“ನನಗೆ ಧೈರ್ಯ ಇಲ್ಲ !”
ಇವತ್ತು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ಇಳಿ ಹೊತ್ತಿನಲ್ಲಿ ನನ್ನ ಆಫೀಸಿಗೆ ಬಂದವರು ಮಾತನಾಡುತ್ತಾ ಮಾತನಾಡುತ್ತಾ ನನ್ನಲ್ಲಿ "ನೀವು ಫೇಸ್ಬುಕ್, ವಾಟ್ಸಾಪಿನಲ್ಲೆಲ್ಲಾ ಬರೀತೀರಲ್ಲಾ, ನಾನು ಪ್ರತಿದಿನ ನಿಮ್ಮ ಲೇಖನ, ಕವನಗಳನ್ನು ತಪ್ಪದೇ ಓದ್ತೇನೆ! ನೀವ್ಯಾಕೆ ರಾಜಕೀಯದ ಬಗ್ಗೆ ಬರೆಯುವುದಿಲ್ಲ?!" ಅಂತ ಪ್ರಶ್ನೆ ಮಾಡಿದರು.
"ನನಗೆ ಧೈರ್ಯ ಇಲ್ಲ!" ಅಂದೆ.
"ಅಯ್ಯೋ....ಇದು ಒಳ್ಳೇ ಜೋಕ್ ಮಾರ್ರೆ ನಿಮ್ದು! ರಾಜಕೀಯದ ಬಗ್ಗೆ ಬರೀಬೇಕಾದ್ರೆ ಧೈರ್ಯ ಯಾಕೆ ಬೇಕು?! ನೀವೆಂತ ಯುದ್ಧಕ್ಕೆ ಕರಿಯುದಾ?! ನಿಮ್ಗೇನು ಧೈರ್ಯ ಕಡಿಮೆ ಆಗಿದಾ?!" ಅಂತ ತಮ್ಮ ಕೋರೆ ಹಲ್ಲುಗಳನ್ನು ತೋರಿಸುವಂತೆ ನಕ್ಕು "ಅದರಲ್ಲೂ ಏನಾದ್ರೂ ವಕೀಲ್ರ ಗಿಮಿಕ್ ಉಂಟಾ?!" ಅಂತ ಮತ್ತೆ ಪ್ರಶ್ನಾರ್ಥಕ ಚಿಹ್ನೆಯನ್ನು ತನ್ನೆರಡೂ ಹುಬ್ಬುಗಳನ್ನು ಮೇಲೇರಿಸಿ ಮೂಗಿನ ಸೊಳ್ಳೆಗಳನ್ನು ಅಗಲಿಸಿ ಉತ್ತರದ ನಿರೀಕ್ಷೆಯನ್ನು ಸಾರಿ ಹೇಳುವ ಮುಖಭಾವದಿಂದ ನನ್ನನ್ನು ದಿಟ್ಟಿಸಿದರು!
ನಾನಾಗ ಉತ್ತರಿಸಲೇ ಬೇಕು ಎಂಬಂತಿತ್ತು ಅವರ ಮುಖಭಾವ!!
"ನೋಡಿ ಇವ್ರೆ ನಾನು ಇವತ್ತು ಸೋನಿಯಾ ಗಾಂಧಿಯನ್ನೋ, ರಾಹುಲ್ ಗಾಂಧಿಯನ್ನೋ, ಮೋದಿಯವರನ್ನೋ, ಕುಮಾರಸ್ವಾಮಿಯನ್ನೋ ಹೀಯಾಳಿಸಿಯೋ, ವ್ಯಂಗ್ಯ ಮಾಡಿಯೋ, ಕೆಟ್ಟ ಶಬ್ದ ಪ್ರಯೋಗಿಸಿಯೋ ಬೈದು ಬರೆಯಬಹುದು! ಒಂದಷ್ಟು ಜನ ನನ್ನನ್ನು ಹೊಗಳಿಯಾರು, ಮತ್ತೊಂದಷ್ಟು ಜನ ನನ್ನನ್ನು ತೆಗಳಿಯಾರು! ನನ್ನ ಅಧೈರ್ಯದ ವಿಷಯ ಅದಲ್ಲ! ನಾಳೆ ಅದೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋದಿ, ಕುಮಾರಸ್ವಾಮಿ ಯಾರಾದರೂ ಅಚಾನಕ್ಕಾಗಿ ನನ್ನ ಮನೆಯಂಗಳಕ್ಕೆ ಬಂದರೆ ಅಥವಾ ಮುಖತಃ ಮಾತನಾಡಲು ಸಿಕ್ಕರೆ, ನಾನು ಅದೇ ಶಬ್ದಗಳನ್ನು ಅವರ ವಿರುದ್ಧ ಪ್ರಯೋಗಿಸುವುದು ನನ್ನಿಂದಾಗುತ್ತದೆಯೇ?! ಖಂಡಿತವಾಗಿಯೂ ನನಗೂ ಸಾಧ್ಯವಿಲ್ಲ, ರಾಜಕೀಯದ ಬಗ್ಗೆ ಕೊರೆದು ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಬರೆಯುವ (ಕೊರೆಯುವ) ಯಾರಿಗೂ ಸಾಧ್ಯವಿಲ್ಲ! ಬದಲಿಗೆ ಅವರು ನನ್ನ ಮನೆಯಂಗಳಕ್ಕೆ ಬಂದುದೇ ನನ್ನ ಜೀವಮಾನದ ಭಾಗ್ಯ ಅಂತ ಮನೆಯೊಳಗೆ ಕರೆದು ಸತ್ಕರಿಸುವುದಿಲ್ಲವೇ?! ಫೋಟೋ ತೆಗೆಸಿಕೊಳ್ಳುವುದಿಲ್ಲವೇ?! ಹಾಗಾಗಿ ನನಗೆ ನಿಜ ಜೀವನದಲ್ಲಿ ಯಾವುದು ಸಾಧ್ಯವೋ ಅದನ್ನು ಮಾತ್ರ ನಾನು ಮಾಡಬಯಸುತ್ತೇನೆಯೇ ಹೊರತು ಪರದೆಯ ಹಿಂದಿನಿಂದ ಆಡ ಬಾರದ್ದನ್ನು ಆಡಿ, ಫೇಸ್ಬುಕ್ ವಾಟ್ಸಾಪಿನಲ್ಲಿ ಬರೆದುಕೊಂಡು ದೊಡ್ಡ ವಿಮರ್ಶಕ ಅಂತ ಅನ್ನಿಸಿಕೊಳ್ಳುವುದರಲ್ಲಿ ಕಿಂಚಿತ್ತೂ ಅಭಿಲಾಷೆಯಿಲ್ಲ! ಇಷ್ಟವೂ ಇಲ್ಲ! ಅದಕ್ಕೆ ನನ್ನ ಮನಸ್ಸು ಒಪ್ಪುದೂ ಇಲ್ಲ! ನಾವು ಮುಖತಾ ಸಿಕ್ಕಾಗ ಹೇಗೆ ಮಾತನಾಡಲು ಸಾಧ್ಯವೋ ಹಾಗೆಯೇ ಬರವಣಿಗೆಯೂ ಇರಬೇಕು ತಾನೆ?! ಏನಂತೀರಿ?!" ಅಂತ ಸವಾಲೆಸೆದು ಮುಗುಳ್ನಕ್ಕೆ!
ಅಷ್ಟು ಹೊತ್ತಿಗೆ ಅವರಿಗೆ ಯಾರದ್ದೋ ಫೋನ್ ಕರೆ ಬಂತು! ಮೊಬೈಲ್ ರಿಂಗಣಿಸಿತು! ಮೊಬೈಲ್ ಎತ್ತಿಕೊಂಡು ಒಂದು ನಿಮಿಷ ಫೋನಲ್ಲಿ ಮಾತಾಡ್ತೇನೆ ಎಂಬಂತೆ ಕೈಸನ್ನೆಯಲ್ಲೇ ಮಾತಿಗೆ ನನ್ನ ಅನುಮತಿ ಕೋರಿ ಮಾತು ಮುಗಿಸಿದ ಮೇಲೆ ವಿಷಯಾಂತರದ ಕೂಪದೊಳಗೆ ಬಿದ್ದು ಮೇಲೇಳಲಾಗದವರಂತೆ, ಮಾತಿನ ವಿಷಯ ಮರೆತವರಂತೆ ಗಂಭೀರವಾಗಿ ನೇರ ಕೇಸಿನ ವಿಚಾರ ಮಾತನಾಡಲು ಶುರುವಿಟ್ಟರು! ನಾನೂ ಮತ್ತೆ ಪುನಃ ಅವರ ಪ್ರಶ್ನೆಯನ್ನು ಕೆದಕುವ ಗೋಜಿಗೆ ಹೋಗಲಿಲ್ಲ!
-’ಮೌನಮುಖಿ’, ಅತ್ರಾಡಿ, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ