ಅಧೀನ - ಅಧೀರ
ಮಾಮೂಲಿನಂತೆ ಇಂದು ಬ್ಯಾಂಕಿಗೆ ೮.೩೦ ಕ್ಕೆ ಹೋದೆ. ಯಾಕೋ ಒಳಗೆಲ್ಲ ಕಡೆಯೂ ಕತ್ತಲೆ ತುಂಬಿತ್ತು. ಬಾಗಿಲ ಒಳಗೆ ಕಾಲಿಡುತ್ತಿದ್ದಂತೆ ಉಸಿರು ಕಟ್ಟಿಸುವಂತಹ ಹೊಗೆಯ ವಾಸನೆ ಮೂಗಿಗೆ ಬಡಿದಿತ್ತು. ಇನ್ನೊಂದು ಹೆಜ್ಜೆ ಮುಂದಿಡಲು ನೆಲದ ಮೇಲೆಲ್ಲಾ ನೀರು ಚೆಲ್ಲಿದ್ದು ಜಾರುವಂತಾಯಿತು. ನೆಲ ಒರೆಸಲು ಯಾರೂ ಕಾಣಿಸಲಿಲ್ಲ. ಎಲ್ಲೆಡೆ ಗಲೀಜು ಹರಡಿದ್ದು, ಕೆಲಸಗಾರರು ಯಾರೂ ಬಂದಂತೆ ಕಾಣಲಿಲ್ಲ. ಅದೂ ಅಲ್ಲದೇ ಎಲ್ಲಿಯೂ ದೀಪಗಳು ಕಾಣದೆ, ತಡಕಾಡಿಕೊಂಡು ಮುಂದೆ ಹೋದೆನು. ನಾನು ಕುಳಿತುಕೊಳ್ಳುವ ಸ್ಥಾನದಲ್ಲಿ ಬ್ಯಾಗನ್ನಿಟ್ಟು ಏನಾಗಿದೆ ಎಂದು ನೋಡಲು ಆಚೆಗೆ ಬಂದೆನು. ಅಷ್ಟು ಹೊತ್ತಿಗೆ, ಸೆಕ್ಯುರಿಟಿ ಮನುಷ್ಯ ಬಂದು, 'ಮೇಲೆ ಮೂರನೆಯ ಮಾಳಿಗೆಯಲ್ಲಿ (ನಾವಿರುವುದು ಎರಡನೆಯ ಮಾಳಿಗೆ) ರಾತ್ರಿ ಒಂದು ಘಂಟೆಗೆ ಬೆಂಕಿ ಹತ್ತಿಕೊಂಡು ಆಕಸ್ಮಿಕ ಸಂಭವಿಸಿದೆ. ಆದ್ದರಿಂದ ಎಂಟನೆಯ ಮಾಳಿಗೆಯವರೆವಿಗೆ ಎಲ್ಲ ಕಡೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ. ಎರಡನೆಯ ಮಾಳಿಗೆಯಲ್ಲಿ ಹವಾನಿಯಂತ್ರಿತದ ಕಿಂಡಿಗಳಿಂದ, ವಿದ್ಯುತ್ ದೀಪಗಳಿರುವ ಬುರುಡೆಗಳಿಂದ ಮತ್ತು ಮೇಲೆ ಎಲ್ಲೆಲ್ಲಿ ಖಾಲಿ ಜಾಗವಿರುವುದೋ ಅಲ್ಲೆಲ್ಲಾ ಕಡೆಗಳಿಂದ ನೀರು ತೊಟ್ಟಿಕ್ಕುತ್ತಿತ್ತು. ಒಂದೆಡೆ ನೆಲವನ್ನು ಎಡಬಿಡದಂತೆ ಸಾರಿಸುತ್ತಿದ್ದರೆ ಇನ್ನೊಂದೆಡೆ ತೊಟ್ಟಿಕ್ಕುತ್ತಿರುವ ನೀರ ಹನಿಗಳನ್ನು ತುಂಬಿಡಲು ಕಸದ ಡಬ್ಬಗಳು, ಬಕೆಟ್ಗಳನ್ನು ಇಟ್ಟಿದ್ದರು. ಮೇಲಿನಿಂದ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿತ್ತು.
ಮೂರನೆಯ ಮಾಳಿಗೆಗೆ ಹೋಗಿ ಅಲ್ಲಿ ಏನಾಗಿದೆಯೆಂದು ನೋಡಿದೆ. ಶಾರ್ಟ್ ಸರ್ಕ್ಯೂಟ್ ಆಗಿ ರಾತ್ರಿ ೧ ಘಂಟೆಗೆ ಬೆಂಕಿ ಹೊತ್ತಿಕೊಂಡಿತ್ತಂತೆ. ಆಗ ಡ್ಯೂಟಿಯಲ್ಲಿದ್ದ ಸೆಕ್ಯುರಿಟಿಯವರು, ಮೊದಲಿಗೆ ವಿದ್ಯುತ್ ಕಡಿತಗೊಳಿಸಿ, ವರ್ಲ್ಡ್ ಟ್ರೇಡ್ ಸೆಂಟರಿನವರಿಗೆ ವಿಷಯ ತಿಳಿಸಿದ್ದಾರೆ. ನಂತರ ಫೈರ್ ಬ್ರಿಗೇಡಿನವರಿಗೆ ತಿಳಿಸಿದಾಗ ಅವರೂ ಬಂದು ಬೆಂಕಿಯನ್ನು ಆರಿಸಿದ್ದಾರೆ. ಆಗ ಎಡಬಿಡದೆ ವಿಪರೀತವಾಗಿ ನೀರನ್ನು ಎರಚಿ ಬೆಂಕಿಯನ್ನು ನಂದಿಸಿದ್ದಾರೆ. ಆಗ ಮೂರನೆಯ ಮಾಳಿಗೆಯಿಂದ ನೀರು ಎರಡನೆಯ ಮಾಳಿಗೆಗೂ ಹರಿದಿದೆ. ಮೇಲಿರು ಫಾಲ್ಸ್ ಸೀಲಿಂಗಿನೊಳಗೆ ನೀರು ನುಗ್ಗಿ ಎಲ್ಲೆಡೆ ತೊಟ್ಟಿಕ್ಕುತ್ತಿತ್ತು. ಕತ್ತಲೆಯಲ್ಲಿ ಸುಮ್ಮನೆ ಕುಳಿತಿದ್ದೆ. ಸ್ವಲ್ಪ ಹೊತ್ತಿಗೆ ಸ್ನೇಹಿತರು ಒಬ್ಬೊಬ್ಬರಾಗಿ ಒಳ ಬರುತ್ತಿದ್ದಂತೆ ಅವರುಗಳಿ ರಾಮಾಯಣವನ್ನು ಒಪ್ಪಿಸುತ್ತಿದ್ದೆ. ನಮ್ಮಲ್ಲಿ ಎಲ್ಲರೂ ನೆಟ್ ವರ್ಕಿನಿಂದ ಹೊಂದಿಕೊಂಡಿರುವುದರಿಂದ ಮತ್ತು ಎಲ್ಲ ಕೆಲಸಗಳಿಗೂ ಕಂಪ್ಯೂಟರ್ ಮೊರೆ ಹೋಗಲೇಬೇಕಿರುವುದರಿಂದ, ಅರ್ಜೆಂಟಾಗಿ ಮಾಡಬೇಕಿರುವ ಕೆಲಸಗಳನ್ನೂ ಮಾಡಲಾಗದೇ ಎಲ್ಲರಿಗೂ ಮೈ ಕೈ ಪರಚಿಕೊಳ್ಳುವಂತಾಗಿತ್ತು.
ಸ್ವಲ್ಪ ದಿನಗಳ ಹಿಂದೆ ಕಂಪ್ಯೂಟರ್ ಬಗ್ಗೆ ಒಂದು ಕವನ ಬರೆದಿದ್ದೆ. ಅದರಲ್ಲಿ ನನ್ನ ಕಂಪ್ಯೂಟರ್ ನನ್ನನ್ನು ಒಂದು ಪ್ರಶ್ನೆ ಕೇಳಿತ್ತು, ನಾನಿಲ್ಲದೇ ನೀನಿರುವ ದಿನ ಬಂದೀತೇ? ಎಂದು. ಅದು ಇಂದು ನಿಜವಾಗಿದೆಯೆಂದು ನನ್ನ ಕಂಪ್ಯೂಟರ್ ಅಣಕಿಸುತ್ತಿತ್ತು. ನಮ್ಮ ವಿಭಾಗಕ್ಕೆ ಬರುವ ಪತ್ರಗಳಿಗೆ ಸಂಖ್ಯೆಯನ್ನೂ ಕೊಡಲಾಗುತ್ತಿರಲಿಲ್ಲ. ಅಲ್ಲದೇ ಹುಚ್ಚು ಹಿಡಿಸಿರುವ ಅಂತರ್ಜಾಲವನ್ನೂ ನೋಡಲಾಗುತ್ತಿಲ್ಲ. ಒಂದು ರೀತಿಯಾಗಿ ಅಧೀರನೇ ಆಗಿದ್ದೆ. ಪ್ಯಾಂಟ್ರಿಯಲ್ಲಿ ಕೆಲಸ ಮಾಡಲಾಗದೇ ವಿಭಾಗದಲ್ಲಿ ಯಾರಿಗೂ ಬೆಳಗಿನ ಚಹವನ್ನು ಸರಬರಾಜು ಮಾಡಲಾಗಿರಲಿಲ್ಲ. ಎಲ್ಲರೂ ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ನಾನು ಮಾತ್ರ ಜಾಗದಲ್ಲಿಯೇ ಕುಳಿತು ಬರುವ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದೆ. ಹಾಗೆಯೇ ಹಿಂದಿನ ದಿನ ಬಂದಿದ್ದ ಕಡತಗಳನ್ನು ನೋಡಿ ಮುಗಿಸಿದೆ.
ಮಧ್ಯಾಹ್ನವಾದರೂ ನೀರು ತೊಟ್ಟಿಕ್ಕುವುದು ಕಡಿಮೆಯಾಗಲಿಲ್ಲ. ಅದುವರೆವಿಗೂ ಇದನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದವರು, ಇಂದು ಪೂರ್ತಿಯಾಗಿ ಕೆಲಸ ಮುಗಿಯುವುದಿಲ್ಲವೆಂದರು. ನಾಳೆಯೂ ಕೆಲಸ ಮಾಡಬೇಕಿರುವುದೆಂದೂ, ಅಲ್ಲಿಯವರೆವಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುವುದಿಲ್ಲವೆಂದರು. ಇಂದು ಏನೇನೂ ಕೆಲಸ ಮಾಡಲಾಗದೇ ಪೆಚ್ಚು ಮೋರೆ ಹೊತ್ತು ಮನೆಯ ಕಡೆ ನಡೆದೆ. ನಾಳೆ ಏನಾಗುವುದೋ ಕಾದು ನೋಡಬೇಕು.
ಕೊನೆಗೂ ವಿಧಿ ನನ್ನನ್ನು ತನ್ನ ಅಧೀನನನ್ನಾಗಿ ಮಾಡಿಕೊಂಡು ಅಧೀರನನ್ನಾಗಿಯೂ ಮಾಡಿತು.
Comments
ಎಲ್ಲ ಸರಿ ಹೋಯಿತು