್ನು ಸ್ವಲ್ಪೇ ದಿನಗಳಲ್ಲಿ ರಾಜಕೀಯ ದಾಳದಾಟದ ಕೋಚ್‍ಗಳಿಗೆ ಸಲ್ಲುವ ಪ್ರಥಮ “ದ್ರೋಹಾಚಾರ್ಯ ಪ್ರಶಸ್ತಿ” ನಮ್ಮ ದೇವೇಗೌಡರಿಗೇ ಸಿಗುವುದು ಖಚಿತ ಅಂತ ಸುದ್ದಿ. ಹಾಗೆಯೇ ಗೌಡರಮುಂದೆ “ಮಂಡಿಯೂರಪ್ಪ” ನಾಗಲು ಇಚ್ಛಿಸದೆ ಯಡ್ಡಿಯೂರಪ್ಪ ಅಂತ ಹೆಸರು ಬದಲಿಸಿಕೊಂಡ ಯಡಿಯೂರಪ್ಪನವರಿಗೆ ಚಕ್ರವ್ಯೂಹವನ್ನು ಭೇದಿಸಲಾಗದ “ಅಭಿಮನ್ಯು ಪ್ರಶಸ್ತಿ” ಕೂಡ ಖಂಡಿತ. ಇತ್ತ ಅಪ್ಪನೂ ಬೇಕು, ಅತ್ತ ಶಾಸಕರೂ ಬೇಕು, ಅಧಿಕಾರವೂ ಬೇಕು ಎಂದು ತೀರ್ಮಾನಿಸಲಾಗದೆ ನರ್ತಿಸುತ್ತಿದ್ದ ಕುಮಾರಸ್ವಾಮಿಗೆ “ಅರ್ಜುನ ಪ್ರಶಸ್ತಿ” ಬದಲಾಗಿ ಇವನೂ ಅಲ್ಲದ ಅವಳೂ ಅಲ್ಲದ “ಬೃಹನ್ನಳಾ ಪ್ರಶಸ್ತಿ” ಕೊಡುತ್ತಾರಂತೆ. ಶಾಸಕರನ್ನು ಕೆಡವಲು ದೇವೇಗೌಡರಿಂದ ಮುಂದೆ ಮಾಡಲ್ಪಟ್ಟ ಪ್ರಕಾಶ್‍ರವರಿಗೆ “ಶಿಖಂಡಿ ಪ್ರಶಸ್ತಿ” ಯೂ ತೀರ್ಮಾನವಾಗಿದೆಯಂತೆ.

ಹೊಯ್ಸಳರ ಕಾಲದಿಂದಲೂ ಸಾಹಿತ್ಯ, ಕಲೆ, ಶಿಲ್ಪಗಳಿಗೆ ಪ್ರಖ್ಯಾತವಾದ ಹಾಸನದ ಹೆಸರನ್ನು ಕೆಸರಾಗಿಸಿದ, ಅಲ್ಲಿಯೇ ಉದ್ಭವವಾದ ಹರದನಹಳ್ಳಿಯ ಮಹಿಷತ್ರಯರ ನಿರ್ಮೂಲನ ಹೇಗೆ? ಆ ಚಾಮುಂಡೇಶ್ವರಿಯೇ ಮತ್ತೊಮ್ಮೆ ಅವತರಿಸಬೇಕಾದೀತೇನೋ! ಈ ಐಡಿಯಾ ಕೇಳಿಸಿಕೊಂಡ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳು ಸೋನಿಯಾರವರಿಗೆ ಚಾಮುಂಡಿಯ ಮೇಕಪ್ ಮಾಡಿ ಅವರ ಕಾಲ ಕೆಳಗಿನ ಮಹಿಷನ ತಲೆಯ ಜಾಗದಲ್ಲಿ ಹಿರಿಯ ಗೌಡರ ತಲೆ ಅಂಟಿಸಿ ಪೋಸ್ಟರ್ ಕೂಡ ಛಪಾಯಿಸಿ ಅಷ್ಟರಲ್ಲೇ ತಮ್ಮ ಸ್ವಾಮಿ(ನಿ)ಭಕ್ತಿ ಪ್ರಸರಿಸುವ ಸಾಧ್ಯತೆಗಳುಂಟು. ರಾಜಾಸ್ಥಾನದಲ್ಲಿ ವಸುಂಧರಾ ರಾಜೆಯವರಿಗೆ ಅನ್ನಪೂರ್ಣೆಯ ವೇಶ ಹಾಕಿಸಿದ ಭಾಜಪ ಮತ್ತು ಇಂತಹದೇ ಕೆಲಸಕ್ಕೆ ಕೈ ಹಾಕಿ ಸೋನಿಯಾಗೆ ದುರ್ಗಾ ವೇಶ ಹಾಕಿಸಿದ ಉತ್ತರಪ್ರದೇಶದ ಕಾಂಗೈ ಪ್ರಯತ್ನದ ನೆನಪುಗಳಿನ್ನೂ ಹಸಿರಾಗಿದೆಯಲ್ಲವೇ?

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕಿರುವ ಜನಸಾಮಾನ್ಯನಿಗೆ, ಆಯ್ಕೆಯಾದ ಮೇಲೆ ಅವನ ಮೇಲೆ ಯಾವ ರೀತಿಯ ಹತೋಟಿಯೂ ಇಲ್ಲದಿರುವುದು ಅದೆಂಥ ವಿಪರ್ಯಾಸ? ಚುನಾಯಿತನಾದ ಕೂಡಲೆ ತನ್ನ ನಿಜವಾದ ಬಣ್ಣ ತೋರಿಸುತ್ತ, ಕುರ್ಚಿಗೆ ಅಂಟಿಕೊಂಡು ಪೂರ್ಣ ಅವಧಿಯಲ್ಲಿ ತನ್ನನ್ನು ಆರಿಸಿದವರನ್ನು ಉಪೇಕ್ಷಿಸುವ ರಾಜಕಾರಣಿಯ ಧೈರ್ಯ ಅದೆಷ್ಟು? ನಿಜವಾಗಿಯೂ ಯಾರು ಬಲಿಷ್ಠರು? ಅವರನ್ನು ಚುನಾಯಿಸುವ ನಾವೋ? ರಾಜಕಾರಣಿಗಳೋ? ಬಾಟೆಲಿನಲ್ಲಿದ್ದ ಭೂತವನ್ನು ಹೊರಗೆ ಬಿಟ್ಟು ಮತ್ತೆ ಒಳಗೆ ತೂರಿಸಲಾಗದಂತಹ ಅಸಹಾಯಕರು ನಾವು. ಮೇರಿ ಶೆಲ್ಲಿ ತನ್ನ ಹತ್ತೊಂಬತ್ತರ ವಯಸ್ಸಿನಲ್ಲಿ ಬರೆದ Frankenstein ಕಾದಂಬರಿಯಲ್ಲಿ ವರ್ಣಿಸಿದ ಸೃಷ್ಟಿಕರ್ತನಿಗೇ ಮುಳುವಾದ ರಾಕ್ಷಸನ ನೆನಪಾಗುತ್ತೆ ಈ ರಾಜಕಾರಣಿಗಳನ್ನು ನೋಡಿದಾಗಲೆಲ್ಲ.

ಪರಭಾಷಿಗರ ದಾಳಿಯಿಂದ ಕನ್ನಡವನ್ನು ರಕ್ಷಿಸುವ ಪಣ ತೊಟ್ಟಿರುವ ಕರ್ನಾಟಕ ರಕ್ಷಣಾ ವೇದಿಕೆ ಏಕೆ ತಮ್ಮ ನಿಗದಿತ ಕಾರ್ಯಕ್ರಮದಿಂದ ಸ್ವಲ್ಪ ಹೊರಬಂದು ಕರ್ನಾಟಕವನ್ನು ನಮ್ಮ ಭ್ರಷ್ಟ ರಾಜಕಾರಣಿಗಳಿಂದಲೇ ರಕ್ಷಿಸುವ ಕಾರ್ಯ ಹಮ್ಮಿಕೊಂಡರೆ ಚೆನಾಗಿರುತ್ತಲ್ಲವೇ? ವೇದಿಕೆ ಪಕ್ಷಾತೀತ ಅಂತ ನಮ್ಮ ನಂಬಿಕೆ ತಪ್ಪಲ್ಲ ತಾನೆ? ಮಣ್ಣಿನ ಮಕ್ಕಳನ್ನು ಮತ್ತೆ ಮಣ್ಣಿಗೆ ಮರಳಿಸುವಂಥ ಪವಿತ್ರವಾದ ಕೆಲಸ ಮಾಡಿದರೆ ನಾವೆಲ್ಲ ಅವರಿಗೆ ಚಿರಋಣಿಗಳಾಗಬಹುದಲ್ಲ!

********************************