20. ವಾಲ್ಟ್ ಡಿಸ್ನಿಯಂತೆ ಕನಸುಗಳ ಬೆಂಬತ್ತಿ
ವಾಲ್ಟ್ ಡಿಸ್ನಿಯ ಬಾಲ್ಯದ ಹವ್ಯಾಸ ಕಾರ್ಟೂನುಗಳನ್ನು ಚಿತ್ರಿಸುವುದು. ಅಂತೂ ತನ್ನ 19ನೆಯ ವಯಸ್ಸಿನಲ್ಲಿಯೇ ಆತ ತನ್ನದೇ ಕಂಪೆನಿ ಶುರು ಮಾಡಿದ. ತಾನು ಬಾಲ್ಯದಲ್ಲಿ ನೋಡಿದ ಪ್ರಾಣಿಗಳ ಕಾರ್ಟೂನುಗಳನ್ನೇ ಅವನು ಚಿತ್ರಿಸುತ್ತಿದ್ದ. ಆದರೆ ಅವನು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ತನ್ನ ಮನೆಯ ಬಾಡಿಗೆ ಕೊಡಲಿಕ್ಕೂ ಅವನಲ್ಲಿ ಹಣವಿರಲಿಲ್ಲ. ಆದ್ದರಿಂದ ಅವನು ತನ್ನ ಗೆಳೆಯರೊಂದಿಗೆ ವಾಸ ಮಾಡುತ್ತಿದ್ದ. ಹಲವು ದಿನ ಅವನಲ್ಲಿ ಏನಾದರೂ ತಿನ್ನಲಿಕ್ಕೂ ಹಣ ಇರುತ್ತಿರಲಿಲ್ಲ.
ತಾನು ಚಿತ್ರಿಸಿದ ಕಾರ್ಟೂನುಗಳನ್ನು ಜನರು ಮೆಚ್ಚುತ್ತಾರೆ; ಅದರಿಂದಾಗಿ ತಾನು ಹಣ ಗಳಿಸಬಹುದು ಎಂಬುದು ಅವನ ಕನಸು. ಒಂದೇ ಒಂದು ಕಾರ್ಟೂನನ್ನೂ ಮಾರಾಟ ಮಾಡಲು ಸಾಧ್ಯವಾಗದಿದ್ದರೂ ಅವನು ಕಾರ್ಟೂನುಗಳನ್ನು ಚಿತ್ರಿಸುತ್ತಲೇ ಇದ್ದ. ಒಮ್ಮೆ ವಾರ್ತಾಪತ್ರಿಕೆಯ ಸಂಪಾದಕನೊಬ್ಬ ಅವನನ್ನು ಉದ್ಯೋಗದಿಂದ ವಜಾ ಮಾಡಿ ಹೇಳಿದ, "ನಿನಗೆ ಕಲ್ಪನಾ ಶಕ್ತಿಯೂ ಇಲ್ಲ, ಒಳ್ಳೆಯ ಐಡಿಯಾಗಳೂ ಇಲ್ಲ.” ಆದರೆ ವಾಲ್ಟ್ ಡಿಸ್ನಿ ಹತಾಶನಾಗಲಿಲ್ಲ. ಅನಂತರ ಅವನು ಹಲವು ವ್ಯವಹಾರಗಳನ್ನು ಶುರು ಮಾಡಿದ; ಆದರೆ ಯಾವುದೂ ದೀರ್ಘ ಕಾಲ ಮುಂದುವರಿಯಲಿಲ್ಲ.
ಮತ್ತೆಮತ್ತೆ ಸೋಲು ಎದುರಾದರೂ ವಾಲ್ಟ್ ಡಿಸ್ನಿ ತನ್ನ ಪ್ರಯತ್ನ ಮುಂದುವರಿಸಿದ. ಅಂತಿಮವಾಗಿ ಯಶಸ್ಸು ಅವನಿಗೆ ಒಲಿಯಿತು. ಅದೊಂದು ದಿನ ಒಂದು ಚರ್ಚಿನ ಮಿನಿಸ್ಟರ್ ಕೆಲವು ಕಾರ್ಟೂನುಗಳನ್ನು ಚಿತ್ರಿಸಲಿಕ್ಕಾಗಿ ವಾಲ್ಟ್ ಡಿಸ್ನಿಯನ್ನು ಕರೆಸಿದ. ಅಲ್ಲಿ ವಾಲ್ಟ್ ಡಿಸ್ನಿ ಒಂದು ಸಣ್ಣ ಇಲಿಯನ್ನು ಕಂಡ. ತಕ್ಷಣವೇ ಅವನ ಮನಸ್ಸಿನಲ್ಲೊಂದು ಅದ್ಭುತ ಐಡಿಯಾ ಹೊಳೆಯಿತು. ಅದುವೇ “ಮಿಕಿ ಮೌಸ್”ಗೆ ನಾಂದಿಯಾಯಿತು. ಈಗ, ವಾಲ್ಟ್ ಡಿಸ್ನಿಯ ಕಂಪೆನಿ ಪ್ರತಿ ವರುಷ ಕೋಟಿಗಟ್ಟಲೆ ರೂಪಾಯಿ ಹಣ ಗಳಿಸುತ್ತಿದೆ - ಚಲನಚಿತ್ರಗಳಿಂದ, ಲಕ್ಷಗಟ್ಟಲೆ ಜನರು ಮನರಂಜನೆಗಾಗಿ ಭೇಟಿ ನೀಡುವ ಥೀಮ್ ಪಾರ್ಕುಗಳಿಂದ ಮತ್ತು ಡಿಸ್ನಿಲೋಕದ ವಸ್ತುಗಳ ಮಾರಾಟದಿಂದ. ಬದುಕಿನಲ್ಲಿ ಯಶಸ್ಸು ನಿಮ್ಮದಾಗಬೇಕಾದರೆ, ನೀವು ನಿಮ್ಮ ಕನಸುಗಳ ಬೆಂಬತ್ತಬೇಕು.