“ಹೊಸಗನ್ನಡ ಕಾವ್ಯಶ್ರೀ” (ಭಾಗ ೨೮) - ಮುಳಿಯ ತಿಮ್ಮಪ್ಪಯ್ಯ

“ಹೊಸಗನ್ನಡ ಕಾವ್ಯಶ್ರೀ” (ಭಾಗ ೨೮) - ಮುಳಿಯ ತಿಮ್ಮಪ್ಪಯ್ಯ

ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು. ೧೯೧೧ಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮುದ್ದಣನ ರಾಮಾಶ್ವಮೇಧ ಚೌಕಟ್ಟಿನಲ್ಲಿ ಮೂಡಿ ಬಂದ ಕೃತಿ ‘ಚಂದ್ರಾವಳಿ ವಿಲಾಸ.’ ಭಾಗವತದಲ್ಲಿ ಬರುವ ಶಂಭಾಸುರನ ಕಥೆಯಾಧಾರಿತ ಹಳೆಗನ್ನಡದ ಛಂದಸ್ಸಿನಲ್ಲಿ ಮೂಡಿ ಬಂದದ್ದು ‘ಸೊಬಗಿನ ಬಳ್ಳಿ.’ ಕರ್ಣನ ಕುರಿತಾದ ಗದ್ಯ ಕಥನ ನಡೆಯನಾಡು-ಮಹಾಭಾರತದ ಕಥೆ ಆಧಾರಿತ. ಪ್ರೇಮಪಾಶವೆಂಬ ಮತ್ತೊಂದು ಕೃತಿ, ನೀತಿ ವಾಕ್ಯ ಆಧಾರಿತ ಕಾಲ್ಪನಿಕ ಕಥನ ಕಾವ್ಯ. ಬಾಲ್ಯದಿಂದಲೇ ತೊರವೆ ರಾಮಾಯಣಕ್ಕೆ ಮಾರು ಹೋಗಿ ರಚಿಸಿದ ಕೃತಿ ‘ನವನೀತ ರಾಮಾಯಣ’. ಪಶ್ಚಾತ್ತಾಪ ಮತ್ತು ವೀರ ಬಂಕೇಯ ಎಂಬ ಎರಡು ಕಾದಂಬರಿ ರಚಿಸಿದ್ದಾರೆ. ಪಶ್ಚಾತ್ತಾಪ ಅವರ ಸಾಮಾಜಿಕ ಕಾದಂಬರಿ. ವೀರ ಬಂಕೇಯ ಐತಿಹಾಸಿಕ ವಸ್ತುವುಳ್ಳ ಕಾದಂಬರಿ. ದಕ್ಷಿಣ ಕನ್ನಡ ಜಿಲ್ಲೆಯವರಾದ್ದರಿಂದ ಯಕ್ಷಗಾನದಲ್ಲಿ ಬಹು ಆಸಕ್ತಿ ಹೊಂದಿದ್ದರು. ’ಪಾರ್ತಿಸುಬ್ಬ’, ‘ಸೂರ‍್ಯಕಾಂತಿ ಕಲ್ಯಾಣ’ ಯಕ್ಷಗಾನ ಕೃತಿಗಳಾಗಿವೆ. ‘ಹಗಲಿರುಳು’ ಇವರು ರಚಿಸಿದ ನಾಟಕ.  ಪಂಪನನ್ನು ಕುರಿತ ಸಂಶೋಧನಾ ಕೃತಿ ‘ನಾಡೋಜ ಪಂಪ’. ಇದರ ಜೊತೆಗೆ ಇವರ ಉಪನ್ಯಾಸಗಳು ಹಾಗೂ ಲೇಖನಗಳು ಗ್ರಂಥ ರೂಪದಲ್ಲಿ ಪ್ರಕಟಗೊಂಡಿವೆ. ೧೯೩೧ಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ಸಂದಿದೆ. ೧೯೫೦ರಲ್ಲಿ ನಿಧನರಾದರು. 

ಮುಳಿಯ ತಿಮ್ಮಪ್ಪಯ್ಯನವರು ಬರೆದ ಜಂಪೆ ರಗಳೆಯ ‘ಬನವಾಸಿ ನಾಡಿನಲ್ಲಿ' ಎನ್ನುವ ಸುದೀರ್ಘ ಕವನ ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿದೆ. ಇದರ ಆಯ್ದ ಭಾಗವನ್ನು ಮಾತ್ರ ಇಲ್ಲಿ ಪ್ರಕಟ ಮಾಡಿದ್ದೇವೆ.

ಬನವಾಸಿ ನಾಡಿನಲ್ಲಿ

(ಜಂಪೆ ರಗಳೆ)

ಪಡುಗಡಲು ತೆರೆಗೆಯ್ಗಳೆಂದಲೆಡೆವಿಡದೆ ಪಾ

ದಂಗಳಂ ಪೂಜಿಸುತ್ತಿರಲದಂ ಕೈಕೊಂಡು

ಭದ್ರಾಸನದೊಳೆರಗುತೋಲಗಿಸಿಕೊಳ್ಳುವೀ

ಪೌರಸ್ತ್ಯಧರ್ಮಾವತಾರಿ - ಮಲಯಾಚಲನ

ಭವ್ಯಕೃತಿಯನಂಗವಿನ್ಯಾಸದಂದವ

ನಲ್ಲಲ್ಲಿಗನುವಾಗಿ ನೆಲೆಗೊಂಡ ಮೈಗಟ್ಟಿ

ನೊಡ್ದಾರವಂ ನೋಡು - ಪುಣ್ಯ ಭಾಗಜನಾಗು.

ಅದೊ ಗಿರೀಶ್ವರನ ಬಗೆ ತಂಗಾಳಿಯೆಂದೆನಿಸಿ

ಬೀಸುತಿದೆ ; ತಳಿರ ನುಣ್ಬೆರಳುಗಳ ಸನ್ನೆಯಿಂ

ಬಗೆಬಗೆಯ ನಿಧಿಗೆ ಸನ್ನಿಧಿಯೆನಿಪ ತನ್ನಂತ

ರಂಗದಿಂ ಸೂಸುವಾ ಸಾರದಾ ಹೊಲಬರಿದು

ಹೀರಲೆಂದೈತರುವ ಭಾವಕರ ಕಂಗಳಿಗೆ

ನೀಲಾಂಜನಂ ಬಳಿದು ನೇರಾಗಿ ಕಾಣಿಸಲು

ಪರಿಮಳವನುಕ್ಕಿಸಲು ಹರಡಿಸಲು ಹಂಪಲಗ

ಳನ್ನೊಪ್ಪಿಸಲ್ಕೆಂದು ಕೈಯೆತ್ತಿರುವ ಬಳ್ಳಿ 

ಮರಗಳಂ, ಪರಿಸರದೊಳೆಡೆಗೊಂಡ ಗಿಡುಹೊದರು

ಗಳನಂತರದೊಳಿಟ್ಟು ಸಂಸಾರದೊಳವನೊಳ

ಕೊಳ್ಳಿದಂ ಕಾಡೆನುತಲವಗಣಿಸಿದರು, ಬೆರಿಯ

ಹೆಸರೆಲ್ಲ ಕೆಸರಾಗಿ ಕಾಲೊಂದಿ ಕಡಲೊಳಗೆ

ತೇಲುತ್ತಲಿಹುದೆಂಬುದನು ಬಗೆದು, ಮಾನಸ

ಕ್ಕೇರುತಿಳಿವಾಗಲಂದಂದಿಗಾಸರೆಯಪ್ಪ

ಭೂಧರವಿದನ್ನೊಂದಿದಾರಾಮಪಾದಂಗ

ಳೊಳಗೆಂದು ಮೇರಿಳಿತವಿಲ್ಲಿದೊಂದೇ ತೊರದೆ

ಳುಕ್ಕುಡಿಸುತಿರುವ ತಿಳಿನೀರಂ ಪರಾಂಬರಿಸಿ

ಹೀರುತ್ತ, ಬಿಂದುಬಿಂದುಗಳೊಡನೆ ಚೈತನ್ಯ

ನೇರುತೆಡೆವಡೆದು ಕಾವ್ಯಾತ್ಮದೊಡನೊಂದಾಗು !

 

ಇದೊ ಸರ್ರೆನುತ್ತಿಲ್ಲಿ ಚಿಲುಮೆಯಲಿ ಸೀನೀರ

ನಗರಾಜನೆದೆಯಕ್ಕರೊಸರಾಗಿ ಚಿಮ್ಮುತಿದೆ !

ಬಳ್ಳಿ ಗಿಡಮರಗಳಿಂ ಸೂಸೂತಿಹ ಬನರಾಣಿ

ಯನುರಾಗರಸವೆನಿಪ ಮಕರಂದ ಸಾರವದೊ

ಸುರಿಯುತೀ ಕಾಲ್ಬಿಡಿದು ಹೊನರೆದ್ದು ಹರಿಯುತಿದೆ !

ಎಲೆ ಮನವೆ ! ಸರದ್ವಯಂಗಳೊಳು ಮೇಲಿನದೆ

ಮೇಲೆಂಬ ಕೆಳಗಿನದೇ ಕೀಳೆಂಬ ಮಂಕು ನಿ

ನ್ನನ್ನುಳಿಯದಿರೆ ತಿಳಿವು ತೇಳಾಗಿ ಕಡಿವುದೈ !

ಸಾರಿದೆನು. ಭಾವಿಸೀ ಭೂಗರ್ಭದಿಂ ಕಾಲ

ಬೇದಕೆ ಸಿಲುಕದೊಂದೆ ತೆರನಾಗಿ ಜೀವನಂ 

ತಲೆಯೆತ್ತಿ ಹರಿಯುತಿದೆ ; ತಾನದರ ಕಾಲ್ಗೆರಗು

ತಲ್ಲವೇ ಮಧುವಿದೊಂದಾಗಿ ಸಾಗುತ್ತಿಹುದು?

ಈ ಜೇನೊಳಿಹುದಯ್ಯ ವಿಕೃತಿಯೋಗರವಂತು

ಟೀ ಶುದ್ಧಜಲದೊಳಿಹುದೈ ಪ್ರಕೃತಿಸಾರಮಂ

ತೆರಡನೊಡವೆರಸುತ್ತ ಸಂಸಾರಭಾಜನದಿ

ಸವಿಗೊಡಲಿದುವೆ ಧಾರ್ಮಿಕರಸಾಯನವಹುದು !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)