5,300 ಕಿಲೋ ಮೀಟರು ಬರಿಗಾಲಿನಲ್ಲಿ ನಡೆದ ಈತ

5,300 ಕಿಲೋ ಮೀಟರು ಬರಿಗಾಲಿನಲ್ಲಿ ನಡೆದ ಈತ

ನ್ನ ಹುಟ್ಟೂರು 'ಬೋಸ್ನಿಯಾ ಹೆರ್ಜೆಗೊವೀನಾ' ದೇಶದ 'ಬಾನೋವಿಚಿ' ಪಟ್ಟಣದಿಂದ ಬರಿಗಾಲಿನಲ್ಲಿ ಹೊರಟ ೪೭ ರ ಹರೆಯದ 'ಸೆನದ್' ಸಾಧಿಸಲು ಹೊರಟಿದ್ದಾದರೂ ಏನನ್ನು? ಈತನ ಹಂಬಲ ಗಿನ್ನೆಸ್ ದಾಖಲೆಯೋ ಅಥವಾ ಮತ್ತಾವುದಾದರೂ ಕೀರ್ತಿಯ ಪತಾಕೆಯೋ ಅಲ್ಲ. ೧೪೦೦ ವರ್ಷಗಳ ಹಿಂದೆ ಮರಳುಗಾಡಿನ ನಿರಕ್ಷರಕುಕ್ಷಿ ತನಗೆ ಒದಗಿದ ದೇವವಾಣಿಯ ಅಪ್ಪಣೆ ಯನ್ನು ಸಾಕಾರ ಗೊಳಿಸಲು ಮಾಡಿದ ಮನಸ್ಸು ಅವನನ್ನು ನಡೆಯುವಂತೆ ಪ್ರೇರೇಪಿಸಿತು. ತಿಂಗಳುಗಟ್ಟಲೆ, ಅತ್ಯಂತ ಅಪಾಯಕಾರೀ ಪ್ರದೇಶಗಳನ್ನು ದಾಟಿ ಕೊನೆಗೂ ತನ್ನ ಗುರಿ ಮುಟ್ಟಿದ ೪೭ ರ ಪ್ರಾಯದ ಬೋಸ್ನಿಯಾದ ಪ್ರಜೆ ಸೆನೆದ್.

ಪ್ರತೀ ವರ್ಷ ಹಜ್ ಬರುವ ಯಾತ್ರಿಕರಲ್ಲಿ ಕೆಲವರ ಅನುಭವ ಜನರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಉತ್ತರ ಪ್ರದೇಶದ ವೃದ್ಧ ಮಹಿಳೆಯೊಬ್ಬಳು ಪ್ರತೀ ದಿನ ಒಂದು ರೂಪಾಯಿ ರೀತಿ ಹತ್ತಾರು ವರ್ಷಗಳಿಂದ ಕೂಡಿಸಿಟ್ಟು ಹಜ್ ಗೆ ಬಂದಳು. ಹಜ್ ಗಾಗಿ ಪ್ರತೀ ದಿನ ಒಂದು ರೂಪಾಯಿ ಜೋಡಿಸುವ ಈ ಮಹಿಳೆಯನ್ನು ನೋಡಿ ಈಕೆಯ ಗಂಡನೂ ಸೇರಿ ಗೇಲಿ ಮಾಡಿದರೂ ಕಿವಿಗೊಡದೆ ತನ್ನ ಆಸೆಯನ್ನ ಪೂರ್ತಿ ಗೊಳಿಸಿಕೊಂಡಳು. ಗೇಲಿ ಮಾಡಿ ನಕ್ಕವರು ತಮ್ಮ ಗ್ರಾಮದ ಗಡಿ ದಾಟಲಿಲ್ಲ, ಗೇಲಿಗೆ ಕಿವಿಗೊಡದ ಈ ಮಹಿಳೆ ತನ್ನ ಬದುಕಿನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಳು ಪ್ರತೀ ದಿನ ಒಂದು ರೂಪಾಯಿ ಮೂಲಕ.

ನೂರಾರು ವರ್ಷಗಳಿಂದ 'ಹಜ್' ಎಂದು ಕರೆಯಲ್ಪಡುವ ಪವಿತ್ರ ಯಾತ್ರೆಗೆ ವಿಶ್ವದ ಮೂಲೆ ಮೂಲೆಗಳಿಂದ ಜನ ಬಂದು ಹೋಗಿದ್ದಾರೆ. ಒಂಟೆಯ ಸವಾರಿ ಮಾಡಿಯೂ, ದೋಣಿಯಲ್ಲೂ, ಕಾಲ್ನಡಿಗೆ ಯಲ್ಲೂ, ವಿಮಾನಗಳಲ್ಲೂ ಆಗಮಿಸಿ ಮಕ್ಕ ನಗರದಲ್ಲಿ ನೆರೆದಿದ್ದಾರೆ. ತಮ್ಮ ಕುಟುಂಬದವರನ್ನು, ಪ್ರೀತಿ ಪಾತ್ರರನ್ನು, ತಮ್ಮ ಹುಟ್ಟೂರನ್ನು ಬಿಟ್ಟು ಎರಡು ತುಂಡು ಬಟ್ಟೆ, ಅಗಾಧ ಭಕ್ತಿ ಇಟ್ಟುಕೊಂಡು ಹಜ್ ಗೆ ಬರುವ ಜನರಿಗೆ ತಾವು ಹಿಂದಿರುಗಿ ಹೋಗುತ್ತೇವೆ ಎನ್ನುವ ಭರವಸೆಯೂ ಇರುವುದಿಲ್ಲ. ತಮಗೆ ಅರ್ಥವಾಗದ, ಸುಡು ಬಿಸಿಲ ನಾಡಿಗೆ ದೇವನನ್ನು ಸಂಪ್ರೀತಿಗೊಳಿಸುವ ಏಕೈಕ ಉದ್ದೇಶ ಇಟ್ಟು ಕೊಂಡು ಈ ಹಜ್ ಯಾತ್ರೆಯನ್ನು ಮುಸ್ಲಿಮರು ಕೈಗೊಳ್ಳುತ್ತಾರೆ. ಮಕ್ಕಾ ನಗರದ ಪವಿತ್ರ ಕಾಬಾ ಮತ್ತು ಅದರ ಸುತ್ತ ಮುತ್ತಲಿನ ಪವಿತ್ರ ಕ್ಷೇತ್ರಗಳ ಭೇಟಿ ಅವರ ಮೈ ಮನಕ್ಕೆ ಉಲ್ಲಾಸವನ್ನೀಯುತ್ತದೆ. ಬಡವ ಬಲ್ಲಿದ, ರಾಜ ಗುಲಾಮ, ಕರಿಯ ಬಿಳಿಯ ಎನ್ನುವ ಬೇಧ ಭಾವವಿಲ್ಲದೆ ಮನುಕುಲದ ಸಮಾನತೆಯ ಸಂದೇಶ ವನ್ನು ಸಾರುತ್ತಾರೆ. ಈ ಹಜ್ ಗೆ ಬರುವ ಯಾತ್ರಿಕರೆಲ್ಲರೂ ತಾವು ಯಾವ ಹಿನ್ನೆಲೆಯಿಂದ ಲಾದರೂ ಬಂದಿರಲಿ ಎಲ್ಲರ ವಸ್ತ್ರ, ಬಿಳಿ ಉಡುಗೆ, ಒಂದೇ ರೀತಿಯದ್ದಾಗಿರುತ್ತದೆ. ಎಲ್ಲರ ನಾಲಗೆಯ ಮೇಲೂ ಒಂದೇ ಮಂತ್ರ. ಓ, ಪ್ರಭುವೇ, ಇದೋ ನಾನು ಆಗಮಿಸಿದ್ದೇನೆ, ನಿನ್ನ ಸೇವೆಗೆ ಎಂದು. ನಿನ್ನ ಪ್ರಭುತ್ವವೇ ಮೇಲು, ನೀನು ಸರ್ವ ಶ್ರೇಷ್ಠ ಎನ್ನುವ ಅರ್ಹತಾ ಬರುವ "ತಲ್ಬಿಯಾ" ಮಂತ್ರವನ್ನು ಉಚ್ಚರಿಸುತ್ತಾರೆ. ಹಜ್ ಬಗ್ಗೆ ಬರೆದ ಓರ್ವ ಲೇಖಕಿಯ ಪ್ರಕಾರ ಒಂದೇ ತೆರನಾಗಿ ಉಟ್ಟು, ಒಂದೇ ಮಂತ್ರ ಪಠಿಸುತ್ತಾ ಒಂದೇ ಕಾಲಕ್ಕೆ ಕುಬ್ಜರೂ, ಶ್ರೇಷ್ಠರೂ ಆಗುತ್ತಾರಂತೆ. ಲಕ್ಷಗಟ್ಟಲೆ ಸೇರಿದ ಮನುಷ್ಯ ಸಮೂಹ ದೆದುರು ತಾನೆಷ್ಟು ಕುಬ್ಜ ಎಂದೂ, ಹಾಗೆಯೇ ತನ್ನ ಸುತ್ತ ನೆರೆದ ಆ ಜನರಾಶಿ ತನ್ನ ಕುಟುಂಬದ ಭಾಗ ಎನ್ನುವ ಶ್ರೇಷ್ಟತೆಯ ಭಾವನೆಯ ಮಿಳಿತವೇ ಹಜ್ ಯಾತ್ರೆ ಎಂದು ಬರೆಯುತ್ತಾರೆ ಲೇಖಕಿ.

ನಿನ್ನೆ ಗುರುವಾರದಂದು ಹಜ್ ಯಾತ್ರೆಯ ಪ್ರಕ್ರಿಯೆಗಳಲ್ಲಿ ಶ್ರೇಷ್ಠ ಮತ್ತು ಮಹತ್ವದ ಭಾಗವಾದ "ಅರಫಾತ್" ಮೈದಾನದಲ್ಲಿ ನಿಂತು ಮಾಡುವ ಪ್ರಾರ್ಥನೆ, ಸೂರ್ಯಸ್ತದ ನಂತರ 'ಮುಜ್ದಲಿಫಾ' ಎನ್ನುವ ವಿಶಾಲವಾದ ಬಯಲಿನಲ್ಲಿ ರಾತ್ರಿ ಕಳೆದು 'ಮೀನಾ' ಕಣಿವೆಗೆ ಬಂದು ಮನುಷ್ಯರನ್ನು ಚಂಚರನ್ನಾಗಿಸುವ, ದಿಕ್ಕು ತಪ್ಪಿಸುವ ಸೈತಾನನಿಗೆ ಕಲ್ಲು ಬೀಸಿ, ಪ್ರಾಣಿ ಬಲಿ ಕೊಟ್ಟು ಕೇಶ ಮುಂಡನೆ (ಪುರುಷರಿಗೆ ಮಾತ್ರ) ಮೂಲಕ ಹಜ್ ಯಾತ್ರೆಯ ಎಲ್ಲಾ ನಿಯಮಗಳನ್ನ ಪಾಲಿಸಿದಂತಾಗುತ್ತದೆ.

ಇಂದು "ಬಕ್ರೀದ್" ಹಬ್ಬ. ಈ ಶುಭ ಸಂದರ್ಭದಲ್ಲಿ ಸಂಪದ ನಿರ್ವಹಣಾ ತಂಡಕ್ಕೂ, ಓದುಗರಿಗೂ ಪರಮಾತ್ಮ ಒಳಿತನ್ನು ಮಾಡಲಿ. ನಾಡಿಗೆ ಶಾಂತಿ, ಸುಭಿಕ್ಷೆ ತರಲಿ ಎಂದು ನನ್ನ ಮತ್ತು ನನ್ನ ಪರಿವಾರದ ಹೃತ್ಪೂರ್ವಕ ಹಾರೈಕೆಗಳು.

pic courtesy: independent.co.uk

Comments

Submitted by partha1059 Sat, 10/27/2012 - 16:14

ಬರಹ‌ ಖುಷಿ ಕೊಟ್ಟಿತು. ನೀವು ಹಜ್ ಯಾತ್ರೆ ಮಾಡಿದ್ದೀರ‌ ? ಮಾಡುವ‌ ಆಸೆ ಇದೆಯ‌ ? ಮಾಡಿದಾಗ‌ ನೇರ‌ ನಿರೂಪಣೆಯನ್ನು ಕೊಡಿ , ನಮಗು ಕುತೂಹಲವಿದೆ. ಬಕ್ರೀದ್ ಎಲ್ಲರಿಗು ಶುಭ‌ ತರಲಿ