2012....ಹೊಸ ವರ್ಷವೇ ! ನಿನಗಿದೋ ಸ್ವಾಗತ (ಕವನ)

2012....ಹೊಸ ವರ್ಷವೇ ! ನಿನಗಿದೋ ಸ್ವಾಗತ (ಕವನ)

ಕವನ

 


ಗತ ವರ್ಷವೇ ನಿನಗಿದೋ ವಿದಾಯ


ಕಾಲಗರ್ಭದಲಿ ಚಿರಂತನವಾಗಿ ಲೀನವಾಗು


ದುಃಖಿಸದಿರು ನಿನಗೆ ವಿದಾಯ ಹೇಳಿದೆವೆಂದು


 


ಇದು ಕಾಲಚಕ್ರ ಭವಿಷ್ಯ ವರ್ತಮಾನದಲಿ


ವರ್ತಮಾನ ಭೂತದಲಿ ಸೇರುವುದು


ಕಾಲ ನಿಯಮ ಭರವಸೆ ಹುಟ್ಟಿಸಿ ಜನ ಮನದ


ಆಶಾ ಕಿರಣವಾಗಿ ನೀ ಬಂದೆ ಸ್ವಾಗತಿಸಿದ್ದೆವು


ನಿನ್ನ ಸುಖದ ಹೊನಲೇ ನೀ ತರುವೆ ಎಂದು


 


ಮನುಜ ಸ್ವಾರ್ಥಿ ಸುಖ ಸಂತೋಷ ಬೇಕು


ಕಷ್ಟ ಕಾರ್ಪಣ್ಯ ಬೇಡ ಕಷ್ಟಪಟ್ಟು ಸುಖ ಪಡುವವರು


ನಾವಲ್ಲ ಅದು ತಾನಾಗಿಯೇ ಬರಬೇಕು ಇಲ್ಲ


ನೀನೇ ಬೆಳ್ಳಿ ತಟ್ಟೆಯಲಿಟ್ಟು ಬಳುವಳಿ ಕೊಡಬೇಕು


 


ಗತ ವರ್ಷದಲಿ ನಾವು ಮಾಡದ್ದಾದರೂ ಏನು ?


ಕಡುರಾತ್ರಿ ಕಟ್ಟಿರುಳು ಕುಡಿದು ಕೇಕೇ ಹೊಡೆದು


ಕುಣಿದು ಕುಪ್ಪಳಿಸಿ ರಸ್ತೆ ಗೋಡೆಗಳ ಮೇಲೆ


ಲಿಪಿಸಿ ಸ್ವಾಗತಿಸಿದ್ದೆವು ನಿನ್ನ


ನಾವು ಮಾಡಿದ್ದು ಅಷ್ಟೆ ಮತ್ತೇನಿಲ್ಲ


 


ದಪ್ಪ ಚರ್ಮ ಖಾಲಿ ತಲೆ ಮಾನವತೆಯ


ಸೆಲೆ ಬತ್ತಿದ ಬರಡು ಹೃದಯದ ಬರಿ ದ್ವೇಷ


ಅಸೂಯೆ ಹೊಟ್ಟೆಕಿಚ್ಚಿನವರು


ಕಾರಣ ನೂರೆಂಟು ಮಾಡಿದೆವು ವರ್ಷವಿಡಿ


ಮಾರಣ ಹೋಮ ಮಾಡಿದ್ದು ನಾವು


ಹಣೆಪಟ್ಟಿ ನಿನಗೆ ' ಕೆಟ್ಟ ವರ್ಷವು ' ಎಂದು


 


ಗತ ವರ್ಷವೆ ನಮ್ಮನು ಕ್ಷಮಿಸು


ನೀನು ಧೀಮಂತ ನಮ್ಮ ಅಮಲಿನ


ಸ್ವಾಗತಕೆ ನೀ ಸಂತಸ ಪಡಲಿಲ್ಲ


ನಿನಗೆ ಗೊತ್ತು ನಮ್ಮ ಯೋಗ್ಯತೆ ಯುಗ


ಯುಗಗಳಿಂದ ನೋಡುತ್ತ ಬಂದಿರುವೆ


ದುಷ್ಟ ಮನುಕುಲದ ರಸ ರಾಸ ಕ್ರೀಡೆ


 


ತಪ್ಪು ನಿನದಲ್ಲ ನಮ್ಮದು ನಿನ್ನನು


ಅರ್ಥಪೂರ್ಣವಾಗಿ ಬಳಸಿಕೊಳಲಿಲ್ಲ ನಾವು


ಶಪಿಸಬೇಡ ಹುಲು ಮಾನವರು ನಾವು


ನಮ್ಮ ಯೋಗ್ಯತೆ ಅಷ್ಟೆ ! ನೀ ಕಲಿಸಿದ


ಅನುಭವದ ಪಾಠ ಆಗಲಿದೆ ' ನವಯುಗಕೆ '


ಭದ್ರ ಬುನಾದಿ ನಿನ್ನ ನಾವ್ಮರೆತಿಲ್ಲ


ಮಸ್ತಿಷ್ಕದ ನೆನಪಿನ ಕೋಶಗಳಲಿ


ನೀನು ಚಿರಸ್ಥಾಯಿ ಯಾಗಿರುವೆ


 


" ಗತ ವರ್ಷವೆ " ನಿನಗಿದೋ ವಿದಾಯ


ಹೋಗಿ ಬಾ ಗತಕಾಲದ ಕವಚ ಕಳಿಚಿಟ್ಟು


ಹೊಸ ಭರವಸೆಯ ನಿಲುವಂಗಿ ಹೊದ್ದು


ಆಶಾ ಜ್ಯೋತಿಯ ಕರಗಳಲಿ ಹಿಡಿದು


" ಹೊಸ ವರ್ಷ " ವಾಗಿ ಮರಳಿ ಬಾ


ಮತ್ತೆ ಸ್ವಾಗತ ನಿನಗೆ ಎಂದಿನಂತೆ


' ಹೊಸ ವರ್ಷವೆ ' ನಿನಗಿದೋ ಸ್ವಾಗತ ಎಂದು


 


(  ಎಲ್ಲ ಸಂಪದಿಗರಿಗೆ ಹೊಸ ವರ್ಷದ ಶುಭಾಶಯಗಳು ) 

Comments