18. ಆಲ್ಬರ್ಟ್ ಐನ್-ಸ್ಟೀನ್- ಮಹಾನ್ ವಿಜ್ನಾನಿ ಮತ್ತು ತತ್ವಜ್ನಾನಿ
ಜಗತ್ಪ್ರಸಿದ್ಧ ವಿಜ್ನಾನಿ, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ, ಐನ್-ಸ್ಟೀನ್ ಬಾಲ್ಯದಲ್ಲಿ ಸಾಧಾರಣ ಬುದ್ಧಿಮತ್ತೆಯ ಬಾಲಕನಾಗಿದ್ದ. ನಾಲ್ಕು ವರುಷ ವಯಸ್ಸಿನ ವರೆಗೆ ಆತ ಸರಿಯಾಗಿ ಮಾತನಾಡುತ್ತಿರಲಿಲ್ಲ ಮತ್ತು ಏಳು ವರುಷ ವಯಸ್ಸಿನ ವರೆಗೆ ಓದುತ್ತಿರಲಿಲ್ಲ. ಅವನ ಶಿಕ್ಷಕರೂ ಹೆತ್ತವರೂ ಅವನು ವಿಕಲಚೇತನ, ನಿಧಾನ ಕಲಿಕೆಯ ಮತ್ತು ಸಂವಹನದ ಸಮಸ್ಯೆಯಿರುವ ಬಾಲಕ ಎಂದೇ ಭಾವಿಸಿದ್ದರು. ಅವನ ಯೋಚನಾ ವಿಧಾನವೇ ಬೇರೆಯಾಗಿತ್ತು ಎಂಬುದು ಅವರು ಯಾರಿಗೂ ಅರ್ಥವಾಗಲೇ ಇಲ್ಲ.
ಅಂತೂ ಐನ್-ಸ್ಟೀನನ್ನು ಶಾಲೆಯಿಂದ ಹೊರ ಕಳಿಸಲಾಯಿತು! ಜ್ಯುರಿಚ್ ಪಾಲಿಟೆಕ್ನಿಕ್ ಶಾಲೆಯಲ್ಲಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಐನ್-ಸ್ಟೀನನ ಸಂವಹನದ ಮತ್ತು ವರ್ತನೆಯ ಸಮಸ್ಯೆಗಳಿಗೆ ಅವನ ಬುದ್ಧಿವಂತಿಕೆ ಕಡಿಮೆ ಆಗಿದ್ದದ್ದು ಕಾರಣವಾಗಿರಲಿಲ್ಲ. ಶಾಲೆಯಲ್ಲಿ ಇತರರಂತೆ “ಕಲಿಯಲು” ಅವನು ನಿಧಾನವಾಗಿ ಶುರು ಮಾಡಿರಬಹುದು; ಆದರೆ, ಅಂತಿಮವಾಗಿ ಐನ್-ಸ್ಟೀನ್ ತನ್ನ ಪ್ರಚಂಡ ಬುದ್ಧಿಮತ್ತೆ ಮತ್ತು ಪ್ರತಿಭೆಯಿಂದ ಬೆಳಗಿದ. ತನ್ನ ಸಾಪೇಕ್ಷತಾ ಸಿದ್ಧಾಂತದ ಮೂಲಕ ನ್ಯೂಟನನ ಭೌತಶಾಸ್ತ್ರದ ಸಿದ್ಧಾಂತಗಳ ನ್ಯೂನತೆಗಳನ್ನು ಸರಿಪಡಿಸಿದ. ಇದಕ್ಕಾಗಿ ಐನ್-ಸ್ಟೀನನ್ನು ಭೌತಶಾಸ್ತ್ರದ ನೊಬೆಲ್ ಪಾರಿತೋಷಕದಿಂದ ಪುರಸ್ಕರಿಸಲಾಯಿತು. ಅವನ E = mc2 ಎಂಬ ಅದ್ಭುತ ಸೂತ್ರ ಪ್ರತಿಯೊಬ್ಬರಿಗೂ ಪರಿಚಿತ. ಐನ್-ಸ್ಟೀನ್ ಅತ್ಯಧಿಕ ಐಕ್ಯೂ ಹೊಂದಿದ್ದ ವ್ಯಕ್ತಿ ಎಂಬುದಂತೂ ಎಲ್ಲರಿಗೂ ಗೊತ್ತು.