ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - The End!
ಸ್ನೇಹಿತರೆ, ಮೊದಲ ನಾಲ್ಕು ಭಾಗಗಳಲ್ಲಿ, ಮೈಲಾಪುರ ಜಾತ್ರೆಯ ಅನುಭವಗಳನ್ನು
ಅಕ್ಷರಗಳಲ್ಲಿ ಹಿಡಿದಿಡಲು ಸಾಕಷ್ಟು ತಿಣುಕಾಡಿದ್ದೇನೆ. ಎಲ್ಲಾ ಘಟನೆಗಳನ್ನು
ಹಂಚಿಕೊಳ್ಳಲಾಗಲಿಲ್ಲ. ಮನಸ್ಸಿಗೆ ಪರಿಣಾಮ ಬೀರಿದ ಕೆಲವೇ ಕೆಲವು ದೃಶ್ಯಗಳನ್ನು ನಿಮ್ಮ
ಮುಂದಿಟ್ಟಿದ್ದೇನೆ. ಕೇವಲ ಒಂದು ದಿನ ಇಷ್ಟೊಂದು ಘಟನೆಗಳ ಮಹಾಪೂರವಾಗಬಹುದೆಂದು
ಯಾವತ್ತೂ ಅಂದುಕೊಂಡಿರಲಿಲ್ಲ. ಜಾತ್ರೆಯನ್ನು ಅಂತರ್ ದೃಷ್ಟಿಯಿಂದ ನೋಡಿದ್ದಕ್ಕೆ
ಹಲವಾರು ಮರೆಯಲಾಗದ ಪಾಠಗಳನ್ನು ಕಲಿತಿದ್ದೇನೆ. ಗ್ರಾಮೀಣ ಭಾರತದ ಶೋಚನೀಯ ಜಗತ್ತಿನ
ಪರಿಚಯವಾಗಿದೆ. ನಾನು ಕಂಡ ಲೋಕ ಎಷ್ಟೊಂದು ಚಿಕ್ಕದೆಂಬ ಅರಿವು ಮೂಡಿದೆ. ಕಳೆದ ನಾಲ್ಕು
ಭಾಗಗಳಲ್ಲಿ ಮೂಡಿಬಂದ ಪ್ರತಿಯೊಂದು ಘಟನೆಯ ಹಿಂದೆ ಶತಶತಮಾನಗಳ ಇತಿಹಾಸವಿದೆ.
ತಲೆತಲಾಂತರದಿಂದ ಜನರ ಮನದಾಳದಲ್ಲಿ ಸಿಲುಕಿಕೊಂಡಿರುವ ಅವಿವೇಕದ ನಂಬಿಕೆಗಳು ಜನರನ್ನು
ಬಿಡಿಸಿಕೊಳ್ಳಲಾಗದ ಸಂಕಷ್ಟಗಳಿಗೆ ಸಿಲುಕಿಸಿವೆ. ಮೂಢನಂಬಿಕೆಗಳು ಪ್ರವಾಹದಂತೆ ನುಗ್ಗಿ
ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯನ್ನು ಅಧಃಪತನಗೊಳಿಸುತ್ತಿವೆ. ಬದುಕುವ ದಾರಿ
ಹಲವಿದ್ದರೂ ಆರಿಸಿಕೊಂಡ ದಾರಿ ಮಾತ್ರ ಶೋಚನೀಯವಾದುದು. ಜಗತ್ತಿನಲ್ಲೇ ಅತ್ಯಂತ
ಶ್ರೀಮಂತವಾಗಿರು ಸಂಸ್ಕೃತಿಯ ಹಿಂದೆ ಇಂತಹ ಘೋರವಾದ ಬಡತನವಿದೆ ಎಂಬ ಸತ್ಯ ಅರಿಯುವುದು
ಯಾವಾಗ?? ಉದ್ಯೋಗಗಳಿದ್ದರೂ ಅದಕ್ಕೆ ತಕ್ಕ ಜನರಿಲ್ಲ, ನಿರುದ್ಯೋಗಿಗಳಿದ್ದರೂ ಅವರಿಗೆ
ತಕ್ಕ ಉದ್ಯೋಗಗಳಿಲ್ಲ. ಏನಾದರೂ ಮಾಡಲೇಬೇಕೆಂಬ ಛಲವಿದ್ದರೆ ಹಣವಿಲ್ಲ, ಹಣವಿದ್ದರೆ
ಜಾಗರೂಕತೆಯಿಂದ ಉಪಯೋಗಿಸಿಕೊಳ್ಳುವ ಚಾಣಾಕ್ಷತನವಿಲ್ಲ. ಪರಿಸ್ಥಿತಿಯನ್ನು
ಸಹಾನುಭೂತಿಯಿಂದ ನೋಡಿದರೆ, ಪ್ರತಿಯೊಂದು ಹೆಜ್ಜೆಗೂ ಹಲವಾರು ಸಮಸ್ಯೆಗಳಿವೆ. ಗ್ರಾಮೀಣ
ಭಾರತದ ಪ್ರತಿಯೊಂದು ಸಮಸ್ಯೆಯ ಮೂಲ ಬಡತನ, ಅನಕ್ಷರತೆ ಮತ್ತು ನಿರುದ್ಯೋಗ.
ಸಮಾಜದ ಯಾವುದೇ ಸಮಸ್ಯೆಯನ್ನು ತೆಗೆದುಕೊಳ್ಳಿ, ಅದರ ಬೇರು ಈ ಮೂರು ಸಮಸ್ಯೆಗಳ
ಯಾವುದಾದರೊಂದರಲ್ಲಿ ಹುದುಗಿಕೊಂಡಿರುತ್ತದೆ. ಬಡತನದ ಬೇಲಿಯನ್ನು ದಾಟಿ ಬರಲು ಬೇಕಾದ
ಉದ್ಯೋಗವೆಂಬ ದಾರಿ ಜನರಿಗೆ ಸಿಗುತ್ತಿಲ್ಲ. ವಿವೇಚನೆಯಿಲ್ಲದ ಮೂಢನಂಬಿಕೆಗಳಿಂದ
ಹೊರಬರಲು ಬೇಕಾದ
ಶಿಕ್ಷಣ ಜನರಲ್ಲಿಲ್ಲ. ಕೆಲವೊಮ್ಮೆ ಉದ್ಯೋಗವಿದ್ದರೂ ವಿವೇಚನೆಯಿಲ್ಲ. ಈ ಎಲ್ಲ
ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಯಾವಗ ಬದಲಾವಣೆ? ಎಷ್ಟು ದೂರ ಈ ದಾರಿ?
ನೋಡಿ: ಭಾಗ-೧, ಭಾಗ-೨, ಭಾಗ-೩, ಭಾಗ-೪, ಮೈಲಾಪುರ ಜಾತ್ರೆಯ ಮತ್ತಷ್ಟು ಚಿತ್ರಗಳು.