889ನೇ ಬಸವ ಜಯಂತಿಯ ಶುಭಾಶಯಗಳೊಂದಿಗೆ...

889ನೇ ಬಸವ ಜಯಂತಿಯ ಶುಭಾಶಯಗಳೊಂದಿಗೆ...

ಬಸವಣ್ಣ ಯಾರು....?

* 12ನೇ ಶತಮಾನದಲ್ಲಿ ಕರುನಾಡಿನ ಬಿಜಾಪೂರು ಜಿಲ್ಲೆಯ ಬಾಗೆವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಬ್ರಾಹ್ಮಣ ಕುಲದ ಮಾದರಸ ಮತ್ತು ಮಾದಲಾಂಬಿಕೆ ಇವರ ಉದರದಲ್ಲಿ ಜನಿಸಿದ ಮಾನವ.

* ನಾಲ್ಕು ಕಾಲಿನ, ಒಂದು ಬಾಲದ, ಎರಡು ಕೋಡಿನ, ಗರ್ಭ ಗುಡಿಯ ಎದುರಿಗೆ ಕೂಡಿಸಿದ ನಂದಿ(ಎತ್ತು) ಅಲ್ಲ; ಸರ್ವ ರಂಗದಲ್ಲಿಯೂ ಸಮಾನತೆಯನ್ನು ತಂದು ಮನುಷತ್ವವನ್ನು ಎತ್ತಿ ಹಿಡಿದ ಮಾನವತಾವಾದಿ.

* ಶತ ಶತಮಾನಗಳ ಕಾಲ ಪುರುಷ  ಪ್ರಧಾನ ವ್ಯವಸ್ಥೆಯಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಸ್ತ್ರೀಕುಲೋದ್ಧಾರಕ.

* ಶತ ಶತಮಾನಗಳ ಕಾಲ ಯಾರನ್ನು ಗೆಲ್ಲಲು ಸಾಧ್ಯವಾಗಿದ್ದಿಲ್ಲವೋ ಅಂತಹ ಶೊಷಣೆಗಾಗಿದ್ದವರ ಮನಸ್ಸು, ಹೃದಯವನ್ನು  ಗೆದ್ದು ಅವರನ್ನೂ ತನ್ನಂತೆ ಕಂಡು ಮಾದಾರನ ಮಗ ಎಂದು ಕರೆದುಕೊಂಡ ಸಮತಾವಾದಿ.

* ಯಜ್ಞ-ಯಾಗ ಹೋಮ-ಹವನ ಮಾಡಿ ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಸುಟ್ಟು, ಮುಗ್ದ ಜೀವಗಳನ್ನು ಆಹುತಿ ಮಾಡಿ, ಗುಡಿ ಗುಂಡಾರಗಳನ್ನು ಕಟ್ಟಿ, ಧಾರ್ಮಿಕ ಶೋಷಣೆ ನಡೆಸುತ್ತಿದ್ದವರ ವಿರುದ್ಧ ಬಂಡೆದ್ದು ಧಾರ್ಮಿಕ ಶೋಷಣೆ ನಿಲ್ಲಿಸಿದ ಬಂಡಾಯಗಾರ. 

* ನಿಮ್ನ ವರ್ಗದವರಿಗೆ ದೇವಸ್ಥಾನಗಳಲ್ಲಿ ಬಿಟ್ಟುಕೊಳ್ಳದಾದಾಗ ದೇವಸ್ಥಾನಗಳಿಗೆ ದಿಕ್ಕಾರ ಹಾಕಿ, ಮಾನವರಿಗೆ ಪ್ರವೇಶವಿಲ್ಲದ ಗುಡಿಯಲ್ಲಿ ದೇವರು ಇರುವುದಿಲ್ಲ ಬದಲಿಗೆ ದೇಹವೇ ದೇಗುಲ ಎಂದು ಸಾರಿ, ಅಂಗದ ಮೇಲೆ ಇಷ್ಟಲಿಂಗವನ್ನು ನೀಡಿ ನಿಮ್ನ ವರ್ಗದವರನ್ನು ಲಿಂಗಾಯತರನ್ನಾಗಿ ಮಾಡಿ ನೂತನ ಲಿಂಗಾಯತ ಧರ್ಮ ಸ್ಥಾಪಿಸಿದ ಧರ್ಮ ಪ್ರವರ್ತಕ.

* ಶ್ರೇಷ್ಟ ರಾಜಕೀಯ ಮುತ್ಸದ್ದಿ ಪ್ರಧಾನಿಯಾಗಿ, ನೂತನ ಅನುಭವ ಮಂಟಪವನ್ನು ಕಟ್ಟಿ ತನ್ಮೂಲಕ ವಿಶ್ವದಲ್ಲಿಯೇ ಮೊದಲ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಪ್ರಜಾಪ್ರಭುತ್ವವಾದಿ.

* ಕೊಲ್ಲೆನಯ್ಯ ಪ್ರಾಣಿಗಳನ್ನು ಮೆಲ್ಲೆನಯ್ಯ ಬಾಯಿಚ್ಛೆಗೆ ಹೊಲ್ಲೆನಯ್ಯ ಪರಸತಿಯರ ಸಂಗವ ಎಂದು ಹೇಳಿದ ಅಹಿಂಸಾವಾದವನ್ನು ಎತ್ತಿ ಹಿಡಿದು ಸಕಲ ಜೀವಾತ್ಮರಿಗೆ ಲೇಸ ಬಯಸಿದ ನೈತಿಕ ಸತ್ಪಥದ ಸೂತ್ರದಾರಿ.

* ವಿಶ್ವದಲ್ಲಿ ಮೊದಲ ಸಾರ್ವಜನಿಕ ಶಿಕ್ಷಣವನ್ನು ಜಾರಿಗೆ ತಂದು ಅನುಭವ ಮಂಟಪದಲ್ಲಿ ಕಾರ್ಯಗತಗೊಳಿಸಿ, ಅನಕ್ಷರಸ್ತರನ್ನು ಅಕ್ಷರಸ್ತರನ್ನಾಗಿ ಮಾಡಿದ ಶಿಕ್ಷಣ ಕ್ರಾಂತಿಯ ಹರಿಕಾರ.

* 12 ಸಾವಿರ ಸೂಳೆಯರನ್ನು(ಪಣ್ಯಾಂಗನೆ) ಗರತಿ(ಪುಣ್ಯಾಂಗನೆ)ಯರನ್ನಾಗಿ ಮಾಡಿ ಅವರಿಗೆ ಪುನರ್ ವಿವಾಹವ ಮಾಡಿಸಿ ಅವರಿಂದ ವಚನಗಳನ್ನು ಬರೆಯಿಸಿದ ಕರುಣಾಳು.

* ಹೊಲೆಯ ಹಾರುವರಲ್ಲಿ ಮದುವೆಯ ಗೈಯಿಸಿ ಮಾನವ ಮಾನವರ ನಡುವಿನ ಜಾತಿಯ ಅಡ್ಡ ಗೋಡೆ ಹೊಡೆದು ಪುಡಿ ಪುಡಿ ಮಾಡಿ ಸಮತಾ ಧ್ವಜ ಹಾರಸಿದ ಯುಗಪುರುಷ.

* ತನು, ಮನ, ಭಾವ, ನೇತ್ರ, ದೃಷ್ಟಿ, ಹಸ್ತ, ಪಾದಗಳನ್ನು ಪರುಷಮಯಗೊಳಿಸಿದ ಮಹಾ ಮಂತ್ರ ಪುರುಷ.

* ಬಸವಣ್ಣ ಎಂದರೆ; ನಮ್ಮೊಳಗಿನ ಅರಿವಿನ ಪ್ರಜ್ಞೆ. ಬಸವಣ್ಣ ಎಂದರೆ; ದಣಿವರಿಯದ ಬದುಕು. ಬಸವಣ್ಣ ಎಂದರೆ; ಸಾಮರಸ್ಯ. ಬಸವಣ್ಣ ಎಂದರೆ; ಸಹೋದರತೆ. ಬಸವಣ್ಣ ಎಂದರೆ; ಮಹಾ ಬೆಳಗು. ಬಸವಣ್ಣ ಎಂದರೆ; ಮಹಾ ಬಯಲು. ಬಸವಣ್ಣ ಎಂದರೆ; ಮಡಿ ಮೈಲಿಗೆ ಇಲ್ಲದ ವಾತ್ಸಲ್ಯದ ಮಡಿಲು. ಬಸವಣ್ಣ ಎಂದರೆ; ಸಾವು ಕೇಡಿಲ್ಲದ ಶಾಂತ-ಪ್ರಶಾಂತ-ಸಮಚಿತ್ತ-ಸಮಕಳೆ-ಸಮಭಾವ-ಸಮಗಾರ.

-ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಕಲ್ಯಾಣ ಮಹಾಮನೆ, ಗುಣತೀರ್ಥ-ಬಸವಕಲ್ಯಾಣ

(ಸಂಗ್ರಹ: ರಾಜಶೇಖರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ