ಅನ್ವೇಷಣೆ ಭಾಗ ೧೬

ಅನ್ವೇಷಣೆ ಭಾಗ ೧೬

ಹಲೋ... ಹಲೋ... ಅರ್ಜುನ್, ಆ ವ್ಯಕ್ತಿ ಕೊಲೆಗಾರನಿಗೆ ಫೋನ್ ಮಾಡಿದ್ದ. ಯಾವುದೋ ಒಂದು ಡೀಲ್ ಒಪ್ಪಿಸಲು ಕರೆ ಮಾಡಿದ್ದ, ನಾಳೆ ಅವನಿಗೆ ಕೊಟ್ಟಾಯಂ ನ ಅವನ ಮನೆಯ ಬಳಿ ಇರುವ ಪಾರ್ಕಿನ ಬಳಿ ಭೇಟಿ ಮಾಡಲು ಬರಲು ಹೇಳಿದ್ದಾನೆ. ಇದರ ಅರ್ಥ ಆ ವ್ಯಕ್ತಿಗೆ ಇವರು ಅರೆಸ್ಟ್ ಆಗಿರುವುದು ಗೊತ್ತಿಲ್ಲ ಎಂದಾಯಿತು. ಆದರೆ ನಾವು ಈ ಕೂಡಲೇ ಕೊಟ್ಟಾಯಂಗೆ ಹೊರಡಬೇಕು. ನಾವು ಈಗಲೇ ಹೊರಡುತ್ತಿದ್ದೇವೆ, ಅಲ್ಲಿಂದ ಬಂದ ಮೇಲೆ ನಾನು ನಿಮಗೆ ಅಪ್ಡೇಟ್ ಮಾಡುತ್ತೇನೆ.

ಸರ್... ಸರ್.... ನಿಮ್ಮ ಬಳಿ ಒಂದು ರಿಕ್ವೆಸ್ಟ್... ದಯವಿಟ್ಟು ಈ ಆಪರೇಷನ್ ನಲ್ಲಿ ನಾನು ನಿಮ್ಮ ತಂಡವನ್ನು ಸೇರಿಕೊಳ್ಳಬಹುದೇ?

ನೋ... ಮಿ. ಅರ್ಜುನ್, ಇದೇನು ಹುಡುಗಾಟ ಎಂದುಕೊಂಡಿದ್ದೀರ? ಒಂದೇ ಒಂದು ಸಣ್ಣ ತಪ್ಪು ನಡೆದರೂ ಎಲ್ಲರಿಗೂ ಆಪತ್ತು ಕಟ್ಟಿಟ್ಟ ಬುತ್ತಿ. ಅದೂ ಅಲ್ಲದೆ ಈ ಆಪರೇಷನ್ ನಾವು ಡೈರೆಕ್ಟ್ ಆಗಿ ಮಾಡುವುದಿಲ್ಲ, ಕೇರಳ ಪೋಲೀಸರ ಸಹಯೋಗದಲ್ಲಿ ನಾವು ಈ ಕಾರ್ಯಾಚರಣೆ ನಡೆಸಬೇಕಿರುವುದರಿಂದ, ನಾವು ಹೋಗುತ್ತಿರುವುದೇ ಐದು ಜನ ಮಾತ್ರ. ನಮ್ಮ ಕೆಲಸ ಏನಿದ್ದರೂ ಅಲ್ಲಿಂದ ಅವನನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡು ಬರುವುದು ಅಷ್ಟೇ. ಉಳಿದದ್ದು ಏನಿದ್ದರೂ ಕೇರಳ ಪೊಲೀಸರು ನೋಡಿಕೊಳ್ಳುತ್ತಾರೆ.

ಅರ್ಜುನ್... ನೀವೇನೂ ಚಿಂತಿಸಬೇಡಿ. ನಿಮಗೆ ನ್ಯಾಯ ಒದಗಿಸಿಕೊಡುವ ಕೆಲಸ ನನ್ನದು. ನನ್ನ ಮೇಲೆ ನಂಬಿಕೆ ಇಡಿ. ನೀವು ನಂಬುತ್ತೀರೋ, ಬಿಡುತ್ತೀರೋ...ಈ ಕೇಸನ್ನು ನಾನು ನನ್ನ ಸ್ವಂತದವರ ಕೇಸ್ ಎಂದುಕೊಂಡು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ನಾವು ಬೇರೆ ಯಾರಿಗೂ ಕೇಸ್ ಪೂರ್ತಿ ಮುಗಿಯುವವರೆಗೂ ವಿವರಗಳನ್ನು ನೀಡುವುದಿಲ್ಲ... ಆದರೆ ನಿಮಗೆ ಮಾತ್ರ ಪ್ರತಿ ಹಂತದಲ್ಲೂ ಏನಾಯಿತು ಎಂದು ವಿವರಣೆ ನೀಡುತ್ತಿದ್ದೇನೆ. ಮೂಲ ವ್ಯಕ್ತಿ ಸಿಕ್ಕಿದಾಗ ಖಂಡಿತ ಐದು ನಿಮಿಷ ಅವನನ್ನು ನಿಮಗೆ ಒಪ್ಪಿಸುತ್ತೇನೆ.... ಮನಸೋ ಇಚ್ಛೆ ಅವನನ್ನು ಹೊಡೆಯಿರಿ ಬಡಿಯಿರಿ....OK....

ತುಂಬಾ ಥ್ಯಾಂಕ್ಸ್ ಸರ್... ನೀವಿಷ್ಟು ಕಾಳಜಿ ಇಟ್ಟು ಈ ಕೇಸನ್ನು ವಿಚಾರಣೆ ಮಾಡುತ್ತಿದ್ದೀರಿ ಎಂದು ಹೇಳಿದ ಮೇಲೆ ನಾನೇನೂ ಮಾತಾಡುವುದಿಲ್ಲ. ನೀವು ಹೋಗಿ ಬರುವವರೆಗೂ ಕಾಯುತ್ತೇನೆ.

ವಾರದ ನಂತರ ತ್ರಿವಿಕ್ರಂ ಕರೆ ಮಾಡಿದರು. ಸರ್... ಏನಾಯ್ತು? ಆ ವ್ಯಕ್ತಿ ಸಿಕ್ಕನ? ಅವನೇನಾ ಮೂಲ ವ್ಯಕ್ತಿ ಅಥವಾ ಇನ್ನೂ ಯಾರಾದರೂ ಇದ್ದಾರ? ಬೇಗ ಹೇಳಿ ಸರ್....

ಅರ್ಜುನ್... ಒಮ್ಮೆ ಸಾಗರ್ ಅಪೋಲೋ ಆಸ್ಪತ್ರೆಗೆ ಬನ್ನಿ ಎಲ್ಲಾ ಹೇಳುತ್ತೇನೆ.

ಸರ್... ಆಸ್ಪತ್ರೆಗಾ!!!??? ಯಾಕೆ ಸರ್?

ಅರ್ಜುನ್ ನೀವು ಬನ್ನಿ ಹೇಳುತ್ತೇನೆ....

 

ಫೋನ್ ಕಟ್ ಮಾಡಿ ಆಸ್ಪತ್ರೆಗೆ ಬಂದು ತ್ರಿವಿಕ್ರಂ ಗೆ ಕರೆಮಾಡಿದರೆ, ಎರಡನೇ ಮಹಡಿ ರೂಂ ನಂ. 102 ಕ್ಕೆ ಬನ್ನಿ ಎಂದರು. ಅಲ್ಲಿ ಹೋದರೆ ರೂಮಿನ ಮುಂದೆ ಒಬ್ಬ ಪೇದೆ ನಿಂತಿದ್ದ. ಆತನಿಗೆ ನನ್ನ ಹೆಸರು ಹೇಳಿದ ಮೇಲೆ ಒಳಗಡೆ ಬಿಟ್ಟ. ಒಳಗಡೆ ನೋಡಿದರೆ ತ್ರಿವಿಕ್ರಂ ಹಾಸಿಗೆ ಮೇಲೆ ಮಲಗಿದ್ದರು. ಬಲಗೈಗೆ ಪಟ್ಟಿ ಕಟ್ಟಿದ್ದರು!!

ಸರ್.... ಏನಿದು? ಏನಾಯ್ತು ನಿಮಗೆ?

ಬನ್ನಿ ಅರ್ಜುನ್, ಕುಳಿತುಕೊಳ್ಳಿ.... ಎಲ್ಲ ಹೇಳುತ್ತೇನೆ. ನಾವು ಇಲ್ಲಿಂದ ಕೊಟ್ಟಾಯಂಗೆ ಈ ಕೊಲೆಗಾರನನ್ನು ಕರೆದುಕೊಂಡು ಹೋಗಿ ಅವನ ಮನೆಯ ಬಳಿಯಿದ್ದ ಪಾರ್ಕಿನ ಬಳಿ ಅವನನ್ನು ಕಳುಹಿಸಿ ನಾವು ಕೇರಳ ಪೋಲೀಸರ ಜೊತೆ ಆ ಜಾಗವನ್ನು ಸುತ್ತುವರಿದಿದ್ದೆವು. ಆ ವ್ಯಕ್ತಿ ಹೇಳಿದ್ದ ಸಮಯ ದಾಟಿ ಎರಡು ಗಂಟೆ ಕಳೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಒಬ್ಬ ಪೇದೆ ಮಫ್ತಿಯಲ್ಲಿ ಅವನ ಬಳಿ ಹೋಗಿ ಏನಾದರೂ ಕರೆ ಮಾಡಿದ್ದನ ಎಂದು ಕೇಳಿ ವಾಪಸಾಗುವಾಗ ಒಬ್ಬ ವ್ಯಕ್ತಿ ಈ ಕೊಲೆಗಾರನ ಬಳಿ ಬರುವುದು ಗೊತ್ತಾಯಿತು.... ಕೂಡಲೇ ಜಾಗೃತಗೊಂಡ ಪೋಲೀಸರು ಅವನನ್ನು ಅಟಾಕ್ ಮಾಡಲು ಮುಂದಾದರು. ಆದರೆ ಅವನು ಅದನ್ನು ಮುಂಚೆಯೇ ನಿರೀಕ್ಷಿಸಿದ್ದ ಎಂದು ಕಾಣುತ್ತೆ, ಕೂಡಲೇ ಬ್ಯಾಗಿನಿಂದ ಗನ್ನೊಂದನ್ನು ತೆಗೆದು ಗುಂಡಿನ ಮಳೆಗರೆಯಲು ಶುರುಮಾಡಿದ. ಆ ಗಲಾಟೆಯಲ್ಲಿ ನನ್ನ ಕೈಗೂ ಒಂದು ಗುಂಡು ತಾಗಿತು. ಹೇಗೋ ಕಷ್ಟ ಪಟ್ಟು ಅವನನ್ನು ಹಿಡಿದರೂ ಅಷ್ಟೊತ್ತಿಗೆ ಅವನು ಮೂವರು ಪೇದೆಗಳನ್ನು, ಆ ಕೊಲೆಗಾರನನ್ನು ಕೊಂದಿದ್ದನು.

ನಂತರ ಅವನನ್ನು ಬಂಧಿಸಿ, ಕೋರ್ಟ್ಗೆ ಹಾಜರು ಪಡಿಸಿ ಅವನನ್ನು ನಮ್ಮ ಕಸ್ಟಡಿಗೆ ಒಪ್ಪಿಸಲು ಮೂರು ದಿನ ಆಯಿತು. ಎರಡು ದಿನ ಅಲ್ಲೇ ಆಸ್ಪತ್ರೆಯಲ್ಲಿ ರೆಸ್ಟ್ ತೆಗೆದುಕೊಂಡಿದ್ದೆ. ನೆನ್ನೆ ಮತ್ತೆ ಜರ್ನಿ ಮಾಡಿದ್ದರಿಂದ ಕೈ ನೋವಲು ಶುರುವಾಗಿ ಅಡ್ಮಿಟ್ ಆಗಿದ್ದೇನೆ. ಇನ್ನೇನು ನಾಳೆ ಡಿಸ್ಚಾರ್ಜ್ ಆಗುತ್ತೇನೆ.

ಸರ್.... ಸಾರಿ ಸರ್.... ನಮ್ಮಿಂದಾಗಿ ನೀವು ಕಷ್ಟದಲ್ಲಿ ಸಿಲುಕುವಂತಾಯಿತು....

ಅರೇ... ಅರ್ಜುನ್.... dont be formal.... ಪೋಲೀಸರ ಕೆಲಸವೇ ಕತ್ತಿಯ ಮೇಲಿನ ಅಲಗಿನ ಹಾಗೆ... ಈ ಕೇಸ್ ಅಲ್ಲ, ಯಾವ ಕೇಸ್ ಆದರೂ ನಮಗೆ ತೊಂದರೆ ತಪ್ಪಿದ್ದಲ್ಲ, ಅದಕ್ಕೆ ನೀವ್ಯಾಕೆ ಸಾರಿ ಹೇಳುತ್ತೀರಾ....

OK ಸರ್...ಈ ಸಂದರ್ಭದಲ್ಲಿ ಕೇಳುವುದು ತಪ್ಪು... ದಯವಿಟ್ಟು ತಪ್ಪು ತಿಳಿಯಬೇಡಿ... ಆ ಬಂಧಿಸಿದ ವ್ಯಕ್ತಿಯಿಂದ ಏನಾದರೂ ಮಾಹಿತಿ ದೊರಕಿದೆಯ? ಈ ಕೊಲೆಯ ರೂವಾರಿ ಯಾರು ಎಂದೇನಾದರೂ ತಿಳಿಯಿತ?

ಇಲ್ಲ ಅರ್ಜುನ್, ಅವನು ಅಷ್ಟು ಸುಲಭವಾಗಿ ಬಾಯಿ ಬಿಡುತ್ತಿಲ್ಲ.....ಎಷ್ಟೇ ಟಾರ್ಚರ್ ಕೊಟ್ಟರೂ.... ಏನೇ ಮಾಡಿದರೂ ಬಾಯಿ ಬಿಡುತ್ತಿಲ್ಲ. ಆದರೆ ನಾವು ಸುಮ್ಮನೆ ಬಿಡುವುದಿಲ್ಲ... ನಾಳೆ ಅವನನ್ನು Remand ಗೆ ಒಪ್ಪಿಸುತ್ತಿದ್ದೇವೆ. ಅಲ್ಲಿ ಅವರು ಕೊಡುವ ಟ್ರೀಟ್ಮೆಂಟ್ ಗೆ ಎಂತಹವರೂ ಬಾಯಿ ಬಿಡಲೇಬೇಕು. ನೋಡೋಣ ನಾಳೆ ಟ್ರೀಟ್ಮೆಂಟ್ ನಂತರ ಅವನು ಏನಾದರೂ ಬಾಯಿ ಬಿಡುತ್ತಾನ ಎಂದು.

Rating
No votes yet