19 ಒಂಟೆಗಳು…

19 ಒಂಟೆಗಳು…

ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ 19 ಒಂಟೆಗಳನ್ನು ಹೊಂದಿದ್ದನು. ಒಂದು ದಿನ ಅವನು ಅಸುನೀಗಿದನು. ಆತನ ಮರಣದ ಅನಂತರ ಅವನು ಬರೆದಿದ್ದ ಉಯಿಲನ್ನು ಊರಿನ ಪಂಚಾಯ್ತಿಯಲ್ಲಿ ಓದಲಾಯಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು :

ನನ್ನ ಬಳಿಯಲ್ಲಿ 19 ಒಂಟೆಗಳಿವೆ.

ಅವುಗಳಲ್ಲಿ ಅರ್ಧದಷ್ಟು ಒಂಟೆಗಳನ್ನು ನನ್ನ ಮಗನಿಗೆ ನೀಡಬೇಕು.

ನಾಲ್ಕನೇ ಒಂದು ಭಾಗವನ್ನು ನನ್ನ ಮಗಳಿಗೆ ನೀಡಬೇಕು.

ಐದನೇ ಒಂದು ಭಾಗವನ್ನು ನನ್ನ ಸೇವಕನಿಗೆ ನೀಡಬೇಕು.

ಈ ವಿಭಜನೆ ಹೇಗೆ ಆಗಬೇಕು ? ಎಲ್ಲರೂ ಗೊಂದಲಕ್ಕೊಳಗಾಗಿದ್ದರು? 19 ಒಂಟೆಗಳಲ್ಲಿ ಅರ್ಧದಷ್ಟು, ಅಂದರೆ 9.5 ರಷ್ಟು ಒಂಟೆಗಳನ್ನು ಮಗನಿಗೆ ಕೊಡಬೇಕು, ಅಂದರೆ ಒಂದು ಒಂಟೆಯನ್ನು ಕತ್ತರಿಸಬೇಕಾಗುತ್ತದೆ! 19 ಒಂಟೆಗಳಲ್ಲಿ ನಾಲ್ಕನೇ ಒಂದು ಭಾಗ ಅಂದರೆ 4.75 ಒಂಟೆಗಳನ್ನು ಮಗಳಿಗೆ ಕೊಡಬೇಕು. ಅಂದರೆ ಮತ್ತೊಂದು ಒಂಟೆಯನ್ನು ಕತ್ತರಿಸಬೇಕಾಗುತ್ತದೆ! 19 ಒಂಟೆಗಳಲ್ಲಿ ಐದನೇ ಒಂದು ಭಾಗ ಅಂದರೆ 3.80 ರಷ್ಟು ಒಂಟೆಗಳನ್ನು ಸೇವಕನಿಗೆ ನೀಡಬೇಕು. ಅಂದರೆ ಮಗದೊಂದು ಒಂಟೆಯನ್ನು ಕತ್ತರಿಸಬೇಕಾಗುತ್ತದೆ! ಎಲ್ಲರೂ ತುಂಬಾ ಗೊಂದಲದಲ್ಲಿದ್ದರು.

ಆಗ ಪಕ್ಕದ ಹಳ್ಳಿಯಿಂದ ಒಬ್ಬ ಬುದ್ಧಿವಂತನನ್ನು ಕರೆಸಲಾಯಿತು. ಆ ಬುದ್ದಿವಂತ ತನ್ನ ಒಂಟೆಯ ಮೇಲೆ ಸವಾರಿ ಮಾಡಿಕೊಂಡು ಬಂದು ಸಮಸ್ಯೆಯನ್ನು ಆಲಿಸಿದ. ತನ್ನ ಮನಸ್ಸಿನಲ್ಲೇ ಲೆಕ್ಕಾಚಾರ ಮಾಡಿಕೊಂಡು ಅನಂತರ, ಈ 19 ಒಂಟೆಗಳ ನಡುವೆ ನನ್ನ ಒಂಟೆಯನ್ನು ಸೇರಿಸಿ ಹಂಚಿರಿ ಎಂದನು. ಎಲ್ಲರೂ ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಬಂದಿದ್ದಾನೆ, ತನ್ನ ಒಂಟೆಯನ್ನು ಇವರ ನಡುವೆ ಹಂಚಬೇಕು ಎಂದು ಹೇಳುವ ಇವನ್ನೊಬ್ಬ ಹುಚ್ಚ ಎಂದು ಭಾವಿಸಿದರು. ಆದರೂ ವಿಷಯವನ್ನು ಒಪ್ಪಿಕೊಳ್ಳುವುದರಿಂದ ಏನು ತೊಂದರೆ ಎಂದು ಎಲ್ಲರೂ ಯೋಚಿಸಿದರು.

19 + 1 = 20 ಒಂಟೆಗಳಾದವು.

20 ರ ಅರ್ಧದಷ್ಟು 10 ಒಂಟೆಗಳನ್ನು ಮಗನಿಗೆ ನೀಡಿದ.

20 ರಲ್ಲಿ ನಾಲ್ಕನೇ ಒಂದು ಭಾಗ ಅಂದರೆ 5 ಒಂಟೆಗಳನ್ನು ಮಗಳಿಗೆ ನೀಡಿದ.

20 ರಲ್ಲಿ ಐದನೇ ಒಂದು ಭಾಗ ಅಂದರೆ 4 ಒಂಟೆಗಳನ್ನು ಸೇವಕನಿಗೆ ನೀಡಿದ

ಅಲ್ಲಿಗೆ 10 + 5 + 4 = 19 ಒಂಟೆಗಳಾದವು. ಅಲ್ಲಿ ಈಗ ಒಂದು ಒಂಟೆ ಉಳಿದಿದೆ, ಅದು ಆ ಬುದ್ಧಿವಂತ ವ್ಯಕ್ತಿಗೆ ಸೇರಿದ್ದು. ಅವನು ಅದನ್ನು ಹತ್ತಿಕೊಂಡು ತನ್ನ ಹಳ್ಳಿಗೆ ಹಿಂತಿರುಗಿದ. ಹೀಗೆ 1 ಒಂಟೆಯನ್ನು19 ಒಂಟೆಗಳ ಜೊತೆಯಲ್ಲಿ ಸೇರಿಸಿ ಯಾವುದೇ ಒಂಟೆಯನ್ನು ಕತ್ತರಿಸದೇ ಮರಣ ಹೊಂದಿದ ಆ ವ್ಯಕ್ತಿಯ ಉಯಿಲಿನಲ್ಲಿರುವಂತೆಯೇ ಹಂಚಲಾಯಿತು.

***

ಅಂತಯೇ, ನಮ್ಮೆಲ್ಲರ ಜೀವನದಲ್ಲಿ19 ಒಂಟೆಗಳಿವೆ. 5 ಇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ), 5 ಕರ್ಮೇಂದ್ರಿಯಗಳು (ಕೈಗಳು, ಕಾಲುಗಳು, ನಾಲಿಗೆ, ಮೂತ್ರನಾಳ, ಗುದದ್ವಾರ), 5 ಆತ್ಮಗಳು (ಪ್ರಾಣ, ಅಪಾನ, ಸಮಾನ, ವ್ಯಾನ, ಉದಾನ) ಮತ್ತು 4 ಆತ್ಮಸಾಕ್ಷಿಗಳು (ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ) ಒಟ್ಟು 19 ಒಂಟೆಗಳಿವೆ. ಮನುಷ್ಯನು ತನ್ನ ಜೀವನದುದ್ದಕ್ಕೂ ಈ 19 ಒಂಟೆಗಳ ವಿತರಣೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಮತ್ತು ಅದಕ್ಕೆ *ಬಂಧು - ಮಿತ್ರರು* ಎಂಬ ಇಪ್ಪತ್ತನೇ ಒಂಟೆಯನ್ನು ಸೇರಿಸದ ಹೊರತು, ಜೀವನ ನಡೆಸಲಾಗುವುದಿಲ್ಲ. ಸುಖ, ಶಾಂತಿ, ಸಂತೃಪ್ತಿ, ಆನಂದ ಸಿಗುವುದಿಲ್ಲ. ಜೀವನದಲ್ಲಿ ಸಂತೋಷದಿಂದ ಇರಲು ಬಂಧು - ಮಿತ್ರರ ಪ್ರೀತಿ, ಸಹಕಾರ ಅಗತ್ಯ.

(ಹಿಂದಿಯಿಂದ ಅನುವಾದಿತ)

 -ಹೇಮಂತ್ ‘ಚಿನ್ನು’

ಚಿತ್ರ ಕೃಪೆ: ಇಂಟರ್ನೆಟ್ ತಾಣ