"ಅಬ್ಬಿ ನೀರು" ಎಂಬ ಅಮೃತ
ನೆಲದಾಳದಲ್ಲಿ ಮುನ್ನೂರು ಮೀಟರ್ ಕೊರೆದು ನೀರು ಸಿಗದೆ ಹತಾಶರಾಗುವುದು ಮನುಷ್ಯ ಪ್ರಯತ್ನ. ನೆಲದಿಂದ ಸಾವಿರ ಅಡಿ ಮೇಲೆ ನೀರು ಚಿಮ್ಮಿಸುವುದು ಪ್ರಕೃತಿಯ ತಾಕತ್ತು.
ಕೊಡಚಾದ್ರಿಯ ತುಟ್ಟ ತುದಿಗೆ ನಿಂತರೆ ಕಣ್ಣು ಹಾಯಿಸುವಷ್ಟು ದೂರದವರೆಗೂ ತಗ್ಗು ಪ್ರದೇಶವಾದ ಕೊಲ್ಲೂರು ಹೊಸನಗರ ಮುಂತಾದವುಗಳು ಕಾಣಿಸುತ್ತವೆ. ಅಷ್ಟೆತ್ತರದ ಗುಡ್ಡದ ಮೇಲೆ ಜುಳು ಜುಳು ನೀರು ಚಿಮ್ಮುತ್ತದೆ. ಯಾರಿಟ್ಟರು ಅಲ್ಲಿ ನೀರಿನ ಸೆಲೆ? ಎಂಬ ಆಶ್ಚರ್ಯ ಮೂಡದಿರದು ಪ್ರಕೃತಿಯನ್ನು ಅಚ್ಚರಿಯಿಂದ ನೋಡುವ ಮನಸ್ಸಿದ್ದವರಿಗೆ. ಕೊಡಚಾದ್ರಿಯಿಂದ ಕೆಳಗಿಳಿದು ಬಂದು ಬಾವಿ ಬಗ್ಗಿದರೆ ಅಲ್ಲಿ ಕಾಣುವ ತಳದ ನೀರಿಗೂ ಅಚ್ಚರಿ ಮೂಡದಿರದು.
ಕಾಡು ಹೋಯ್ತು ಅಂತ ಕೇವಲ ಬೊಬ್ಭಿಡುವ ಮಂದಿಗೂ ನಿಲುಕದ ಈ ನೀರಿನ ಸೆಲೆಯ ರಹಸ್ಯವನ್ನು ಗುಡ್ಡದ ನೆತ್ತಿಯವರೆಗೂ ಪಂಪ್ ಮಾಡುತ್ತಿರುವ ಪ್ರಕೃತಿ ಮಲೆನಾಡಿನ ಹಲವಾರು ಊರಿನ ಮನೆಗಳ ನೀರಿನ ದಾಹವನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರ ಉಣಬಡಿಸುತ್ತಿದೆ ನೂರಾರು ವರ್ಷಗಳಿಂದ. ತೆಗೆದ ಬಾವಿಯಲ್ಲಿ ಕೊರೆದ ಬೋರ್ ನಲ್ಲಿ ನೀರು ಬತ್ತಿರಬಹುದು "ಅಬ್ಬಿನೀರಿನ" ಸೆಲೆ ಇವತ್ತಿನವರೆಗೂ ಬತ್ತಿದ ಉದಾಹರಣೆ ಇಲ್ಲ. ಹಾಗೊಮ್ಮೆ ಮಲೆನಾಡಿನಲ್ಲಿ ಅಬ್ಬಿನೀರಿನ ಸೆಲೆ ನಿಂತಿತು ಅಂದಿಟ್ಟುಕೊಳ್ಳಿ ಅಲ್ಲಿಗೆ ಪರಿಸರ ಪ್ರಕೃತಿಯ ಕತೆ ಮುಗಿದಂತಯೆ. ಅದು ಆಗಲಿಲ್ಲ ಆಗಬಾರದು ಅಂತಾದರೆ ಹುಲು ಮಾನವನ ಪ್ರಯತ್ನ ಕಾಡು ಕಡಿದರೂ ಅಡ್ಡಿಯಿಲ್ಲ ಹೊಸ ಕಾಡು ಬೆಳೆಸುವುದು. ಕಾಡು ಬೆಳೆಸುವುದು ಅಂದರೆ ಪ್ರಶಸ್ತಿ ಸಿಗುವಷ್ಟರಮಟ್ಟಿಗಲ್ಲದಿದ್ದರೂ ತಿಂದ ಹಲಸಿನ ಬೀಜ ಎಲ್ಲೆಂದರಲ್ಲಿ ಬಿಸಾಕದೆ ಸೂಕ್ತ ಜಾಗದಲ್ಲಿ ಗಿಡ ಮರವಾಗುವಂತಹ ಜಾಗದಲ್ಲಿ ಇಡುವುದು. ಎಂಬಂತಹ ಸಣ್ಣ ಪುಟ್ಟ ಅಳಿಲುಸೇವೆಯಿಂದ ಪ್ರಕೃತಿಯ ರಕ್ಷಣೆಯಂತ ದೊಡ್ಡ ಮಾತಲ್ಲದಿದ್ದರೂ ನಾವು ನೆಟ್ಟಗಿಡ ವೆಂಬ ಗಿಡ ಮರವಾಗಿ ಹಣ್ಣು ಬಿಟ್ಟ ಆನಂದ ಹೊಂದಬಹುದು.
ಇರಲಿ ಅವೆಲ್ಲಾ ಒಂದೆಡೆ ನಿಮಗೆ ಇನ್ನೊಂದು ಸತ್ಯ ಹೇಳಿಬಿಡುತ್ತೇನೆ. ೨೦೧೨ ರ ಪ್ರಳಯ ಅಂತ ಗುಲ್ಲೆದ್ದಿದೆಯಲ್ಲ ಅದು ಸತ್ಯವೇ ಆದ್ರೆ ೨೦೧೧ ರಲ್ಲಿ "ಅಬ್ಬಿ ನೀರು" ನಿಲ್ಲುತ್ತದೆ. ಹಾಗಾದಕೂಡಲೇ ನಾನು ನಿಮಗೆಲ್ಲಾ ತಿಳಿಸುತ್ತೇನೆ, ನೀವು ಬೇಕಾದರೆ ಬೇರೆಯ ಗ್ರಹಕ್ಕೆ ಹೊರಡುವ ತಯಾರಿ ನಡೆಸಬಹುದು...! ನಾನಂತೂ ಇಲ್ಲಿಯೇ ಇರುತ್ತೇನೆ.!
Rating
Comments
ಉ: "ಅಬ್ಬಿ ನೀರು" ಎಂಬ ಅಮೃತ
ಉ: "ಅಬ್ಬಿ ನೀರು" ಎಂಬ ಅಮೃತ
In reply to ಉ: "ಅಬ್ಬಿ ನೀರು" ಎಂಬ ಅಮೃತ by shivaram_shastri
ಉ: "ಅಬ್ಬಿ ನೀರು" ಎಂಬ ಅಮೃತ