24. ಸಮಸ್ಯೆ ಪರಿಹಾರಕ್ಕೆ ಭಿನ್ನ ಯೋಚನೆ: ನಕ್ಷೆಯಲ್ಲ, ಮುಖ
ನಾಗರಾಜ ಪುಸ್ತಕವೊಂದನ್ನು ಓದುತ್ತಿದ್ದ. ಅವನ ಪುಟ್ಟ ಮಗಳು ಧ್ರುವಿ ಅವನ ಬಳಿ ಆಗಾಗ ಏನಾದರೊಂದನ್ನು ಮಾತನಾಡುತ್ತಾ ಅವನ ಏಕಾಗ್ರತೆಗೆ ಅಡ್ಡಿ ಮಾಡುತ್ತಿದ್ದಳು. ಅವಳಿಗೆ ಬಹಳ ಸಮಯ ತಗಲುವ ಯಾವ ಚಟುವಟಿಕೆ ಕೊಡಬಹುದೆಂದು ಯೋಚಿಸಿದ ನಾಗರಾಜ. ಕೊನೆಗೆ, ಜಗತ್ತಿನ ಭೂಪಟವೊಂದನ್ನು ಪುಸ್ತಕದಿಂದ ಹರಿದು ತೆಗೆದ; ಅದನ್ನು ಚೂರುಚೂರು ಮಾಡಿ, ಅವಳಿಗೆ ಕೊಡುತ್ತಾ ಹೇಳಿದ, “ಹೋಗು, ನಿನ್ನ ಕೋಣೆಗೆ ಹೋಗು. ಈ ಕಾಗದದ ಚೂರುಗಳನ್ನೆಲ್ಲ ಜೋಡಿಸಿ ಜಗತ್ತಿನ ಭೂಪಟ ಮಾಡು.”
ಪುಟ್ಟ ಮಗಳಿಗೆ ಜಗತ್ತಿನ ಭೂಪಟ ಜೋಡಿಸಲು ಸಂಜೆಯ ವರೆಗೆ ಸಮಯ ಬೇಕಾದೀತೆಂದು ನಾಗರಾಜ ಯೋಚಿಸಿದ್ದ. ಆದರೆ, ಅವನ ಮಗಳು ಮೂರೇ ನಿಮಿಷಗಳಲ್ಲಿ ಜಗತ್ತಿನ ಭೂಪಟವನ್ನು ಜೋಡಿಸಿ, ಅಪ್ಪನನ್ನ ಕರೆದು ತೋರಿಸಿದಳು! ನಾಗರಾಜನಿಗೆ ಅಚ್ಚರಿಯೋ ಅಚ್ಚರಿ. “ಅದು ಹೇಗೆ ಅಷ್ಟು ಬೇಗನೇ ಜಗತ್ತಿನ ಭೂಪಟ ಜೋಡಿಸಿದೆ?” ಎಂದಾತ ಕೇಳಿದ. ಧ್ರುವಿ ಹೇಳಿದಳು, “ಅಪ್ಪಾ, ಆ ಪುಟದ ಹಿಂಬದಿಯಲ್ಲಿ ಒಬ್ಬ ಮನುಷ್ಯನ ಮುಖದ ಚಿತ್ರವಿತ್ತು. ನಾನು ಮನುಷ್ಯನ ಮುಖದ ಚೂರುಗಳನ್ನು ಜೋಡಿಸಿದಾಗ, ಈ ಬದಿಯಲ್ಲಿ ಜಗತ್ತಿನ ಭೂಪಟ ಸರಿಯಾಗಿ ಮೂಡಿ ಬಂತು." ಹೀಗೆನ್ನುತ್ತಾ ಅವಳು ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡಲು ಹೊರಗೆ ಓಡಿದಳು.
ಇದನ್ನೆಲ್ಲಾ ಗಮನಿಸುತ್ತಿದ್ದ ನಾಗರಾಜನ ತಾಯಿ ಹೇಳಿದರು, “ನೋಡು, ನಮ್ಮ ಎಲ್ಲ ಸಮಸ್ಯೆಗಳಿಗೂ ಇನ್ನೊಂದು ಮುಖ ಇರುತ್ತದೆ. ನೀನು ಆ ಮುಖವನ್ನು ಗಮನಿಸಿದರೆ, ಹಲವು ಸಂದರ್ಭಗಳಲ್ಲಿ ಸಮಸ್ಯೆ ಸುಲಭವಾಗಿ ಪರಿಹಾರವಾಗ್ತದೆ.”