“ನೂರು ರುಪಾಯಿ” ಎಂಬ ಸುಂದರ ಕಲ್ಪನೆ ಮತ್ತು ವಾಸ್ತವ
ಸಿನಿಮಾ ಎಂದರೇನು? ಎನ್ನುವ ಪ್ರಶ್ನೆಗೆ, ನನ್ನಂತವರು “ಬದುಕೇ ಸಿನಿಮಾ” ಎಂಬ ಉತ್ತರ ನೀಡಬಹುದೇನೋ, ಸಿನಿಮಾದ ತಾಕತ್ತೇ ಅಂತದ್ದು. ಹಾಗೆ ಬದುಕಿನ ಸಿನಿಮಾವನ್ನು ಕಂಡ ಅನುಭವ ನಿನ್ನೆ ನನಗಾಯಿತು.
ನಿನ್ನೆ ಸಂಜೆ ಕೇರಳದ ಕಲ್ಲಿನ ಗುಡ್ಡದ ಮೇಲೆ ಕುಳಿತು, ಹುತ್ತವೊಂದನ್ನು ವೀಕ್ಷಿಸುತ್ತಿದ್ದೆ. ಆಗ ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ಗೆಳೆಯ ಮಹೇಶ್ ಕರೆ ಮಾಡಿ, “ನೂರು ರುಪಾಯಿ” ಎಂಬ ಕನ್ನಡ ಕಿರುಚಿತ್ರ ಯೂ-ಟೂಬಿನಲ್ಲಿದೆ ನೋಡು, ಬಹಳ ಚೆನ್ನಾಗಿದೆ ಎಂದು ಹೇಳಿದ. ವಾಸ್ತವದಲ್ಲಿ ಮಹೇಶ್ ಸಿನಿಮಾದ ಆಳಕ್ಕೆ ಇಳಿದು, ಅದರ ತಾಂತ್ರಿಕತೆಯನ್ನೆಲ್ಲ ಪರೀಕ್ಷೆ ಮಾಡಿ ನೋಡುವ ಒಬ್ಬ ನಿರ್ದೇಶಕ. ಜೊತೆಗೆ ಬಹಳ ಬಾರಿ ಅನೇಕ ಸಿನಿಮಾದ ಒಳಗುಟ್ಟುಗಳನ್ನು ನನಗೆ ಹೇಳಿಕೊಟ್ಟಿದ್ದಾನೆ ಕೂಡ, ಮಹೇಶ್ ಸುಮ್ಮನೆ ಯಾವುದೇ ಚಿತ್ರವನ್ನು ಮೆಚ್ಚುವುದಿಲ್ಲ, ಮೆಚ್ಚಿದ್ದಕ್ಕೆ ಅವನ ಬಳಿ ಕರಾರುವಾಕ್ಕು ಕಾರಣಗಳಿರುತ್ತವೆ. ಹೀಗೆ ಅಳೆದು ತೂಗಿ, ಪರೀಕ್ಷಿಸಿ ಒಪ್ಪುವ ಮಹೇಶನೇ ಚಿತ್ರವೊಂದು ಇಷ್ಟೊಂದು ಚೆನ್ನಾಗಿದೆ ಎಂದು ಹೇಳಿದಾಗ, ನನಗೆ ಆ ಚಿತ್ರದ ಬಗ್ಗೆ ಬಹಳ ಕೂತಹಲ ಮೂಡಿತು, ಸೀದ ಮನೆಗೆ ಬಂದು, “ನೂರು ರುಪಾಯಿ” ಚಿತ್ರವನ್ನು ಡೌನ್-ಲೋಡ್ ಗೆ ಇಟ್ಟು, ರಾತ್ರಿ ಊಟ ಮುಗಿಸಲು ಹೊರ ಹೋದೆ, ಊಟ ಮುಗಿಸಿ ಬರುವಾಗ ಚಿತ್ರ ಡೌನ್ಲೋಡ್ ಆಗಿತ್ತು. ತುಂಬಿದ ಹೊಟ್ಟೆಯೊಂದಿಗೆ, ಚಿತ್ರವನ್ನು ನೋಡಲಾರಂಭಿಸಿದೆ,,,, ನಿರ್ದೇಶನ “ಪ್ರಶಾಂತ್ ರಾಜ್”
ಹಳ್ಳಿಯ ಸೊಗಡಿನೊಂದಿಗೆ ಪ್ರಾರಂಭವಾಗುವ ಚಿತ್ರ, ಅರವಿಂದ್ ಎಂಬ ಹುಡುಗನ ಸುತ್ತ ಸುತ್ತುತ್ತದೆ, ಆದರೆ ವಿಷಯದ ಆಳ ಮಾತ್ರ, ವಾಸ್ತವದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ. ನಾನಿಲ್ಲಿ, ಚಿತ್ರದ ಬಗೆಗೆ ಮಾತನಾಡಿದರೆ, ಬಹುಷಃ ಚಿತ್ರವನ್ನು ನೋಡಬೇಕಾಗಿರುವವರ ಮೇಲೆ “ನನ್ನ ದೃಷ್ಟಿಯಲ್ಲಿ ಚಿತ್ರವನ್ನು ನೋಡುವ ಪ್ರಭಾವ” ಬೀಳಬಹುದೇನೋ, ಅದಕ್ಕಾಗಿ ಚಿತ್ರವನ್ನು ನೋಡುಗನು ಆನಂದಿಸಲು, ಅವರ ಇಷ್ಟಕ್ಕೆ,ಅವರ ಭಾವಕ್ಕೆ ಬಿಟ್ಟುಕೊಡುತ್ತಿದ್ದೇನೆ,
ಚಿತ್ರದ ಕೊಂಡಿ : ಕ್ಲಿಕ್ಕಿಸಿ
ನನಗಾದ ಭಾವನಾತ್ಮಕ ಸೆಳೆತ : “ನೂರು ರುಪಾಯಿ” ನನ್ನನ್ನು ಸಮ್ಮೋಹನ ಗೊಳಿಸಿತು, ಭಾವನಾತ್ಮಕ ಸೆಳೆತಕ್ಕೆ ಎಳೆಯಿತು, ಬಾಲ್ಯದ ಅಂಚಿಗೆ ಕರೆದೊಯ್ದಿತು, ಅರವಿಂದನ ಸ್ಥಾನದಲ್ಲಿ ನಾನು ನಿಂತು ಜಗತ್ತನ್ನು ನೋಡುವಂತೆ ಮಾಡಿತು, ಸಗಣಿಯ ಪರಿಮಳ ಮೂಗಿಗೆ ಬಡಿದು ನನ್ನೊಳಗಿನ ಮಾನವತೆ ಜಾಗೃತವಾಯಿತು, ನನ್ನೊಳಗೆ ಮಲಗಿದ್ದ ಗಾಂಧಿ ನಿಧಾನಕ್ಕೆ ನಸುನಕ್ಕರು.
ಆ ಹುಡುಗನ ನಟನೆಯಂತೂ ಮನಸೂರೆಗೊಳಿಸಿತು, ಸಿನಿಮಾ ಎಂದರೆ ಹೀಗೆ ಇರಬೇಕು ಎನಿಸಿತು, ಎಷ್ಟೊಂದು ಅಚ್ಚುಕಟ್ಟಾಗಿ ಬೆಸೆದ ಅನುಭವಗಳು,ಯಾವ ಅಬ್ಬರವೂ ಇಲ್ಲದೆ ಸರಳವಾಗಿ ಹೇಳಿದ ಕಥೆ, ಎಲ್ಲವೂ ಸುಂದರ.
ಎಲ್ಲರೂ ನೋಡಲೇಬೇಕಾದ ಸಿನಿಮಾ “ನೂರು ರುಪಾಯಿ”, ದಯವಿಟ್ಟು ಈ ಸಿನಿಮಾವನ್ನು ನೋಡಿ, ಆಶಯವನ್ನು ಅರಿತು ಪ್ರೋತ್ಸಾಹಿಸಿ.
ಹೆತ್ತೊಡಲ ಪೂಜಿಸಿ,,,
ನಿಂತೊಡಲ ನಮಿಸಿ,,,,
ಮಾನವರಾಗೋಣ ಮೊದಲು,,,,,
ಮತ್ತೆ ಮತ್ತೆ ಮಾನವರಾಗುತ್ತಲೇ ಇರೋಣ.
–ಜಿ ಕೆ ನವೀನ್ ಕುಮಾರ್
Comments
ಉ: “ನೂರು ರುಪಾಯಿ” ಎಂಬ ಸುಂದರ ಕಲ್ಪನೆ ಮತ್ತು ವಾಸ್ತವ
ಕ್ಲಿಕ್ಕಿಸಿದಾಗ "This video is unavailable." ಎಂದು ಬರುತ್ತಿದೆ. ಇನ್ನೊಮ್ಮೆ ಪ್ರಯತ್ನಿಸಿ ನೋಡುವೆ.