ಅಮರ ಮಧುರ ಪ್ರೇಮ...ಭಾಗ 1

ಅಮರ ಮಧುರ ಪ್ರೇಮ...ಭಾಗ 1

ಹಲೋ ಅಮರ್...ಹಲೋ...ಅಮರ್ ಅರ್ಜೆಂಟಾಗಿ ಮಣಿಪಾಲ ಆಸ್ಪತ್ರೆಗೆ ಬಾ, ಪ್ರೇಮ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದಾಳೆ ಎಂದು ಮಧುರ ಬಿಕ್ಕುತ್ತಿದ್ದಳು.ಮಧು ನೀನೇನು ಹೆದರಬೇಡ ನಾನು ಈಗಲೇ ಹೊರಟು ಬರುತ್ತೇನೆ ಎಂದುಅಮರ್ ಕಾಲ್ ಕಟ್ ಮಾಡಿ ಆಸ್ಪತ್ರೆಯ ಕಡೆ ಹೊರಟ.


ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಆಚೆಯೇ ನಿಂತಿದ್ದ ಮಧುರ ಓಡಿ ಬಂದು ಅಮರನನ್ನು ಹಿಡಿದುಕೊಂಡು ಗಳಗಳನೆ ಅಳಲು ಶುರುಮಾಡಿದಳು. ಅಮರ್ ಅವಳನ್ನು ಸಂತೈಸುತ್ತ ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋಗಿ ಅಲ್ಲಿದ್ದ ಹಾಲ್ ನಲ್ಲಿ ಕುಳಿತುಕೊಂಡು ಅವಳ ಕಣ್ಣನ್ನು ಒರೆಸುತ್ತಾ ಮಧು ನಿಧಾನವಾಗಿ ಅಳದೆ ಏನು ಆಯಿತು ಎಂದು ಹೇಳು. 


ಮಧುರ ಕಣ್ಣೊರೆಸಿಕೊಂಡು ಅದೇನೋ ಗೊತ್ತಿಲ್ಲ ಅಮರ್ ನೆನ್ನೆ ಅಪ್ಪ ಅಮ್ಮ ಊರಿಗೆ ಹೋದ ಬಳಿಕ ರಾತ್ರಿ ಯಥಾ ಪ್ರಕಾರ ಪೀ ಜಿ ಯಲ್ಲಿ ಊಟ ಮುಗಿಸಿ ಮಲಗಿದ್ದೆವು. ಬೆಳಗಿನ ಜಾವ ಬಾತ್ ರೂಂ ಗೆಂದು ಹೋದ ಪ್ರೇಮ ಎಷ್ಟು ಹೊತ್ತಾದರೂ ಬರದಿದ್ದಾಗ ಅನುಮಾನ ಬಂದು ಕೂಗಿದರೆ ಯಾವುದೇ ಉತ್ತರ ಕೊಡಲಿಲ್ಲ. ನನಗೆ ಭಯ ಆಗಿ ಆಚೆ ಬಂದು ವಾರ್ಡನ್ ಗೆ ಹೇಳಿದಾಗ ಅವರು ವಾಚ್ಮೆನ್ ನನ್ನು ಕರೆಸಿ ಬಾಗಿಲು ಒಡೆದು ನೋಡಿದರೆ ಪ್ರೇಮ ಅಲ್ಲಿ ಬಿದ್ದು ಹೋಗಿದ್ದಳು.ಪಕ್ಕದಲ್ಲೇ ನಿದ್ರೆ ಮಾತ್ರೆಯ ಖಾಲಿ ಬಾಟಲ್ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿ ನಿನಗೆ ಫೋನ್ ಮಾಡಿದೆ ಎಂದು ಮತ್ತೆ ಅಳಲು ಶುರು ಮಾಡಿದಳು.


ಮಧುರ, ಪ್ರೇಮ ಈಗ ಹೇಗಿದ್ದಾಳೆ? ಡಾಕ್ಟರ ಏನಾದರೂ ಹೇಳಿದರ? ಅಪ್ಪ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆಯ?


ಇಲ್ಲ ಅಮರ್ ಅಪ್ಪ ಅಮ್ಮನಿಗೆ ಇನ್ನೂ ವಿಷಯ ತಿಳಿಸಿಲ್ಲ, ನೀನು ಬಂದ ಮೇಲೆ ತಿಳಿಸೋಣ ಎಂದು ಸುಮ್ಮನಿದ್ದೆ. ಡಾಕ್ಟರ ಬಂದು ಸ್ಟಮಕ್ ವಾಶ್ ಮಾಡಿದ್ದಾರೆ. ಆದರೆ ಇನ್ನೂ ಪ್ರಜ್ಞೆ ಬಂದಿಲ್ಲ. ಇನ್ನು ಒಂದು ಘಂಟೆಯಲ್ಲಿ ಪ್ರಜ್ಞೆ ಬರುತ್ತದೆ ಎಂದು ಹೇಳಿದ್ದಾರೆ. ಆದರೆ ಪ್ರೇಮ ಯಾಕೆ ಹೀಗೆ ಮಾಡಿಕೊಂಡಳೋ ಅರ್ಥವೇ ಆಗುತ್ತಿಲ್ಲ ಅಮರ್.


ಮಧು ಮೊದಲು ಅವಳಿಗೆ ಪ್ರಜ್ಞೆ ಬಂದು ಮನೆಗೆ ಕರೆದುಕೊಂಡು ಹೋಗೋಣ ಆಮೇಲೆ ವಿಚಾರಿಸೋಣ. ಈಗಲೇ ಏನೂ ಕೇಳುವುದು ಬೇಡ. ನಾನು ನಿನ್ನ ಅಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸುತ್ತೇನೆ ಎಂದು ಫೋನ್ ತೆಗೆದುಕೊಂಡು ಆಚೆ ಹೋಗಿ ಮಧುರಳ ಅಪ್ಪ ಅಂದರೆ ಅಮರನ ಭಾವೀ ಮಾವನಿಗೆ ವಿಷಯ ತಿಳಿಸಿ ಮತ್ತೆ ಒಳ ಬಂದ.


ಒಂದು ಘಂಟೆಯ ನಂತರ ಡಾಕ್ಟರ ಬಂದು ಪ್ರೇಮಗೆ ಪ್ರಜ್ಞೆ ಬಂದಿದೆ ನೀವು ಹೋಗಿ ಮಾತಾಡಿಸಬಹುದು ಎಂದು ಹೇಳಿದರು. ಕೊಠಡಿಯ ಒಳಗೆ ಹೋದ ಮಧು ಮತ್ತು ಅಮರನ ಮುಖ ನೋಡಿ ಪ್ರೇಮ ಪಕ್ಕಕ್ಕೆ ಮುಖ ತಿರುಗಿಸಿಕೊಂಡಳು. ಮಧುರ ಏನೂ ಮಾತಾಡದೆ ಸುಮ್ಮನೆ ನಿಂತಿದ್ದಳು. ಅಮರ್ ಪ್ರೇಮಳ ಪಕ್ಕಕ್ಕೆ ಹೋಗಿ ಈಗ ಹೇಗಿದೆ ಪ್ರೇಮ ಎಂದು ಕೇಳಿದ್ದಕ್ಕೆ ಇನ್ನೂ ಸತ್ತಿಲ್ಲ ಎಂದು ಮತ್ತೆ ಮುಖ ತಿರುಗಿಸಿದಳು. ಸರಿ ನೀನು ಮಲಗು ನಾವು ಆಮೇಲೆ ಬರುತ್ತೇವೆ ಎಂದು ಮಧುರಳನ್ನು ಕರೆದುಕೊಂಡು ಆಚೆ ಬಂದ ಅಮರ್, ಮಧುರ ಯಾಕೆ ಹೀಗೆ ಮಾತಾಡುತ್ತಿದ್ದಾಳೆ ಪ್ರೇಮ? ನಿಮ್ಮ ಅಪ್ಪ ಅಮ್ಮನ ಜೊತೆ ಏನಾದರೂ ಜಗಳ ಆಗಿತ್ತ ನೆನ್ನೆ?


ಏನಿಲ್ಲ ಅಮರ್ ಅವರು ಹೊರಡುವವರೆಗೂ ಚೆನ್ನಾಗೆ ಇದ್ದಳು ಇದ್ದಕ್ಕಿದ್ದಂತೆ ಯಾಕೆ ಹೀಗೆ ಮಾಡಿದಳೋ ಅರ್ಥವೇ ಆಗುತ್ತಿಲ್ಲ ಎಂದು ಅಮರನ ತೋಳಿನ ಮೇಲೆ ತಲೆ ಒರಗಿಸಿದಳು.-----------------------------------------------------------------------------------------------------------------------------------------------


ಪ್ರೇಮ ಹಾಗೂ ಮಧುರ ಅವಳಿ ಜವಳಿ. ಇಬ್ಬರೂ ನೋಡಲು ಒಂದೇ ರೀತಿ ಇದ್ದರು. ಒಂದು ಚೂರು ವ್ಯತ್ಯಾಸ ಇರಲಿಲ್ಲ. ಅವರಿಬ್ಬರಲ್ಲಿ ಯಾರು ಯಾರೆಂದು ಕಂಡು ಹಿಡಿಯುವುದೇ ಕಷ್ಟವಾಗಿತ್ತು. ಎಷ್ಟೋ ಬಾರಿ ಅವರ ತಂದೆಗೆ ಗುರುತಿಸುವುದು ಕಷ್ಟ ಆಗುತ್ತಿತ್ತು. ಆದರೆ ಅವರ ತಾಯಿಗೆ ಮಾತ್ರ ಸುಲಭವಾಗಿ ಗೊತ್ತಾಗುತ್ತಿತ್ತು.


ಚಿಕ್ಕಂದಿನಿಂದಲೂ ಇಬ್ಬರಿಗೂ ಒಂದೇ ರೀತಿ ಬಟ್ಟೆ, ಒಂದೇ ರೀತಿ ಚಪ್ಪಲಿ ಹಾಗೆ ಪ್ರತಿಯೊಂದು ವಸ್ತುವೂ ಒಂದೇ ರೀತಿ ತರುತ್ತಿದ್ದರು. ಅಪ್ಪಿ ತಪ್ಪಿ ಏನಾದರೂ ವ್ಯತ್ಯಾಸ ಆದರೆ ಪ್ರೇಮ ಹಠ ಮಾಡಿಬಿಡುತ್ತಿದ್ದಳು. ಮಧುರ ಚಿಕ್ಕಂದಿನಿಂದಲೂ ಸೌಮ್ಯ ಸ್ವಭಾವ ಆಗಿದ್ದರೆ ಪ್ರೇಮ ಹಠದ ಸ್ವಭಾವ ಹೊಂದಿದ್ದಳು. ಗಂಡು ಬೀರಿಯಂತೆ ವರ್ತಿಸುತ್ತಿದ್ದಳು. ಮಧುರ ಎಲ್ಲರೊಂದಿಗೆ ಸುಲಭವಾಗಿ ಸ್ನೇಹ ಸಂಪಾದಿಸಿಬಿಡುತ್ತಿದ್ದಳು ಆದರೆ ಪ್ರೇಮ ಮಾತ್ರ ಪ್ರತಿಯೊಬ್ಬರನ್ನೂ ಅನುಮಾನದಿಂದ ನೋಡುತ್ತಿದ್ದಳು. ಯಾರನ್ನೂ ಅಷ್ಟು ಸುಲಭವಾಗಿ ನಂಬುತ್ತಿರಲಿಲ್ಲ. ಆದರೆ ಅಕ್ಕ ತಂಗಿಯರ ನಡುವೆ ಮಾತ್ರ ಯಾವುದಕ್ಕೂ ಜಗಳವಾಗುತ್ತಿರಲಿಲ್ಲ. ಇಬ್ಬರ ನಡುವೆ ಬಹಳ ಅನ್ಯೋನ್ಯತೆ ಇತ್ತು. 


ಓದಿನಲ್ಲಿ ಮಾತ್ರ ಪ್ರೇಮ ಮುಂದಿದ್ದರೆ ಮಧುರ ಅಷ್ಟು ಚುರುಕಾಗಿರಲಿಲ್ಲ. ಓದಿನಲ್ಲಿ ಏನೇ ಅನುಮಾನ ಇದ್ದರೂ ಪ್ರೇಮಳನ್ನೇ ಕೇಳಿ ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದಳು. ಇಬ್ಬರೂ ಒಂದೇ ಶಾಲೆಯಲ್ಲಿ ಓದಿ ಕಾಲೇಜ್ ಗೆಂದು ಇಬ್ಬರೂ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಚಿಕ್ಕಪ್ಪನ ಮನೆ ಇದ್ದರೂ ಅವರ ಮನೆಯಲ್ಲಿ ಇರಲು ಇಬ್ಬರಿಗೂ ಮುಜುಗರವೆನಿಸಿ ಪೀಜೀ ಒಂದರಲ್ಲಿ ರೂಮನ್ನು ತೆಗೆದುಕೊಂಡಿದ್ದರು.  ಕಾಲೇಜಿಗೆ ರಜೆ ಇದ್ದಾಗ ಇಬ್ಬರೂ ಊರಿಗೆ ಹೋಗಿ ಬರುತ್ತಿದ್ದರು, ಅಥವಾ ಅಪ್ಪ ಅಮ್ಮನೇ ಬಂದು ನೋಡಿ ಹೋಗುತ್ತಿದ್ದರು.


ಮೊದಮೊದಲು ಹೊಸ ಕಾಲೇಜಿಗೆ ಹೊಂದಿಕೊಳ್ಳಲು ಕಷ್ಟವಾದರೂ ಕಾಲಕ್ರಮೇಣ ಇಬ್ಬರಿಗೂ ಅಭ್ಯಾಸವಾಗಿಬಿಟ್ಟಿತ್ತು. ಕಾಲೇಜಿನಲ್ಲಿ ಇಬ್ಬರನ್ನೂ ಒಟ್ಟಿಗೆ ನೋಡಿ ಯಾರು ಯಾರೆಂದು ಕಂಡು ಹಿಡಿಯಲು ಸಹಪಾಠಿಗಳು ಹರಸಾಹಸ ಪಡುತ್ತಿದ್ದರು. ಕಾಲೇಜಿಗೆ ಸೇರಿ ಒಂದು ವರ್ಷವಾಗಿದ್ದರೂ ಮಧುರ ತಾನಾಯ್ತು ತನ್ನ ಕ್ಲಾಸ್ ಆಯ್ತು ಎಂದಿದ್ದಳು.


ಪ್ರೇಮ ಪಾಠದ ಜೊತೆ ಇತರೆ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದ್ದಳು. ಕಾಲೇಜ್ ಫೆಸ್ಟ್ ಸಂದರ್ಭದಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಳು. ಆ ವರ್ಷದ ಕಾಲೇಜ್ ಫೆಸ್ಟ್ ಜವಾಬ್ದಾರಿಯನ್ನು ಅಮರ್ ಗೆ ವಹಿಸಿದ್ದರು. ಅಮರ್ ಇಡೀ ಕಾಲೇಜ್ ಗೆ ಹೀರೋ ಹಾಗೆ ಇದ್ದ. ಆಟ ಪಾಠ ಎಲ್ಲದರಲ್ಲೂ ಅಮರ್ ಗೆ ಸರಿಸಾಟಿ ಯಾರೂ ಇರಲಿಲ್ಲ. ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದ ಅಮರ್ ನನ್ನು ಪ್ರೀತಿಸಲು ಅದೆಷ್ಟು ಜನ ಹುಡುಗಿಯರು ಹಾತೊರೆಯುತ್ತಿದ್ದರೂ ಅವನುಮಾತ್ರ ಯಾರಿಗೂ ಸೋತಿರಲಿಲ್ಲ. ನಗುನಗುತ್ತಲೇ ಎಲ್ಲರನ್ನೂ ತಿರಸ್ಕರಿಸಿದ್ದ.


ಅವನಿಗೆ ಮನಸೋತಿದ್ದ ಹುಡುಗಿಯರಲ್ಲಿ ಪ್ರೇಮ ಸಹ ಒಬ್ಬಳಾಗಿದ್ದಳು. ಆದರೆ ಎಂದೂ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿರಲಿಲ್ಲ. ಪ್ರತಿದಿನ ಕಾಲೇಜ್ ಮುಗಿದ ನಂತರ ನೃತ್ಯದ ತಾಲೀಮು ಇರುತ್ತಿತ್ತು. ಮಧುರ ಪೀಜೀ ಗೆ ತೆರಳಿದರೆ ಪ್ರೇಮ ತಾಲೀಮು ಮುಗಿಸಿಕೊಂಡು ಹೋಗುತ್ತಿದ್ದಳು. ತಾಲೀಮಿನ ನೆಪದಲ್ಲಿ ಪ್ರೇಮ ಅಮರನಿಗೆ ಇನ್ನಷ್ಟು ಹತ್ತಿರವಾಗಿದ್ದಳು. ಅಮರ್ ಸಹ ಬೇರೆಲ್ಲರಿಗಿಂತ ಪ್ರೇಮಗೆ ಹತ್ತಿರವಾಗಿದ್ದ. ಒಂದೇ ವಾರದಲ್ಲಿ ಅವರಿಬ್ಬರೂ ಇಷ್ಟು ಹತ್ತಿರವಾಗಿದ್ದು ಕಂಡು ಅವನಿಗೆ ಮನಸೋತು ಅವನಿಂದ ತಿರಸ್ಕೃತರಾಗಿದ್ದ ಹುಡುಗಿಯರಿಗೆ ಕಿಚ್ಚು ಹಚ್ಚಿದಂತಾಗಿತ್ತು. ತಾಲೀಮು ಮುಗಿದ ನಂತರ ಅವನೇ ಪ್ರೇಮಳನ್ನು ಪೀಜೀಯ ವರೆಗೂ ಬಿಟ್ಟು ಹೋಗುತ್ತಿದ್ದ. ಇದ್ಯಾವುದೂ ಮಧುರಳ ಗಮನಕ್ಕೆ ಬಂದಿರಲಿಲ್ಲ. ತಾನಾಯ್ತು ತನ್ನ ಓದಾಯ್ತು ಎನ್ನುವಂತೆ ಇದ್ದಳು.

Rating
No votes yet

Comments