ಅಂತ್ಯಕ್ರಿಯೆ
``ನನಗ್ಯಾಕೋ ಅವನು ಹೋಗುವುದು ಸರಿಯಲ್ಲ ಅನಿಸತ್ತೆ'' ಕಾವೇರಮ್ಮ ಹೇಳಿದರು.
``ಅವನಿನ್ನೂ ಚಿಕ್ಕವನು'' ಹೇಳಿದರು ರಾಮಕ್ಕ. ``ಅವನಿಗೆ ದುಃಖ ಆಗ್ತದೆ, ಬಹುಶಃ ಅವನು ಏನಾದ್ರೂ ತಗಾದೆ ತೆಗೆದರೂ ತೆಗೆಯಬಹುದು. ಮತ್ತೆ ಮಕ್ಕಳು ಅಂತ್ಯಕ್ರಿಯೆಗೆ ಬರೋದು ರತ್ನಾಕರ ಮಾವ ಸಹಿಸೋದಿಲ್ಲ.''
ಆ ಹುಡುಗ ಏನನ್ನೂ ಹೇಳಲಿಲ್ಲ. ಬಹುಕತ್ತಲೆಯಿರುವ ಕೋಣೆಯೊಂದರಲ್ಲಿ, ಇನ್ನೂ ಕತ್ತಲೆಯಿರುವ ಜಾಗದಲ್ಲಿ ಅವನು ಕೂತಿದ್ದ. ಅವನು ಏನು ಯೋಚನೆ ಮಾಡುತ್ತಿದ್ದ, ಅವನಿಗೆ ಏನಾಗುತ್ತಿತ್ತು ಎನ್ನುವುದು ಅವನ ಮೊಗದಲ್ಲಿ ಕಿಂಚಿತ್ತೂ ಗೋಚರಿಸುತ್ತಿರಲಿಲ್ಲ. ಅವನ ತಂದೆಯ ಶವ ಪಕ್ಕದ ಕೋಣೆಯೊಂದರಲ್ಲಿತ್ತು. ಮತ್ತೆಂದೂ ಅವನ ತಂದೆ ಅವನಿಗೆ ಸಿಗುವುದಿಲ್ಲ, ಎಲ್ಲಾ ಪಟಪಟನೆ ಮುಗಿದುಹೋಗುತ್ತು. ಬೇರೆ ಯಾರೂ ಅವನಿಗೆ ಏನೂ ಆಗಬೇಕಾಗಿರಲಿಲ್ಲ. ಅವನ ಅತ್ತೆ ಮಾವಂದಿರು, ದೊಡ್ಡಪ್ಪ ದೊಡ್ಡಮ್ಮಂದಿರು, ಅಜ್ಜಿ ತಾತಂದಿರು. ಅವನ ತಾಯಿಯೂ ಸೇರಿ. ಅವಳು ನೂರಾರು ಮೈಲು ದೂರ ತನ್ನ ಎರಡನೆಯ ಗಂಡನೊಂದಿಗೆ ಇದ್ದಳು. ಅವನಿಗೆ ನಾಲ್ಕು ವರ್ಷ ಇದ್ದಾಗಿನಿಂದಲೂ ಅವನು ತಾಯಿಯನ್ನ ನೋದಿರಲಿಲ್ಲ. ಈಗ ಅವನಿಗೆ ಒಂಭತ್ತು ವರ್ಷ ಸರಿಯಾಗಿ ತಾಯಿಯ ನೆನಪೂ ಅವನಿಗೆ ಇರಲಿಕ್ಕಿಲ್ಲ.
ಈಗ ಮನೆಯ ತುಂಬಾ ಜನ ಸೇರಿದ್ದಾರೆ. ಸ್ನೇಹಿತರು, ಸಂಬಂಧಿಕರು, ಅಕ್ಕ ಪಕ್ಕದವರು. ಎಲ್ಲರೂ ಅವನಿಗೆ ಸಮಾಧಾನ ಮಾಡುವವರೇ ಆದರೆ ಅವನ ಕಣ್ಣೀರುರಹಿತ ಮೌನ ಎಲ್ಲರನ್ನೂ ಹಿಮ್ಮೆಟ್ಟಿಸಿತ್ತು. ಎಲ್ಲರನ್ನೂ ದೂರ ಉಳಿಸಿತ್ತು.
ಎಲ್ಲಾ ಸಮಾಧಾನಕರ ಮಾತುಗಳು ಗಾಳಿಯಲ್ಲಿ ತೂರಿಬಿಟ್ಟಹಾಗಿತ್ತು. ``ಎಂಥ ಸಾವು''....``ಕೇವಲ ನಲ್ವತ್ತಾಗಿತ್ತಂತೆ''.....``ಯಾರಿಗೂ ಏನೂ ಗೊತ್ತೇ ಆಗಲಿಲ್ಲ'',......``ಮಗು ಅಂದ್ರೆ ಪ್ರಾಣ ಬಿಡ್ತಿದ್ರು''......
ಆ ಹುಡುಗನಿಗೆ ಬೆಟ್ಟದ ಮೇಲಿದ್ದ ಎಲ್ಲರೂ ಪರಿಚಯವಿದ್ದಹಾಗಿತ್ತು. ಮೊಟ್ಟಮೊದಲ ಬಾರಿಗೆ ಆ ಹುಡುಗನ ತಂದೆಯ ಸಲುವಾಗಿ ಎಲ್ಲರೂ ಅವನ ಮನೆಗೆ ಬಂದ ಹಾಗಿತ್ತು. ಆ ಹುಡುಗನನ್ನು ಬಿಟ್ಟರೆ ಪುಸ್ತಕಗಳು, ಅಂಚೆ ಚೀಟಿಯ ಸಂಗ್ರಹಗಳು, ಸಂಗೀತ, ಹೂವುಗಳು ಇವೇ ಆ ಹುಡುಗನ ತಂದೆಯ ಜೀವಾಳವಾಗಿತ್ತು.
ಒಂದು ಚಿಕ್ಕ ಶವ ವಾಹನ, ಅ ಪುಟ್ಟ ಗುಡ್ಡದ ಮನೆಯ ಮುಂದೆ ನಿಂತಿತ್ತು. ನಾಲ್ಕಾರು ಜನ ಶವವನ್ನು ಎತ್ತಿ ಆ ವಾಹನದಲ್ಲಿ ಇಟ್ಟರು. ಗುಡ್ಡದಿಂದ ಒಂದು ಮೈಲು ಕೆಳಗೆ ಸ್ಮಶಾನವಿತ್ತು, ವಾಹನಗಳಿದ್ದವರು ವಾಹನದಲ್ಲಿ, ಇಲ್ಲದವರು ಕಾಲ್ನಡಿಗೆಯಲ್ಲಿ ಸ್ಮಶಾನಕ್ಕೆ ಹೊರಟರು.
ಆ ಹುಡುಗ ಹೊರಗೆ ನೆಡೆಯುತ್ತಿದ್ದ ವಿಧಿ ಕರ್ಮಗಳನ್ನು ಕಿಟಕಿಯ ಮೂಲಕ ನೋಡುತ್ತಿದ್ದನ್ನು. ಕೆಲವು ಗಂಟೆಗಳ ಕಾಲ ಅವನನ್ನು ಎಲ್ಲರೂ ಮರೆತಂತಿತ್ತು.. ಅವನನ್ನು ಅವನ ಆಳುಗಳೊಂದಿಗೆ ಬಿಟ್ಟಿದ್ದರು. ಏಕೆಂದರೆ ಅವರ್ಯಾರೂ ಅಂತ್ಯಕ್ರಿಯೆಗೆ ಹೋಗುವಂತಿರಲಿಲ್ಲ. ಹೊರಗಡೆ ಹಿಮ ಬೀಳುತ್ತಿತ್ತು. ಬೆಟ್ಟಗುಡ್ಡದ ಮೊಗಕ್ಕೆ ಮಲ್ಲಿಗೆ ಹೂವಿನ ರಾಶಿಯಂತೆ ಹಿಮ ಮುತ್ತಿಬಿಟ್ಟಿತ್ತು. ಮಳೆ ಬೀಳದಿದ್ದರೂ ಎಲ್ಲರ ಮೊಗ ನೆನೆದುಹೋಗಿತ್ತು.
ಎಲ್ಲರೂ ಹೋಗುವ ತನಕ ಹುಡುಗ ಕಾಯುತ್ತಿದ್ದ. ನಂತರ ಕೋಣೆಯಿಂದ ಹೊರಗೆ ಬಂದು ಹಜಾರದ ಕಡೆಗೆ ಹೊರಟ. ಹೊರಗೆ ಮಂಚದ ಮೇಲೆ ಕುಳಿತಿದ್ದ ಮಾಲಿ ಅವನನ್ನು ನೋಡಿ ``ಏನಾದರೂ ಬೇಕಿತ್ತೆ'' ಎಂದು ಕೇಳಿದ. ಆದರೆ ಹುಡುಗ ತಲೆ ಆಡಿಸಿ ಹೊರನಡೆದುಬಿಟ್ಟ. ಮನೆಗೆ ಬಂದವರೆಲ್ಲರೂ ಹೂಗಳ ಮೇಲೆ ನಡೆದಾಡಿ ಹಾಳು ಮಾಡಿದುದಕ್ಕಾಗಿ ಸಿಟ್ಟು ಮಾಡಿಕೊಂಡಿದ್ದ. ಧಣಿಗಳ ಸಾವು ತನ್ನ ಕೆಲಸಕ್ಕೆ ಕುತ್ತು ಎಂದು ಮಾಲಿಗೆ ಅರ್ಥವಾದಂತಿತ್ತು. ಈ ಮನೆ ಈಗ ಬೇರೆಯವರ ವಶಕ್ಕೆ ಹೋಗುತ್ತದ್ದೆ. ಆದಷ್ಟು ಬೇಗ ಹುಡುಗ ಅನಾಥಾಶ್ರಮ ಸೇರುತ್ತಾನೆ. ಈ ದಿನಗಳಲ್ಲಿ ಹೆಚ್ಚಿನ ಜನ ಮಾಲಿಗಳನ್ನ ಕೆಲಸಕ್ಕೆ ಇಟ್ಟುಕೊಳ್ಳುತ್ತಿರಲಿಲ್ಲ. ಭಟ್ಟ ಅಡಿಗೆ ಮನೆಯಲ್ಲಿ ದೊಡ್ಡ ಹಬ್ಬದ ಊಟಕ್ಕಾಗಿ ತಯಾರಿ ನಡೆಸುತ್ತಿದ್ದ. ಎಲ್ಲಾ ಸಂಬಂಧಿಕರು ಜೊತೆಗೆ ಪೂಜಾರಿಯೂ ಎಲ್ಲರೂ ರುಚಿಕರ ಊಟಕ್ಕಾಗಿ ಹೊಟ್ಟೆಬಾಕರಂತೆ ಹಸಿದು ಮರಳಿ ಬರುತ್ತಾರೆ. ಅವನೂ ಸಹ ಇಷ್ಟರಲ್ಲೇ ಕೆಲಸ ಕಳೆದುಕೊಳ್ಳಬಹುದು. ಆದರೆ ಅಡಿಗೆಯವರಿಗೆ ಸುಲಭವಾಗಿ ಕೆಲಸ ಸಿಗುತ್ತಿತ್ತು.
ಅವನು ಮನೆಯ ಹಿತ್ತಲು ಬಾಗಿಲಿನಿಂದ, ತೋಟಕ್ಕೆ ಬಂದು, ಹೂಗಿಡಗಳ ಪೊದೆಗಳ ನಡುವೆ ನುಸುಳಿ ರಸ್ತೆಗಿಳಿದ. ಎಲ್ಲರೂ ಸ್ಮಶಾನದ ಕಡೆಗೆ ದುಃಖದಲ್ಲಿ ಹೆಜ್ಜೆಹಾಕುವುದನ್ನು ಕಂಡು ಅನತಿ ದೂರದಲ್ಲಿ ತಾನೂ ಹಿಂಬಾಲಿಸಿದ.
ತನ್ನ ತಂದೆಯ ಜೊತೆಗೆ ದಿನ ಸಂಜೆ ವಿಹಾರಕ್ಕಾಗಿ ನಡೆದಾಡುತ್ತಿದ್ದದ್ದು ಇದೇ ರಸ್ತೆ. ಅವನಿಗೆ ಇಲ್ಲಿರುವ ಎಲ್ಲಾ ಗಿಡಗಳ ಹೆಸರೂ ಗೊತ್ತು. ಬೆಟ್ಟದಲ್ಲಿ ಹಾರಾಡುವ ಪ್ರತಿ ಹಕ್ಕಿ, ಹುಳು ಹುಪ್ಪಟೆಗಳ ಜಾಗಗಳೂ ಗೊತ್ತು. ತನ್ನ ತಂದೆ ಇವೆಲ್ಲದರ ಬಗ್ಗೆ ವಿವರಿಸಿ ಹೇಳುತ್ತಿದ್ದದ್ದು ಅವನಿಗೆ ಮರೆಯಲಸಾಧ್ಯ.
ಸುತ್ತ ನೋಡಿದರೆ ಹಸಿರು ಹೊದ್ದ ಸಹ್ಯಾದ್ರಿ ಗಿರಿಕಂದರಗಳು. ಸ್ಮಶಾನದಲ್ಲಿದ್ದ ಗೋರಿಗಳು ಎದ್ದು ಹೊರಗೆ ಓಡುವಂತೆ ಕಾಣುತ್ತಿತ್ತು. ಸೂರ್ಯ ಹುಟ್ಟುತ್ತಿದ್ದ ಹಾಗೆಯೇ ಮೊದಲ ಬೆಳಕು ಸ್ಮಶಾನದ ಮೇಲೆಯೇ ಬೀಳುತ್ತಿತ್ತು. ಬಹುಶಃ ಈ ಜಾಗವನ್ನ ಈ ಸುಂದರ ಸಹ್ಯಾದ್ರಿಯ ಬೆಟ್ಟದ ಸಾಲುಗಳನ್ನು ನೋಡಿ ಆನಂದಿಸಲಿ ಎಂದೇ ಆಯ್ಕೆ ಮಾಡಿದ್ದರೇನೋ? ಆದರೆ ಆ ಹುಡುಗನಿಗೆ ಅದೇನು ಅರ್ಥವಾಗಲಿಲ್ಲ. ಗೋರಿಯೊಳಗೆ ಹೂತವರು ಎದ್ದು ಬಂದು ನೋಡುತ್ತಾರೆಯೇ ಈ ಸುಂದರ ದೃಶ್ಯಕಾವ್ಯವನ್ನ ಎಂದು ಆಶ್ಚರ್ಯಗೊಂಡತ್ತಿದ್ದ. ಗೊರ್ಇಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು ಜೀವವಿಲ್ಲದ ಹಿಮದ ಹಾಗೆ ಅನಿಸುತ್ತಿತ್ತು. ಜನ ಯಾಕಾಗಿ ಗೋರಿಯಿಂದ ಮೇಲೆ ಬರಲು ಆ ಶವಗಳಿಗೆ ಸುಲಭದ ದಾರಿ ಮಾಡಲಿಲ್ಲ ಎಂದು ಚಕಿತನಾಗುತ್ತಿದ್ದ. ಆ ಗೋರಿಗಳು ಎಷ್ಟು ಭದ್ರವಾಗಿದ್ದುವೆಂದರೆ ಯಾರೂ ಅದರಿಂದ ಹೊರಗೆ ಹೋಗಲು ಇಷ್ಟವೇ ಪಡುತ್ತಿರಲಿಲ್ಲವೆಂಬಂತಿತ್ತು.
``ದೇವರಿಗೆ ನಿಮ್ಮ ತಂದೆಯ ಅವಶ್ಯಕತೆಯಿದೆ.......'' ಎಂದು ಸಮಾಧಾನ ಮಾಡಿದ್ದ, ಪೂಜಾರಿ.
ಇದೇ ರೀತಿ, ಸಾವಿರಾರು ಗಂಡು, ಹೆಣ್ಣು, ಮಕ್ಕಳುಗಳ ಗೋರಿಗಳನ್ನು ಒಂದೇ ಸಾಲಿನಲ್ಲಿ ಇರಲು, ವಿಶ್ರಾಂತಿ ಪಡೆಯಲು ಆ ದೇವರು ಬಿಟ್ಟಿದ್ದ. ಆ ದೇವರಿಗೆ ಇದೆಲ್ಲಾ ಯಾಕಾಗಿ ಬೇಕು? ನಾವು ಸತ್ತ ನಂತರ ಆ ದೇವರಿಗೆ ನಾವು ಯಾತಕ್ಕಾಗಿ ಉಪಯೋಗಕ್ಕೆ ಬರುತ್ತೇವೆ? ಆಶ್ಚರ್ಯಚಕಿತನಾಗುತ್ತಿದ್ದ ಹುಡುಗ.
ಸ್ಮಶಾನದ ಗೇಟನ್ನು ಈಗ ತೆರೆಯಲಾಯಿತು. ಆದರೆ ಹುಡುಗ ಸ್ಮಾಶನದ ಗೋಡೆಗೆ ಒರಗಿನಿಂತು ಜನರನ್ನು ನೋಡುತ್ತಲುಳಿದ. ಅವರೆಲ್ಲ ಕ್ರಿಕೆಟ್ಟಿನಲ್ಲಿ ವೇಗಿ ಬೋಲರ್ ದೂರದಿಂದ ಬೋಲಿನ್ಗ್ ಮಾಡಲು ಓಡಿಬರುವಾಗ ಚದುರಿಹೋಗುವ ಉಳಿದ ಆಟಗಾರರಂತೆ ಅಕ್ಕಪಕ್ಕದ್ದೆ ಸರಿದರು. ಇಲ್ಲಿ ಈ ಬೋಲರ್ ಮಾತ್ರ ಹಿಂದಿನಿಂದ ಎದ್ದುಕಾಣುತ್ತಿದ್ದ.
ರತ್ನಾಕರ ಮಾವನ ದನಿ ಮಾತ್ರ ಜೋರಾಗಿ ಕೇಳುತ್ತಿತ್ತು. ಶವವನ್ನು ಗುಂಡಿಯೊಳಗೆ ಮೆಲ್ಲನೆ ಇಡಲಾಯಿತು, ಭೂಗರ್ಭದೊಳಗೆ. ಇನ್ನೂ ಎಷ್ಟು ಕೆಳಗೆ ಶ್ವವನ್ನು ಇಡುತ್ತಾರೆ ಎಂದು ಹುಡುಗನಿಗೆ ಆಶ್ಚರ್ಯವಾಯಿತು. ಯಾರಾದ್ರೂ ಹೇಗಾದ್ರೂ ಅಲ್ಲಿಂದ ಮತ್ತೆ ಯಾಕೆ ಹಾರಿಬರುವುದಿಲ್ಲ. ಸೂಪರ್ ಮ್ಯಾನ್ ತನ್ನ ಪುಸ್ತಕದಲ್ಲಿ ಹೀಗೆ ಮಾಡುತ್ತಿದ್ದ. ಆದರೆ ನನ್ನ ತಂದೆ ಹಾಗೆ ಮಾಡುವುದಿಲ್ಲ. ಒಳ್ಳೆಯವರು. ಭೂಮಿ, ಹಸಿರು ಹುಲ್ಲು ಮತ್ತು ಮರಗಳ ಬೇರಿಗೆ ನೋವು ಮಾಡಲು ಇಷ್ಟಪಡುವುದಿಲ್ಲ. ಅಥವಾ ಅವರು ಮರದೊಳಗೆ ಬೆಳೆದು ಅಲ್ಲಿಂದ ತಪ್ಪಿಸಿಕೊಂಡಾರೇ! `ನನ್ನನ್ನೇನಾದ್ರೂ ಹೀಗೆ ಹೂತಿದ್ದರೆ' ಅಂದುಕೊಂಡ ಹುಡುಗ. ನಾನು ಗಿಡದ ಬೇರಿನೊಳಗೆ ಸೇರಿಕೊಳ್ಳುತ್ತೇನೆ ಮತ್ತು ಗಿಡದಲ್ಲಿ ಹೂವಾಗುತ್ತೇನೆ ಆಗ ಹಕ್ಕಿಯೊಂದು ಹಾರಿ ಬಂದು ನನ್ನನ್ನು ಹೂಗಳ ದಳಗಳಿಂದ ಎತ್ತಿಕೊಂಡು ಹೋಗುತ್ತವೆ.....ಹೇಗಾದರೂ ಮಾಡಿ ಹೊರಗೆ ಬರುತ್ತೇನೆ.
ಮತ್ತೆ ಪೂಜಾರಿಯಿಂದ ಏನೋ ಮಣಮಣ ಮಂತ್ರ, ಅಲ್ಲಿದ್ದವರು ಹೊರಡುವ ಮುನ್ನ ಕೈತುಂಬ ಮಣ್ಣನ್ನು ಶವದ ಮೇಲೆ ಹಾಕಿ ಹೊರಟರು. ನಿಧಾನವಾಗಿ ಒಬ್ಬೊಬ್ಬರೇ ಅಲ್ಲಿಂದ ಹೊರಟರು. ಅವರನ್ನು ಹಿಮ ನುಂಗಿಹಾಕಿತ್ತು. ಅವರ್ಯಾರೂ ಗೋಡೆಯ ಹಿಂದಿದ್ದ ಹುಡುಗನನ್ನು ನೋಡಲಿಲ್ಲ. ಅವರಿಗೆಲ್ಲ ಹಸಿವೆಯಾಗಿತ್ತು.
ಅವರೆಲ್ಲ ಹೋಗುವ ತನಕ ಅವನು ಅಲ್ಲೇ ಇದ್ದ, ನಂತರ ಕೂಲಿಗಳು ಮಣ್ಣನ್ನು ಸಮಾಧಿಗೆ ಮಣ್ಣನ್ನು ಹಾಕುತ್ತಿದ್ದದ್ದನ್ನು ಗಮನಿಸಿದ. ಅವನಿಗೆ ಮುಂದೆ ಹೋಗಬೇಕೋ ಬೇಡವೋ ತೋಚಲಿಲ್ಲ. ಸ್ವಲ್ಪ ಭಯವಿತ್ತು. ಮತ್ತೀಗ ತುಂಬಾ ತಡವಾಗಿತ್ತು. ಸಮಾಧಿಯನ್ನು ಪೂರಾ ಮುಚ್ಚಲಾಗಿತ್ತು.
ಅವನು ಸ್ಮಶಾನದಿಂದ ತಿರುಗಿ ನಡೆದ. ಅವನೆದುರು ರಸ್ತೆ ಉದ್ದಕ್ಕೂ ಮೈಚಾಚಿ ಮಲಗಿಬಿಟ್ಟಿತ್ತು. ಪೂರಾ ಖಾಲಿಯಾಗಿತ್ತು, ಹಿಮದಲ್ಲಿ ಮುಳುಗಿಹೋಗಿತ್ತು. ಅವನು ಒಂಟಿಯಾಗಿದ್ದ. ಅವನ ತಂದೆ ಒಮ್ಮೆ ಅವನಿಗೇನು ಹೇಳಿದ್ದರು? ಪ್ರಪಂಚದಲ್ಲಿ ಒಂಟಿಯಾಗಿರುವ ಮನುಷ್ಯನೇ ಧೈರ್ಯವಂತ. ಈಗ ಅವನು ಒಂಟಿ, ಆದರೆ ಸಧ್ಯಕ್ಕೆ ಅವನಿಗೆ ತಾನು ಧೈರ್ಯಶಾಲಿ ಎನಿಸಲಿಲ್ಲ.
ಒಂದು ಕ್ಷಣ ತನ್ನ ತಂದೆ ತನ್ನ ಪಕ್ಕದಲ್ಲೇ ಇದ್ದಾರೆ ಎನಿಸಿತು. ದೂರದ ವಿಹಾರಕ್ಕೆ ಹೋಗುತ್ತಿದ್ದೇವೆ ಎನಿಸಿತು. ತನ್ನ ತಂದೆ ತನ್ನ ಪಕ್ಕದಲ್ಲೇ ಇದ್ದಾರೆಂದು ತನಗರಿವಿಲ್ಲದೆಯೇ ಅವರ ಕೈ ಹಿಡಿಯಲು ನೋಡಿದ. ಆದರೆ ಅಲ್ಲಿ ಏನೂ ಇರಲಿಲ್ಲ. ಏನೂ! ಯಾರೂ....
ತನ್ನ ಕೈಯನ್ನು ಗಟ್ಟಿ ಮಾಡಿಕೊಂಡು ಜೇಬಿನೊಳಕ್ಕೆ ಇಳಿಬಿಟ್ಟ. ತನ್ನ ಕಣ್ಣೀರನ್ನು ಯಾರೂ ನೋಡದೇ ಇರಲೆಂದು ತಲೆಯನ್ನು ತಗ್ಗಿಸಿದ. ಹಿಮದಲ್ಲಿ ಜನರಿದ್ದರು. ಆದರೆ ಅವರ ಹತ್ತಿರ ಹೋಗಲು ಇವನಿಗೆ ಮನಸ್ಸಾಗಲಿಲ್ಲ. ಯಾಕೆಂದರೆ, ಅವರೇ ತಾನೇ ತನ್ನ ತಂದೆಯನ್ನು ತನ್ನಿಂದ ದೂರ ಮಾಡಿದ್ದು.
``ಅವನು ಹೊರಬರಲು ದಾರಿ ನೋಡಿಕೊಳ್ಳುತ್ತಾನೆ'' ತನಗೆ ತಾನೇ ರೋಷದಿಂದ ಹೇಳಿಕೊಂಡ. ``ಅವನು ಹೇಗಾದರೂ ಮಾಡಿ ಹೊರಗೆ ಬಂದೇ ಬರುತ್ತಾನೆ''
ರುಸ್ಕಿನ್ ಬಾಂಡ್ ಅವರ ದೆ ಫ್ಯೂನೆರಲ್ ಕಥೆಯ ಆಧಾರಿತ