ಅಂಬಾಲಾ ನಗರದಲ್ಲಿ ವಿಹಾರ

ಅಂಬಾಲಾ ನಗರದಲ್ಲಿ ವಿಹಾರ

ಹರ್ಯಾನಾ ರಾಜ್ಯದಲ್ಲಿರುವ ಅಂಬಾಲಾ ಶಹರ್ ಎಂಬುದು ಬಟ್ಟೆಗಳ ಸಗಟು ಮಾರಾಟ ಕೇಂದ್ರ. ಆದರೆ ನಿಜವಾದ ಜೀವತುಡಿತವಿರುವುದು ಅಂಬಾಲಾ ಕಂಟೋನ್ಮೆಂಟಿನಲ್ಲಿ ಮಾತ್ರ. ಬೇಸಿಗೆಯ ಹಗಲಿನ ಬೆಂಕಿಯಂಥ ಬಿರುಬಿಸಿಲಿಗೆ ಬೆಂದ ನಂತರ ಸಂಜೆ ತಂಪುಗಾಳಿ ಬೀಸುವಾಗ ವಾಕಿಂಗ್ ಹೊರಟು ತಳ್ಳುಗಾಡಿಗಳಲ್ಲಿ ಮಾರುವ ಗೋಲ್‌ ಗಪ್ಪೆ ಚಪ್ಪರಿಸುವುದು ತುಂಬಾ ಮಜವಾಗಿರುತ್ತೆ. ಗೋಲ್‌ ಗಪ್ಪೆ ಎಂದರೆ ಸಣ್ಣ ಗರಿಗರಿ ಪೂರಿಗಳೊಳಗೆ ಬೇಯಿಸಿದ ಆಲುಗಡ್ಡೆ ತುಂಬಿ ಎರಡು ರೀತಿಯ ಮಸಾಲೆ ನೀರಿನ ಮಡಕೆಯಲ್ಲಿ ಅದ್ದಿ ತೆಗೆದು ತಿನ್ನುವುದು.

ಸಂಜೆ ವಾಯುವಿಹಾರಕ್ಕೆ ಬಂದವರು ಮುದದಿಂದ ಸವಿಯುವ ಇನ್ನೊಂದು ತಿನಿಸು ಟಿಕ್ಕಿ. ಸಾಮಾನ್ಯವಾಗಿ ಟಿಕ್ಕಿ ಮಾರುವ ಅಂಗಡಿಗಳ ಮುಂದೆ ಹೆಣ್ಣು ಗಂಡೆಂಬ ಭೇದವಿಲ್ಲದೆ ದೊಡ್ಡ ಗುಂಪು ನೆರೆದಿರುತ್ತದೆ. ಬೆರಳು ದಪ್ಪದ ಸುಮಾರು ಎರಡು ಅಡಿ ವ್ಯಾಸದ ಕಬ್ಬಿಣದ ಕಾದ ಹೆಂಚಿನ ಮೇಲೆ ಕುದಿವ ಎಣ್ಣೆ. ಅಲ್ಲಿ ನಿಂತಿರುವಾತ ಹಿಡಿಯಷ್ಟಿರುವ ಟಿಕ್ಕಿ ಮುದ್ದೆಗಳನ್ನು ಮೆದುವಾಗಿ ಅದುಮಿ ಚಪ್ಪಟೆ ಮಾಡಿ ಆ ಕುದಿವೆಣ್ಣೆಯ ಮೇಲೆ ಚಕಚಕನೇ ಜಾರಿಸುತ್ತಾನೆ. ಕಂದು ಬಣ್ಣಕ್ಕೆ ತಿರುಗುವಷ್ಟು ಕರಿದ ಅನಂತರ ಅಲ್ಲಿ ಕುಳಿತಿರುವಾತ ಅವನ್ನು ನಾಜೂಕಾಗಿ ತೆಗೆದು ಮುತ್ತುಗದ ಎಲೆಯಂಥಾ ಎಲೆಯ ಮೇಲೆ ಸುಲಿದುಕೊಂಡು ಅದರ ಮೇಲೆ ಪುದಿನಾ ನೀರನ್ನೂ, ಮಸಾಲೆ ರಸವನ್ನೂ, ಕೊಂಚ ಮೊಸರನ್ನೂ ಹಾಕಿ, ಸ್ವಲ್ಪ ಉಪ್ಪು ಉದುರಿಸಿ ಅದರ ಮೇಲೊಂದು ಚಮಚೆ ಸಿಕ್ಕಿಸಿ ತಿನ್ನುವವರಿಗೆ ಕೊಡುತ್ತಾನೆ. ಇಸಕೊಂಡವರು ಲೊಟ್ಟೆ ಹಾಕುತ್ತಾ ಪಟ್ಟಾಂಗ ಹೊಡೆಯುತ್ತಾ ನಡುನಡುವೆ ಜೋರಾಗಿ ನಗುತ್ತಾ ಈ ಟಿಕ್ಕಿಯನ್ನು ಸವಿಯುತ್ತಾರೆ.

ಅಂಬಾಲಾದಲ್ಲಿ ಬಿಸಿಲುಗಾಲದ ರಾತ್ರಿ ಹನ್ನೊಂದಾದರೂ ಭರದಿಂದ ಬಿಕರಿಯಾಗುವ ಇನ್ನೊಂದು ತಿನಿಸು ಎಂದರೆ ತಳ್ಳುಗಾಡಿಗಳಲ್ಲಿ ಮಾರಲಾಗುವ ರಬ್ಡಿ ಫಲೂದಾ ಹಾಗೂ ಮಟ್ಕಾಕುಲ್ಫಿ. ಒಂದು ದೊಡ್ಡ ಹಂಡೆಯಂಥ ಮಡಕೆಯಲ್ಲಿ ಮುಚ್ಚಳವುಳ್ಳ ಪ್ಲಾಸ್ಟಿಕ್ ಕೋನ್‌ಗಳ ತುಂಬಾ ಕುಲ್ಫಿ ಸಿದ್ಧವಾಗಿರುತ್ತದೆ. ಈ ಕುಲ್ಫಿಯನ್ನು ಹೆರೆದು ತೆಗೆದು ಒಂದು ತಟ್ಟೆಯಲ್ಲಿಟ್ಟು ಅದರ ಮೇಲೆ ಗಂಜಿಯಿಂದ ತಯಾರಿಸಿದ ನಾರುನಾರು ಶ್ಯಾವಿಗೆಯನ್ನು ಹಿಡಿಯಷ್ಟು ಹಾಕುತ್ತಾರೆ. ಅನಂತರ ಅದಕ್ಕೆ ಸ್ವಲ್ಪ ರಬ್ಡಿ, ಸ್ವಲ್ಪ ಜೇನು, ಸ್ವಲ್ಪ ಗುಲ್ಕನ್ ಸೇರಿಸಿ ಅದರ ಮೇಲೆ ಪಿಸ್ತಾ ಹಾಗೂ ಏಲಕ್ಕಿ ಚೂರುಗಳನ್ನು ಹಾಕಿ ಕೊಡುತ್ತಾರೆ. ಚಮಚೆಯಲ್ಲಿ ಕಲಸಿ ಒಂದು ಚೂರು ಬಾಯಿಗಿಟ್ಟರೆ ಸಿಹಿ, ತಂಪು ಪರಿಮಳದ ಸ್ವಾದಕ್ಕೆ ಮೈಮನ ಎಲ್ಲೋ ತೇಲುತ್ತದೆ. ರಬ್ಡಿ ಫಲೂದಾದಲ್ಲಿ ಅದೇ ಪದಾರ್ಥಗಳಿದ್ದರೂ ಕುಲ್ಫಿಯ ಬದಲಾಗಿ ಹೆಚ್ಚು ರಬ್ಡಿ ಇರುತ್ತದೆ.

ಖ್ಯಾತ ಚಿತ್ರನಟ ಅಮಿತಾಬ್ ಬಚನ್ ಮುಂತಾದ ತಾರೆಯರಿಂದ ಪ್ರಸ್ತಾಪಗೊಳ್ಳುವ ಅಂಬಾಲಾ ಕಂಟೋನ್ಮೆಂಟಿನ ಪೂರನ್‌ಸಿಂಗ್ ದಾಬಾ ಎಂಬ ಹೋಟೆಲು ತಾರಾ ಹೋಟೆಲೇನಲ್ಲ. ಇಲ್ಲಿನ ರೈಲುನಿಲ್ದಾಣದ ಎದುರು ಬಸ್‌ನಿಲ್ದಾಣದ ಪಕ್ಕ ಇರುವ ಈ ರಸ್ತೆಬದಿಯ ಹೋಟೆಲಿಗೆ ಬಿಸಿಲು ಹೊತ್ತಿನಲ್ಲಿ ಹೋಗಬಾರದು. ರಾತ್ರಿ ಧೂಳು ಕಾಣದಾಗ ತಿನ್ನುವ ಗೋಧಿಯ ರೊಟ್ಟಿ ಮತ್ತು ಮಾಂಸದ ಗೊಜ್ಜು ಬಲು ರುಚಿಯಾಗಿರುತ್ತೆ.

ಎಂದಾದರೂ ನೀವು ಉತ್ತರ ಇಂಡಿಯಾಕ್ಕೆ ಭೇಟಿ ಕೊಟ್ಟಾಗ ಈ ತಿನಿಸುಗಳನ್ನು ಮರೆಯದೆ ಸೇವಿಸಿರಿ.

Rating
No votes yet