10 ಲಕ್ಷ ಮನುಷ್ಯರ ಬದುಕು ಆತಂಕದಲ್ಲಿ...
ಅವರು ಹಿಂದುಗಳೋ, ಕ್ರಿಶ್ಚಿಯನ್ನರೋ, ಮುಸ್ಲಿಮರೋ, ಯಹೂದಿಗಳೋ, ನಾಜಿಗಳೋ, ಬೌದ್ಧರೋ, ಸಿಖ್ಖರೋ, ಜೈನರೋ, ಪಾರ್ಸಿಗಳೋ....ಒಟ್ಟಿನಲ್ಲಿ ಮನುಷ್ಯರು. ಈ ಕ್ರೌರ್ಯಕ್ಕೆ ಧರ್ಮ ಕಾರಣವೋ, ದೇವರು ಕಾರಣವೋ, ಜಾಗದ ಕಾರಣವೋ, ಧರ್ಮ ಗ್ರಂಥಗಳು ಕಾರಣವೋ....ಒಟ್ಟಿನಲ್ಲಿ ಮನುಷ್ಯರು.
ತಾಯಿಯ ಗರ್ಭದಲ್ಲಿ ಮಗುವಿನ ರೂಪ ಪಡೆಯುವ ವೀರ್ಯಾಣು ನಿಧಾನವಾಗಿ ಬೆಳೆದು ಒಂಬತ್ತು ತಿಂಗಳ ನಂತರ ಹೊರಬರುತ್ತದೆ. ಅದಕ್ಕೆ ಜಗತ್ತಿನ ಅರಿವೇ ಇರುವುದಿಲ್ಲ. ಕಣ್ಣು ಬಿಟ್ಟು ನೋಡುತ್ತಾ, ಕಿವಿಯಿಂದ ಆಲಿಸುತ್ತಾ, ಬಾಯಿಯಿಂದ ಆಸ್ವಾಧಿಸುತ್ತಾ, ಮೂಗಿನಿಂದ ಘ್ರಾಣಿಸುತ್ತಾ, ಚರ್ಮದ ಸ್ಪರ್ಶವನ್ನು ಅನುಭವಿಸುತ್ತಾ, ನಗುತ್ತಾ, ಅಳುತ್ತಾ ಹೊರ ಪ್ರಪಂಚ ಅರಿವಾಗತೊಡಗುತ್ತದೆ.
ತಾನು ಹುಟ್ಟಿದ ಪ್ರದೇಶ, ತನ್ನ ತಂದೆ ತಾಯಿ, ಅವರ ಭಾಷೆ, ಅವರ ಜಾತಿ, ಅವರ ಧರ್ಮ, ಅವರ ಆರ್ಥಿಕ ಪರಿಸ್ಥಿತಿ ಎಲ್ಲವೂ ಅರ್ಥವಾಗುವ ವೇಳೆಗೆ ಬಹುತೇಕ ಮಕ್ಕಳು ಶ್ರೇಷ್ಠತೆಯ ವ್ಯಸನಕ್ಕೆ ಬೀಳುತ್ತಾರೆ. ಅಲ್ಲಿಂದ ತಾನು ಮನುಷ್ಯ ಪ್ರಾಣಿ, ವೀರ್ಯಾಣುವಿನ ವಿಸೃತ ರೂಪ ಎಂಬುದನ್ನೇ ಮರೆಯಲಾಗುತ್ತದೆ. ಮತ್ತೊಂದು ಜೀವವನ್ನು ಕೊಲ್ಲುವ ಹಂತಕ್ಕೆ ಮನಸ್ಸು ಸಿದ್ದಗೊಳ್ಳುತ್ತದೆ.
ಒಂದು ಕಡೆ ಮನುಷ್ಯ ಅಭಿವೃದ್ಧಿಯ ಹಾದಿಯಲ್ಲಿ ಚಲಿಸುತ್ತಿದ್ದರೆ ಮತ್ತೊಂದು ಕಡೆ ವಿನಾಶದ ಬಾಗಿಲುಗಳು ತೆರೆಯುತ್ತಿದೆ. ಆದರೆ ಆತನ ದೇಹ ಮತ್ತು ಮನಸ್ಸು ಮಾತ್ರ ವಿಷಯುಕ್ತವಾಗುತ್ತಿದೆ. ಕರುಳು ಚುರ್ ಎನ್ನುವ ಆಂತರ್ಯದ ಭಾವ ಮಾತ್ರ ಬಹಳಷ್ಟು ಜನರಲ್ಲಿ ಕಾಣುತ್ತಲೇ ಇಲ್ಲ. ಸತ್ತವರು ಇಸ್ರೇಲಿಗಳು ಅಥವಾ ಪ್ಯಾಲಿಸ್ಟೈನಿಗಳು ಎಂದು ನೋಡಲಾಗುತ್ತದೆಯೇ ಹೊರತು ಮನುಷ್ಯರು ಎಂದು ಯಾರಿಗೂ ಅನಿಸುತ್ತಿಲ್ಲ. ಅವರು ಸತ್ತರೆ ಇವರಿಗೆ ಖುಷಿ. ಇವರು ಸತ್ತರೆ ಅವರಿಗೆ ಖುಷಿ. ಹೊಡೆದಾಡುವವರು ಇರಲಿ ನೋಡುವವರಲ್ಲಿಯೂ ಇದೇ ಮನೋಭಾವ. ಒಬ್ಬೊಬ್ಬರನ್ನು ಮತ್ತೊಬ್ಬರು ಬೆಂಬಲಿಸುತ್ತಾರೆ.
ಕ್ಷಮಿಸು ರಾಮ ಎಂಬ ದೇವರೇ, ಕ್ಷಮಿಸು ಅಲ್ಲಾ ಎಂಬ ದೇವರೇ, ಕ್ಷಮಿಸು ಯೇಸು ಎಂಬ ದೇವರೇ,..ಕ್ಷಮಿಸು ಕೃಷ್ಣಾ, ಪೈಗಂಬರ್, ಜೀಸಸ್.. ನೀವು ಸೃಷ್ಟಿಸಿದ್ದು ಅಥವಾ ನಿಮ್ಮನ್ನು ಸೃಷ್ಟಿಸಿದ್ದು ಮನುಷ್ಯರಲ್ಲ ರಾಕ್ಷಸರು. ಹುಟ್ಟಿದ ನೆಲದಲ್ಲಿಯೇ ನಾವು ಬೆತ್ತಲಾಗುತ್ತಿದ್ದೇವೆ. ಯಾವುದೇ ರೀತಿಯ ಹಿಂಸೆಯನ್ನು ನೇರವಾಗಿ ಖಂಡಿಸಲೇಬೇಕು. ಹಾಗೆಯೇ ಹಿಂಸೆಗೆ ಪ್ರಚೋದಿಸುವವರನ್ನು ಸಹ.
ಒಂದು ಸಮೂಹ ವಿವೇಚನೆ ಇಲ್ಲದೇ ಉದ್ದೇಶ ಪೂರ್ವಕವಾಗಿ ಮತ್ತೊಂದು ಸಮೂಹವನ್ನು ಪ್ರಚೋದಿಸುತ್ತದೆ, ಇನ್ನೊಂದು ಸಮೂಹ ವಿವೇಚನೆ ಇಲ್ಲದೇ ಅದನ್ನು ಪ್ರತಿಭಟಿಸುತ್ತದೆ. ಎರಡೂ ಸಮೂಹಗಳಿಗೆ ತಾಳ್ಮೆ ಮತ್ತು ಜವಾಬ್ದಾರಿ ಇಲ್ಲವಾಗಿದೆ.
ವಾಸ್ತವ ತುಂಬಾ ಕಠೋರವಾಗಿದೆ. ಸಾಮಾನ್ಯ ಜನರಾದ ನಾವು ಹೆಚ್ಚು ಮುಕ್ತವಾಗಿ ತುಂಬಾ ಪ್ರಾಮಾಣಿಕವಾಗಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ. ಆದರೆ ರಾಜಕೀಯ ಮತ್ತು ಧಾರ್ಮಿಕ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಅತ್ಯಂತ ತಂತ್ರಗಾರಿಕೆಯಿಂದ ಮಾತನಾಡುತ್ತಾರೆ. ಮೇಲ್ನೋಟಕ್ಕೆ ಅವರು ನಮ್ಮ ಧರ್ಮ ಮತ್ತು ದೇಶದ ರಕ್ಷಕರಂತೆ ಕಾಣುತ್ತಾರೆ. ಆದರೆ ವಾಸ್ತವವಾಗಿ ಅವರ ಮನಸ್ಸುಗಳು ವಿಷವಾಗಿರುತ್ತವೆ. ಪ್ರೀತಿಯ ಹೆಸರಲ್ಲಿ ದ್ವೇಷ, ಶಾಂತಿಯ ಹೆಸರಲ್ಲಿ ಹಿಂಸೆ, ಧರ್ಮದ ಹೆಸರಲ್ಲಿ ಕೊಲೆಗಳನ್ನು ಸಮರ್ಥಿಸುತ್ತಾರೆ ಮತ್ತು ಪ್ರಚೋದಿಸುತ್ತಾರೆ.
ಮಾತುಕತೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ. ಎಷ್ಟೇ ಬಾರಿ ವಿಫಲವಾದರು ಮತ್ತೆ ಮತ್ತೆ ಮಾತುಕತೆ ನಡೆಸುತ್ತಲೇ ಇರಬೇಕು. ಅಂತರರಾಷ್ಟ್ರೀಯ ನ್ಯಾಯಾಲಯಗಳು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ದ್ವಿಪಕ್ಷೀಯ ಮಾತುಕತೆ ಅಥವಾ ಇನ್ನೊಂದು ದೇಶದ ಮಧ್ಯಸ್ಥಿಕೆಯಲ್ಲಿ ನಿರಂತರ ಮಾತುಕತೆಗಳು ಮಾತ್ರವೇ ಪರಿಹಾರ. ಇಲ್ಲದಿದ್ದರೆ ವಿನಾಶ ಖಚಿತ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ