ಅನಂತಮೂರ್ತಿಯವರು ಮಾತನಾಡಬಾರದೆ?

ಅನಂತಮೂರ್ತಿಯವರು ಮಾತನಾಡಬಾರದೆ?

ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವು ಅವರ ಭಾಷಣದ ಪೂರ್ಣ ಪಠ್ಯ ಒದಗಿಸಿದರೆ ನಾನದನ್ನ ಓದಿ ನನ್ನ ಅಭಿಪ್ರಾಯ ತಿಳಿಸಬಹುದೇ ಹೊರತು ಪತ್ರಿಕಾ ವರದಿಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಅಂತ ಹೇಳಿದರು.

ರಾತ್ರಿ ಸಂಪದದಲ್ಲಿ ಮುಖ್ಯವಾಗಿ ಎರಡು ಬ್ಲಾಗ್‌ಗಳಲ್ಲಿ "ಅನಂತಮೂರ್ತಿಯವರ ಉಪದ್ವ್ಯಾಪಿತನ ಅತಿಯಾಯಿತು" ಅಂತ ಒಬ್ಬರು, "ಆವರಣದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು" ಅಂತ ಇನ್ನೊಬ್ಬರು ಚಿಕ್ಕದಾಗಿ ಬರೆದರು. ವಾಸ್ತವವಾಗಿ ಇವರ ಬ್ಲಾಗ್‌ನಲ್ಲಿ ಅನಂತಮೂರ್ತಿಯವರ ಭಾಷಣದ ಯಾವ ನಿರ್ದಿಷ್ಟ ಅಂಶಗಳ ಕುರಿತೂ ಉಲ್ಲೇಖವಿಲ್ಲ. ಅಲ್ಲದೆ ಬ್ಲಾಗ್ ಬರೆದವರಾದರೂ, ಇವರಿಗೆ ಪ್ರತಿಕ್ರಿಯೆ ಬರೆದವರಾದರೂ ಅನಂತಮೂರ್ತಿಯವರ ಭಾಷಣವನ್ನು ತಾವೇ ಖುದ್ದಾಗಿ ಮತ್ತು ಸರಿಯಾಗಿ ಕೇಳಿದ್ದರೆ, ಅಥವಾ ಅದರ ಪೂರ್ತಿ ಪಠ್ಯವನ್ನಾದರೂ ಓದಿದ್ದರೆ ಎಂಬುದು ಅನುಮಾನ.

ಇತಿಹಾಸವೆಂದರೆ ತನ್ನ ಮನೋಭಾವಕ್ಕೆ ಸರಿಯಾಗಿ ಬೇಕಾಬಿಟ್ಟಿ ಬರೆಯಬಹುದಾದ ಕಥೆ ಕವನ ಕಾದಂಬರಿಯಲ್ಲವಲ್ಲ ಎನ್ನುತ್ತಾರೆ ಇವರಲ್ಲೊಬ್ಬರು. ಆವರಣವನ್ನು ಇತಿಹಾಸ ಎನ್ನುತ್ತಿದ್ದಾರೋ ಅಥವಾ ತಮ್ಮ ತಮ್ಮ ಮನೋಭಾವಕ್ಕೆ ಸರಿಯಾಗಿ ಬೇಕಾಬಿಟ್ಟಿ ಬರೆಯುವುದೆಲ್ಲ ಕಥೆ ಕಾದಂಬರಿ ಕವನ ಎನ್ನುತ್ತಿದ್ದಾರೋ ಅರ್ಥವಾಗಲಿಲ್ಲ. ಹಾಗೆಯೇ ಅನಂತಮೂರ್ತಿಯವರ ವಿಪರೀತದ ವರ್ತನೆ ಎಂದು ಇವರು ಯಾವುದನ್ನ ಕುರಿತಿಟ್ಟು ಹೇಳುತ್ತಿದ್ದಾರೆಂದೂ ತಿಳಿಯಲಿಲ್ಲ.

ಅನಂತಮೂರ್ತಿಯವರು ಮಾತೇ ಆಡಬಾರದೋ ಅಥವಾ `ಮುಸ್ಲಿಂ ದ್ವೇಷಿ ಕಂ ರಾಷ್ಟ್ರಪ್ರೇಮಿ'ಗಳಿಗೆ ಇಷ್ಟವಾಗುವುದನ್ನು ಮಾತ್ರ ಅವರು ಆಡಬೇಕೋ ಎಂದು ಪ್ರಶ್ನಿಸುವಂತೆ ಸದ್ಯದ ಬೆಳವಣಿಗೆಗಳು ಅಚ್ಚರಿಯನ್ನೂ ಅಸಹ್ಯವನ್ನೂ ಹುಟ್ಟಿಸುತ್ತಿವೆ.

ಇನ್ನು ಇತಿಹಾಸದಿಂದ ಪಾಠ ಕಲಿತು ಅಂಥ ತಪ್ಪುಗಳು ಪುನರಾವರ್ತಿಸದಂತೆ ಬದುಕಬೇಕು ಎನ್ನುವ ಇವರು ನಮಗೆಲ್ಲ ನೆನಪಿಸಬಹುದಾದ, ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮರೇ ಭಗ್ನಗೊಳಿಸಿದ ಯಾವುದಾದರೂ ಒಂದು ದೇವಸ್ಥಾನದ ಪ್ರಕರಣವನ್ನು ಉಲ್ಲೇಖಿಸಲು ಸಾಧ್ಯವೆ?

ಅನಂತಮೂರ್ತಿಯವರ ಭಾಷಣದಲ್ಲಿ ಆವರಣದ ವಿಮರ್ಶೆಯಾಗಲೀ ಸಾಹಿತ್ಯದ ವಿಮರ್ಶೆಯಾಗಲೀ ಇರಲಿಲ್ಲ ಎಂದೂ ಕೆಲವರು ಬರೆದಿದ್ದಾರೆ. ವಾಸ್ತವವಾಗಿ ಅನಂತಮೂರ್ತಿಯವರು ತಮ್ಮ ಭಾಷಣದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿಯೇ ಮುಖ್ಯವಾಗಿ ಈ ಐದು ಅಂಶಗಳನ್ನು ಎತ್ತಿದ್ದಾರೆ.

೧. ಒಬ್ಬ ಶ್ರೇಷ್ಠ ಲೇಖಕ ತಾನು ಕಂಡುಕೊಂಡ, ಒಪ್ಪಿದ ಮತ್ತು ತನಗೆ ತಿಳಿದ ಸಂಗತಿಗಳನ್ನೂ ಪ್ರಶ್ನಿಸಿಕೊಳ್ಳುತ್ತ, ತನ್ನದೇ ಅಭಿಪ್ರಾಯಗಳಿಗೆ ವಿರುದ್ಧವಾಗಿ ಹೋಗುವ ಮುಕ್ತ ಮನಸ್ಸು ಹೊಂದಿರುತ್ತಾನೆ. ಸಾಮಾನ್ಯ ಲೇಖಕ ಜನಪ್ರಿಯವೆಂದು ತಾನು ನಂಬಿದ್ದನ್ನು ಜನರೂ ನಂಬುವ ಹಾಗೆ, ಆಕ್ರಮಣ ಮಾಡುವ ಹಾಗೆ ಬರೆಯುತ್ತಾನೆ.

೨. ಭೈರಪ್ಪನವರು ಒಬ್ಬ ಡಿಬೇಟರ್. ಅವರ ಕೃತಿಗಳಲ್ಲಿ ಅವರು ಚರ್ಚೆಯನ್ನು ಕಟ್ಟುತ್ತಾ ಅದಕ್ಕೆ ಅವರದೇ ಪ್ರತಿರೋಧವನ್ನೂ ಕಟ್ಟುತ್ತಾ ಎಲ್ಲೋ ಒಂದು ಕಡೆ ತಮಗೇ ಇಷ್ಟವಿರುವ ಉತ್ತರಗಳು ಸಿಗುವ ಹಾಗೆ ಅದನ್ನು ಕಟ್ಟುತ್ತ ಕಟ್ಟುತ್ತ ಕಟ್ಟುತ್ತ ಹೋಗುತ್ತಾರೆ.

೩. ಭೈರಪ್ಪನವರಲ್ಲಿ ಕಾವ್ಯ ಎನ್ನುವುದು ಏನೂ ಇಲ್ಲ.

೪. ಒಬ್ಬ ಒಳ್ಳೆಯ ಲೇಖಕ ಮುಕ್ತ ಮನಸ್ಸನ್ನು ಹೊಂದಿರುತ್ತಾನೆ. ತನಗೆ ಕಾಣುತ್ತಿರುವುದರ ಸನಿಹದಲ್ಲೇ ತಾನು ಕಾಣದಿರುವುದೂ ಇದ್ದಿರಬಹುದಾದ ಸೂಕ್ಷ್ಮ ಅನುಮಾನ, ಅಂಥ ಸಾಧ್ಯತೆಯ ಅರಿವು ಅವನಲ್ಲಿ ಇರುತ್ತದೆ.

೫. ಷೇಕ್ಸ್‌ಪಿಯರ್‌ಗೆ ಕೊಲೆಗಡುಕ ಮ್ಯಾಕ್‌ಬೆತ್‌ನನ್ನು ಒಬ್ಬ ಮನುಷ್ಯನನ್ನಾಗಿ ನೋಡುವುದು ಸಾಧ್ಯವಾಯಿತು, ಟಾಲ್‌ಸ್ಟಾಯ್‌ಗೆ ನೆಪೋಲಿಯನ್‌ನಂಥವನನ್ನೂ ಒಬ್ಬ ಸಾಮಾನ್ಯ ಮನುಷ್ಯನಂತೆ ನೋಡಲು ಸಾಧ್ಯವಾಯಿತು. ಔರಂಗಜೇಬ್ ಕೂಡಾ ನಮ್ಮ ದೇವೇಗೌಡರು, ಇಂದಿರಾಗಾಂಧಿ ಮತ್ತು ನಮ್ಮನಿಮ್ಮ ಹಾಗೇ ಒಬ್ಬ ಮನುಷ್ಯ.

ಇದಲ್ಲದೆ ಆವರಣದ ಹಿಂದೆ ಕೆಲಸ ಮಾಡಿದ ಮನೋಧರ್ಮದ ಕುರಿತಾಗಿ ಅವರು ಹೇಳಿದ `ದಿಗಿಲಿನ' ಅಥವಾ `ಭಯ'ದ ಮಾತು ಇದು: ಇದರ ಹಿಂದಿರುವುದು ಭೈರಪ್ಪನವರ ಜನಪ್ರಿಯತೆಯ ಕುರಿತ ಅಸೂಯೆಯೇ ಎಂದು ಅನಿಸಿದರೆ ಅದು ಅವರವರ ಭಾವ.

೬. ಭೈರಪ್ಪನವರ ರೀತಿಯೇ ಯೋಚಿಸುವವರು ಮುಸ್ಲಿಮರಲ್ಲೂ ಹಿಂದೂಗಳಲ್ಲೂ ಹೆಚ್ಚಾದರೆ ಈ ಬಗೆಯ(ಸೌಹಾರ್ದದ) ಕನಸು ಕಾಣುವುದು ಸಾಧ್ಯವಾಗುವುದಿಲ್ಲ. ಆ ರೀತಿ ಯೋಚನೆ ಮಾಡುವವರು ಜನಪ್ರಿಯ ಆದಾಗ ಸ್ವಲ್ಪ ಭಯವಾಗುತ್ತೆ. ಕನಸುಗಳೇ ಇಲ್ಲದ ಸಮಾಜ ಒಂದು ನರಕವೇ ಸರಿ.

ವಾಸ್ತವದಲ್ಲಿ ಸಂಪದ ಈ ಕುರಿತ ಚರ್ಚೆಯನ್ನು ತುಂಬ ಪ್ರಬುದ್ಧವಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಬೇಕಿತ್ತು. ಮುಖ್ಯವಾಗಿ ಪತ್ರಿಕೆಗಳಲ್ಲಿ ಅದು ಇವತ್ತು ಸಾಧ್ಯವಿಲ್ಲ ಎಂಬ ಕಾರಣಕ್ಕೇ. ಸಂಪದವನ್ನು ಆರಂಭಿಸಿದವರಿಗೆ, ನಿರ್ವಹಿಸುತ್ತಿರುವವರಿಗೆ ಬಹುಷಃ ಅಂಥ ಒಂದು ಆಶಯವಿತ್ತೆನಿಸುತ್ತದೆ. ಅದಕ್ಕಾಗಿಯೇ ಅವರು ಇದನ್ನು ಒಂದು ಮುಕ್ತವೇದಿಕೆಯನ್ನಾಗಿಸಿದ್ದರು.

ಸಂಪದದಲ್ಲಿ ವ್ಯಕ್ತಿನಿಂದೆ ಇರುವುದಿಲ್ಲ, ವಸ್ತುನಿಷ್ಠ ಚರ್ಚೆ, ಲೇಖನ, ಮಾತುಕತೆ ಮಾತ್ರ ಇರುತ್ತದೆ ಎಂದು ನಂಬಿದ್ದೆ. ಇಲ್ಲಿ ಇರುವ ಅತ್ಯಂತ ಪ್ರಜಾಸತ್ತಾತ್ಮಕ ವೇದಿಕೆ ಯಾರು ಬೇಕಾದರೂ ಸದಸ್ಯರಾಗಿ ಏನನ್ನು ಬೇಕಾದರೂ ಪೋಸ್ಟ್ ಮಾಡಲು ಮುಕ್ತ ಅವಕಾಶವನ್ನು ಕೊಟ್ಟಿದೆ ನಿಜ. ಇಲ್ಲಿನ ಬರಹಗಳ ವಿಚಾರದಲ್ಲಿ ನಿರ್ವಾಹಕರು ಕೈ ಹಾಕಿದ ಉದಾಹರಣೆಗಳೇ ಇಲ್ಲವೆನ್ನಬಹುದೇನೋ. ಯಾಕೆಂದರೆ ಪ್ರಬುದ್ಧರಿಗೆ ಕೊಡಲ್ಪಟ್ಟ ಸ್ವಾತಂತ್ರ್ಯ ಯಾವಾಗಲೂ ಹೆಚ್ಚು ಹೊಣೆಗಾರಿಕೆಯನ್ನು ಹೊರಿಸುತ್ತದೆ ಎಂಬುದು ಸಾಮಾನ್ಯ ನಂಬುಗೆ. ಆದರೆ ಇಲ್ಲೂ ಕುಹಕ, ಚಿತಾವಣೆ, ಪ್ರವೋಕ್ ಮಾಡುವ `ತಿಳಿಯಿತು ಬಿಡು ನಿನ್ನ ಬಂಡವಾಳ' ಮಾದರಿಯ ನಂಜಿನ ಬರಹಗಳು ಹೆಚ್ಚುತ್ತಿವೆ.

ಬ್ಲಾಗ್‌ಗಳೆಂದರೇನು ಅತೃಪ್ತ ಮನಸ್ಸುಗಳ ಆಧುನಿಕ ಗೋಡೆ ಬರಹಗಳೆ?

Rating
No votes yet

Comments