106 ಯಹೂದಿ ಕಥೆಗಳು

106 ಯಹೂದಿ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೊಧ್ಯಾ ಪ್ರಕಾಶನ, ಬೆಂಗಳೂರು, ಮೊ; ೯೬೨೦೯೧೬೯೯೬
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೨

ವಿಶಿಷ್ಟ, ವಿನೂತನ ಪುಸ್ತಕಗಳ ಸರಮಾಲೆಗಳನ್ನು ಹೊರತರುತ್ತಿರುವ ಅಯೋಧ್ಯಾ ಪ್ರಕಾಶನವು ರೋಹಿತ್ ಚಕ್ರತೀರ್ಥ ಅವರ 'ನೂರಾರು ಯಹೂದಿ ಕಥೆಗಳು' ಎಂಬ ಪುಟ್ಟ ಪುಸ್ತಕವನ್ನು ಹೊರತಂದಿದೆ. ಯಹೂದಿ ಕಥೆಗಳನ್ನು ನೀವು ಅಲ್ಲೊಂದು ಇಲ್ಲೊಂದು ಓದಿರಬಹುದು. ಆದರೆ ಒಂದೇ ಗುಕ್ಕಿಗೆ ಇಷ್ಟೊಂದು ಕಥೆಗಳನ್ನು ಓದುವ ಅವಕಾಶ ಸಿಗುವುದು ಅಪರೂಪ. ನೂರ ಆರು ಕಥೆಗಳನ್ನು 'ಮಂದಹಾಸ ಮಿನುಗಿಸುವ ನಗೆಮಿಂಚುಗಳು' ಎಂದು ಲೇಖಕರು ಕರೆದಿದ್ದಾರೆ.

ರೋಹಿತ್ ಚಕ್ರತೀರ್ಥ ಇವರು ತಮ್ಮ ಮುನ್ನುಡಿಯಲ್ಲಿ ಯಹೂದ್ಯರ ಜನಪದ ಕತೆಗಳ ಹಾಸ್ಯ - ಹಾಲಿನ ಮೇಲೆ ತೇಲುವ ತಿಳಿ ಕೆನೆಯ ಮಾದರಿಯದು. ಅಲ್ಲಿ ಧರ್ಮಗುರುವಿನ ಪೀಠದಲ್ಲಿ ಕೂತರೂ ಅದರ ಬಿಗುಮಾನವಿಲ್ಲದೆ ಹಾಸ್ಯ ಚಟಾಕಿ ಹಾರಿಸುವ, ತನ್ನ ಪೆದ್ದುತನದಿಂದಲೇ ಜನಕ್ಕೆ ಹತ್ತಿರವಾಗುವ ರಬೈ ಇದ್ದಾನೆ. ಪೆದ್ದು ಶಿಖಾಮಣಿಗಳ ನಡುವೆ ತುಸುವಾದರೂ ತಲೆ ಓಡಿಸುವ ಜಾನ ಯೋಷ್ಕ ಇದ್ದಾನೆ. ಇಡೀ ಜನತೆಯ ಪ್ರತಿನಿಧಿಯಂತೆ ಆಡುವ, ಸುಖಾಸುಮ್ಮನೆ ಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ಏಗುವ ಯೋಹನಂತಹ ಹತ್ತು ಹಲವಾರು ವ್ಯಕ್ತಿಗಳಿದ್ದಾರೆ. ಯಹೂದಿಗಳು ತಮ್ಮ ಜನಪದದಲ್ಲಿ ಹೆಲ್ಮ್ ಎಂಬ ದಡ್ಡ, ಅಮಾಯಕ ಮುಗ್ಧರೇ ತುಂಬಿರುವ ಒಂದು ಊರನ್ನೇ ಸೃಷ್ಟಿ ಮಾಡಿದ್ದಾರೆ ! ಹೆಲ್ಮ್ ನಗರದ ಜನ ಎಷ್ಟು ಪೆದ್ದರು ಎಂದರೆ ಹುಣ್ಣಿಮೆಯ ಇಡೀ ರಾತ್ರಿ ನಿದ್ದೆ ಬಿಟ್ಟು ಕಾದುಕೂತು, ಚಂದ್ರ ಮೂಡಿ ಊರ ಬಾವಿಯಲ್ಲಿ ಹಣಕಿಹಾಕುವ ಹೊತ್ತಿಗೆ ಸರಿಯಾಗಿ ಅವನನ್ನು ಹಿಡಿದು ಬಾವಿಗೆ ಬೀಗ ಜಡಿಯುವ ಬುದ್ಧಿವಂತರು. ! ಎಂಬ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾರೆ.

ಲೇಖಕರು ಯಹೂದ್ಯರು ಯಾರು? ಎಂಬ ಕುರಿತಾಗಿ ನಿಮಗಿರುವ ಕುತೂಹಲವನ್ನು ಅದಕ್ಕೆ ಸೂಕ್ತವಾದ ಉತ್ತರ ನೀಡುವುದರ ಮೂಲಕ ತಣಿಸುತ್ತಾರೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಜುಡಾಯಿಸಂ- ಜಗತ್ತಿನ ಅತಿ ಪ್ರಾಚೀನ ರಿಲಿಜನ್ ಎನಿಸಿದೆ. ಅಬ್ರಹಾಂ, ಯಹೂದ್ಯರ ಮೂಲಪುರುಷ. ಇವರ ಪವಿತ್ರ ಗ್ರಂಥ ತೋರಾಹ್. ಅಲ್ಲಿ ಬರೆದಿರುವ ಕಟ್ಟಳೆಗಳನ್ನು ಇಂದಿಗೂ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿರುವ ಯಹೂದಿಗಳಿದ್ದಾರೆ. ರೋಮನ್ನರ ದಾಳಿಗೆ ತುತ್ತಾಗಿ ಯಹೂದಿಗಳು ತಮ್ಮ ಮಾತೃಭೂಮಿಯನ್ನು ಬಿಟ್ಟು ಹೊರಡಬೇಕಾದ ಪ್ರಸಂಗ ಬಂತು.

ಯಹೂದಿ ಸಂಸ್ಕೃತಿಯಲ್ಲಿ ಬಳಸಲ್ಪಡುವ ಕೆಲ ಚಿನ್ಹೆ ಮತ್ತು ಪದ್ಧತಿಗಳನ್ನು ಲೇಖಕರು ಪಟ್ಟಿ ಮಾಡಿದ್ದಾರೆ. ಕ್ಯಾಂಡಲ್, ಚಾಯ್ ಎಂಬ ಹೀಬ್ರೂ ಭಾಷೆಯ ಶಬ್ಧ. 'ಕೇಪಾ' ಎಂಬ ತಲೆಯ ಮೇಲಿನ ಟೋಪಿ, ಮಾಗೆನ್ ಡೇವಿಡ್ ಎಂಬ ಇಸ್ರೇಲ್ ದೇಶದ ಧ್ವಜ, ಮೆನೋರಾಹ್ ಎಂಬ ರಾಷ್ಟ್ರ ಲಾಂಛನ, ಮೆಜುಜಾಹ್, ಶೋಫರ್ ಎಂಬ ಪವಿತ್ರ ಗಾಳಿವಾದ್ಯ. ತಲ್ಲಿತ್ ಎನ್ನುವ ಶಾಲು, ತೆಫಿಲಿನ್ ಎನ್ನುವ ಚರ್ಮದ ಪಟ್ಟಿ, ಹಂಸ ಎನ್ನುವ ಹಸ್ತವನ್ನು ನೆನಪಿಸುವ ಒಂದು ಚಿನ್ಹೆ ಎಲ್ಲದರ ಬಗ್ಗೆ ವಿವರಗಳನ್ನು ನೀಡಿದ್ದಾರೆ.

ಪುಸ್ತಕದಲ್ಲಿ ೧೦೬ ಪುಟ್ಟ ಪುಟ್ಟ ಕಥೆಗಳಿವೆ. ಕಥೆಗಳಿಂದ ಒಂದು ಕಥೆಯನ್ನು ಆರಿಸಿ ನಿಮ್ಮ ಓದಿಗೆ ಇಲ್ಲಿ ನೀಡುತ್ತಿದ್ದೇವೆ. 'ನೇಣು' ಎಂಬ ಕಥೆಯನ್ನು ಓದಿದ ಬಳಿಕ ನೀವು ಉಳಿದ ನೂರ ಐದು ಕಥೆಗಳನ್ನು ಓದದೇ ಇರಲಾರಿರಿ.

ಜೈಲಿನಲ್ಲಿ ಹೇಗೋ ಹಗ್ಗ ಸಂಪಾದಿಸಿದ ಮೋಷೆ, ಅದರ ಒಂದು ತುದಿಯನ್ನು ಛಾವಣಿಯಲ್ಲಿದ್ದ ಕೊಕ್ಕೆಗೆ ಸಿಕ್ಕಿಸಿ ಇನ್ನೊಂದು ತುದಿಯನ್ನು ಕಾಲಿಗೆ ಕಟ್ಟಿಕೊಳ್ಳುತ್ತಿದ್ದ. ಅಷ್ಟು ಹೊತ್ತಿಗೆ ಜೈಲಿನ ಅಧಿಕಾರಿಗಳು ಅದನ್ನು ನೋಡಿದರು.

ಏನು ಮಾಡ್ತಾ ಇದ್ದೀಯಾ?' ಖಡಕ್ಕಾಗಿ ವಿಚಾರಿಸಿದರು.

ನೇಣು ಹಾಕಿಕೊಳ್ಳುತ್ತಿದ್ದೇನೆ

ಹಾಗಾದರೆ ಕುಣಿಕೆಯನ್ನು ಕಾಲಲ್ಲಲ್ಲ, ಕೊರಳಿಗೆ ಹಾಕಬೇಕು

ಅದನ್ನೂ ಪ್ರಯತ್ನಿಸಿದೆ. ಉಸಿರು ಕಟ್ಟಿತು ಅಂತ ನಿಲ್ಲಿಸಿ ಇಲ್ಲಿ ಹಾಕ್ಕೊಳ್ತಿದ್ದೇನೆ

ಕಥೆಗಳ ನಡುವೆ ಶೈಲೇಶ್ ಕುಮಾರ್ ಉಜಿರೆ ಅವರ ವ್ಯಂಗ್ಯ ಚಿತ್ರಗಳು ಓದಲು ಮುದನೀಡುತ್ತವೆ. ಸುಮಾರು ೧೦೦ ಪುಟಗಳ ಪುಸ್ತಕವನ್ನು ಕೈಗೆತ್ತಿಕೊಂಡರೆ, ಪೂರ್ತಿ ಓದಿಯೇ ಕೆಳಗಿಡಬಹುದು. ಅಷ್ಟು ಸೊಗಸಾಗಿದೆ.