“ಗ್ರಾಮ ಚೇತನ” - ನನಸಾದ ಕನಸು

“ಗ್ರಾಮ ಚೇತನ” - ನನಸಾದ ಕನಸು

ರೈತರಿಗೆ ನೀಡಲಾಗುವ ತರಬೇತಿಗಳ ವರದಿಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ಈ ತರಬೇತಿಗಳನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ನಾನ ಕೇಂದ್ರ ಅಥವಾ ಬೇರಾವುದೇ ಸಂಸ್ಥೆ ಜರಗಿಸುತ್ತದೆ ಎಂಬುದೂ ನಮಗೆ ಗೊತ್ತಿದೆ. ಆದರೆ, ರೈತರೇ ಸ್ಥಾಪಿಸಿದ ತರಬೇತಿ ನೀಡುವ ಸಂಸ್ಥೆಯ ಬಗ್ಗೆ ಕೇಳಿದ್ದೀರಾ? ಅದು "ಗ್ರಾಮ ಚೇತನ.”

ಗ್ರಾಮಚೇತನ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಕೊಪ್ಪದಲ್ಲಿದೆ - ಹುಬ್ಬಳ್ಳಿಯಿಂದ ೨೨ ಕಿಮೀ ದೂರದಲ್ಲಿ. ಬಸ್ಸಿನಲ್ಲಿ ಹೋದರೆ ಹುಬ್ಬಳ್ಳಿಯಿಂದ ಒಂದು ತಾಸಿನ ಪ್ರಯಾಣ. ಅಲ್ಲಿಂದ ಹಾವೇರಿಯತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ೧೭ ಕಿಮೀ ಕ್ರಮಿಸಿದಾಗ ಸಿಗುತ್ತದೆ ವರೂರು. ಅಲ್ಲಿ ಬಲಕ್ಕೆ ತಿರುಗಿ ೫ ಕಿಮೀ ಮುಂದಕ್ಕೆ ಸಾಗಿದರೆ ತಲಪುತ್ತೇವೆ ಸೂರಶೆಟ್ಟಿಕೊಪ್ಪ. ಗ್ರಾಮ ಪ್ರವೇಶಿಸುವ ಮೊದಲೇ ಎಡಭಾಗದಲ್ಲಿ ರಸ್ತೆಗೆ ತಾಗಿಕೊಂಡ ಒಂದೆಕ್ರೆ ಜಾಗದಲ್ಲಿ ಗ್ರಾಮಚೇತನ ತರಬೇತಿಕೇಂದ್ರ.

ಅಲ್ಲಿ ಧಾರವಾಡದ ಪರ್ಯಾಯ ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಡಿಪ್ಲೊಮಾದ ಮೂರು ದಿನಗಳ ಪ್ರಾಥಮಿಕ ಶಿಬಿರ ೧೬ ಡಿಸೆಂಬರ್ ೨೦೦೫ರಂದು ಶುರು. ಆ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿದ್ದ ನನಗೆ ಗ್ರಾಮೀಣ ಭಾರತದ ಹೊಸ ಬೆಳವಣಿಗೆಯೊಂದನ್ನು ಕಣ್ಣಾರೆ ಕಾಣುವ ಅವಕಾಶ.

ಸೂರಶೆಟ್ಟಿ ಕೊಪ್ಪವನ್ನು ಕೇಂದ್ರವಾಗಿ ಇಟ್ಟುಕೊಂಡು, ಬೈಫ್ ಗ್ರಾಮೀಣಾಭಿವೃದ್ಧ ಸಂಸ್ಥೆಯು ಸುತ್ತಲಿನ ೨೧ ಹಳ್ಳಿಗಳಲ್ಲಿ ಎಂಟು ವರುಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿತು. ಇವುಗಳ ಫಲ ಆ ಹಳ್ಳಿಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಈ ಯೋಜನೆ ಕಾರ್ಯಗತವಾಗುವಾಗ ರೂಪುಗೊಂಡ ಸರ್ವೋದಯ ಮಹಾಸಂಘ ಅಲ್ಲಿನ ಪ್ರಗತಿ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡಿದೆ.

ಈ ಹಂತದಲ್ಲಿ, ಮಹಾಸಂಘದ ಮುಂದಾಳುಗಳಲ್ಲಿ ಮೂಡಿ ಬಂದದ್ದು "ಗ್ರಾಮಚೇತನ"ದ ಸ್ಥಾಪನೆಯ ಕನಸು. ತಾವು ಸಾಧಿಸಿದ ಪ್ರಗತಿಯನ್ನು ಇತರರಿಗೂ ತೋರಿಸಿ, ಆ ಮೂಲಕ ತಮ್ಮ ಪ್ರಗತಿ ಪ್ರಕ್ರಿಯೆಯನ್ನು ಹಂಚಿಕೊಳ್ಳಲು ತಮ್ಮದೇ ತರಬೇತಿ ಕೇಂದ್ರ ಆರಂಭಿಸುವ ಕನಸು.

ಡಿಸೆಂಬರ್ ೨೦೦೫ರಲ್ಲಿ ಅವರ ಕನಸು ನನಸಾಯಿತು. ಮಣ್ಣಿನ ಮಕ್ಕಳ ತರಬೇತಿ ಕೇಂದ್ರ ಅವರ ಹಳ್ಳಿ ನೆಲದಲ್ಲೇ ತಲೆಯೆತ್ತಿ ನಿಂತಿತು. ಪರ್ಯಾಯ ಕೃಷಿ ಮಾಧ್ಯಮ ಕೇಂದ್ರದ ಮೂರು ದಿನಗಳ ಶಿಬಿರ ಅಲ್ಲಿ ಜರಗಿದ ಮೊದಲ ತರಬೇತಿ ಕಾರ್ಯಕ್ರಮ.

ಇದೆಲ್ಲ ಶುರುವಾದದ್ದು ೧೯೯೬ರಲ್ಲಿ - ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕುಗಳಲ್ಲಿ "ಸುಸ್ಥಿರ ಅಭಿವೃದ್ಧಿಗಾಗಿ ತಂತ್ರಜ್ನಾನಗಳ ವರ್ಗಾವಣೆ” ಎಂಬ ಯೋಜನೆಯನ್ನು ಕೈಗೆತ್ತಿಕೊಂಡಾಗ. ಅದನ್ನು ಕಾರ್ಯಗತಗೊಳಿಸಲಿಕ್ಕಾಗಿ  ಹಳ್ಳಿಗರ ಸಂಘಗಳು ರೂಪ ತಳೆದವು. ಇವುಗಳ ಒಕ್ಕೂಟವೇ ಸರ್ವೊದಯ ಮಹಾಸಂಘ.

ಮಹಾಸಂಘವು ಅಲ್ಲಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹತ್ತುಹಲವು. ಪ್ರತಿ ವರುಷ ಸ್ನೇಹಜಾತ್ರೆಯ ಆಚರಣೆ. ಅದು ಒಕ್ಕೂಟದ ೧೬೧ ಸಂಘಗಳ ಸದಸ್ಯರು ಒಂದೆಡೆ ಸೇರಿ ಸಂಭಮಿಸುವ ಜಾತ್ರೆ. ವರುಷವರುಷವೂ ಸಾಮೂಹಿಕ ವಿವಾಹ ಕಾರ್ಯಕ್ರಮ. ಇದು ಸಾಮಾಜಿಕ ಸುಧಾರಣೆಯತ್ತ ಪುಟ್ಟ ಹೆಜ್ಜೆ. ಬೀಜಗಳನ್ನು ಸಗಟಾಗಿ ಖರೀದಿಸಿ, ಸದಸ್ಯರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸುವುದು ಇನ್ನೊಂದು ದೂರಾಲೋಚನೆಯ ಕಾರ್ಯಕ್ರಮ. ಪ್ರತಿ ವರುಷ ಸಾವಿರಾರು ಸಸಿ ನೆಡುವ ಹಬ್ಬವೇ "ಹಸುರು ಹಬ್ಬ.”

ಸದಸ್ಯರಿಗೆ ಆರ್ಥಿಕ ಬೆಂಬಲ ನೀಡಲಿಕ್ಕಾಗಿ ವಿದ್ಯಾನಿಧಿ, ಆರೋಗ್ಯ ನಿಧಿ ಮತ್ತು ತೋಟಗಾರಿಕಾ ನಿಧಿ ಯೋಜನೆಗಳ ಮೂಲಕ ಸಾಲ ಒದಗಿಸಲಾಗುತ್ತಿದೆ. ಕೃಷಿ ಅಭಿವೃದ್ಧಿಗಾಗಿ ಸದಸ್ಯ ರೈತರು ಪಡೆದ ಸಾಲದ ಹೂಡಿಕೆಯಿಂದಾಗಿ ಹಾಗೂ ಸುಧಾರಿತ ಕೃಷಿಕ್ರಮಗಳ ಅಳವಡಿಕೆಯಿಂದಾಗಿ ಅವರ ಹೊಲಗಳಲ್ಲಿ ಆಗಿರುವ ಕೃಷಿಯ ಪರಿವರ್ತನೆ ಎದ್ದು ಕಾಣುತ್ತದೆ. ಅಲ್ಲಿನ ಮಣ್ಣಿಗೆ ಹೊಂದುವ ಮೇವಿನ ಬೆಳೆ, ಹಣ್ಣಿನ ಬೆಳೆ ಮತ್ತು ಮರಬೆಳೆಗಳ ಕೃಷಿ ಹಾಗೂ ಆಡು ಸಾಕಣೆ ಈ ಪರಿವರ್ತನೆಯ ಪ್ರಧಾನ ಅಂಶಗಳು. ಇದೆಲ್ಲದರ ಪರಿಣಾಮವಾಗಿ ಸದಸ್ಯರ ಕುಟುಂಬಗಳ ಜೀವನಮಟ್ಟದಲ್ಲಿ ಆಗಿರುವ ಸುಧಾರಣೆಯನ್ನು ಅವರ ಮನೆಗಳಿಗೆ ಹೋಗಿಯೇ ತಿಳಿಯಬೇಕು.

ಸರ್ವೋದಯ ಮಹಾಸಂಘದ ಕಾರ್ಯಕ್ರಮಗಳ ಸರಣಿಗೆ ಇತ್ತೀಚೆಗಿನ ಸೇರ್ಪಡೆ “ಗ್ರಾಮಚೇತನ." ಮಹಾಸಂಘಕ್ಕೆ ಒಳಪಟ್ಟ ೧೬೧ ಸಂಘಗಳ ೨,೫೦೦ ಸದಸ್ಯರ ದೇಣಿಗೆಯಿಂದ ಮತ್ತು ಗ್ರಾಮವಿಕಾಸ ಸಮಿತಿಗಳ ಸಹಕಾರದಿಂದ ಸುಮಾರು ೧೫ ಲಕ್ಷ ರೂಪಾಯಿ ವೆಚ್ಚದಲ್ಲಿ ಇದರ ನಿರ್ಮಾಣ.

ಹಳ್ಳಿಯಲ್ಲಿದ್ದರೂ ಗ್ರಾಮಚೇತನದಲ್ಲಿ ತರಬೇತಿಗಾಗಿ ಉತ್ತಮ ವ್ಯವಸ್ಥೆ. ಕಚೇರಿ, ತರಗತಿ, ಊಟ-ಉಪಾಹಾರ ಮತ್ತು ೫೦ ಜನರ ವಾಸಕ್ಕಾಗಿ ಪ್ರತ್ಯೇಕ ಕುಟೀರಗಳು. ಅದಲ್ಲದೆ, ಮಹಡಿ ಸಹಿತವಾದ ಪ್ರಧಾನ ಕುಟೀರ. ಇವೆಲ್ಲದಕ್ಕೂ ಹಂಚಿನ ಚಾವಣಿ. ಊಟವಸತಿಗೆ ಅಚ್ಚುಕಟ್ಟಾದ ವ್ಯವಸ್ಥೆ. ಅಲ್ಲಿಗೆ ಬಂದವರಿಗೆಲ್ಲ ಮನೆಯವರಂತೆಯೇ ಉಪಚಾರ, ಆತಿಥ್ಯ.

ಸಾವಯವ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಎರೆಹುಳಗೊಬ್ಬರ ತಯಾರಿ, ಬರನಿರೋಧಕ ಕೃಷಿಕ್ರಮಗಳು, ಗ್ರಾಮೀಣ ಅಭಿವೃದ್ಧಿ - ಇಂತಹ ಹತ್ತುಹಲವು ವಿಷಯಗಳ ಬಗ್ಗೆ “ಗ್ರಾಮಚೇತನ" ತರಬೇತಿಗಳನ್ನು ನಡೆಸುತ್ತದೆ. ಇಲ್ಲಿ ತರಬೇತಿ ನೀಡುವವರು ರೈತರು ಹಾಗೂ ಅಭಿವೃದ್ಧಿ ಕಾರ್ಯಕರ್ತರು. ತಮ್ಮ ಅನುಭವವೇ ಅವರು ಹೇಳುವ ಪಾಠ. ಈ ಪಾಠಗಳಲ್ಲಿ ಕೇಳಿದ್ದನ್ನು ಕಾಣಲು ಸುತ್ತಮುತ್ತಲಿನ ಹಳ್ಳಿಗಳ ಸದಸ್ಯರ ಹೊಲಗಳಿಗೆ ಭೇಟಿಯ ಕಾರ್ಯಕ್ರಮ.

ಗ್ರಾಮಚೇತನದೊಳಗೆ ಕಾಲಿಡುವಾಗ ಎದುರಾಗುವ ಕಲ್ಲಿನ ಫಲಕದಲ್ಲಿ ಹೀಗಿದೆ: “ಸ್ವಾಗತ. ಗ್ರಾಮಚೇತನ ಬರೀ ತರಬೇತಿ ಕೇಂದ್ರವಲ್ಲ. ಹಳ್ಳಿಗಳನ್ನು ಕಟ್ಟುವ ಕನಸು. ಎರಡು ಸಾವಿರಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ಸೇರಿ ಇದನ್ನು ಕಟ್ಟಿವೆ. ಗ್ರಾಮಚೇತನದ ನಿಮ್ಮ ಭೇಟಿ, ನಿಮ್ಮ ಹಳ್ಳಿಗಳನ್ನು ಕಟ್ಟುವ ಕನಸನ್ನು ನಿಮ್ಮಲ್ಲಿ ಮೂಡಿಸಿದರೆ ಕೇಂದ್ರ ಸಾರ್ಥಕ.” ಗ್ರಾಮಚೇತನದಿಂದಾಗಿ ಅಂತಹ ಕನಸು ಸಾವಿರಾರು ಜನರ ಮನಸುಗಳಲ್ಲಿ ಅರಳಲಿ.

ಫೋಟೋ ೧: ಗ್ರಾಮಚೇತನದ ಪ್ರವೇಶದ್ವಾರ
ಫೋಟೋ ೨: ಗ್ರಾಮಚೇತನದ ಪ್ರಧಾನ ಕಟ್ಟಡ
ಫೋಟೋ ೩: ಗ್ರಾಮಚೇತನದ ಪಾಠದ ಕೊಠಡಿ
ಫೋಟೋ ೪: ಗ್ರಾಮಚೇತನದ ಪ್ರಥಮ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು ಮತ್ತು ಭಾಗಿಗಳು