141
ನಾನೇ ಧನ್ಯ, ನಾನೇ ಧನ್ಯ ಎನ್ನುವ, ರಾಧೆಯ ನಯನಗಳು, ಕೃಷ್ಣನ ರಥದ ಹಿಂದಿನ ಧೂಳಿನ ಕಡೆ ಇವೆ. ಕೃಷ್ಣನ ಮಾತು, ಕೃಷ್ಣನ ಕೊಳಲು , ಕೃಷ್ಣನ ಜೊತೆ ಆಡಿದ ಎಲ್ಲ ಕ್ಷಣಗಳು ನೆನಪಿಗೆ ಬರುತ್ತಿವೆ ದೈವದ ಸೃಷ್ಟಿಯಲ್ಲಿ ಭಕ್ತಿ, ಆ ಭಕ್ತಿಯಲ್ಲಿಯ ಅನುರಾಗದ ರಸ, ಆ ರಸದ ಅನುಭವವೆ ದೈವ. ಇದ ಪಡೆದ ಹೇ ರಾಧೆ ನೀನೆ ಧನ್ಯ , ನೀನೆ ಧನ್ಯ
ಟಿವಿ ಮೇಲಿನ ದೃಷ್ಟಿ ಡಿಜಿಟಲ್ ಗಡಿಯಾರದ ಮೇಲೆ ಹಾಯಿತು. ಅರೆ ಮತ್ತೆ 1.41 pm. ಕೃಷ್ಣ-ರಾಧೆ ಸೀರಿಯಲ್ಲಿನಿಂದ , ಮನಸ್ಸು ಐದು ವರ್ಷ ಹಿಂದೆ ಸರಿಯಿತು. ಮುದ್ದು ಮುದ್ದಾದ ಮಗಳ ಪ್ರಶ್ನೆಗಳು ಮತ್ತು ಶಾಲೆ ವಿಷಯಗಳು , ಕೇಳುತ್ತಾ ಶಾಲೆಯಿಂದ ಮನೆಯ ಕಡೆಗೆ ನಡೆ , ಮನೆ ಸೇರಿ ಊಟ ಮಾಡಿ , ಮಗಳಿಗೆ ಸಮಯ ಕೇಳಿದರೆ , ಮತ್ತೆ ಅದೇ 1.41 pm . ಈ ನಂಬರ್ ನನ್ನ ತಲೆಯಿಂದ ಹೋಗುವುದಿಲ್ಲ ಎಂದು ಗೊತ್ತಿದ್ದೂ, ವಾಸ್ತವದ ಕಡೆ ಗಮನ ಹರಿಸಿದೆ. ಎಷ್ಟೋ ಸಲ ಹೀಗೆ ಆಗಿದ್ದುಂಟು.
ಇನ್ನೂ ಐದು ವರುಷಗಳ ಹಿಂದಿನ ಅನುಭವ ಬೇರೆ. ಮನೆ ಕಟ್ಟಿದ್ದಾಗಿದೆ , FD ಆಗಿದೆ , ಟೆರೇಸಿನಲ್ಲಿ ಹಿಂದಿ ಕ್ಲಾಸಿಕಲ್ ಹಾಡುಗಳು , ರಾತ್ರಿ ತಂಪಾದ ಗಾಳಿ 'ಮೇರಿ ಆವಾಝಹೀ ಪೆಹೆಚಾನ..ಹೆ ...... ಗರ ಯಾದ ರಹೇ ...... ' ಅವಳ ಜೊತೆ ಮಾತಾಡಿದ ನೆನಪು. ಯುಟ್ಯೂಬ್ ಅಡ್ವರ್ಟೈಸ್ಮೆಂಟಿನ ಬ್ರೇಕ್ , ಮೊಬೈಲಲ್ಲಿ ಸಮಯ ನೋಡಿದರೆ, ಮತ್ತೆ ಅದೇ 1.41 am.
ಈ ಮನೆ ಕಟ್ಟುವದಕ್ಕೆ , ಹಣ ಕೂಡಿಸುವದಕ್ಕೆ ಪಟ್ಟ ಪರಿಶ್ರಮ ಅಷ್ಟಿಸ್ಟಲ್ಲ. ಅದೇನು ರಾತ್ರಿ-ಹಗಲು coding, design , discussions , meetings . ಬೆಂಗಳೂರು , ಆ busy life , traffic , pollution. ಊರಿನಾಚೆ ಆಫೀಸ್, ಮಳೆಗಾಲ, ಮೊದಲೇ long-weekend, ಅಂದು ಶುಕ್ರವಾರ, ದೊಡ್ಡ ಕೆಫೆಟೇರಿಯದಲ್ಲಿ, ಅಲ್ಲೊಬ್ಬ ಇಲ್ಲೊಬ್ಬ. ಬಿಸಿಬಿಸಿ ಕಾಫಿ ಹೀರುತ್ತಾ ಕೂತೆ . ನಾ ಕುಳಿತ ಮೂಲೆಗೆ opposit ಮೂಲೆಗೆ ಹುಡುಗಿ ಕೂತಿದ್ದಾಳೆ . ಅದೇ ಶೈಲಿ , ಅದೇ ಚೂಡಿದಾರಾ , ಆದೆ ಬಣ್ಣ . ಬಹುಶಃ ಅವಳೇ ಇರಬಹುದು. earth-is-round..... ಛೆ ಛೆ, ನಾನು ಜವಾಬ್ದಾರಿಯುತ ವಿವಾಹಿತ. ಕೆಳಗೆ ತಲೆ ಹಾಕಿದೆ, laptopಲ್ಲಿ ಸಮಯ 1.41 pm.
ಆಗ ಹೊಸ ಕೆಲಸ , ಕೈಯಲ್ಲಿ 'ನನ್' ಸಂಬಳ , ದುಡಿಯುವ ಹುರುಪು. ರಜೆ ಇದ್ದರು ಶನಿವಾರ ಆಫೀಸಿಗೆ ಹೋಗಿ ಕೆಲಸ ಮಾಡಿದರಾಯಿತು ಎಂದು ಮೆಜೆಸ್ಟಿಕ್ ಗೆ ಬಂದೆ. ಬಸ್ ಪಾಸ್ ಇದೆ , ಸೌತ್-ಎಂಡ್-ಸರ್ಕಲ್ ಯಾವುದು ಹೋಗುತ್ತೋ ನೋಡಿದೆ. ಚಾಮರಾಜಪೇಟೆ ಪುಷ್ಪಕ್ ಬಸ್ ಖಾಲಿ ಖಾಲಿ , ಹತ್ತಿ ಕುಳಿತೆ . ಕಂಡಕ್ಟರ್ ಪ್ರಯಾಣಿಕಾರಿಗಾಗಿ ಕಾಯುತ್ತಿದ್ದಾನೆ, ಡ್ರೈವರ್ ಬಸ್ ಸ್ಟಾರ್ಟ್ ಮಾಡಿದ್ದಾನೆ, ಆದರೆ ಮುಂದೆ ಬಿಡುತ್ತಿಲ್ಲ. ಅಷ್ಟರಲ್ಲಿ ಅವಳೇ ಹತ್ತಿದಳು. ೧೦೦% ಅವಳೇ. ಮನಸ್ಸಿಗೆ ಗೊತ್ತು ಈಗ ಆಕೆ ನನ್ನವಳಲ್ಲ. ನನಕ್ಕಿಂತ ನಾಲ್ಕು ಸಾಲಿನ ಮುಂದೆ ಕುಳಿತಿದ್ದಾಳೆ. ಬಸ್ ಸ್ಟಾರ್ಟ್ ಆಯಿತು , ವೇಗವಾಯಿತು , ನನ್ನ ಉಸಿರಿನ ಜೊತೆ. ಮಾತನಾಡಿಸಬೇಕೆಂಬ ಆಸೆ , ವಿರಹದ ಕ್ಷಣಗಳನ್ನು ಹೇಳಿ , ಅತ್ತುಬಿಡುವ ಬಯಕೆ . ಆದರೆ ಗಲಿಬಿಲಿಯಲ್ಲಿ.... ಯಾವೊದೋ stopಲ್ಲಿ ಇಳಿದಿದ್ದಾಳೆ. ತೋಚದೆ next-stopಲ್ಲಿ ನಾನೂ ಇಳಿದುಬಿಟ್ಟೆ . ಆಟೋ ಹಿಡಿದೆ, ಹುಡುಕಿದೆ, ಎಲ್ಲಿ ಹುಡುಕಿದರೂ ಅವಳ ಸುಳಿವೇ ಇಲ್ಲ. ಬೇಸರದಿಂದ ಹೋಟೆಲಿಗೆ ಹೋಗಿ ಟೀ ಆರ್ಡರ್ ಮಾಡಿದೆ. ಯಾರೋ ಸಮಯ ಕೇಳಿದರು , ಕೈ-ಗಡಿಯಾರ ನೋಡಿದರೆ, ಅರೆ ಅದೇ 1.41 pm.
ಕಾಲೇಜಿನ ದಿನಗಳು, ಬೆಳಗ್ಗೆ ಆ ಬಸ್ miss ಮಾಡಬಾರದು , ಅದು ಆಕೆಯ ಖಾಯಂ ಬಸ್ . ಬಸ್ಸಿನ ತುಂಬ ರಸಭರಿತ engineersಗಳ ದಂಡೆದಂಡು. ಆದರೆ ನನ್ನ ದೃಷ್ಟಿ ಮಾತ್ರ ಅವಳು ಮುಡಿದ ಮಲ್ಲಿಗೆ ಮೇಲೆ. ಕಾಲೇಜ್ ಸ್ಟಾಪ್ ನಿಂದ ಕ್ಲಾಸ್ ರೂಮ್ ತನ ಹಿಂಬಾಲಿಸದೆ ಬಿಡುತ್ತಿರಲಿಲ್ಲ. ಲೆಕ್ಚರರ್ ಬಂದರು ಅಟೆಂಡೆನ್ಸ್ ಶುರು , ಈ ಕಡೆ ನನ್ನ ಎದೆಬಡಿತ, ಅದೇನು ಆ ಧ್ವನಿ ಕೇಳಲು ಕಿವಿ ಕಾತುರ , ಮೈ ರೋಮಾಂಚನ ಆಗುವ ಸಮಯ 100,101.... 125,126... ಡಬ್ ಡಬ್ ಬಡಿತ 131,132.... ಜಗತ್ತೇ ನಿಂತಿದೆ .... 138,139,140,141 'ಪ್ರೆಸೆಂಟ್ ಸರ್'... ಆಹಾ ಆಹಾ, ಅನುರಾಗಿಸಿದ ನಾನೇ ಧನ್ಯ, ನಾನೇ ಧನ್ಯ....